Monday, April 15, 2013

ಮಹಿಳೆ ಮಗುವನ್ನು ರಸ್ತೆಯಲ್ಲೇ ಸಾಯಲು ಬಿಟ್ಟ ನಿರ್ದಯಿಗಳು!ಜೈಪುರ,  : ತನ್ನ ಹೆಂಡತಿ ಮತ್ತು 8 ತಿಂಗಳ ಪುಟ್ಟ ಮಗಳು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದ ಸಂದರ್ಭದಲ್ಲಿ ಸಹಾಯಕ್ಕಾಗಿ ಅರ್ಧ ಗಂಟೆ ಕಾಲ ಗಂಡ ಗೋಗರೆಯುತ್ತಿದ್ದರೂ ದಾರಿಹೋಕರು, ವಾಹನ ಚಾಲಕರು ಸಹಾಯಕ್ಕೆ ಧಾವಿಸದೆ ಅಮಾನವೀಯತೆಯಿಂದ ವರ್ತಿಸಿದ ಘಟನೆ ಭಾನುವಾರ ಜೈಪುರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ರಸ್ತೆಯಲ್ಲಿ ಅಡ್ಡಾಡುತ್ತಿದ್ದವರು, ಬೈಕು ಕಾರುಗಳಲ್ಲಿ ಅಡ್ಡಾಡುತ್ತಿದ್ದವರು ಪಕ್ಕದಲ್ಲಿ ಹಾದುಹೋದರೇ ಹೊರತು, ಆತ ಅಳುತ್ತ ಸಹಾಯಕ್ಕಾಗಿ ಕರೆಯುತ್ತಿದ್ದರೂ ಒಬ್ಬರೂ ಸಹಾಯಕ್ಕಾಗಿ ಧಾವಿಸಲಿಲ್ಲ. ಸಕಾರದಲ್ಲಿ ಸಹಾಯ ದೊರೆಯದಿದ್ದರಿಂದ 26 ವರ್ಷದ ಹೆಂಡತಿ ಮತ್ತು 8 ತಿಂಗಳ ಮಗಳು ರಸ್ತೆಯಲ್ಲಿಯೇ ಅಸುನೀಗಿದರು. ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗಿರುವ ಘಾಟ್ ಕಿ ಗುನಿ ಟನೆಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಲಾರಿಯೊಂದು ಕನಯ್ಯಾ ಲಾಲ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಕೆಲ ಮೀಟರು ದೂರ ಅವರನ್ನು ಎಳೆದುಕೊಂಡು ಅವರ ಮೇಲೆ ಹಾದು ಹೋಗಿದೆ. ನಂತರ ಅಲ್ಲಿ ನಿಲ್ಲದೆ ಚಾಲಕ ಪರಾರಿಯಾಗಿದ್ದಾನೆ. ಗಂಡ ಮತ್ತು ದಂಪತಿಗಳ ಮಗ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಅಳುತ್ತ ಕನಯ್ಯಾ ಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಬೇಕೆಂದು ಕೂಗಿದ್ದಾನೆ. ಆದರೆ, ಒಬ್ಬರೂ ನೆರವಿಗೆ ಬಂದಿಲ್ಲ. ಅಲ್ಲಿ ದ್ವಿಚಕ್ರ ವಾಹನ ನಿಷೇಧಿಸಲಾಗಿದ್ದರೂ ನಿಮಯ ಉಲ್ಲಂಘಿಸಿ ಅನೇಕರು ಆ ದಾರಿಯಲ್ಲಿಯೇ ಸಾಗುತ್ತಾರೆ. ಇಷ್ಟಾದರೂ ಸರಕಾರ ಇದನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಅಪಘಾತವಾದ ಮೇಲೆಯಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬಹುದು. "ಇದು ನಿಜಕ್ಕೂ ದುಃಖ ತರುವಂತಹ ವಿಷಯ. ನಮ್ಮ ಕುಟುಂಬದ ಇಬ್ಬರು ಸದಸ್ಯರು ಸಾವಿಗೀಡಾಗಿದ್ದಾರೆ. ದಾರಿಹೋಕರು ಅವರನ್ನು ಉಳಿಸಲು ಧಾವಿಸಿ ಜವಾಬ್ದಾರಿ ಮೆರೆಯಬೇಕಾಗಿತ್ತು" ಎಂದು ಸಾವಿಗೀಡಾದ ಮಹಿಳೆಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಂಥ ಸಂದರ್ಭದಲ್ಲಿ ಸಹಾಯ ಮಾಡಿದರೆ ಕೋರ್ಟು ಕಚೇರಿ ಅಲೆಯಬೇಕಾಗುತ್ತದೆ, ಪೊಲೀಸರಿಂದ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಎಂದು ಯಾರೂ ಸಹಾಯಕ್ಕೆ ಬರುವುದಿಲ್ಲ. ಅಲ್ಲದೆ, ಪೊಲೀಸರು ಕೂಡ ಇಂಥ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿದುಕೊಂಡುರುವುದಿಲ್ಲ" ಎಂದು ಇಂಥದೇ ಅಪಘಾತದಲ್ಲಿ ತನ್ನ ಮಗಳನ್ನು ಕಳೆದುಕೊಂಡಿರುವ ಸಮಾಜ ಸೇವಕರೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ಎಲ್ಲರ ಬಳಿಯೂ ಮೊಬೈಲುಗಳಿರುತ್ತವೆ. ಒಂದು ಫೋನ್ ಮಾಡಿದರೆ ಸಾಕು ಆಂಬುಲನ್ಸ್ ಬರುತ್ತದೆ. ಈ ಘಟನೆಯಲ್ಲಿ ಜನರು ನಡೆದುಕೊಂಡಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಜನರು ಇಂಥ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಅವರಿಗೆ ತರಬೇತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

No comments:

Post a Comment