Wednesday, May 8, 2013

ಪಾಸಾದವರು ಬುದ್ಧಿವಂತರೂ ಅಲ್ಲ,ಫೇಲಾದವರು ದಡ್ಡರೂ ಅಲ್ಲ! ಮೇ -08-2013

ಎಸೆಸೆಲ್ಸಿ, ಪಿಯುಸಿ ಫಲಿತಾಂಶ ಜೊತೆ ಜೊತೆಯಾಗಿ ಹೊರ ಬಿದ್ದಿದೆ. ಎರಡೆರಡು ಕಾರಣಕ್ಕೆ ನಾವು ಈ ಬಾರಿಯ ಫಲಿತಾಂಶಕ್ಕಾಗಿ ಸಮಾಧಾನಪಟ್ಟುಕೊಳ್ಳಬೇಕು. ಒಂದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಎಸೆಸೆಲ್ಸಿಯಲ್ಲಿ ಶೇ.1.34ರಷ್ಟು ಏರಿಕೆಯಾಗಿದ್ದರೆ, ಪಿಯುಸಿಯಲ್ಲಿ 2.33ರಷ್ಟು ಏರಿಕೆಯಾಗಿದೆ.  ಪಿಯುಸಿಯದ್ದು ದಾಖಲೆ ಫಲಿತಾಂಶ. ಕಳೆದ ಹತ್ತು ವರ್ಷಗಳಲ್ಲಿ ಈ ಫಲಿತಾಂಶವನ್ನು ಕಾಣುವುದಕ್ಕೆ ರಾಜ್ಯಕ್ಕೆ ಸಾಧ್ಯವಾಗಿರಲಿಲ್ಲ. ನಾವು ಸಂತೋಷ ಪಡುವುದಕ್ಕೆ ಇನ್ನೂ ಕಾರಣಗಳಿವೆ.ಮುಖ್ಯವಾಗಿ ಹೆಣ್ಣು ಮಕ್ಕಳು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.ದೇಶಾದ್ಯಂತ ಹೆಣ್ಣು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾಳೆ.ಅವಳ  ಮೇಲೆ ನಡೆಯುವ ದೌರ್ಜನ್ಯಗಳು ಸದಾ ಮಾಧ್ಯಮಗಳಿಗೆ ವಸ್ತು.ಆದರೆ ಕರ್ನಾಟಕದಲ್ಲಿ ಹೆಣ್ಣು ಭಿನ್ನ ಕಾರಣಕ್ಕಾಗಿ ಪ್ರತಿ ವರ್ಷ ಸುದ್ದಿಯಾಗುತ್ತಾಳೆ.
ಅದೆಂದರೆ, ಎಸೆಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಗಂಡುಮಕ್ಕಳನ್ನು ಹಿಂದಕ್ಕೆ ಹಾಕುವ ಮೂಲಕ. ಹೆಣ್ಣಿನ ಕುರಿತಂತೆ ತಾತ್ಸಾರ ಭಾವನೆಯಿರುವ ಪುರುಷ ಮನಸ್ಥಿತಿಗೆ ಸದಾ ಈ ಬಾಲಕಿಯರು ತಮ್ಮ ಪರೀಕ್ಷೆ ಫಲಿತಾಂಶಗಳ ಮೂಲಕ ಉತ್ತರಿಸುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಹೆಣ್ಣು ಮಕ್ಕಳೇ ಮುಂದಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವೇ ಸರಿ.
ಹಾಗೆಯೇ ಕರ್ನಾಟಕದ ಗ್ರಾಮೀಣ ಮಕ್ಕಳು ಎಸೆಸೆಲ್ಸ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮುಂದಿರುವುದು, ನಮ್ಮ ಸರಕಾರಕ್ಕೆ ಹಾಕಿದ ಒಂದು ಸವಾಲೇ ಸರಿ. ನಗರದ ಆಧುನಿಕ ಬದುಕಿಗೆ ಗ್ರಾಮೀಣ ಮಕ್ಕಳು ಪ್ರಶ್ನೆ ಹಾಕಿದ್ದಾರೆ. ಅತ್ಯಾಧುನಿಕ ಶಾಲೆ, ಇಂಗ್ಲಿಷ್, ಆಧುನಿಕ ಸಲಕರಣೆ, ಸವಲತ್ತು ಇತ್ಯಾದಿ ಗಳೆಲ್ಲವನ್ನೂ ಮೀರಿ, ಗ್ರಾಮೀಣ ಮಕ್ಕಳು ತಮಗೆ ಸಿಕ್ಕಿದ ಅಲ್ಪಸ್ವಲ್ಪ ಸವಲತ್ತುಗಳನ್ನೇ ಬಳಸಿಕೊಂಡು ಸಾಧನೆ ಮೆರೆದಿದ್ದಾರೆ. ಇದೂ ನಮ್ಮನ್ನು ಎಚ್ಚರಿಸಬೇಕಾಗಿದೆ.
ಕಲಿಕೆಯ ಕುರಿತಂತೆ ಇರುವ ಕೆಲವು ಮೂಢನಂಬಿಕೆ ಗಳಿಂದ ಹೊರ ಬರುವುದಕ್ಕೆ ಇದು ಕಾರಣವಾಗಬೇಕಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಂದಿಷ್ಟು ನೀರೆರೆದರೆ ಪ್ರತಿಭೆಗಳು ಹೇಗೆ ಅರಳಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ ಯಾಗಿದೆ. ಹಾಗೆಯೇ ಇದೇ ಉದಾಹರಣೆಯ ಮೂಲಕವೇ ನಾವು ಸರಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಮನ ಮಾಡಬೇಕು. ಕನ್ನಡ ಮಾಧ್ಯಮ-ಇಂಗ್ಲಿಷ್ ಮಾಧ್ಯಮಗಳ ಬಿಕ್ಕಟ್ಟು ಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೋಕ್ಷ ಉತ್ತರ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಫೇಲಾದವರು ಅಥವಾ ಕಡಿಮೆ ಅಂಕಗಳನ್ನು ಪಡೆದವರು ಯಾವ ಕಾರಣಕ್ಕೂ ದಡ್ಡರಲ್ಲ ಎನ್ನುವ ಸತ್ಯವನ್ನೂ ಮಕ್ಕಳಿಗೆ ಮನದಟ್ಟು ಮಾಡಬೇಕಾಗಿದೆ. ಭಾರೀ ಅಂಕಗಳನ್ನು ಪಡೆದಾಕ್ಷಣ ಅದರಿಂದ ಪ್ರಯೋಜನವಾಗಬೇಕು ಎಂದೇನೂ ಇಲ್ಲ. ಹಾಗೆಯೇ ಒಬ್ಬ ಫೇಲಾದವನು ನಾಳೆ ತನ್ನದೇ ವೈಯಕ್ತಿಕ ಪ್ರತಿಭೆಯ ಬಲದಿಂದ ಅತ್ಯುತ್ತಮ ಗಾಯಕನಾಗಿ ಅಥವಾ ಚಿತ್ರಕಲಾವಿದನಾಗಿ, ಕೃಷಿಕನಾಗಿ ಅಥವಾ ಇನ್ಯಾವುದೋ ಕೆಲಸದಲ್ಲಿ ಪ್ರಣನಾಗಿ ರ‍್ಯಾಂಕ್ ವಿದ್ಯಾರ್ಥಿಗಳಿಗಿಂತ ಅಧಿಕ ಸಂಪಾದಿಸಬಹುದಾಗಿದೆ.
ಹಾಗೆಯೇ ಯಾವುದೇ ರ‍್ಯಾಂಕ್ ವಿಜೇತನಿಗಿಂತ ಹೆಚ್ಚು ಹೆಸರನ್ನೂ, ಖ್ಯಾತಿಯನ್ನೂ ಪಡೆಯಬಹು ದಾಗಿದೆ. ಆದುದರಿಂದ ಕಡಿಮೆ ಅಂಕಪಡೆದ ರೆಂದು ವಿದ್ಯಾರ್ಥಿಗಳನ್ನು ನಿಂದಿಸುವುದು, ಟೀಕಿಸುವುದು ಸಲ್ಲ. ಯಾವ ವಿದ್ಯಾರ್ಥಿಯೂ ಈ ಕುರಿತಂತೆ ಕೀಳರಿಮೆ ಪಟ್ಟುಕೊಳ್ಳುವ ಅಗತ್ಯವಿಲ್ಲ. ತಂದೆ ತಾಯಿಗಳೂ ಅದನ್ನು ನಗುಮುಖದಿಂದಲೇ ಸ್ವೀಕರಿಸಬೇಕು. ಜೊತೆಗೆ ಅವನ ನಿಜವಾದ ಆಸಕ್ತಿ ಯಾವ ಕಡೆಗೆ ಇದೆ ಎಂದು ಗುರುತಿಸಿ, ಅಲ್ಲಿಗೆ ಅವನನ್ನು ತಲುಪಿಸುವ ಹೊಣೆಗಾರಿಕೆ ಪಾಲಕರದ್ದಾಗಿದೆ. ಈ ಫಲಿತಾಂಶವನ್ನು ಪಾಲಕರು, ಶಿಕ್ಷಕರು ಗಂಭೀರವಾಗಿ ಸ್ವೀಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವನ್ನು ಬೀರುವ ಸಾಧ್ಯತೆಯಿದೆ. 
ಮಕ್ಕಳು ಖಿನ್ನರಾಗಿ, ದುರಂತದ ಕಡೆಗೆ ಹೆಜ್ಜೆಯಿಡುವ ಅಪಾಯವಿದೆ. ಆದುದರಿಂದ, ಅಂಕಗಳನ್ನು ಉಣ್ಣುವುದಕ್ಕೆ, ತಿನ್ನುವುದಕ್ಕೆ ಆಗುವುದಿಲ್ಲ ಎಂಬ ಅಂಶವನ್ನು ಎಲ್ಲರೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಹಾಗೆಯೇ ಕಲಿಕೆಯನ್ನು ಇನ್ನಷ್ಟು ಸುಂದರವಾಗಿಸುವ, ಖುಷಿಯ, ಸಂತೋಷದ ವಿಷಯವಾಗಿಸುವ ಹೊಣೆಗಾರಿಕೆಯೂ ನಮ್ಮ ಸರಕಾರದ ಮೇಲೆ, ಶಿಕ್ಷಣ ಇಲಾಖೆಯ ಮೇಲಿದೆ. ಅದನ್ನು ಬದುಕಿಗೆ ಇನ್ನಷ್ಟು ಹತ್ತಿರವಾಗಿಸುವ ಅಗತ್ಯವಿದೆ. ಇಂದು ಖಾಸಗಿ ಶಾಲೆಗಳು ಶಿಸ್ತಿನ ಕೋಟೆಗಳಾಗಿ ಪರಿವರ್ತನೆಗೊಂಡಿವೆ.
ಬಡವರು ಈ ಶಾಲೆಗಳಿಗೆ ಕಾಲಿಕ್ಕುವಂತಿಲ್ಲ. ಸರಕಾರಿ ಶಾಲೆ ಸೌಲಭ್ಯಗಳಿಂದ ವಂಚಿತವಾಗಿವೆ. ಆದುದರಿಂದ ಅದೆಷ್ಟೇ ಕಷ್ಟವಾದರೂ ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎನ್ನುವ ಒತ್ತಡದಲ್ಲಿದ್ದಾರೆ ಪಾಲಕರು. ಜನರು ತಮ್ಮ ಮಕ್ಕಳನ್ನು ಯಾಕೆ ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೆಗೆಯುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಸರಕಾರಿ ಶಾಲೆಗಳನ್ನು ಉದ್ಧರಿಸುವ ಕೆಲಸವನ್ನು ಸರಕಾರ ಮಾಡಬೇಕು.
ಕನ್ನಡವನ್ನು ಇಂಗ್ಲಿಷ್‌ನ್ನು ಸರಕಾರಿ ಶಾಲೆಗಳಲ್ಲಿ ಜೊತೆ ಜೊತೆಯಾಗಿ ಕಲಿಸಬೇಕು. ಕನ್ನಡಭಾಷೆಯ ಜೊತೆಗೆ ಇಂಗ್ಲಿಷ್‌ನ್ನು ಕಲಿಯುವವರು ಹೆಚ್ಚು ಜ್ಞಾನ ವನ್ನು ಪಡೆಯುವುದಕ್ಕೆ ಸಾಧ್ಯ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ ಇದನ್ನು ಎತ್ತಿ ಹಿಡಿದಿದೆ. ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಇಡೀ ಶಿಕ್ಷಣ ವ್ಯವಸ್ಥೆ ಮಾತ್ರ ಪ್ರತೀ ವರ್ಷ ಎಡವುತ್ತಲೇ ಇದೆ. ಇನ್ನಾದರೂ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡುವಲ್ಲಿ ಸರಕಾರ ಮತ್ತು ಶಿಕ್ಷಣ ವ್ಯವಸ್ಥೆ ಮುಂದಾಗಬೇಕಾಗಿದೆ

No comments:

Post a Comment