Wednesday, May 8, 2013

ಕಾಂಗ್ರೆಸಿಗೆ 113: ಖೇಲ್ ಖತಂ - ನಾಟಕ್ ಬಂದ್

  ಬೆಂಗಳೂರು, : ಶೇ. 70ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿ, ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಮತದಾರನಿಗೆ ಮತ್ತೊಮ್ಮೆ ನಮೋ ನಮಃ! ಎಂಥ ಪ್ರಬುದ್ಧ ತೀರ್ಪು ನೀಡಿದ್ದಾನೆ ಮತದಾರ. ನಿಜಕ್ಕೂ ಮತಪ್ರಭು ಅಭಿನಂದನಾರ್ಹ. ಖೇಲ್ ಖತಂ- ನಾಟಕ್ ಬಂದ್: ಚುನಾವಣೆಯಲ್ಲಿ ಕಾಂಗ್ರೆಸ್ ಜತೆಜತೆಗೆ ಮತದಾರನೂ ಗೆಲುವು ಸಾಧಿಸಿದ್ದಾನೆ. ಏಳು ವರ್ಷಗಳ ಕಾಟಕ್ಕೆ/ಮಂಗನಾಟಕ್ಕೆ ಮಂಗಳ ಹಾಡಿದ್ದಾನೆ. ಅಷ್ಟೇ ಅಲ್ಲ ಸದ್ಯಕ್ಕೆ ಅಂತಹ ಕೆಟ್ಟಾಟಗಳ ಪುನರಾವರ್ತನೆಗೂ ಅವಕಾಶ ನೀಡದಂತೆ ಪ್ರಬುದ್ಧನಾಗಿ ಏಕಮೇವ ಪಕ್ಷವನ್ನು 113ರ ಗಡಿ ದಾಟಿಸಿದ್ದಾನೆ. ಲಕೋಟೆ ಮುಖ್ಯಮಂತ್ರಿ: ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಆ ಪಕ್ಷದಲ್ಲಿ ಸಿಎಂ ಮೆಟೀರಿಯಲುಗಳು ಸಾಲುಗಟ್ಟಿ ನಿಂತಿದ್ದಾರೆ. ಹಾಗಾಗಿ ಅಲ್ಲೂ ಒಳಜಗಳಗಳು, ಭಿನ್ನಮತ ಭುಗಿಲೇಳುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಪಕ್ಷದ ವರಿಷ್ಠರಂತೆ ಕೈಲಾಗದವರಲ್ಲ. ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿಹಾಕಬಲ್ಲ ಹೈ-ಹೈಕಮಾಂಡ್ ಅದು. ಹಾಗಾಗಿ ನಾಡಿನ ಮುಂದಿನ ಮುಖ್ಯಮಂತ್ರಿ ದಿಲ್ಲಿಯಿಂದ ತೂರಿಬರುವ ಲಕೋಟೆಯಲ್ಲಿ ಈಗಾಗಲೇ ಭದ್ರವಾಗಿ ಕುಳಿತಿರಲೂ ಸಾಕು. ಆದರೆ ವಿಷಯ ಅದಲ್ಲ. ಪಕ್ಷದಿಂದ ಯಾರೆಲ್ಲಾ ಗೆದ್ದಿದ್ದಾರೆ ಎಂದು ನೋಡಿದರೆ ಸಾಲುಸಾಲು ನಾಯಕರೇ ಅಲ್ಲಿ ಗೋಚರಿಸುತ್ತಾರೆ. ಸಚಿವ ಸಂಪುಟಕ್ಕೆ ಘನತೆ, ಗೌರವ ತಂದುಕೊಡಬಲ್ಲ ಅನೇಕ ನಾಯಕರು ಗೆದ್ದುಬಂದಿದ್ದಾರೆ. ಇದೇ ವೇಳೆ, ಮರಮೇಶ್ವರ್/ ಇಬ್ರಾಹಿಂ ಥರದವರು ಸೋತಿರುವುದೂ ಪಕ್ಷಕ್ಕೆ ವರವಾಗಿದೆ. ಇದನ್ನು ಹೇಳಿದ ಮೇಲೆ ಕೆಲವರು ಸೋಲಬಾರದಿತ್ತು ಎಂಬ ಆಶಯವೂ ಮೂಡುತ್ತದೆ. ಆ ಸಾಲಿನಲ್ಲಿ ಕುಮಾರ್ ಬಂಗಾರಪ್ಪ, ಬಿಎಲ್ ಶಂಕರ್ ಅವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಜತೆಗೆ, ಜಾಫರ್ ಷರೀಫ್ ಅವರ ಮನೆಯಿಂದ ಸ್ಪರ್ಧಿಸಿದ್ದ ಇಬ್ಬರೂ ಸೋತಿರುವುದೂ ಪಕ್ಷಕ್ಕೆ ವರವಾಗಿದೆ. ಅತ್ತ ರಾಯಚೂರಿನಲ್ಲಿ ಇತ್ತ ಹೆಬ್ಬಾಳದಲ್ಲಿ ಷರೀಫ್ ಅಳಿಯ/ ಮಗ ಸೋತಿರುವುದು ಕಾಂಗ್ರೆಸ್ಸಿಗೆ ಹಿತಕರವಾಗಿದೆ. ಇಲ್ಲವಾದಲ್ಲಿ ಜಾಫರ್ ಷರೀಫ್ ಪಕ್ಷದಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುತ್ತಿದ್ದರು. ಈಗ ಹೈಕಮಾಂಡ್ 'ಛುಪ್' ಅಂದ್ರೆ ಸಾಕು ಇವರೆಲ್ಲ ಸುಮ್ಮನಾಗುತ್ತಾರೆ. ಅಷ್ಟರ ಮಟ್ಟಿಗೆ ಪಕ್ಷ ಸೇಫ್. ಅದೇ ರೀತಿ ಕೆಎಚ್ ಮುನಿಯಪ್ಪಗೂ ಕೋಲಾರ ಜಿಲ್ಲೆಯಲ್ಲಿ ಸರಿಯಾದ ಟಾಂಗ್ ನೀಡಲಾಗಿದೆ. ಪುತ್ರಿ ರೂಪಾಗೆ ಟಿಕೆಟ್ ನೀಡಲಿಲ್ಲ ಎಂದು ಕಾಂಗ್ರೆಸ್ ಸೋಲಿಗೆ ಹವಣಿಸಿದ್ದಲ್ಲದೆ ಕೋಲಾರ ಜಿಲ್ಲೆಯಲ್ಲಿ ಮೂರ್ನಾಲ್ಕು ಸ್ಥಾನಗಳಿಗೆ ಚ್ಯುತಿ ತಂದರು ಎಂಬ ಆರೋಪವೂ ಅವರ ಮೇಲಿದೆ. ಹಾಗಾಗಿ ಮುನಿಯಪ್ಪ ಫ್ಯಾಕ್ಟರ್ ಸ್ವಯಂ ಕಳಚಿಕೊಳ್ಳಲಿದೆ. ಅದೇ ರೀತಿ ಪ್ರೊ. ಬಿಕೆಸಿ ಸೋತಿರುವುದೂ ಪಕ್ಷಕ್ಕೆ ಸ್ವಾಗತಾರ್ಹ.   ಇದರ ಹೊರತಾಗಿ ಎಚ್ಕೆ ಪಾಟೀಲ್, ಕಿಮ್ಮನೆ ರತ್ನಾಕರ, ವಿ ಶ್ರೀನಿವಾಸ್ ಪ್ರಸಾದ್ ಅವರಂಥ ಅಪ್ಪಟ ಜನನಾಯಕರೂ ಗೆದ್ದುಬಂದಿದ್ದಾರೆ. ಪಕ್ಷ ಅಂತಹವರಿಗೆ ಮಣೆ ಹಾಕುವುದು ಅನಿವಾರ್ಯ. ಇನ್ನು, ಬಿಜೆಪಿಗೆ ಇನ್ನಿಲ್ಲದಂತೆ ಕಾಡಿದ ಪಕ್ಷೇತರರು ಮತ್ತು ಆಪರೇಶನ್ ಕಮಲದ ಹಂಗೂ ಪಕ್ಷಕ್ಕೆ ಬೇಡವಾಗಿದೆ. ಹಾಗೆಯೇ, ಈ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ಮಾತು ಬಲವಾದಾಗ ಕೊನೆಯ ಕ್ಷಣದಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದವರಿಂದ ಪಕ್ಷ ಹೆಚ್ಚು ನಷ್ಟ ಅನುಭವಿಸಿಲ್ಲ. ಎಚ್ ಎಂ ರೇವಣ್ಣ ಅವರಂಥ ಬಂಡಾಯಗಾರರೂ ಪಕ್ಷಕ್ಕೆ ಈಗ ಪೂರಕವಾಗಲಿದ್ದಾರೆ. 

No comments:

Post a Comment