Tuesday, May 7, 2013

ಸೇನಾ ವಾಪಸಾತಿ ಸ್ವಾಗತಾರ್ಹ ಕ್ರಮ ಮೇ -07-2013

ಭಾರತ ಮತ್ತು ಚೀನಾ ಲಡಾಕ್‌ನ ದೌಲತ್ ಬೇಗ್ ವಲಯದಿಂದ ರವಿವಾರ ಸೇನಾಪಡೆಗಳನ್ನು ವಾಪಸ್ ಕರೆಸಿಕೊಂಡಿವೆ. ಇದು ಉನ್ನತ ಮಟ್ಟದ ಮಾತುಕತೆಯ ಫಲಶ್ರುತಿಯಾಗಿದೆ. ಈ ವಾಪಸಾತಿಯಿಂದಾಗಿ ಎರಡು ದೇಶಗಳ ನಡುವೆ ಉಂಟಾದ ದ್ವೇಷಮಯ ವಾತಾವರಣ ಸದ್ಯಕ್ಕೆ ಶಮನ ವಾದಂತಾಗಿದೆ. ಕಳೆದ ಎಪ್ರಿಲ್ ಎರಡನೆ ವಾರದಲ್ಲಿ ಚೀನಾದ ಕೆಲ ಸೈನಿಕರು ಯುದ್ಧವಾಹನಗಳೊಂದಿಗೆ 15 ಕಿ.ಮೀ.ನಷ್ಟು ಭಾರತದೊಳಗೆ ಪ್ರವೇಶಿಸಿ ದೌಲತ್ ಬೇಗ್‌ನ ಓಲ್ಡಿ ವಲಯದಲ್ಲಿ ಶಿಬಿರಗಳನ್ನು ನಿರ್ಮಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾದಿಂದ ಎದುರಾಗಬಹುದಾದ ಯಾವುದೇ ದಾಳಿಯನ್ನು ಎದುರಿಸಲು ಭಾರತೀಯ ಸೇನೆ ಕೂಡ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿತ್ತು. ಇದರಿಂದಾಗಿ ಉಭಯ ದೇಶಗಳ ನಡುವೆ ಮತ್ತೊಮ್ಮೆ ಭೀಕರ ಯುದ್ಧ ನಡೆಯಬಹುದು ಎಂಬ ಆತಂಕ ಉಂಟಾಗಿತ್ತು.
ಚೀನಾ ಸೇನೆಯ ನುಸುಳುವಿಕೆಯಿಂದ ಭಾರತದ ಕೆಲ ರಾಜಕಾರಣಿಗಳಲ್ಲಿ ದಿಢೀರ್ ದೇಶಪ್ರೇಮ ಉಕ್ಕಿ ಹರಿದಿತ್ತು. ಬಿಜೆಪಿ ನಾಯಕರು ಮಾತ್ರವಲ್ಲ, ಸಮಾಜವಾದಿ ಮುಲಾಯಂ ಸಿಂಗ್ ಯಾದವ್ ಅಂಥವರು ಆಕಾಶವೇ ತಲೆಯ ಮೇಲೆ ಹರಿದು ಬಿದ್ದಂತೆ ಕೂಗಾಡಿದ್ದರು. ಕೇಂದ್ರದ ಯುಪಿಎ ಸರಕಾರವನ್ನು ರಣಹೇಡಿಯೆಂದು ಜರೆದಿದ್ದರು. ಚೀನಾದ ವಿರುದ್ಧ ತಕ್ಷಣವೇ ಯುದ್ಧ ಸಾರಬೇಕೆಂದು ವೀರಾವೇಶದಲ್ಲಿ ಮಾತನಾಡಿದ್ದರು. ಆದರೆ ಇವರೆಲ್ಲರ ಯುದ್ಧೋತ್ಸಾಹಕ್ಕೆ ತಣ್ಣೀರೆರಚುವಂತೆ ಸೇನಾ ವಾಪಸಾತಿ ಪ್ರಕ್ರಿಯೆ ಸದ್ದು ಗದ್ದಲವಿಲ್ಲದೆ ನಡೆದಿದೆ.
ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಇವೆಲ್ಲಾ ನೆರೆಹೊರೆಯ ದೇಶಗಳು. ಈ ದೇಶಗಳಲ್ಲಿ ನೆಲೆಸಿದ ಪ್ರಜೆಗಳಿಗೆ ಎಂದೂ ಯುದ್ಧ ಬೇಕಾಗಿಲ್ಲ. ಭಾರತ ಮತ್ತು ಪಾಕಿಸ್ತಾನದ ಜನರ ನಡುವಿನದ್ದು ಕರುಳುಬಳ್ಳಿಯ ಸಂಬಂಧ. ಅಂತಲೇ ಯುದ್ಧವನ್ನು ಈ ದೇಶಗಳ ಪ್ರಜೆಗಳು ಎಂದೂ ಬಯಸುವುದಿಲ್ಲ. ಆದರೆ ಈ ದೇಶಗಳನ್ನು ಆಳುವ ಜನದ್ರೋಹಿ ಲೂಟಿಕೋರ ರಾಜಕಾರಣಿಗಳಿಗೆ ತಮ್ಮ ಹಗರಣಗಳನ್ನು, ವೈಫಲ್ಯಗಳನ್ನು ಮುಚ್ಚಿ ಕೊಳ್ಳಲು ಯುದ್ಧಬೇಕು.
ಪ್ರಭುತ್ವದ ವಿರುದ್ಧ ಜನ ರೋಸಿಹೋದಾಗ ಅವರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಹುಸಿರಾಷ್ಟ್ರಪ್ರೇಮದ ಉನ್ಮಾದವನ್ನು ಆಳುವ ವರ್ಗ ಕೆರಳಿಸುತ್ತಲೇ ಬಂದಿದೆ. ಬಿಜೆಪಿಯಂತಹ ಪಕ್ಷಕ್ಕಂತೂ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಯಾವುದೇ ಜನಪರವಾದ ಆರ್ಥಿಕ ಕಾರ್ಯಕ್ರಮಗಳಿಲ್ಲ. ಅವರ ಧೋರಣೆಗಳೆಲ್ಲಾ ವಿದೇಶಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ರಕ್ಷಿಸುವುದಕ್ಕೆ ಪೂರಕವಾಗಿವೆ.
ಅಂತಲೇ ನೆರೆಹೊರೆ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಅವು ಪ್ರಚೋದನೆ ನೀಡುತ್ತಲೇ ಇರುತ್ತದೆ. ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ರಾಜಕಾರಣಿಗಳಿಗೆ ಯುದ್ಧವೆಂಬುದು ಒಂದು ಗುರಾಣಿಯಾಗಿದೆ. ಆದರೆ ಯುದ್ಧದಿಂದ ಜಗತ್ತಿನಲ್ಲಿ ಯಾವುದೇ ಸಮಸ್ಯೆಯೂ ಪರಿಹಾರವಾಗಿಲ್ಲ. ಕಳೆದ ಒಂದೂವರೆ ಶತಮಾನದಲ್ಲಿ ರೋಗರುಜಿನಗಳಿ ಗಿಂತ ಹೆಚ್ಚಾಗಿ ಆಳುವ ವರ್ಗಗಳ ಯುದ್ದೋನ್ಮಾದಕ್ಕೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ.
ಹುಸಿ ಆವೇಶದಿಂದ ಯುದ್ಧಕ್ಕೆ ಕರೆ ಕೊಡುವ ಆಳುವ ವರ್ಗದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಯುದ್ಧ ಭೂಮಿಗೆ ಕಳುಹಿಸಿ ಕೊಡುವುದಿಲ್ಲ. ಬಡವರ ಮಕ್ಕಳೇ ಸಮರಾಂಗಣಕ್ಕೆ ಇಳಿದು ಬಲಿದಾನ ಮಾಡುತ್ತಾರೆ. ಅವರು ಸತ್ತ ನಂತರ ಹುತಾತ್ಮರೆಂದು ಹಾಡಿ ಹೊಗಳಿದರೆ ಹೋದ ಜೀವ ಮರಳಿ ಬರುವುದಿಲ್ಲ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಶಾಸಕರನ್ನಾಗಿ, ಮಂತ್ರಿಗಳನ್ನಾಗಿ, ಮುಖ್ಯಮಂತ್ರಿಗಳನ್ನಾಗಿ ಮಾಡು ತ್ತಾರೆ. ಬಡವರ ಮಕ್ಕಳಿಗೆ ರಾಷ್ಟ್ರಪ್ರೇಮದ ಉಪದೇಶ ನೀಡಿ ಯುದ್ಧ ಭೂಮಿಗೆ ದೂಡುತ್ತಾರೆ.

ಹೀಗೆ ಹೇಳಿದ ಮಾತ್ರಕ್ಕೆ ಅದು ಚೀನಾದ ಸಮರ್ಥನೆಯೆಂದು ಅರ್ಥವಲ್ಲ. ಚೀನಾ ಅನೇಕ ಬಾರಿ ವಿಶ್ವಾಸದ್ರೋಹ ಮಾಡಿದೆ ಎಂಬುದರಲ್ಲಿ ಎರಡು ಅಭಿಪ್ರಾಯವಿಲ್ಲ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಚೀನಾದ ಅಂದಿನ ಪ್ರಧಾನಿ ಚೌ ಎನ್‌ಲೈ ಜೊತೆ ರೂಪಿಸಿದ ಪಂಚಶೀಲ ತತ್ವಗಳನ್ನು ಚೀನಾ ಗಾಳಿಗೆ ತೂರಿ 60ರ ದಶಕದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ್ದು ನಿಜ. ಇದರಿಂದ ನೆಹರೂ ಎಷ್ಟು ಘಾಸಿಗೊಂಡಿದ್ದರೆಂದರೆ ಅಸ್ವಸ್ಥಗೊಂಡವರು ಮತ್ತೆ ಚೇತರಿಸಲೇ ಇಲ್ಲ. ಆದರೆ ಅಕ್ಕಪಕ್ಕದ ಯಾವುದೇ ದೇಶದೊಂದಿಗೆ ನಿರಂತರವಾದ ಸಂಘರ್ಷವನ್ನು ಮುಂದುವರಿಸಿ ಕೊಂಡು ಹೋಗುವುದರಲ್ಲಿ ಅರ್ಥವಿಲ್ಲ.
ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿದ್ದರೆ ಮಾತುಕತೆಯ ಮೂಲಕ ಅದನ್ನು ಬಗೆಹರಿಸಿ ಕೊಳ್ಳಬೇಕು. ಯಾವುದೇ ಸಮಸ್ಯೆಗೂ ರಾಜತಾಂತ್ರಿಕ ಮಾರ್ಗದಲ್ಲಿ ಪರಿಹಾರವಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಇದೇ 9ರಂದು ಕೈಗೊಳ್ಳಲಿರುವ ಚೀನಾ ಯಾತ್ರೆ ಯಶಸ್ವಿಯಾಗಲಿ.
ಮೇ 20ರಂದು ಭಾರತಕ್ಕೆ ಭೇಟಿ ನೀಡಲಿರುವ ಚೀನಾದ ಪ್ರಧಾನಿ ಲೀ ಕೆಕಿಯಾಂಗ್ ಅವರ ಪ್ರವಾಸವೂ ಯಶಸ್ವಿಯಾಗಲಿ. ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕ ಪರಿಹರಿಸಲು ಕ್ರಮಕೈಗೊಳ್ಳಲಿ. ಚೀನಾ ಈಗ ಮುಂಚಿನಂತಿಲ್ಲ. ಅದು ಆರ್ಥಿಕವಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿರುವ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಂತಲೇ ಚೀನಾದ ವಿರುದ್ಧ ಭಾರತವನ್ನು ಎತ್ತಿಕಟ್ಟಿ ಈ ಭೂಪ್ರದೇಶದಲ್ಲಿ ನಿರಂತರವಾಗಿ ದ್ವೇಷದ ವಾತಾವರಣ ನಿರ್ಮಿಸಲು ಅಮೆರಿಕ ಹುನ್ನಾರ ನಡೆಸಿದೆ.
ಈ ಹುನ್ನಾರಕ್ಕೆ ಭಾರತ ಬಲಿಯಾಗ ಬಾರದು. ಸಾಮ್ರಾಜ್ಯಶಾಹಿಗಳ ಸ್ವಾರ್ಥ ಸಾಧನೆಗೆ ನಮ್ಮ ನೆರೆಹೊರೆಯ ಬಂಧುಗಳನ್ನು ಕಳೆದು ಕೊಳ್ಳಬಾರದು. ಯುದ್ಧ ಯಾವುದೇ ದೇಶಕ್ಕೆ ಒಳ್ಳೆಯದನ್ನು ಮಾಡಿದ ಉದಾಹರಣೆಗಳಿಲ್ಲ. ಸ್ವಾರ್ಥ ಸಾಧಕ ಅವಿವೇಕಿಗಳಿಗೆ ಮಾತ್ರ ಯುದ್ಧ ಬೇಕಾಗಿರ ಬಹುದು. ಆದರೆ ಭಾರತದ ಕೋಟಿ ಕೋಟಿ ಜನರಿಗೆ ಉತ್ತಮ ಬದುಕು ಬೇಕಾಗಿದೆ. ಅಕ್ಕಪಕ್ಕದ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ದೇಶದ ಪ್ರಜೆಗಳು ಇಷ್ಟಪಡುತ್ತಾರೆ ಎಂಬುದನ್ನು ಮರೆಯಬಾರದು.

No comments:

Post a Comment