Friday, May 24, 2013

ಸೌದಿ ಅರೇಬಿಯ: 27 ಸಾವಿರ ಭಾರತೀಯರಿಂದ ನಿರ್ಗಮನ ದಾಖಲೆಗೆ ಅರ್ಜಿ


ಮೇ -24-2013

ರಿಯಾದ್: ಕೊಲ್ಲಿ ಸಾಮ್ರಾಜ್ಯದಲ್ಲಿ ‘ನಿತಾಕತ್’ ಕಾನೂನು ಜಾರಿಗೊಂಡ ಬಳಿಕ ಸೌದಿಯಿಂದ ತೆರಳಲು ತನ್ನ ನಾಗರಿಕರಿಗೆ ಅನುಕೂಲವಾಗುವಂತೆ ಭಾರತ ಸರಕಾರವು ಇದೀಗ ದ್ವಿತೀಯ ಹಂತದಲ್ಲಿ 27 ಸಾವಿರಕ್ಕೂ ಅಧಿಕ ತುರ್ತು ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ರಿಯಾದ್‌ನಲ್ಲಿರುವ ಭಾರತೀಯ ದೂತಾವಾಸ ಹಾಗೂ ಸೌದಿ ಅರೇಬಿಯದಲ್ಲಿರುವ ಇತರ ಸಂಗ್ರಹ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿರುವ ಭಾರತೀಯರಿಗೆ ಎರಡನೆ ಹಂತ ತುರ್ತು ಪ್ರಮಾಣ ಪತ್ರ(ಇಸಿ)ಗಳ ಪರಿಶೀಲನೆ ಹಾಗೂ ವಿತರಣೆ ಪ್ರಕ್ರಿಯೆಗೆ ಸಂಬಂಧಿಸಿ ಭಾರತೀಯ ದೂತಾವಾಸವು ಪಟ್ಟಿಯೊಂದನ್ನು ಪ್ರಕಟಿಸಿದೆ.
‘‘ಪ್ರಸಕ್ತ ಘೋಷಿಸಲಾಗಿರುವ ಎರಡನೆ ಹಂತದ ತುರ್ತು ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ರಿಯಾದ್‌ನಲ್ಲಿ 24 ಸಾವಿರ ಅರ್ಜಿಗಳು ಹಾಗೂ ಪೂರ್ವ ಪ್ರಾಂತದಲ್ಲಿ 3,700ಕ್ಕೂ ಅಧಿಕ ಅರ್ಜಿಗಳು ಬಂದಿವೆ’’ ಎಂದು ದೂತಾವಾಸವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮೊದಲ ಹಂತದಲ್ಲಿ ಸೌದಿ ಅರೇಬಿಯದಲ್ಲಿರುವ ಸಂಗ್ರಹ ಕೇಂದ್ರಗಳಲ್ಲಿ 15 ಸಾವಿರ ತುರ್ತು ಪ್ರಮಾಣಪತ್ರ(ಇಸಿ) ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದೂ ಅದು ಹೇಳಿದೆ.
ಸೌದಿಯಲ್ಲಿ ‘ನಿತಾಕತ್’ ಕಾನೂನು ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಾರತೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದು, ಈಗಾಗಲೇ 60 ಸಾವಿರಕ್ಕೂ ಹೆಚ್ಚು ಮಂದಿ ನಿರ್ಗಮನ ತುರ್ತು ಪ್ರಮಾಣ ಪತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ.

‘ನಿತಾಕತ್’ ಕಾನೂನಿನನ್ವಯ ಸೌದಿಯ ಕಂಪೆನಿಗಳು ಉದ್ಯೋಗ ನೀಡಿಕೆಯಲ್ಲಿ ಶೇಕಡ 10ರಷ್ಟನ್ನು ಸೌದಿ ರಾಷ್ಟ್ರೀಯರಿಗೆ ಕಡ್ಡಾಯವಾಗಿ ಮೀಸಲಿಡಬೇಕಾಗಿದೆ. ಸೌದಿಯ ವಿದೇಶಾಂಗ ಸಚಿವ ಯುವರಾಜ ಸೌದ್ ಅಲ್ ಫೈಝಲ್ ಆಹ್ವಾನದ ಮೇರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಶಿದ್ ಶುಕ್ರವಾರ ಸೌದಿ ಅರೇಬಿಯಕ್ಕೆ ತೆರಳಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸೌದಿಗೆ ಭೇಟಿ ನೀಡುತ್ತಿದ್ದಾರೆ. ಮೇ 24ರಿಂದ 27ರವರೆಗೆ ತಮ್ಮ ಪ್ರವಾಸದ ವೇಳೆ ಸಲ್ಮಾನ್ ಖುರ್ಶಿದ್, ಹಲವು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

2008ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ವೇಳೆ ಪ್ರಣವ್ ಮುಖರ್ಜಿಯವರು ಗಲ್ಫ್ ಪ್ರವಾಸ ಕೈಗೊಂಡಿದ್ದರು. ಸೌದಿ ಅರೇಬಿಯಕ್ಕೆ ತೆರಳಿರುವ ಭಾರತದ ವಿದೇಶಾಂಗ ಸಚಿವರು ಅಲ್ಲಿನ ತಮ್ಮ ಸೋದ್ಯೋಗಿಯೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿ ಮಾತುಕತೆ ನಡೆಸಲಿದ್ದಾರೆ. ಸೌದಿಯ ಮುಖಂಡರೊಂದಿಗಿನ ಮಾತುಕತೆಯ ವೇಳೆ ‘ನಿತಾಕತ್’ ವಿಚಾರವಾಗಿಯೂ ಅವರು ಪ್ರಸ್ತಾಪಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

No comments:

Post a Comment