Monday, May 13, 2013

ಸಿದ್ದರಾಮಯ್ಯ ತೀರಿಸಿಕೊಂಡ ಸೇಡುಸೋಮವಾರ - ಮೇ -13-2013

‘‘ಸೇ ಡಿನ ರಾಜಕಾರಣ ನಡೆಸುವುದಿಲ್ಲ’’ ಎಂದು ಭರವಸೆ ನೀಡಿದ್ದಾರೆ, ನಾಳಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈ ಮಾತು ಯಾರನ್ನು ಉದ್ದೇಶಿಸಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಹಂತದಲ್ಲಿ ತನ್ನ ರಾಜಕೀಯ ಹೋರಾಟವನ್ನೆಲ್ಲ ದೇವೇಗೌಡರು ಮತ್ತು ಅವರ ಮಕ್ಕಳ ಕಡೆಗೆ ಕೇಂದ್ರೀಕರಿಸಿದ್ದ ಸಿದ್ದರಾಮಯ್ಯ, ಅಧಿಕಾರ ಕ್ಕೇರುವ ಮುನ್ನ ಪಕ್ವತೆಯ ಮಾತನ್ನಾಡಿದ್ದಾರೆ. ಒಂದು ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಇದ್ದ ದೊಡ್ಡ ಟೀಕೆಯೆಂದರೆ, ಅವರು ತನ್ನ ಶ್ರಮವನ್ನು, ಸಾಮರ್ಥ್ಯವನ್ನು ಕೇವಲ ಗೌಡರು ಮತ್ತು ಅವರ ಮಕ್ಕಳ ವಿರುದ್ಧ ಬಳಸಿ ವ್ಯಯ ಮಾಡುತ್ತಿದ್ದಾರೆ ಎನ್ನುವುದಾಗಿತ್ತು. ರಾಜ್ಯದಲ್ಲಿ ನಿಜವಾದ ನಾಯಕನಾಗಿ ಮೆರೆಯುವ ಶಕ್ತಿ ಮತ್ತು ಸಾಮರ್ಥ್ಯವಿರುವ ಸಿದ್ದರಾಮಯ್ಯ, ತನ್ನೆಲ್ಲ ಮುತ್ಸದ್ದಿತನವನ್ನು ಬೇರೆಡೆಗೆ ವ್ಯಯ ಮಾಡುತ್ತಿದ್ದಾರಲ್ಲ ಎಂದು ಅವರ ಅಭಿಮಾನಿ ಗಳಿಗೆ ಖೇದವಿತ್ತು.
ಕಾಂಗ್ರೆಸ್‌ಗೆ ಸೇರಿದಾಗಲೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ಅತಿದೊಡ್ಡ ಅಡ್ಡಿಯಾಗಿದ್ದರು. ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್‌ನೊಳಗೆ ಕೆಲವರು ಕಾದು ಕುಳಿತಿದ್ದರು. ಈ ಬಾರಿ ಏನಾದರೂ ಮೈತ್ರಿ ಸರಕಾರ ನಿರ್ಮಾಣವಾಗಿದ್ದರೆ, ಸಿದ್ದರಾಮಯ್ಯ ಅವರಿಗೆ ದೊಡ್ಡ ಅನ್ಯಾಯ ವಾಗುತ್ತಿತ್ತು. ಕಾಂಗ್ರೆಸ್ ಒಂದು ವೇಳೆ ಜೆಡಿಎಸ್ ನಿಂದ ಸಹಾಯ ಪಡೆಯುವ ಸಂದರ್ಭ ಬಂದರೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬಾರದು ಎನ್ನುವುದೇ ಜೆಡಿಎಸ್‌ನ ಮೊದಲ ಬೇಡಿಕೆಯಾಗಿರುತ್ತಿ ತ್ತೇನೋ. ಅಷ್ಟೇ ಅಲ್ಲ, ಆ ಮೈತ್ರಿಯ ಪರಿಣಾಮವಾಗಿ ಸಿದ್ದರಾಮಯ್ಯ ಕಾಂಗ್ರೆಸ್ ನಿಂದಲೂ ಹೊರಗೆ ಹೆಜ್ಜೆಯಿಡುವ ಸಂದರ್ಭ ನಿರ್ಮಾಣವಾಗಿ ಬಿಡುತ್ತಿತ್ತು. ಆದರೆ ಅದೃಷ್ಟವಶಾತ್ ಕಾಂಗ್ರೆಸ್ ಬಹುಮತ ಪಡೆಯಿತು ಮಾತ್ರವಲ್ಲ, ಸಿದ್ದರಾಮಯ್ಯ ಅವರನ್ನು ನಿಜವಾದ ನಾಯಕರಾಗಿ, ಈ ಬಾರಿಯ ಫಲಿತಾಂಶ ಬಿಂಬಿಸಿತು. ಕಳೆದ ಒಂದೆರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ತೀವ್ರವಾಗಿ ತೊಡಗಿಸಿ ಕೊಂಡರು.
ದೇವೇಗೌಡರು ಹೊರತು ಪಡಿಸಿದ ಇತರ ಸಮಸ್ಯೆಗಳನ್ನೂ ಅವರು ಗುರುತಿಸ ತೊಡಗಿದರು. ಮುಖ್ಯವಾಗಿ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯ ಕುರಿತಂತೆ ಅವರು ನಡೆಸಿದ ಹೋರಾಟದ ಫಲವಾಗಿಯೇ ಇಂದು ಸಿದ್ದರಾಮಯ್ಯ ರಾಜ್ಯದಲ್ಲಿ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ. ಸಿದ್ದರಾಮಯ್ಯ ರಾಜಕೀಯವಾಗಿ ದೇವೇಗೌಡರ ಮಕ್ಕಳಿಗಿಂತ ಎಷ್ಟೋ ಎತ್ತರ ಬೆಳೆದಿದ್ದಾರೆ. ಬಹುಶಃ ಇದಕ್ಕಿಂತ ದೊಡ್ಡ ಸೇಡು ಇನ್ನೊಂದಿಲ್ಲ. ಇಂದು ಮುಖ್ಯಮಂತ್ರಿಯಾಗಿ ಕಂಗೊಳಿಸುತ್ತಿರುವುದೇ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ತೀರಿಸಿದ ಅತ್ಯುತ್ತಮ ಸೇಡು. ಇನ್ನೂ ಹಳೆಯದನ್ನೇ ಮನಸ್ಸಿನಲ್ಲಿಟ್ಟು ಕೊಂಡು ರಾಜಕೀಯ ನಡೆಸಿದರೆ ಅದರಿಂದ ಸಣ್ಣಗಾಗುವವರು ಸಿದ್ದರಾಮಯ್ಯ ಅವರೇ ಆಗಿ ದ್ದಾರೆ. ಹಾಗೆಯೇ ಕರಾವಳಿಯಲ್ಲಿ ಇನ್ನೊಂದು ಹೇಳಿಕೆಯನ್ನೂ ನೀಡಿದ್ದರು. ‘‘ನಾನು ಮುಖ್ಯಮಂತ್ರಿಯಾದರೆ ಸಂಘಪರಿವಾರದ ನಾಯಕ ಪ್ರಭಾಕರ ಭಟ್ಟರನ್ನು ಬಂಧಿಸುತ್ತೇನೆ’’ ಎಂಬುದಾಗಿ. ಪ್ರಭಾಕರ ಭಟ್ ಒಂದಲ್ಲ ಒಂದು ದಿನ ಜೈಲು ಸೇರಲೇಬೇಕಾಗಿದೆ.
ಆದರೆ ಸಿದ್ದರಾಮಯ್ಯ ಅದಕ್ಕಾಗಿ ತನ್ನ ಸಮಯ ಮೀಸಲಿಡಬೇಕಾಗಿಲ್ಲ. ಅವರು ಈ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸುಭದ್ರ ಪಡಿಸಿದರೆ ಸಾಕು, ಪ್ರಭಾಕರ ಭಟ್ಟರು ತನ್ನಷ್ಟಕ್ಕೆ ಜೈಲು ಸೇರುತ್ತಾರೆ. ಅಥವಾ ಬಾಲ ಮಡಚಿ ಕಲ್ಲಡ್ಕದ ಬಿಲದಲ್ಲಿ ಅಡಗಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಯಾವತ್ತೂ ಒಂದು ಸರಕಾರದ ಗುರಿಯಾಗದಿ ರಲಿ. ಕಲ್ಲಡ್ಕ ಪ್ರಭಾಕರ ಭಟ್ಟರೊಬ್ಬರನ್ನು ಜೈಲಿಗೆ ಅಟ್ಟುವುದರಿಂದ ಕರಾವಳಿಯ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಭಟ್ಟರನ್ನು ಜೈಲಿಗೆ ಅಟ್ಟಿದರೆ ಅವರು ಹುತಾತ್ಮರಾಗುತ್ತಾರೆ. ಅವರ ಚೇಲಾಗಳು ಇಂದು ಕರಾವಳಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಮರಿಕೊಂಡಿದ್ದಾರೆ. ಕರಾವಳಿಯನ್ನು ಉದ್ವಿಗ್ನಗೊಳಿಸಲು ಅವರ ಚೇಲಾಗಳಿಗೆ ಒಂದು ನೆಪ ಸಿಗುತ್ತದೆ.
ಇಂದು ಕರಾವಳಿಯಾಗಲಿ, ರಾಜ್ಯದ್ದೇ ಆಗಲಿ ಸಮಸ್ಯೆ ಪ್ರಭಾಕರ ಭಟ್ಟರಲ್ಲ. ಭಟ್ಟರ ಸಮಸ್ಯೆಗೆ ಕರಾವಳಿಯ ಮತದಾರರೇ ಸರಿಯಾದ ಪಾಠ ಕಲಿಸಿದ್ದಾರೆ. ಮತ್ತು ಮುಂದೆಯೂ ಅವರನ್ನು ಕರಾವಳಿಯ ಪ್ರಜ್ಞಾವಂತ ಜನರೇ ನೋಡಿ ಕೊಳ್ಳುತ್ತಾರೆ. ಭಟ್ಟರನ್ನು ಅವರಷ್ಟಕ್ಕೆ ಬಿಡುವುದೇ ಅವರಿಗೆ ನೀಡುವ ಸರಿಯಾದ ಶಿಕ್ಷೆ. ಉಳಿದ ಜವಾಬ್ದಾರಿಯನ್ನು ನಮ್ಮ ಪೊಲೀಸ್ ವ್ಯವಸ್ಥೆಗೆ, ನ್ಯಾಯಾಲಯಕ್ಕೆ ಬಿಡುವುದು ಉತ್ತಮ. ಒಬ್ಬ ಮುಖ್ಯಮಂತ್ರಿ ತಲೆಕೆಡಿಸುವಷ್ಟು ದೊಡ್ಡ ತಲೆ ಅವರೆಂದಿಗೂ ಅಲ್ಲ. ಇಂದು ರಾಜ್ಯದಲ್ಲಿ ಇನ್ನಿತರ ಗಂಭೀರ ಸಮಸ್ಯೆಗಳಿವೆ. ಅಭಿವೃದ್ಧಿಯ ಕುರಿತಂತೆ, ರೈತರ ಕುರಿತಂತೆ ಸಿದ್ದರಾಮಯ್ಯ ತಲೆಕೆಡಿಸಬೇಕು. ಒಬ್ಬ ವ್ಯಕ್ತಿಗಾಗಿ ಅವರ ಶ್ರಮ, ಅವರ ಮುತ್ಸದ್ದಿತನ ಯಾವ ಕಾರಣಕ್ಕೂ ವ್ಯಯವಾಗಬಾರದು. ಒಂದು ವೇಳೆ ಸಂಘ ಪರಿವಾರದ ಕೆಲವು ದುಷ್ಕರ್ಮಿಗಳನ್ನು ನಿಯಂತ್ರಿಸುವ ಉದ್ದೇಶವಿದ್ದರೆ, ಪೊಲೀಸ್ ಠಾಣೆಗಳನ್ನು ಸುಧಾರಿಸಿದರೆ ಆಯಿತು. ಅವರ ಕೆಲಸ ಸುಗಮವಾಗಿ ನಡೆಯುತ್ತದೆ.
ತಳಮಟ್ಟದ ಜನರ ಸಂಕಟಗಳನ್ನು ಅರ್ಥೈಸಲು ಸಿದ್ದರಾಮಯ್ಯ ಅವರಿಗಿಂತ ಯೋಗ್ಯ ನಾಯಕ ಇನ್ನೊಬ್ಬನಿಲ್ಲ. ಆದುದರಿಂದ, ನಾಡಿನ ಅಭಿವೃದ್ಧಿಯನ್ನು ತಳಮಟ್ಟದ ಜನರ ಜೊತೆಗೆ ಮುಂದೆ ಕೊಂಡೊಯ್ಯುವತ್ತ ಮನ ಮಾಡುತ್ತಾರೆ ಎಂದು ರಾಜ್ಯದ ಜನರು ನಂಬಿದ್ದಾರೆ. ಹಾಗೆಯೇ ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ನಾಡಿನ ನಾಲ್ಕೂ ದಿಕ್ಕಿಗೆ ವಿಸ್ತರಿಸುವ ಹೊಣೆಗಾರಿಕೆಯೂ ಅವರ ಮುಂದಿದೆ. ಈ ನಿಟ್ಟಿನಲ್ಲಿ ಅವರೊಬ್ಬ ರಿಂದ ಇದು ಸಾಧ್ಯವಾಗದು. ವಿರೋಧ ಪಕ್ಷದಲ್ಲಿರುವ ದೇವೇಗೌಡ, ಯಡಿಯೂರಪ್ಪ ರಂತಹ ಮುತ್ಸದ್ದಿಗಳ ಸಹಕಾರವನ್ನೂ ಅವರು ಪಡೆದುಕೊಳ್ಳಬೇಕಾಗುತ್ತದೆ. ಜೊತೆಗೆ ಈ ನಾಡಿನ ಎಲ್ಲ ವರ್ಗಗಳನ್ನು ಜೊತೆಗೂಡಿಸಿಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕಾಗುತ್ತದೆ. ಕೇಸರಿ, ಬಿಳಿ, ಹಸಿರು ಈ ಮೂರರ ಸಮಾಗಮ ದಿಂದಷ್ಟೇ ಈ ನಾಡು ಉನ್ನತಿಯೆಡೆಗೆ, ನೆಮ್ಮದಿಯೆಡೆಗೆ ಸಾಗಬಹುದು. ಇಡುವ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರ ಇರಬೇಕಾಗುತ್ತ

No comments:

Post a Comment