Thursday, May 2, 2013

ಹತ್ಯಾಕಾಂಡದ ಹಿಂದಿನ ಸಜ್ಜನರು! - ಮೇ -02-2013

ಹತ್ಯಾಕಾಂಡ ನಡೆಯುತ್ತದೆ. ಇದು ನಡೆದ ಬೆನ್ನಿಗೇ ಖಂಡನೆ, ಟೀಕೆ, ಆರೋಪ, ಪ್ರತ್ಯಾರೋಪಗಳಲ್ಲಿ ಸರಕಾರ ಸುಮಾರು ಎರಡು ತಿಂಗಳು ಕಾಲ ಕಳೆಯುತ್ತದೆ. ಬಳಿಕ ತನಿಖಾ ಆಯೋಗ ರಚನೆ. ಸುಮಾರು ವರ್ಷ ಗುಡ್ಡ ಅಗೆಯುವ ಈ ಆಯೋಗ, ಜನರು ಹತ್ಯಾಕಾಂಡವನ್ನು ಬಹುತೇಕ ಮರೆತರು ಎನ್ನುವಾಗ ಸದ್ದಿಲ್ಲದೆ ಒಂದು ವರದಿ ನೀಡುತ್ತದೆ. ಆ ವರದಿಯಲ್ಲಿ, ಗುಡ್ಡ ಅಗೆದೆವು, ಇಲಿ ಸಿಗಲಿಲ್ಲ ಎಂಬ ಸಾಲುಗಳಷ್ಟೇ ಓದುವುದಕ್ಕೆ ಸಿಗುತ್ತದೆ. ಆಗ ಮತ್ತೆ ಒಂದಿಷ್ಟು ಸಾಮಾಜಿಕ ಕಾರ್ಯಕರ್ತರು ಸಂತ್ರಸ್ತರು ವರದಿಯ ವಿರುದ್ಧ ತನಿಖೆಗಿಳಿಯುತ್ತಾರೆ. ಸರಿ ಶುರುವಿನಿಂದ ತನಿಖೆ ನಡೆಯುತ್ತದೆ. ಈಗ ಕೆಲವು ಸ್ಥಳೀಯ ಮುಖಂಡರು ಹಾಗೂ ಹೆಸರಿಗೆ ಒಂದಿಬ್ಬರು ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ನ್ಯಾಯಾಲಯದ ವಿಚಾರಣೆಯೆಂದರೆ ಗೊತ್ತೇ ಇದೆ. ವಿಚಾರಣೆಯ ಹೆಸರಿನಲ್ಲಿ ಮತ್ತೆ ಒಂದು ಹತ್ತು ವರ್ಷ ಕಳೆಯುತ್ತದೆ. ಕೊನೆಗೂ ತೀರ್ಪು ಹೊರಬೀಳುತ್ತದೆ. ತೀರ್ಪಿನಲ್ಲಿ, ಆರೋಪಿಗಳು ಸಜ್ಜನರೆಂದು ಘೋಷಿಸುತ್ತದೆ. ಸರಿ.
ಹಾಗಾದರೆ ಕೆಟ್ಟವರು ಯಾರು? ಹತ್ಯಾಕಾಂಡಕ್ಕೆ ಈಡಾಗಿರುವ ಜನರೇ? ಅಥವಾ ತನಿಖೆ ನಡೆಸಿದ ಸಂಸ್ಥೆಯೆ? ಆದೇಶಿಸಿದ ಸರಕಾರವೇ? ಇವಕ್ಕೆಲ್ಲ ಉತ್ತರ ಪಡೆದುಕೊಳ್ಳುವ ಹೊತ್ತಿನಲ್ಲಿ ಇನ್ನೊಂದು ಹತ್ಯಾಕಾಂಡ ನಡೆದು ಬಿಟ್ಟು ಹಳೆಯ ಹತ್ಯಾಕಾಂಡ ಜನರ ಮನದಿಂದ ದೂರ ಸರಿಯುತ್ತದೆ. ಮತ್ತದೇ ಹಿಂದಿನ ಪರಂಪರೆ ಮುಂದುವರಿಯುತ್ತದೆ.ಮೇಲಿನ ಪ್ರಕರಣ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿರಬಹುದು. ಅಥವಾ ಮುಂಬೈ ಕೋಮುಗಲಭೆಯಿರಬಹುದು.
ಅಥವಾ ಗುಜರಾತ್ ಹತ್ಯಾಕಾಂಡವೇ ಇರಬಹುದು. ಎಲ್ಲದರ ಕೊನೆ ಮಾತ್ರ ಒಂದೇ. ಈ ದೇಶದಲ್ಲಿ ಹತ್ಯಾಕಾಂಡ ನಡೆದಾಗ ಸಂವಿಧಾನ ರಜೆ ಘೋಷಿಸುತ್ತದೆ. ಒಬ್ಬನನ್ನು ಕೊಂದರೆ ಸಂವಿಧಾನದ ಪ್ರಕಾರ ಬೇಗ ಶಿಕ್ಷೆಯಾಗುತ್ತದೆ. ಆದರೆ ಒಂದು ಸಾವಿರ ಜನರನ್ನು ಒಟ್ಟಾಗಿ ಕೊಂದರೆ ಅದು ಅಪರಾಧವಾಗಿ, ಆರೋಪಿಗೆ ಶಿಕ್ಷೆಯಾಗುವುದು ತೀರಾ ತಡವಾಗಿ. ಕಟ್ಟ ಕಡೆಗೆ ಶಿಕ್ಷೆ ಅನುಭವಿಸುವುದು, ಯಾರೋ ತಳಮಟ್ಟದ ವ್ಯಕ್ತಿಯೇ ಹೊರತು, ಹತ್ಯಾಕಾಂಡದ ಸೂತ್ರಧಾರಿಯಲ್ಲ.
ಆರೋಪಿಯನ್ನು ನಿರಪರಾಧಿ ಎಂದು ಘೋಷಿಸುವು ದನ್ನು ನೋಡುವುದಕ್ಕಾಗಿ ಸಂತ್ರಸ್ತರು ಸುಮಾರು ಎರಡೂವರೆ ದಶಕಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡಬೇಕೆ? ಈ ಪ್ರಶ್ನೆಯನ್ನು ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ ದೇಶದ ಅಲ್ಪಸಂಖ್ಯಾತರು ಮತ್ತೊಮ್ಮೆ ತಮಗೆ ತಾವೇ ಕೇಳುವಂತಾಗಿದೆ.1984ರಲ್ಲಿ ಐವರು ಸಿಖ್ ನಾಗರಿಕರನ್ನು ಬರ್ಬರವಾಗಿ ಕೊಂದು ಹಾಕಲಾಯಿತು. ಈ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸ್ಥಳದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸಿಖ್ ಸಂತ್ರಸ್ತರು ಆರೋಪಿಸಿದ್ದರು.
ಆದರೆ ಇದೀಗ ಆ ಪ್ರಕರಣ ಸಂಬಂಧಿಸಿ ಸಜ್ಜನ್ ಕುಮಾರ್ ಸಜ್ಜನರಾಗಿ ಹೊರ ಬಂದಿದ್ದಾರೆ. ಸುಮಾರು 28 ವರ್ಷಗಳ ಬಳಿಕ ಹತ್ಯಾಕಾಂಡದ ಸಂತ್ರಸ್ತರು ಮತ್ತೊಮ್ಮೆ ಅನ್ಯಾಯಕ್ಕೊಳಗಾದರು. ಸಜ್ಜನರು ನಿರಪರಾಧಿ ಎಂದು ಹೇಳುವುದಕ್ಕೆ ನ್ಯಾಯಾಲಯದ ಬಳಿ ಸಕಾರಣವಿರಬಹುದು. ಆದರೆ ಈ ಅನ್ಯಾಯವನ್ನು ಸಹಿಸುವುದಕ್ಕೆ ಸಂತ್ರಸ್ತರ ಬಳಿ ಯಾವ ಕಾರಣವಿದೆ? ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಈಗಾಗಲೇ ಹಲವು ದುಷ್ಕರ್ಮಿಗಳಿಗೆ ಶಿಕ್ಷೆಯಾಗಿದೆ. ಆದರೆ ಅದರ ಸೂತ್ರಧಾರರು ಮಾತ್ರ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.
ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಕಾಳಾಳುಗಳಿಗೆ ಶಿಕ್ಷೆಯಾದಾಕ್ಷಣ ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗುವುದಿಲ್ಲ. ಅಂದಿನ ಹತ್ಯಾಕಾಂಡಕ್ಕೆ ಜನರನ್ನು ಪ್ರೇರೇಪಿಸಿದವರು, ದುರ್ಬಲ ಕಾನೂನು ವ್ಯವಸ್ಥೆ, ಅಂದಿನ ಗೃಹ ಸಚಿವರು, ಜಿಲ್ಲಾಧಿಕಾರಿಗಳು ಎಲ್ಲರೂ ಪರೋಕ್ಷವಾಗಿ ಒಂದು ಹತ್ಯಾಕಾಂಡಕ್ಕೆ ಸಹಕರಿಸಿರುತ್ತಾರೆ. ಇಂದಿರಾಗಾಂಧಿ ಹತ್ಯೆ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು. ಹತ್ಯಾಕಾಂಡದಲ್ಲಿ ಸರಕಾರ ಪರೋಕ್ಷವಾಗಿ ಭಾಗವಹಿಸಿತ್ತು. ಸಜ್ಜನ್ ಕುಮಾರ್‌ರಂತಹ ಗಣ್ಯರು ನೇರ ಬೀದಿಗಿಳಿದು ಹತ್ಯಾಕಾಂಡದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಹಾಗೂ ಅವರ ಮೇಲೆ ಪ್ರಕರಣವೂ ದಾಖಲಾಗಿತ್ತು. ಹತ್ಯಾಕಾಂಡಕ್ಕೆ ಸಂಬಂಧಿಸಿ ಕನಿಷ್ಠ ಒಬ್ಬ ನಾಯಕನಿಗಾದರೂ ಶಿಕ್ಷೆಯಾಗಿದ್ದರೆ, ಅದು ಉಳಿದ ರಾಜಕಾರಣಿಗಳಿಗೆ ಪಾಠವಾಗುತ್ತಿತ್ತೋ ಏನೋ? ಕೈಯಲ್ಲಿ ಅಧಿಕಾರವಿದ್ದರೆ, ಆರೋಪದಿಂದ ಸುಲಭವಾಗಿ ಪಾರಾಗಬಹುದು ಎನ್ನುವ ಧೈರ್ಯವೇ ಸಚಿವರನ್ನು ನೇರವಾಗಿ ಹತ್ಯಾಕಾಂಡದಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಸಿಖ್ ಹತ್ಯಾಕಾಂಡದ ಸೂತ್ರಧಾರಿಗಳು ಸುಲಭದಲ್ಲಿ ಪಾರಾಗಿರುವುದೇ ಮುಂದೆ ಗುಜರಾತ್ ಹತ್ಯಾಕಾಂಡ ನಡೆಯುವುದಕ್ಕೆ ಕಾರಣವಾಯಿತು.
ಗುಜರಾತ್ ಹತ್ಯಾಕಾಂಡದಲ್ಲಿ ನೇರವಾಗಿ ಒಬ್ಬ ಮುಖ್ಯಮಂತ್ರಿಯೇ ಭಾಗವಹಿಸಿದ ಕುರಿತು ಆರೋಪಗಳಿವೆ. ಸಚಿವರೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.ಗುಜರಾತ್ ಹತ್ಯಾಕಾಂಡ ನಡೆದು ಹತ್ತುವರ್ಷ ಕಳೆದರೂ ಈವರೆಗೆ ಈ ಸೂತ್ರಧಾರಿಗಳನ್ನು ಜೈಲುಸೇರಿಸುವುದಕ್ಕೆ ನಮ್ಮ ನ್ಯಾಯವ್ಯವಸ್ಥೆಗೆ ಸಾಧ್ಯವಾಗಿಲ್ಲ.ಈ ನ್ಯಾಯಾಲಯದ ಅಸಹಾಯಕತೆಯೇ ಪರೋಕ್ಷವಾಗಿ ಇನ್ನೊಂದು ಹತ್ಯಾಕಾಂಡಕ್ಕೆ ನಕ್ಷೆಯನ್ನು ಬರೆದು ಕೊಡುತ್ತದೆ.
ಸಜ್ಜನ್ ಕುಮಾರ್‌ನನ್ನು ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿರಬಹುದು. ಆದರೆ, ಜನರ ಮನದಲ್ಲಿ ಅವರು ಮಾಡಿದ ಗಾಯ ಆರಿಲ್ಲ. ನಾಗರಿಕರೆನಿಸಿಕೊಂಡವರು ಯಾರೂ ಸಜ್ಜನ್ ಅವರನ್ನು ಸಜ್ಜನ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ಸಜ್ಜನ್ ಕುಮಾರ್ ನೆನಪಿನಲ್ಲಿಟ್ಟುಕೊಳ್ಳಬೇಕು. ಕಾಂಗ್ರೆಸ್ ಸರಕಾರವೂ ನೆನಪಿನಲ್ಲಿಟ್ಟು ಕೊಳ್ಳಬೇಕು.

No comments:

Post a Comment