Monday, May 6, 2013

ಚುನಾವಣೆಯಲ್ಲಿ ಗೆದ್ದ ಆಯೋಗಮೇ -06-2013

ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿ, ಯಾವ ಪಕ್ಷ ಸೋಲಲಿ ಆದರೆ, ಚುನಾವಣಾ ಆಯೋಗ ಮಾತ್ರ ಬಹುತೇಕ ಗೆದ್ದಿದೆ. ರಂಗೋಲಿಯೆಡಿಗೆ ತೂರುವ ಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಕೊನೆಯವರೆಗೂ ಆಯೋಗ ಪ್ರಯತ್ನಿಸಿದೆ. ಮತ್ತು ಅದರಲ್ಲಿ ಯಶಸ್ವಿಯಾಗಿದೆ ಕೂಡ. ಆದುದರಿಂದ, ನಾವು ಚುನಾವಣಾ ಆಯೋಗದ ಮತ್ತು ಅದರ ಸಿಬ್ಬಂದಿಗೆ ಮೊತ್ತ ಮೊದಲು ಅಭಿನಂದಿಸಬೇಕು. ಆಯೋಗ ಪ್ರಯತ್ನದ ಫಲವಾಗಿಯೇ ಇರಬೇಕು, ಈ ಬಾರಿ ಚುನಾವಣೆ ಬಂದದ್ದೂ, ಹೋದದ್ದೂ ಯಾರಿಗೂ ಗೊತ್ತಾದಂತಿರಲಿಲ್ಲ. ಬ್ಯಾನರ್, ಮೈಕ್‌ಗಳ ಗದ್ದಲಗಳಿರಲಿಲ್ಲ. ಏನೇ ಇದ್ದರೂ ಆಯೋಗಕ್ಕೆ ಹೆದರಿಯೇ ಪಕ್ಷದ ನಾಯಕರು ತಮ್ಮ ಹೆಜ್ಜೆಗಳನ್ನು ಇಡುತ್ತಿದ್ದರು. ಈ ಬಾರಿ ಎಲ್ಲೂ ವಿಶೇಷ ಹಿಂಸಾಚಾರ, ಸಂಘರ್ಷಗಳೂ ನಡೆಯಲಿಲ್ಲ. ಬಿಜೆಪಿಯ ಕಚೇರಿಯ ಮುಂದೆ ನಡೆದಿರುವ ನಿಗೂಢ ಸ್ಫೋಟವೊಂದನ್ನು ಹೊರತುಪಡಿಸಿದರೆ, ವಿಶೇಷ ಕಳಂಕಗಳೇನೂ ಚುನಾವಣೆಯ ಮೇಲೆ ಬೀಳಲಿಲ್ಲ.
ಮತದಾನವೇನೋ ಮುಗಿಯಿತು. ಅಲ್ಲಿಗೆ ಮತದಾರರ ಕರ್ತವ್ಯ ಮುಗಿಯಿತು ಎಂದು ಯಾವತ್ತೂ ತಿಳಿದುಕೊಳ್ಳಬಾರದು. ಪ್ರಜಾಸತ್ತೆಯಲ್ಲಿ ಬರೇ ಐದುವರ್ಷಕ್ಕೊಮ್ಮೆ ಮಾತ್ರ ಪ್ರಜೆಗಳಿಗೆ ಅಧಿಕಾರವಿರುವುದು ಎನ್ನುವುದನ್ನು ರಾಜಕಾರಣಿಗಳು ನಂಬಿಸಿಬಿಟ್ಟಿದ್ದಾರೆ. ಆದರೆ ಜಾಗೃತ ಮತದಾರನ ಕೈಯಲ್ಲಿ ಯಾವತ್ತೂ ಅಧಿಕಾರ ಇದ್ದೇ ಇರುತ್ತದೆ. ಮತದಾರ ನಿದ್ರಿಸುತ್ತಿದ್ದಾನೆ ಎನ್ನುವುದು ರಾಜಕಾರಣಿಗಳಿಗೆ ಅರಿವಾದಾಗ ಮಾತ್ರ ಅವರು ಭ್ರಷ್ಟಾಚಾರದಲ್ಲಿ, ಅಕ್ರಮಗಳಲ್ಲಿ ಮಿತಿ ಮೀರುತ್ತಾರೆ.
ಆದರೆ ಮತದಾರನ ಕಣ್ಣು ನಮ್ಮ ಮೇಲಿದೆ ಎನ್ನುವ ಅರಿವು ಅವನಿಗಿದ್ದರೆ ಅವನು ಸದಾ ಜಾಗೃತವಾಗಿರುತ್ತಾನೆ. ಒಬ್ಬ ರಾಜಕಾರಣಿ ಕೆಟ್ಟು ಕೆರ ಹಿಡಿದಿದ್ದಾನೆ ಎಂದರೆ, ಅವನನ್ನು ಇಳಿಸುವುದಕ್ಕೆ ನಾವು ಐದುವರ್ಷ ಕಾಯಬೇಕು ಎಂದೇನೂ ಇಲ್ಲ. ಅವನ ವಿರುಧ್ಧ ಜಾಗೃತರಾಗಿ, ಸಾರ್ವಜನಿಕ, ಧರಣಿ ಪ್ರತಿಭಟನೆಯ ಮೂಲಕ ಜನರು ಒಂದಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು. ಸರಕಾರದ ವಿರುದ್ಧ ಜನರು ಕೆರಳಿದ್ದಾರೆ ಎನ್ನುವುದು ಅರಿವಾದ ನಾಯಕರೂ ಎಚ್ಚೆತ್ತುಕೊಳ್ಳುತ್ತಾರೆ.
ಇತ್ತೀಚಿನ ಚುನಾವಣಾ ಸಮೀಕ್ಷೆಗಳನ್ನು ಗಮನಿಸಿದಾಗ, ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಂದು ಅದರರ್ಥ ಕಾಂಗ್ರೆಸ್ ಭಾರೀ ಸಜ್ಜನ ಪಕ್ಷ ಎಂದಲ್ಲ. ಇಂದು ಮತದಾನ ಸಂದರ್ಭದಲ್ಲಿ ಅತಿ ಕಡಿಮೆ ಕೆಟ್ಟ ಪಕ್ಷವನ್ನು ಜನರು ಆರಿಸಬೇಕಾದಂತಹ ಸ್ಥಿತಿಗೆ ತಲುಪಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೀಡಿದ ಅತ್ಯಂತ ಕೆಟ್ಟ, ಭ್ರಷ್ಟ ಆಡಳಿತದಿಂದ ಜನರ ರೋಸಿ ಹೋಗಿದ್ದಾರೆ. ಅದರ ಪರಿಣಾಮವಾಗಿ ಕಾಂಗ್ರೆಸ್‌ನ್ನು ಅನಿವಾರ್ಯ ವಾಗಿ ಜನ ಆರಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೇ ತಪ್ಪು ತಿಳಿದುಕೊಂಡು, ಜನರ ಒಲವು ನಮ್ಮ ಕಡೆಗೆ ಇದೆ ಎಂದು ಕಾಂಗ್ರೆಸ್ ನಾಯಕರು ಮುಂದವರಿದರೆ, ಅವರು ಬಿಜೆಪಿಗಿಂತಲೂ ಹೀನ ಸ್ಥಿತಿಯನ್ನು ತಲುಪಲಿದ್ದಾರೆ. ಈ ಎಚ್ಚರಿಕೆ ಕಾಂಗ್ರೆಸ್ ನಾಯಕರಿಗಿರಬೇಕು. ಅಥವಾ ಮುಂದೆ ಅಧಿಕಾರ ಹಿಡಿಯುವ ಯಾವುದೇ ನಾಯಕರು ಇದನ್ನು ಪಾಠವಾಗಿ ತೆಗೆದುಕೊಳ್ಳಬೇಕು. ಬಿಜೆಪಿ ನಡೆಸಿದ ಅತ್ಯಂತ ಹೀನ ವ್ಯವಹಾರಗಳಿಂದ ದೊಡ್ಡ ಅಪಾಯವೆಂದರೆ,ಉಳಿದ ಪಕ್ಷಗಳು ತಮಗೂ ಅದನ್ನೇ ಮಾರ್ಗದರ್ಶಿಯಾಗಿ ತೆಗೆದುಕೊಳ್ಳಬಹುದೇ ಎನ್ನುವುದು.
ತಾವು ಮಾಡುವ ಅಪರಾಧಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ನಾಯಕರು ಇಂದು ಗುರಾಣಿಯಾಗಿ ಬಳಸುತ್ತಿರುವುದು ‘‘ನಿಮ್ಮ ಆಡಳಿತ ಕಾಲದಲ್ಲಿ ನೀವೇನು ಮಾಡಿದ್ದೀರಿ ಎನ್ನುವುದು ನಮಗೆ ಗೊತ್ತಿದೆ’’ ಎಂದು. ಅಂದರೆ ಉಳಿದವರು ಭ್ರಷ್ಟರಾದರೆ ನಮಗೂ ಭ್ರಷ್ಟರಾಗುವ ಪರವಾನಿಗೆ ಸಿಕ್ಕಿದಂತೆ ಎಂದು ಭಾವಿಸಿಕೊಂಡಿರುವ ರಾಜಕಾರಣಿಗಳು ನಮ್ಮ ನಡುವೆ ಇದ್ದಾರೆ. ಆದುದರಿಂದ, ಬಿಜೆಪಿ ನಡೆಸಿದ ನೀಚ ಆಡಳಿತವನ್ನು ಉಳಿದ ನಾಯಕರೂ ತಮಗೆ ಮಾಗದರ್ಶಿಯಾಗಿ ಬಳಸಿಕೊಂಡರೆ ಈ ನಾಡು ಸರ್ವನಾಶವಾದಂತೆಯೇ ಸರಿ.
ಈ ಹಿಂದೆಯೂ ಭ್ರಷ್ಟರಿದ್ದರು. ಆದರೆ ಅವರು ತಮ್ಮನ್ನು ತಾವು ಭ್ರಷ್ಟರು ಎಂದು ಗುರುತಿಸಿಕೊಳ್ಳುವುದಕ್ಕೆ ನಾಚಿಕೊಳ್ಳುತ್ತಿದ್ದರು. ತಮ್ಮನ್ನು ಸಮರ್ಥಿಸಲು ಸರ್ವ ಪ್ರಯತ್ನ ಮಾಡುತ್ತಿದ್ದರು. ಆದರೆ ಸದ್ಯದ ರಾಜಕೀಯ ಸಂದರ್ಭದಲ್ಲಿ ರಾಜಕಾರಣಿಗಳು ನಾಚಿಕೆಯನ್ನು ಸಂಪೂರ್ಣವಾಗಿ ತೊರೆದು ಬಿಟ್ಟಿದ್ದಾರೆ. ‘‘ಹೌದು ನಾನು ಭ್ರಷ್ಟ ಏನೀಗ?’’ ಎಂದು ಕೇಳುವಷ್ಟು ನೀಚರಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜನರನ್ನು ಹಣಕೊಟ್ಟು ಸರಿಪಡಿಸಬಹುದು ಎಂಬಷ್ಟು ಅಹಂಕಾರವನ್ನು ತಳೆದಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಬಿಜೆಪಿ ರಾಜ್ಯದಲ್ಲಿ ಸರ್ವನಾಶವಾಯಿತು. ಅದರ ವರ್ಚಸ್ಸು ಪಾತಾಳ ತಲುಪಿತು. ಕಾಂಗ್ರೆಸ್ ಮತ್ತೆ ಸರಕಾರ ರಚಿಸಬಹುದಾದ ಸನ್ನಿವೇಶ ನಿರ್ಮಾಣವಾಗಿದೆ.
ಬಿಜೆಪಿಯ ಸರ್ವನಾಶವನ್ನು ಮುಂದಿನ ಸರಕಾರ ಒಂದು ಪಾಠವಾಗಿ ತೆಗೆದುಕೊಳ್ಳಬೇಕು. ಲಜ್ಜೆ, ನಾಚಿಕೆಯನ್ನು ಬೆಳೆಸಿಕೊಳ್ಳಬೇಕು. ಸಣ್ಣ ಅಕ್ರಮವನ್ನೂ ಸಹಿಸಬಾರದು.ಒಂದು ಸಣ್ಣ ಅಕ್ರಮವನ್ನು ಸಹಿಸಿದರೆ, ಮುಂದೆ ಅದೇ ಅಭ್ಯಾಸವಾಗಿ, ದೊಡ್ಡ ಅಕ್ರಮಗಳನ್ನೂ ಸಹಿಸುವ ಶಕ್ತಿ ಬಂದು ಬಿಡುತ್ತದೆ. ಆದುದರಿಂದ ಮುಂದಿನ ಸರಕಾರ ಹಿಂದಿನ ಸರಕಾರವನ್ನು ಪಾಠವಾಗಿಟ್ಟುಕೊಂಡು ಮುಂದೆ ಸಾಗಬೇಕು. ಪ್ರಜಾಸತ್ತೆಗೆ ಮತ್ತೆ ಗೌರವ, ವರ್ಚಸ್ಸನ್ನು ತಂದುಕೊಡುವ ಹೊಣೆಗಾರಿಕೆ ಮುಂದಿನ ಸರಕಾರದ ಮೇಲಿದೆ.

No comments:

Post a Comment