Wednesday, May 1, 2013

ರಾಜಕಾರಣಿಗಳೇ ಯುದ್ಧಕ್ಕೆ ನೀವು ಸಿದ್ಧರಾಗಿದ್ದೀರಾ?ಬುಧವಾರ - ಮೇ -01-2013

ತಾಯಿಯ ಸೆರಗಿಗೆ ಬೆಂಕಿ ಬಿದ್ದರೂ ಅದನ್ನೂ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುವ ರಾಜಕಾರಣಿಗಳ ನಡುವೆ ದೇಶ ಬದುಕುತ್ತಿದೆ ಎನ್ನುವುದಕ್ಕೆ ಚೀನಾ ವಿಷಯವೇ ಅತ್ಯುತ್ತಮ ಉದಾಹರಣೆಯಾಗಿದೆ. ಯಾವುದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿಯದೆಯೇ, ಗಡಿಯಲ್ಲಿ ಚೀನಾ ಮಾಡುತ್ತಿರುವ ತಂಟೆಯನ್ನೂ ತಮ್ಮ ಚುನಾವಣಾ ವಿಷಯವನ್ನಾಗಿಸಲು ಕೆಲವು ರಾಜಕಾರಣಿಗಳು ಯತ್ನಿಸುತ್ತಿದ್ದಾರೆ. ಮುಖ್ಯವಾಗಿ ಚೀನಾ ಗಡಿಯ ವಿಷಯವನ್ನು ಯುಪಿಎ ಸರಕಾರದ ವೈಫಲ್ಯ ಎಂಬ ರೀತಿಯಲ್ಲಿ ಚಿತ್ರಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಮುಲಾಯಂ ಸಿಂಗ್‌ನಿಂದ ಹಿಡಿದು, ಬಿಜೆಪಿಯ ವಿವಿಧ ಮುಖಂಡರು ಭರ್ಜರಿ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದಾರೆ. ಮುಲಾಯಂ ಸಿಂಗ್ ಅವರು ಲೋಕಸಭೆಯಲ್ಲಿ ಮಾತನಾಡಿ, ಚೀನಾ ನಮ್ಮ ಅತಿ ದೊಡ್ಡ ಶತ್ರು ಎಂದು ಘೋಷಿಸಿದ್ದಾರೆ.
‘‘ಈ ಸರಕಾರ ಹೇಡಿಯಾಗಿದೆ, ಅಸಮರ್ಥವಾಗಿದೆ, ಯಾವುದಕ್ಕೂ ಲಾಯಕ್ಕಿಲ್ಲ’’ ಎಂದೆಲ್ಲಾ ಮುಲಾಯಂ ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರ ಮುಂದಿನ ಬೀಜಿಂಗ್ ಭೇಟಿಗೂ ಸಮಾಜವಾದಿ ಪಕ್ಷ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿವೆ. ‘‘ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಸೇನೆ ಸಿದ್ಧವಾಗಿದೆ ಎಂದು ಸ್ವತಃ ಸೇನಾ ಮುಖ್ಯಸ್ಥರೇ ಹೇಳಿರುವಾಗ, ಸರಕಾರ ಯಾಕೆ ಸೂಚನೆಗಳನ್ನು ನೀಡುತ್ತಿಲ್ಲ’’ ಎಂದು ಮುಲಾಯಂ ಕೇಳುತ್ತಿದ್ದಾರೆ.
ಅಂದರೆ ಅವರ ಮಾತಿನ ಒಟ್ಟು ಅರ್ಥ, ಚೀನಾದ ವಿರುದ್ಧ ಯುದ್ಧವನ್ನು ಘೋಷಿಸಿ ಬಿಡಿ ಎಂದಾಗಿದೆ. ಬಿಜೆಪಿಯೂ ಇದೇ ದಾರಿಯಲ್ಲಿದೆ. ಚೀನಾಕ್ಕೆ ಭಾರತ ಪಾಠ ಕಲಿಸಬೇಕು. ಸರಕಾರ ಯುದ್ಧ ಘೋಷಿಸಬೇಕು ಎಂಬಿತ್ಯಾದಿ ಬಾಲಿಶ ಹೇಳಿಕೆ ಯನ್ನು ನೀಡಿ, ತನ್ನನ್ನು ತಾನೇ ಶೂರಧೀರ ಎಂಬಿತ್ಯಾದಿಯಾಗಿ ಬಿಂಬಿಸಿಕೊಳ್ಳುತ್ತಿದೆ. ದೇಶ ದೊಳಗಿನ ಕೆಲ ಸಂಘಪರಿವಾರ ಗುಂಪುಗಳೂ ಈ ಕುರಿತಂತೆ ವೌನ ಪಾಲಿಸಿದೆಯಾದರೂ, ಶಿವಸೇನೆ ಯಂತಹ ಪಕ್ಷಗಳು ಯುದ್ಧದ ಬಗ್ಗೆ ಮಾತನಾಡುತ್ತಿವೆ.
ಚೀನಾದ ಕುರಿತಂತೆ ಇಂತಹ ಬಾಲಿಶ ಹೇಳಿಕೆಗಳನ್ನು ಈ ಹಿಂದೆ, ಎನ್‌ಡಿಎ ಸರಕಾರ ಇರುವಾಗ ಸ್ವತಃ ಜಾರ್ಜ್ ಫೆರ್ನಾಂಡಿಸ್ ಕೂಡ ಆಡಿದ್ದರು. ಅವರ ಮಾತುಗಳಿಂದಾಗಿಯೇ ಉಭಯ ದೇಶಗಳ ಸಂಬಂಧ ಸಾಕಷ್ಟು ಬಿಗಡಾಯಿಸಿತ್ತು. ಕಟ್ಟ ಕಡೆಗೆ ಅಟಲ್ ಬಿಹಾರಿ ವಾಜಪೇಯಿಯವರೇ ಫೆರ್ನಾಂಡಿಸರ ಬಾಯಿಯನ್ನು ಮುಚ್ಚಿಸಬೇಕಾಯಿತು.
ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಯದ ನಾಯಕರಷ್ಟೇ, ಈ ರೀತಿ ವರ್ತಿಸಲು ಸಾಧ್ಯ. ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು ಎನ್ನುವ ಆಸೆಯುಳ್ಳ ಅತ್ತೆಯಂದಿರಂತೆ ಈ ನಾಯಕರು ವರ್ತಿಸುತ್ತಿದ್ದಾರೆ. ಅವರ ಹೇಳಿಕೆಗಳಲ್ಲಿ ಯಾವ ರೀತಿಯಲ್ಲೂ ಪಕ್ವತೆಯಿಲ್ಲ. ಈ ಸಂದರ್ಭದಲ್ಲಿ ನಾವು ಇಂದಿರಾ ಗಾಂಧಿ ಮತ್ತು ಲಾಲ್‌ಬಹಾದೂರ್ ಶಾಸ್ತ್ರಿಗಳನ್ನು ನೆನೆಯಬೇಕಾಗಿದೆ.
ಆ ಕಾಲಘಟ್ಟದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾ ವಿಭಜನೆಯನ್ನು ಇಬ್ಬರು ನಾಯಕರು ನಿರ್ವಹಿಸಿದ ರೀತಿ ಮತ್ತು ಆ ಸಂದರ್ಭದಲ್ಲಿ ಉಳಿದ ರಾಜಕೀಯ ನಾಯಕರು ಅದಕ್ಕೆ ಸ್ಪಂದಿಸಿದ ರೀತಿ ಒಂದು ಮಾದರಿ. ಪಾಕಿಸ್ತಾನದ ಜೊತೆಗಿನ ಯುದ್ಧವಾಗಲಿ, ಬಾಂಗ್ಲಾ-ಪಾಕ್ ಯುದ್ಧದ ಸಂದರ್ಭದಲ್ಲಿ ಇಂದಿರಾಗಾಂಧಿ ನಿರ್ವಹಿಸಿದ ರಾಜನೀತಿಯಾಗಲಿ ಅಧ್ಯಯನಕ್ಕೆ ಯೋಗ್ಯ. ಭಾರತದ ಇತಿಹಾಸದಲ್ಲಿ ಇನ್ನೂ ಅವುಗಳು ದಾಖಲಾರ್ಹವಾಗಿದೆ. ಹಾಗೆಯೇ, ಚೀನಾದ ಜೊತೆಗಿನ 1964ರ ಯುದ್ಧದಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲೂ ಕೂಡ ನಮಗೆ ಪಾಠವೇ ಆಗಿದೆ. ಅದರಿಂದ ಕಲಿಯಬೇಕಾದುದು ತುಂಬಾ ದೊಡ್ಡದಿದೆ.
ಸೇನೆ, ಸೈನಿಕರು ಯಾವತ್ತೂ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಿದ್ಧರಾಗಿಯೇ ಇರುತ್ತಾರೆ. ಅದರ ಬಗ್ಗೆ ದೇಶದ ಯಾರಿಗೂ ಅನುಮಾನವಿಲ್ಲ. ಕಟ್ಟ ಕಡೆಗೆ ದೇಶವನ್ನು ಉಳಿಸಲು ಸಾಧ್ಯವಾಗದೇ ಇದ್ದರೆ ತಮ್ಮ ಪ್ರಾಣವನ್ನಾದರೂ ಕೊಟ್ಟು ಬಿಡುವ ತ್ಯಾಗ ಉದಾತ್ತತೆಯನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ವರ್ತಮಾನದಲ್ಲೂ ಈ ದೇಶಕ್ಕೆ ಕಟ್ಟ ಕಡೆಯ ರಕ್ತವನ್ನು ಚೆಲ್ಲುವ ಧೀರರೇ ಆಗಿದ್ದಾರೆ ಸೈನಿಕರು. ಈ ನೆಲದ ಒಂದು ತುಂಡು ಭೂಮಿ ಪರರ ವಶವಾಗುವುದನ್ನು ಅವರು ಸಹಿಸಲಾರರು.
ಆದುದರಿಂದಲೇ, ನಮ್ಮ ಸೈನ್ಯ ಸಿದ್ಧವಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. ಆದರೆ, ಇಂದು ಪದೇ ಪದೇ ಯುದ್ಧ ಘೋಷಿಸಿ ಎಂದು ಬೊಬ್ಬೆ ಹಾಕುತ್ತಿರುವ ನಮ್ಮ ರಾಜಕಾರಣಿಗಳು ಎಷ್ಟರ ಮಟ್ಟಿಗೆ ಈ ಯುದ್ಧಕ್ಕೆ ಸಿದ್ಧರಾಗಿದ್ದಾರೆ ಎನ್ನುವುದೇ ನಮ್ಮ ಪ್ರಶ್ನೆ. ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಕೋಮುವಾದ, ದ್ವೇಷ ರಾಜಕಾರಣ ಇತ್ಯಾದಿಗಳ ಮೂಲಕ, ಚೀನಾಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಈ ದೇಶವನ್ನು ನಮ್ಮ ರಾಜಕಾರಣಿಗಳೇ ಲೂಟಿ ಹೊಡೆದಿದ್ದಾರೆ. ಚೀನಾ ಕೈಯಲ್ಲಿರುವುದು ಬೋಳು ಭೂಮಿ.
ಆದರೆ ನಮ್ಮ ರಾಜಕಾರಣಿಗಳ ಕೈಯಲ್ಲಿರುವುದು ಈ ದೇಶದ ಬಡವರ, ಕಾರ್ಮಿಕರ ಶೋಷಿತರ ಸೊತ್ತು, ಸಂಪತ್ತು. ವಿದೇಶದ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ತಮ್ಮ ಕಪ್ಪು ಹಣವನ್ನು ತುಂಬಿಸಿಟ್ಟಿರುವ ರಾಜಕಾರಣಿಗಳು, ಸೈನಿಕರನ್ನು, ಈ ದೇಶದ ಅಮಾಯಕ ಜನರನ್ನು ಯುದ್ಧಕ್ಕೆ ತಳ್ಳುವ ಆತುರದಲ್ಲಿದ್ದಾರೆ. ನಿಜಕ್ಕೂ ಚೀನಾದ ಜೊತೆಗೆ ಯುದ್ಧ ನಡೆಯುವ ಮೊದಲು, ನಾವು ನಮ್ಮ ದೇಶದಿಂದ ಏನನ್ನು ದೋಚಿ ದ್ದೇವೆಯೋ ಅದನ್ನು ಮರಳಿಸಬೇಕಾಗಿದೆ.
ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣ ದೇಶಕ್ಕೆ ಬರಬೇಕು. ಹಾಗೆಯೇ ಬೇರೆ ಬೇರೆ ಮಠ, ದೇವಸ್ಥಾನಗಳಲ್ಲಿ ಶೇಖರಿಸಿಡಲ್ಪಟ್ಟಿರುವ ಕಪ್ಪು ಹಣಗಳೂ ಹೊರಬರಬೇಕು. ಇದರಲ್ಲಿ ಗೆದ್ದ ಬಳಿಕವಷ್ಟೇ ಭಾರತ ಚೀನಾದ ಜೊತೆಗೆ ಯುದ್ಧಕ್ಕೆ ಹೊರಡಬಹುದಾಗಿದೆ. ಎಲ್ಲಿಯವರೆಗೆ ಈ ಸವಾಲನ್ನು ಸ್ವೀಕರಿಸಲು ನಮ್ಮ ರಾಜಕಾರಣಿಗಳು ಸಿದ್ಧರಿಲ್ಲವೋ ಅಲ್ಲಿಯವರೆಗೆ, ಬಾಯಿ ಮುಚ್ಚಿ ಕೂರುವುದು ಉತ್ತಮ.
ಸದ್ಯಕ್ಕೆ ಚೀನಾದ ಜೊತೆಗಿನ ವಿವಾದವನ್ನು ಮಾತುಕತೆಯ ಮೂಲಕವೇ ಪರಿಹರಿಸುವುದು ಅತ್ಯುತ್ತಮ. ಆದುದರಿಂದ ವಿದೇಶಾಂಗ ಸಚಿವರು ಚೀನಾಕ್ಕೆ ತೆರಳುವ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬಾರದು. ಕಟ್ಟ ಕಡೆಯವರೆಗೂ ಚೀನದ ಜೊತೆ ಮಾತುಕತೆ ನಡೆಯಬೇಕು. ಶಾಂತಿ ಪೂರ್ವಕವಾಗಿ ವಿವಾದವನ್ನು ಬಗೆಹರಿಸಿ ಕೊಳ್ಳಬೇಕು. ಇನ್ನೊಂದು ಯುದ್ಧವನ್ನು ಸಹಿಸುವ ಶಕ್ತಿ ಭಾರತಕ್ಕೆ ಮಾತ್ರವಲ್ಲ, ಈ ಉಪಖಂಡಕ್ಕೇ ಇಲ್ಲ. ಇಡೀ ವಿಶ್ವ, ಶಾಂತಿಯನ್ನು ಬಯಸುವ ದಿನಗಳು ಇವು. ಈ ಸಂದರ್ಭದಲ್ಲಿ ಭಾರತದಿಂದಲೇ ಅಶಾಂತಿಯ ಕಿಡಿ ಚಿಮ್ಮುವಂತಾಗಬಾರದು.
ಕೃಪೆ.ವಾ.ಭಾರತಿ 

No comments:

Post a Comment