Thursday, May 2, 2013

ಹೊಸ ಕಾಯಕಗಳ ಹೊಸ ಕಾಯಿಲೆಗಳು


ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಮೇ ದಿನದ ಬಲಿದಾನವನ್ನು ಮರೆತಿರುವುದು ಇಂದಿನವರಿಗೆ ಕುತ್ತಾಗುತ್ತಿದೆ
ಇಂದು ಕಾರ್ಮಿಕರ ದಿನ. ಎಂಟು ಗಂಟೆ ದುಡಿಮೆಎಂಟು ಗಂಟೆ ವಿಶ್ರಾಂತಿ-ವಿನೋದ ಹಾಗೂ ಎಂಟು ಗಂಟೆ ನಿದ್ದೆಯ ಹಕ್ಕಿಗಾಗಿ ದುಡಿಯುವ ಜನರು ನಡೆಸಿದ್ದ ಧೀರೋದಾತ್ತ ಹೋರಾಟಗಳನ್ನು ಸ್ಮರಿಸುವ ದಿನ. ಹೊಸ ಆರ್ಥಿಕತೆ, ಹೊಸ ತಂತ್ರಜ್ಞಾನಹೊಸ ಜೀವನ ಮೌಲ್ಯಗಳು ಹಾಗೂ ಹೊಸ ಉದ್ಯೋಗಗಳ ಈ ಕಾಲಕ್ಕೆ ಅವೆಷ್ಟು ಪ್ರಸ್ತುತವೆಂದು ಮಥಿಸಬೇಕಾದ ದಿನ.
ಹದಿನೆಂಟು-ಹತ್ತೊಂಭತ್ತನೇ ಶತಮಾನವು ಕೈಗಾರಿಕಾ ಕ್ರಾಂತಿಯ ಕಾಲವಾಗಿತ್ತು, ಬಂಡವಾಳಶಾಹಿ ಆರ್ಥಿಕತೆಯು ಬಲಗೊಳ್ಳಲಾರಂಭಿಸಿದ್ದ ಕಾಲವಾಗಿತ್ತು. ದೊಡ್ಡದಾಗಿ ಬೆಳೆಯತೊಡಗಿದ್ದ ಉದ್ದಿಮೆಗಳಲ್ಲಿ ಕಾರ್ಮಿಕರು ದಿನಕ್ಕೆ 12-20 ಗಂಟೆ ದುಡಿದು ಹೈರಾಣಾಗುತ್ತಿದ್ದರು. ಒಳ ಹೋದವರು ಹೊರಬರುವ ಖಾತರಿಯಿಲ್ಲದಿದ್ದ ಗಣಿಗಳು, ಉಸಿರುಗಟ್ಟಿಸುವಷ್ಟು ಮಲಿನವಾಗಿದ್ದ ಕಾರ್ಖಾನೆಗಳುಸ್ವಲ್ಪ ತಪ್ಪಿದರೆ ಚಚ್ಚುತ್ತಿದ್ದ ಯಂತ್ರಗಳು ದುಡಿಯುವವರ ಆರೋಗ್ಯಕ್ಕೂ, ಆಯುಸ್ಸಿಗೂ ಕಂಟಕವಾಗಿದ್ದವು. ಇಂತಹಾ ಅಮಾನವೀಯವಾದ, ಅಪಾಯಕಾರಿಯಾದ, ಅನಾರೋಗ್ಯಕರವಾದ ಸ್ಥಿತಿಗತಿಗಳ ವಿರುದ್ಧ ವಿಶ್ವದೆಲ್ಲೆಡೆ ಪ್ರತಿಭಟನೆಗಳಾಗುತ್ತಿದ್ದವು. ಆಸ್ಟ್ರೇಲಿಯಾದಿಂದ ಅಮೆರಿಕಾದವರೆಗೆ ಈ ಹೋರಾಟಗಳು ಒಗ್ಗಟ್ಟಾಗಿ ಬಲಗೊಂಡಂತೆ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಸುಧಾರಣೆಗಳು ಆರಂಭಗೊಂಡವು. ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ದುಡಿಸಬಾರದೆನ್ನುವ ಬೇಡಿಕೆಯೂ ಎಲ್ಲೆಡೆ ಜೋರಾಯಿತು. ಮೇ 1, 1886 ರಿಂದ ಎಂಟೇ ಗಂಟೆಗಳ ಕೆಲಸ ಎಂಬ ಘೋಷಣೆಯೊಂದಿಗೆ ಅಮೆರಿಕಾದ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮುಷ್ಕರಗಳು ನಡೆದವು. ಷಿಕಾಗೋ ನಗರದಲ್ಲಿ 40000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಮಾಲಕರು ಹಾಗೂ ಪೋಲೀಸರ ಅಮಾನುಷ ದಾಳಿಗಳಾದವು; ಹಲವರು ಸತ್ತರುಬಂಧಿತ ನಾಯಕರು ಗಲ್ಲಿಗೇರಿಸಲ್ಪಟ್ಟರು. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿಯು ವಿಶ್ವದಾದ್ಯಂತ ಎಂಟು ಗಂಟೆಗಳಿಗೆ ಮಿತಿಗೊಂಡಿತು. ಇಂತಹ ಸಂಘಟಿತ ಹೋರಾಟಗಳಿಂದ ಇನ್ನಷ್ಟು ಹಕ್ಕುಗಳನ್ನೂ, ಸವಲತ್ತುಗಳನ್ನೂ ಪಡೆದುಕೊಳ್ಳಲು ದುಡಿಯುವ ಜನತೆಗೆ ಸಾಧ್ಯವಾಯಿತು.
ಕಾಲ ಕಳೆದಂತೆ, ತಂತ್ರಜ್ಞಾನ ಬೆಳೆದಂತೆ ದುಡಿಮೆಯ ಸ್ವರೂಪವೂ ಬದಲಾಗುತ್ತಾ ಬಂತು. ಗಣಕ ತಂತ್ರಜ್ಞಾನದಲ್ಲಿ ಅದ್ಭುತ ಪ್ರಗತಿಯಿಂದಾಗಿ ಎಲ್ಲಾ ಯಂತ್ರಗಳೊಳಗೆ ತಂತ್ರಾಂಶಗಳು ಹೊಕ್ಕಿ ವಿವಿಧ ವೃತ್ತಿಗಳ ಕೌಶಲ್ಯಗಳಲ್ಲಿ ಬದಲಾವಣೆಗಳಾದವು. ಮಾಹಿತಿ ಜಾಲವು ವಿಶ್ವದ ಮೂಲೆಗಳನ್ನೆಲ್ಲ ತಲುಪಿ ನಿತ್ಯಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿತು. ಹೀಗೆ ಮಾಹಿತಿ ತಂತ್ರಜ್ಞಾನವು ಬಹು ದೊಡ್ಡ ಉದ್ಯಮವಾಗಿ ಬೆಳೆದು, ಹೊಸ ಪೀಳಿಗೆಗೆ ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸಿತು. ತೊಂಭತ್ತರ ದಶಕದಲ್ಲಿ ನಮ್ಮಲ್ಲೂ ಹಲವು ಹೊಸ ಕಂಪೆನಿಗಳು ಹುಟ್ಟಿಕೊಂಡವು. ಯಂತ್ರಗಳನ್ನೂ, ಅದನ್ನಾಡಿಸುವ ತಂತ್ರಜ್ಞರನ್ನೂ ತಂಪಾಗಿರಿಸುವ ಹವಾನಿಯಂತ್ರಿತ ಕೊಠಡಿಗಳುವಿದೇಶಿ ಗಿರಾಕಿಗಳು, ಹೆಚ್ಚು ಸಂಬಳ – ಹೊಸ ಕೆಲಸದ ಆಕರ್ಷಣೆ ಒಮ್ಮೆಗೇ ಹೆಚ್ಚಿತು. ಅದಕ್ಕೆಂದೇ ಅನೇಕ ಹೊಸ ಕಾಲೇಜುಗಳೂ ಹುಟ್ಟಿಕೊಂಡು, ವರ್ಷವೂ ಸಾವಿರಗಟ್ಟಲೆ ಗಣಕತಜ್ಞರು ಹೊರಬರತೊಡಗಿದರು. ಈ ಹೊಸ ವ್ಯವಹಾರದ ಗುಂಗಿನಲ್ಲಿ ಸರಕಾರಗಳೆಲ್ಲವೂ ಈ ಕಂಪೆನಿಗಳೊಂದಿಗೆ ತಾಳ ಹಾಕಿದವು.
ಆದರೀಗ ಗುಂಗು ಕರಗುವ ಸಮಯ ಬಂದಂತಿದೆ. ಮಾಹಿತಿ ಉದ್ಯಮವು ನಿಧಾನಗೊಳ್ಳುತ್ತಿದ್ದು, ಸ್ಪರ್ಧೆ ಕಠಿಣವಾಗುತ್ತಿದೆ. ಎಡೆಬಿಡದ ದೀರ್ಘ ದುಡಿಮೆ, ಕೆಲಸದ ಅತೀವ ಒತ್ತಡ ಹಾಗೂ ಅಭದ್ರತೆ,ಮಹಾನಗರಗಳ ಧಾವಂತ, ಆಧುನಿಕ ಜೀವನ ಶೈಲಿಗಡಿಬಿಡಿಯ ಆಹಾರ, ದೈಹಿಕ ವ್ಯಾಯಾಮದ ಕೊರತೆ ಇತ್ಯಾದಿಗಳು ಮಾಹಿತಿಕರ್ಮಿಗಳ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿವೆ. ಗಣಕ ಯಂತ್ರಗಳ ಬಳಕೆಯಿಂದಾಗುವ ದುಷ್ಪರಿಣಾಮಗಳುಆಧುನಿಕ ರೋಗಗಳು ಹಾಗೂ ಮಾನಸಿಕ ತೊಂದರೆಗಳೆಂಬ ತ್ರಿಶೂಲಕ್ಕೆ ಸಿಕ್ಕಿ ಅವರು ನರಳುತ್ತಿದ್ದಾರೆ.
ದೇಶದ ಅಭಿವೃದ್ಧಿಯ ನೆಪದಲ್ಲಿ, ಖಾಸಗಿ ಕಂಪೆನಿಗಳ ಜೋಳಿಗೆ ತುಂಬುವುದಕ್ಕಾಗಿ ಇಂದಿನ ಯುವ ಜನಾಂಗ ಸ್ವಂತ ಬದುಕನ್ನೇ ಒತ್ತೆಯಿಡುವಂತಾಗಿದೆ. ದಿನಕ್ಕೆ 10-12 ಗಂಟೆಗಳ ದುಡಿಮೆ ಹೊಸ ರೂಪ ಧರಿಸಿ ಮರಳಿ ಬಂದಿದೆಮನೆಯೊಳಕ್ಕೂ ನುಗ್ಗಿ ವಿಧ್ವಂಸಕವಾಗತೊಡಗಿದೆ. ಗಣಕಯಂತ್ರಗಳಲ್ಲಿ ಒಂದೊಂದು ಕೀಲಿಹೊಡೆತವೂ ದಾಖಲಿಸಲ್ಪಡುವುದು ಹಾಗೂ ಸಂಸ್ಥೆಯ ಸಂದುಗೊಂದುಗಳಲ್ಲಿ ಅಡಗಿರುವ ಕ್ಯಾಮರಾಗಳಲ್ಲಿ ಚಲನವಲನಗಳೆಲ್ಲವೂ ಸೆರೆಹಿಡಿಯಲ್ಪಡುವುದು ಕೆಲಸದ ಒತ್ತಡವನ್ನು ಬಹಳಷ್ಟು ಹೆಚ್ಚಿಸುತ್ತಿವೆ. ದಿನದ 24 ಗಂಟೆಗಳಲ್ಲೂ ಚರವಾಣಿ, ಅಂತರ್ಜಾಲ, ನಿಸ್ತಂತುಗಳ ಸಂಪರ್ಕ ಜಾಲದಲ್ಲಿ ಬಂಧಿಯಾಗಿ ಎದುರಿಗಿರುವ ಮನುಷ್ಯರೊಂದಿಗೆ ಸಂವಹನ ಕಡಿಮೆಯಾಗುವಂತಾಗಿದೆ. ಅಮೆರಿಕಾದ ಹಗಲುಗಳನ್ನು ಭಾರತದ ರಾತ್ರಿಗಳಲ್ಲಿ ಗುತ್ತಿಗೆ ಪಡೆಯುತ್ತಿರುವುದರಿಂದ ನಮ್ಮ ಯುವ ಜನಾಂಗ ನಿದ್ದೆಗೆಡುತ್ತಿದೆ. ತಂತ್ರಜ್ಞಾನದ ಈ ಯುಗದಲ್ಲಿ ಕಾರ್ಮಿಕನು ಸಣ್ಣ ತುಂಡನ್ನಷ್ಟೇ ತಯಾರಿಸುವುದರಿಂದಾಗಿತನ್ನ ಕ್ರಿಯಾಶೀಲತೆಯ ಅಂತಿಮ ಫಲವನ್ನು ನೋಡುವ ಆನಂದವೂ ಅವನಿಗೆ ಇಲ್ಲವಾಗಿದೆ.
ಕಾರ್ಮಿಕರನ್ನು ಶೋಷಿಸಿ ದುಡಿಸುವುದಕ್ಕೆ ಹೊಸ ತಂತ್ರಗಳನ್ನು ಹೆಣೆಯುವ ಆಡಳಿತ ಪಂಡಿತರಿಗೆ ಕಂಪೆನಿಗಳು ದೊಡ್ಡ ಸಂಬಳಗಳನ್ನೇ ನೀಡುತ್ತಿವೆ. ಜಾತಿ, ಮತ, ಭಾಷೆ, ಲಿಂಗ, ಕೌಶಲ್ಯ, ವಯಸ್ಸು ಮುಂತಾದವುಗಳ ಹೆಸರಲ್ಲಿ ಕಾರ್ಮಿಕರನ್ನು ಒಡೆದಿಡುವುದು, ಸ್ವಾಭಿಮಾನವನ್ನು ಮಣ್ಣಾಗಿಸಿ ಸ್ವಸಾಮರ್ಥ್ಯವನ್ನೇ ಸಂಶಯಿಸುವಂತೆ ಮಾಡುವುದು, ಸಹೋದ್ಯೋಗಿಗಳಲ್ಲೂ, ಕುಟುಂಬದವರಲ್ಲೂ ತನ್ನ ಕಷ್ಟಗಳನ್ನು ಹೇಳಿಕೊಳ್ಳಲಾಗದಂತೆ ನಿಕೃಷ್ಟತೆಯ ಭಾವನೆಯನ್ನು ಹುಟ್ಟಿಸುವುದು, ಪರಸ್ಪರ ಶಕ್ತಿ ತುಂಬಿ ಆಸರೆಯಾಗಬಲ್ಲ ಕಾರ್ಮಿಕ ಸಂಘಟನೆಗಳನ್ನು ಪ್ರತಿಬಂಧಿಸುವುದು ಇವೇ ಮುಂತಾದ ತಂತ್ರಗಳಿಂದಾಗಿ ಇಂದಿನ ಕಾರ್ಮಿಕರು ಹೆಚ್ಚು ಹೆಚ್ಚು ಒಬ್ಬಂಟಿಗಳಾಗುತ್ತಿದ್ದಾರೆ, ಇನ್ನಷ್ಟು ಒತ್ತಡಗಳ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ.
ಗಣಕಕರ್ಮಿಗಳ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಶ್ವದಾದ್ಯಂತ ಅಧ್ಯಯನಗಳಾಗುತ್ತಿವೆ. ಶೇ. 90ಕ್ಕೂ ಹೆಚ್ಚು ಗಣಕಕರ್ಮಿಗಳಲ್ಲಿ ಗಣಕ ಯಂತ್ರಗಳ ನಿರಂತರ ಬಳಕೆಯಿಂದ ಕುತ್ತಿಗೆ, ಭುಜ, ಮಣಿಗಂಟುಬೆರಳುಗಳು ಹಾಗೂ ಬೆನ್ನಿನ ಸಂಧಿಗಳ ನೋವು, ಕೈಯ ನರಶೂಲೆ ಹಾಗೂ ಕಣ್ಣಿನ ತೊಂದರೆಗಳಾಗುವುದನ್ನು ಗುರುತಿಸಲಾಗಿದೆ. ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ,ಕೊಲೆಸ್ಟರಾಲ್ ಮತ್ತಿತರ ಮೇದಸ್ಸಿನ ಸಮಸ್ಯೆಗಳು, ಹೃದಯ ಹಾಗೂ ಮೆದುಳಿನ ರಕ್ತನಾಳಗಳ ಕಾಯಿಲೆಗಳು, ಮೂಳೆಸವೆತ ಹಾಗೂ ಕ್ಯಾನ್ಸರ್ ನಂತಹ ಆಧುನಿಕ ರೋಗಗಳು ಶೇ. 65ರಷ್ಟು ಗಣಕ ತಂತ್ರಜ್ಞರನ್ನು ಬಾಧಿಸುತ್ತಿದ್ದು25-35ರ ಹರೆಯದಲ್ಲೇ ಅವರು ಮುಪ್ಪಾಗುತ್ತಿದ್ದಾರೆ.
ಶೇ. 80ಕ್ಕೂ ಹೆಚ್ಚು ಗಣಕಕರ್ಮಿಗಳು ತಮ್ಮ ಕೆಲಸದಲ್ಲಿ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದುಶೇ. 40ರಷ್ಟು ಮಂದಿ ಅದರಿಂದ ಖಿನ್ನತೆಗೂ, ಆತಂಕಕ್ಕೂ ಒಳಗಾಗುತ್ತಿದ್ದಾರೆ. ಶೇ. 60ರಷ್ಟು ಗಣಕಕರ್ಮಿಗಳು ನಿದ್ರಾಹೀನರಾಗಿದ್ದು, ಅದರಿಂದ ಹಲಬಗೆಯ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರಲ್ಲಿ ಹೆಚ್ಚುತ್ತಿರುವ ಧೂಮಪಾನ ಹಾಗೂ ಮದ್ಯಪಾನದ ಚಟಗಳಿಂದಾಗಿ ಸಮಸ್ಯೆಯು ಇನ್ನಷ್ಟು ಜಟಿಲವಾಗುತ್ತಿದೆ. ಆತ್ಮಹತ್ಯೆ ಹಾಗೂ ಕೊಲೆಗಳಂತಹ ವಿಪರೀತ ಘಟನೆಗಳೂ ಕೆಲವೆಡೆ ವರದಿಯಾಗಿವೆ. ಗಂಡ-ಹೆಂಡಿರಿಗೆ ಪರಸ್ಪರ ಬೆರೆಯುವುದಕ್ಕೂ ಸಮಯವಿಲ್ಲದೆ ವಿವಾಹ ವಿಚ್ಛೇದನವೂ ಸಾಮಾನ್ಯವಾಗತೊಡಗಿದೆ. ಬೆಂಗಳೂರಿನಂತಹ ನಗರಗಳ ಮನೋರೋಗ ತಜ್ಞರು ಮಾಹಿತಿಕರ್ಮಿಗಳಿಗೆ ಸಾಂತ್ವನ ಹೇಳುವುದಕ್ಕೆಂದೇ ಹೆಚ್ಚು ಸಮಯವನ್ನು ಮೀಸಲಿಡತೊಡಗಿದ್ದಾರೆ.
ಕೆಲವು ಸಂಸ್ಥೆಗಳಲ್ಲಿ ಒತ್ತಡ ಭಂಜನಕ್ಕೆ ಯೋಗಾಭ್ಯಾಸವನ್ನು ಬೋಧಿಸಲಾಗುತ್ತಿದೆ. ಉಸಿರಾಟವನ್ನು ಕಲಿಸುವ ಬಾಬಾಗಳೂ, ಬದುಕುವುದನ್ನು ಹೇಳಿಕೊಡುವ ಶ್ರೀಶ್ರೀಗಳೂ ಅಂತಲ್ಲಿ ನುಸುಳಿಅಧ್ಯಾತ್ಮದ ಅಫೀಮು ನುಂಗಿಸಿ ಕೋಟ್ಯಾಧೀಶರಾಗುತ್ತಿದ್ದಾರೆ. ಯಾವುದೇ ಯೋಗ-ಧ್ಯಾನಗಳಿಂದ ಮಾನಸಿಕ ಒತ್ತಡವನ್ನಾಗಲೀಆತಂಕ ಯಾ ಖಿನ್ನತೆಯನ್ನಾಗಲೀ, ದೈಹಿಕ ಸಮಸ್ಯೆಗಳನ್ನಾಗಲೀ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಹಲವು ವಿಮರ್ಶೆಗಳು ಸ್ಪಷ್ಟಪಡಿಸಿವೆ (ಒಸ್ಪಿನಾ, 2007; ಕೊಕ್ರೇನ್, 2009). ನಿಷ್ಪ್ರಯೋಜಕವಾದ ಈ ಯೋಗ-ಧ್ಯಾನಗಳು ವಸ್ತುನಿಷ್ಠವಾದ ಪರಿಹಾರಕ್ಕೆ ತೊಡಕಾಗಿಬಿಡುತ್ತವೆ.
ಎಂಟು ಗಂಟೆಗಳ ಪರಿಮಿತ ದುಡಿಮೆಗಾಗಿ 1886ರ ಮೇ 1 ರಂದು ವಿಶ್ವದೆಲ್ಲೆಡೆ ಎದ್ದಿದ್ದ ಕೂಗು ಮತ್ತೊಮ್ಮೆ ಮೊಳಗಬೇಕಾದ ಕಾಲ ಬಂದಿದೆ. ಬಾಯಿ ಬಾರದ, ಸಂವೇದನೆಗಳಿಲ್ಲದ ಯಂತ್ರಗಳ ಮುಂದೆ ಏಕಾಂಗಿಯಾಗಿರುವ ಬದಲು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದಕ್ಕೆ, ಸಾಮರ್ಥ್ಯ-ಸಾಧನೆಗಳನ್ನು ಒರೆ ಹಚ್ಚುವುದಕ್ಕೆ, ಸ್ವಾಭಿಮಾನವನ್ನು ಗಟ್ಟಿಗೊಳಿಸುವುದಕ್ಕೆ ಅವಕಾಶವನ್ನೀಯುವ ಕಾರ್ಮಿಕ ಸಂಘಟನೆಗಳನ್ನು ಬಲಪಡಿಸಬೇಕಾಗಿದೆ. ಮತ್ತಷ್ಟು ಅಂತರ್ಮುಖಿಯಾಗಿಸುವ ಯೋಗ-ಧ್ಯಾನಗಳಲ್ಲಿ ಕಾಲಹರಣ ಮಾಡುವ ಬದಲು ತನಗಿಷ್ಟವಾದವರ ಜೊತೆ ಬೆರೆತು, ತನಗಿಷ್ಟವೆನಿಸುವ ಚಟುವಟಿಕೆಗಳಿಂದ ಮನಸ್ಸನ್ನು ಹಗುರಗೊಳಿಸಬೇಕಾಗಿದೆ. ಮಧ್ಯಾಹ್ನದ ಕೆಲಹೊತ್ತು ಬಿಸಿಲಿಗೆ ಮೈಯೊಡ್ಡಿ ವಿಟಮಿನ್ ಡಿ ಪಡೆಯಬೇಕಾಗಿದೆ. ಗಂಟೆಗಟ್ಟಲೆ ಕುಳಿತು, ಸಿಕ್ಕಾಪಟ್ಟೆ ತಿಂದು-ಕುಡಿದು ರೋಗಿಗಳಾಗುವುದನ್ನು ತಡೆಯಬೇಕಾಗಿದೆ. ಖಾಸಗಿ ರಂಗದ ಶೇ. 85ರಷ್ಟು ನೌಕರರು ವಿವಿಧ ಮನೋದೈಹಿಕ ಸಮಸ್ಯೆಗಳಿಗೆ ತುತ್ತಾಗಿರುವಲ್ಲಿಶೇ. 80ರಷ್ಟು ಸರಕಾರಿ ನೌಕರರು ಸುಭದ್ರಪರಿಮಿತ ದುಡಿಮೆಯಿಂದಾಗಿ ಆರೋಗ್ಯವಂತರಾಗಿದ್ದಾರೆಂಬ ಅಸೋಚಾಮ್ ವರದಿಯು (ಎ 72013) ಎಲ್ಲರ ಕಣ್ತೆರೆಸಬೇಕಿದೆ.

No comments:

Post a Comment