Monday, May 6, 2013

ಕೋಮುಹಿಂಸೆ ತಡೆ ವಿಧೇಯಕದ ಜಾರಿಗೆ ಕೇಂದ್ರದ ಹಿಂದೇಟು



 ಮೇ -06-2013

ಹೊಸದಿಲ್ಲಿ, : ಯೋಜಿತ ದಾಳಿಗಳಿಂದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಉದ್ದೇಶ ಹೊಂದಿ ರುವ ಕೋಮು ಹಿಂಸಾಚಾರ ತಡೆ ವಿಧೇಯಕವು, ಯುಪಿಎ ಸರಕಾರದ ಹಾಲಿ ಆಡಳಿತಾವಧಿಯಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆ ಇಲ್ಲವೆಂಬ ಮಾತುಗಳು ರಾಜಕೀಯ ವಲಯಗಳಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಕೋಮು ಹಿಂಸೆ ತಡೆ ವಿಧೇಯಕದ ಕರಡುಪ್ರತಿಯ ಬಗ್ಗೆ ಕಾನೂನು ಸಚಿವಾಲಯವು ಆಕ್ಷೇಪ ವ್ಯಕ್ತ ಪಡಿಸಿರುವುದು ಹಾಗೂ ಕೇಂದ್ರ ಗೃಹ ಸಚಿವಾ ಲಯವು ವಿವಿಧ ರಾಜ್ಯ ಸರಕಾರಗಳ ಜೊತೆ ವಿಧೇಯಕದ ಬಗ್ಗೆ ಸಹಮತ ರೂಪಿಸಲು ಮಾತುಕತೆ ಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ಮಸೂದೆಯ ಜಾರಿಗೆ ವಿಳಂಬವಾಗಲು ಕಾರಣ ವೆನ್ನಲಾಗಿದೆ.
ಸೋನಿಯಾಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ ಸಿದ್ಧಪಡಿಸಿದ್ದ ಕೋಮು ಹಾಗೂ ಯೋಜಿತ ಹಿಂಸಾಚಾರ ತಡೆ ವಿಧೇಯಕ-2011ರಲ್ಲಿನ ಹಲವು ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಾನೂನು ಸಚಿವಾಲಯವು ಕರಡು ವಿಧೇಯಕವನ್ನು ಗೃಹ ಸಚಿವಾಲಯಕ್ಕೆ ಹಿಂತಿರುಗಿಸಿತ್ತು.
ಧಾರ್ಮಿಕ ಹಾಗೂ ಭಾಷಾವಾರು ಅಲ್ಪಸಂಖ್ಯಾತರು, ಎಸ್‌ಸಿ ಹಾಗೂ ಎಸ್‌ಟಿಗಳ ಮೇಲಿನ ಸಾಮೂಹಿಕ ಹಿಂಸೆ ಸೇರಿದಂತೆ ಯೋಜಿತ ಹಿಂಸಾಚಾರವನ್ನು ನಿಷ್ಪಕ್ಷಪಾತವಾದ ರೀತಿಯಲ್ಲಿ ನಿಯಂತ್ರಿಸಲು ಹಾಗೂ ತಡೆಗಟ್ಟುವ ನಿಟ್ಟಿನಲ್ಲಿ ವಿಧೇಯಕವ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕೆಲವೊಂದು ಕರ್ತವ್ಯಗಳನ್ನು ನಿಗದಿಪಡಿಸಿದೆ.
ಹೆಚ್ಚಿನ ಕಾಂಗ್ರೆಸೇತರ ರಾಜ್ಯ ಸರಕಾರಗಳು ಈ ವಿಧೇಯಕದಲ್ಲಿನ ಹಲವಾರು ನಿಯಮಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಪ್ರಸ್ತಾಪಿತ ಕೋಮು ಹಿಂಸಾಚಾರ ತಡೆ ವಿಧೇಯಕಕ್ಕೆ ಬಿಜೆಪಿ ಪ್ರಬಲ ವಿರೋಧ ವ್ಯಕ್ತಪಡಿ ಸಿದ್ದು, ಇದು ಗಣರಾಜ್ಯ ವ್ಯವಸ್ಥೆಗೆ ಹಾನಿಯುಂಟು ಮಾಡುವಂತಹದ್ದಾಗಿದೆಯೆಂದು ಹೇಳಿದೆ. ಪ್ರಸ್ತಾಪಿತವು ವಿಧೇಯಕ್ಕೆ ತೃಣಮೂಲ ಕಾಂಗ್ರೆಸ್,ಸಮಾಜವಾದಿ ಪಕ್ಷ, ಬಿಜು ಜನತಾದಳ, ಎಐಎಡಿಎಂಕೆ ಹಾಗೂ ಅಕಾಲಿದಳಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುವ ನಿರೀಕ್ಷೆಯಿದೆ.
ಪ್ರಕರಣಗಳ ವಿಚಾರಣೆಯನ್ನು ಹೊರರಾಜ್ಯಗಳಿಗೂ ವರ್ಗಾಯಿಸುವುದಕ್ಕೆ ಹಾಗೂ ಸಾಕ್ಷಿಗಳನ್ನು ರಕ್ಷಿಸುವುದಕ್ಕೂ ಈ ವಿಧೇಯಕವು ಅವಕಾಶ ನೀಡುತ್ತದೆಯೆಂದು ಮೂಲಗಳು ತಿಳಿಸಿವೆ.
ಈ ವಿಧೇಯಕವನ್ನು 2005ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು ಹಾಗೂ ತರುವಾಯ ಅದನ್ನು ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಯ ಪರಿಶೀಲನೆಗೆ ವರ್ಗಾಯಿಸಲಾಗಿತ್ತು.
2006ರಲ್ಲಿ ಸಮಿತಿಯು ವಿಧೇಯಕದ ಕುರಿತ ತನ್ನ ವರದಿಯನ್ನು ಸಂಸತ್‌ಗೆ ಸಲ್ಲಿಸಿತ್ತು. ಈ ವಿಧೇಯಕದ ಪರಿಶೀಲನೆ ಹಾಗೂ ಅನುಮೋದನೆಗೆ ಸಂಬಂಧಿಸಿ 2007ರ ಮಾರ್ಚ್, ಡಿಸೆಂಬರ್ 2008, ಫೆಬ್ರವರಿ 2009, ಡಿಸೆಂಬರ್ 2009 ಹಾಗೂ ಫೆಬ್ರವರಿ 2010ರಲ್ಲಿ ರಾಜ್ಯಸಭೆಗೆ ನೋಟಿಸ್ ನೀಡಲಾಗಿತ್ತು.
ಆನಂತರ ವಿಧೇಯಕದ ಬಗ್ಗೆ ಹಲವಾರು ನಾಗರಿಕ ಸಂಘಟನೆಗಳ ನೀಡಿದ ಸಲಹೆ, ಸೂಚನೆಗಳನ್ನು ಗೃಹ ಸಚಿವಾಲಯ ಪರಿಶೀಲಿಸಿತ್ತು. ಅಂತಿಮವಾಗಿ ಕೋಮುಹಿಂಸಾಚಾರದ ತಡೆಗೆ ಪರಿಷ್ಕೃತ ಕಾನೂನೊಂದನ್ನು ಜಾರಿಗೊಳಿಸುವ ಅಗತ್ಯವಿದೆಯೆಂದು ರಾಷ್ಟ್ರೀಯ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಹಾಗೂ ವಿಧೇಯಕದ ಕರಡನ್ನು ಸಿದ್ಧಪಡಿಸಿ, 2011ರ ಜುಲೈ 25ರಂದು ಅದನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು.

No comments:

Post a Comment