Friday, May 24, 2013

ಭಾರತದ ಹೆಮ್ಮೆ ಅನಂತಮೂರ್ತಿ


 ಮೇ -24-2013

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಪ್ರಶಸ್ತಿ ಯಾರಿಗೆ ಸಿಗಬಹುದೆನ್ನುವ ಕುತೂಹಲದಲ್ಲಿ ಭಾರತವೂ ಭಾಗಿಯಾಗಿತ್ತು. ಅದಕ್ಕೊಂದು ಮುಖ್ಯ ಕಾರಣವಿತ್ತು. ಈ ಬಾರಿ, ಮ್ಯಾನ್ ಬೂಕರ್ ಪ್ರಶಸ್ತಿಯ ಅಂತಿಮ ಹತ್ತು ಜನರ ಪಟ್ಟಿಯಲ್ಲಿ ಭಾರತದ ಹಿರಿಯ ಲೇಖಕರೊಬ್ಬರ ಹೆಸರಿತ್ತು. ಕನ್ನಡಿಗರೂ ಈ ಬಾರಿ ಮ್ಯಾನ್ ಬೂಕರ್ ಪ್ರಶಸ್ತಿ ಪ್ರಕಟಣೆಯನ್ನು ತುದಿಗಾಲಲ್ಲಿ ನಿಂತು ಕಾಯು ತ್ತಿದ್ದರು. ಅದಕ್ಕೂ ಮಹತ್ತಾದ ಕಾರಣವಿತ್ತು. ಭಾರತವನ್ನು ಪ್ರತಿನಿಧಿಸಿದ್ದ ಆ ಹಿರಿಯ ಲೇಖಕ ಇನ್ನಾರೂ ಅಲ್ಲ. ಅವರು ಕನ್ನಡದ ಹೆಮ್ಮೆಯ ಯು.ಆರ್.ಅನಂತಮೂರ್ತಿ ಆಗಿದ್ದರು.
ಈ ಹಿಂದೆ ಭಾರತೀಯ ಲೇಖಕ ಅರವಿಂದ ಅಡಿಗ ಪಡೆದ ಬೂಕರ್‌ಗೂ ಇದಕ್ಕೂ ಮುಖ್ಯ ವ್ಯತ್ಯಾಸವಿದೆ. ಅದು ಕೃತಿಗೆ ನೀಡುವ ಪ್ರಶಸ್ತಿಯಾಗಿದ್ದರೆ, ಇದು ಲೇಖಕನ ಒಟ್ಟು ಬರಹಗಳು ಹಾಗೂ ಚಿಂತನೆಗಳನ್ನು ಗುರುತಿಸಿ ನೀಡುವ ಪ್ರಶಸ್ತಿ. ಎರಡು ವರ್ಷಕ್ಕೊಮ್ಮೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಲೇಖಕನ ಒಟ್ಟು ಕೃತಿಗಳನ್ನು ಆಧರಿಸಿ, ಈ ಪ್ರಶಸ್ತಿಯನ್ನು ನಿರ್ಧರಿಸಲಾಗುತ್ತದೆ.
ಸುಮಾರು ವರ್ಷಗಳ ಹಿಂದೆ ಭಾರತದ ಖ್ಯಾತ ಲೇಖಕಿ ಮಹಾಶ್ವೇತಾ ದೇವಿಯವರೂ ಈ ಬೂಕರ್ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಗೌರವ ಮೊದಲ ಬಾರಿಗೆ ಕನ್ನಡಿಗನೊಬ್ಬನಿಗೆ ದೊರಕಿದೆ. ಅನಂತಮೂರ್ತಿಯವರಿಗೆ ಪ್ರಶಸ್ತಿ ದೊರಕದೆ ಇರಬಹುದು. ಆದರೆ, ಅಂತಿಮ ಪಟ್ಟಿಯಲ್ಲಿ ಹತ್ತು ಜನರಲ್ಲಿ ಗುರುತಿಸಿಕೊಂಡಿರು ವುದು ಸಣ್ಣ ಸಾಧನೆಯೇನೂ ಅಲ್ಲ. ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಚಿಂತನೆ ಯನ್ನು ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ್ದಾರೆ. ಸಕಲ ಭಾರತೀಯರು ಅನಂತ ಮೂರ್ತಿಯವರನ್ನು ಅಭಿನಂದಿಸಬೇಕಾದ ಸಂದರ್ಭ ಇದು.
  
ಅಷ್ಟೇ ಅಲ್ಲ, ತನಗೆ ಸಿಕ್ಕಿದ ಅವಕಾಶವನ್ನು ಅನಂತಮೂರ್ತಿ ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪ್ರಾದೇಶಿಕ ಕನ್ನಡದ ತುತ್ತೂರಿಯನ್ನು ಅವರು ಲಂಡನ್‌ನಲ್ಲಿ ಹಿರಿಯ ಸಾಹಿತಿಗಳ ನಡುವೆ ಮೊಳಗಿಸಿದ್ದಾರೆ. ಇದಕ್ಕಾಗಿ ನಾವು ಅನಂತಮೂರ್ತಿಯವರ ಕುರಿತಂತೆ ಹೆಮ್ಮೆ ಪಡಬೇಕಾಗಿದೆ. 'ಗಾರ್ಡಿಯನ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು, ಶಿವರಾಮ ಕಾರಂತ, ಕುವೆಂಪು ಮೊದಲಾದ ಹಿರಿಯ ಲೇಖಕರನ್ನು ಪ್ರಸ್ತಾಪಿಸಿದ್ದಾರೆ.
ತನ್ಮೂಲಕ, ಅವರು ಇಡೀ ಕನ್ನಡ ಸಾಹಿತ್ಯವನ್ನೇ ವಿಶ್ವದ ಮುಂದಿಟ್ಟರು. ಜೊತೆಗೆ ಕನ್ನಡವೆನ್ನುವ ಪ್ರಾದೇಶಿಕ ಭಾಷೆಯನ್ನು ಅವರು ಅಲ್ಲಿ ಎತ್ತಿ ಹಿಡಿದರು. ''ತೀರಾ ಅನಾರೋಗ್ಯದಿಂದ ನಾನು ಬಳಲುತ್ತಿದ್ದೇನೆ. ಆದರೆ ಈ ಸಮಾರಂಭಕ್ಕೆ ಬರಲೇಬೇಕು ಎಂದು ನಿರ್ಧರಿಸುವುದಕ್ಕೆ ಕಾರಣಗಳಿವೆ. ಮುಖ್ಯವಾಗಿ ಕನ್ನಡವೆನ್ನುವ ಪ್ರಾದೇಶಿಕ ಭಾಷೆಯನ್ನು, ಇಡೀ ಭಾರತೀಯ ಬರಹಗಾರರನ್ನು ಪ್ರತಿನಿಧಿಸಿ ಇಲ್ಲಿರುವುದು ಅತ್ಯಗತ್ಯ ಎನ್ನಿಸಿತು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ'' ಎಂದು ಅವರು ಅಲ್ಲಿ ತನ್ನ ಅಂತರಂಗವನ್ನು ತೋಡಿಕೊಂಡರು.
ಒಂದು ಭಾಷೆ ಮತ್ತು ಅದರೊಳಗಿನ ಸಾಹಿತ್ಯದ ಘನತೆ ಹೆಚ್ಚುವುದು ಇಂತಹ ಲೇಖಕರ ಮೂಲಕ. ಅನಂತಮೂರ್ತಿ ಈ ನಿಟ್ಟಿನಲ್ಲಿ ಕನ್ನಡದ ನಿಜವಾದ ಶಕ್ತಿ. 'ಕನ್ನಡಕ್ಕೆ ಕೇಂದ್ರ ಸರಕಾರ ಯಾಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು' ಎನ್ನುವುದಕ್ಕೆ ಉದಾಹರಣೆಯಾಗಿ ಅನಂತಮೂರ್ತಿಯವರಿದ್ದಾರೆ. ಲಂಡನ್‌ನಲ್ಲಿ ಅನಂತಮೂರ್ತಿಯವರ ಜೊತೆಗೆ ಮಿಂಚಿದುದು ಭಾರತ ಮಾತ್ರವಲ್ಲ, ಕನ್ನಡ ಭಾಷೆಯೂ ಕೂಡ. ಇಡೀ ಜಗತ್ತು ಕನ್ನಡ ಸಾಹಿತ್ಯದ ಕುರಿತು ಕಾದಂಬರಿಕಾರರ ಕುರಿತು ಹೊರಳಿ ನೋಡುವಂತೆ ಮಾಡಿದೆ ಅನಂತಮೂರ್ತಿಯವರ ಸಾಧನೆ.
ಕನ್ನಡದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹರಾಗುವ ಬರಹಗಾರರಿದ್ದಾರೆ. ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆ. ಅವು ಕನ್ನಡದಲ್ಲಿವೆ ಎನ್ನುವ ಕಾರಣಕ್ಕಾಗಿಯಷ್ಟೇ ವಿಶ್ವದ ಕಣ್ಣು ಅವುಗಳ ಮೇಲೆ ಬಿದ್ದಿಲ್ಲ. ದೇವನೂರು ಮಹಾದೇವನವರ 'ಒಡಲಾಳ' ಎನ್ನುವ ಪುಟ್ಟ ಕೃತಿಗೆ ಸಾಟಿಯಾದ ಇನ್ನೊಂದು ಕೃತಿ ಎಲ್ಲಿದೆ? ಕನ್ನಡದ ಗ್ರಾಮೀಣ ಸಾರ ಸರ್ವಸ್ವವನ್ನು ಹೀರಿ ಒಡಮೂಡಿದ ಕೃತಿಯಿದು.
ಲಂಕೇಶ್, ತೇಜಸ್ವಿ, ಬೇಂದ್ರೆ, ಯಶವಂತ ಚಿತ್ತಾಲ, ದೇವನೂರು ಮಹಾದೇವ...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರು ವಿಶ್ವದ ಯಾವ ಲೇಖಕರನ್ನೂ ಸರಿಗಟ್ಟುವಂತಹವರು. ಇಂತಹ ಲೇಖಕರಿದ್ದಾರೆ ಎನ್ನುವುದು ಕನ್ನಡಕ್ಕೆ ಹೆಮ್ಮೆ. ಕನ್ನಡ ಸಾಹಿತ್ಯ ತೋಟದ ಒಂದು ಹೂವಿನ ಗಿಡವಷ್ಟೇ ಅನಂತಮೂರ್ತಿ. ಅನಂತಮೂರ್ತಿಯವರಿಗೆ ವಯಸ್ಸಾಗಿದೆ. ಜೊತೆಗೆ ದೈಹಿಕ ಆರೋಗ್ಯ ಸಂಪೂರ್ಣ ಕೆಟ್ಟಿದೆ.
ಆದರೂ ಅವರನ್ನು ಸಾಹಿತ್ಯ ಚಿರ ಯುವಕ ನನ್ನಾಗಿ ಇನ್ನೂ ಉಳಿಸಿ, ಬೆಳೆಸಿದೆ. ಮುಖದಲ್ಲಿ ಜೀವಂತಿಕೆ, ಬದುಕುವ ಚೈತನ್ಯ ಅವರಲ್ಲಿ ತುಂಬಿ ತುಳುಕುತ್ತಿದೆ. ಅವರ ಸೃಜನ ಶೀಲತೆ ಅವರ ಒಳಗಿನಿಂದ ಬಂದ ಚಿಲುಮೆ ಎನ್ನುವು ದಕ್ಕೆ ಇದೇ ಸಾಕ್ಷಿ. ಅನಾರೋಗ್ಯದ ಸಂದರ್ಭ ದಲ್ಲಿ ಸ್ವಸ್ಥ ಸಮಾಜಕ್ಕಾಗಿ ಸದಾ ಮಿಡಿಯು ತ್ತಿರುವವರು ಅನಂತಮೂರ್ತಿ. ಕಳೆದ ಚುನಾವಣೆಯ ಸಂದರ್ಭದಲ್ಲೂ, ಎಲ್ಲ ಟೀಕೆಗಳಿಗೂ ಸಡ್ಡು ಹೊಡೆದು, ಕೋಮುವಾದಿ ಪಕ್ಷದ ವಿರುದ್ಧ ಎದೆ ಸೆಟೆದು ನಿಂತವರು.
ಇಂದಿನ ಸಂದರ್ಭದಲ್ಲಿ ಅವರದು ಒಂಟಿ ಧ್ವನಿ. ಈ ಧ್ವನಿ ಸಕಲ ಕನ್ನಡಿಗರೊಳಗೂ ಪ್ರತಿಧ್ವನಿಸ ಬೇಕಾದ ಅಗತ್ಯವಿದೆ. ಅವರ ಜೀವಂತಿಕೆ ಕನ್ನಡದ ಹೊಸ ತಲೆಮಾರಿಗೆ ಸ್ಫೂರ್ತಿಯಾಗ ಬೇಕಾದ ಅಗತ್ಯವಿದೆ. ಅನಂತಮೂರ್ತಿ ನೂರ್ಕಾಲ ಬಾಳಲಿ. ಅವರ ಮೂಲಕ ಕನ್ನಡವೂ ಬಾಳಿ, ಬೆಳಗಲಿ.

No comments:

Post a Comment