Thursday, April 25, 2013

ಶವ ಭಕ್ಷಕರಿಂದ ಶಿವಗಿರಿಯ ಹೈಜಾಕ್!ನಾರಾಯಣ ಗುರುಗಳು ಕೇರಳದ ಶಿವಗಿರಿಯಲ್ಲಿ ಸ್ಥಾಪಿಸಿದ ಮಠಕ್ಕೆ ನರೇಂದ್ರಮೋದಿ ಕಾಲಿಡುತ್ತಿರುವುದು ಸದ್ಯಕ್ಕೆ ಕೇರಳದಲ್ಲಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲೇ ಸುದ್ದಿಯಾಗುತ್ತಿದೆ. ಕೇರಳವನ್ನು ಆಳುತ್ತಿದ್ದ ಭೀಕರ ಜಾತೀಯತೆಯ ವಿರುದ್ಧ ದಂಗೆಯೆದ್ದು, ಜನಿವಾರ ಧರಿಸುತ್ತಿದ್ದ ಬ್ರಾಹ್ಮಣರ ವಿರುದ್ಧ ಜನಿವಾರ ರಹಿತ ಈಳವ ಬ್ರಾಹ್ಮಣ ಸಮೂಹವನ್ನು ಕಟ್ಟಿದ, ಜಾತೀಯತೆಯನ್ನು ಖಂಡತುಂಡವಾಗಿ ವಿರೋಧಿಸಿ, ವೈದಿಕರ ಮಂತ್ರ ತಂತ್ರಗಳಿಗೆ ಸವಾಲು ಹಾಕಿ, ಪ್ರತಿ ಸಮಾಜವೊಂದನ್ನು ಕಟ್ಟಿದ, ಮನು ತತ್ವಗಳಡಿಯಲ್ಲಿ ತಲೆತಲಾಂತರಗಳಿಂದ ಜೀತ ಮಾಡುತ್ತಿದ್ದವರನ್ನು ಮುಕ್ತಗೊಳಿಸಿದ ನಾರಾಯಣ ಗುರು ಶಿವಗಿರಿಯಲ್ಲಿ ಮಠವೊಂದನ್ನು ಸ್ಥಾಪಿಸಿದರು. ಅದು ಕೇವಲ ಈಳವರ ಅಥವಾ ಈಡಿಗರ ಮಠ ಮಾತ್ರವಾಗಿರಲಿಲ್ಲ. ಸರ್ವ ಶೋಷಿತರಿಗೆ ಬಿಡುಗಡೆಯ ದಾರಿಯನ್ನು ತೋರಿಸಿದ ಮಠ ಅದಾಗಿತ್ತು.
ಇಂದಿಗೂ ಕೇರಳದಂತಹ ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆಯಲು ಬಿಜೆಪಿ ಹರಸಾಹಸ ಪಡುತ್ತಿದೆ. ಅದಕ್ಕೆ ಮುಖ್ಯ ಕಾರಣವೇ ನಾರಾಯಣಗುರುಗಳು ಕೇರಳದಲ್ಲಿ ಬಿತ್ತಿ ಹೋದ ತತ್ವ, ಸಾಧನೆಗಳು. ಹೇಗೆ ಕೇರಳ ಕಮ್ಯುನಿಷ್ಟ್ ತತ್ವದಿಂದ ಪ್ರಭಾವಿತವಾಗಿದೆಯೋ ಹಾಗೆಯೇ ನಾರಾಯಣ ಗುರುವಿನ ತತ್ವದಿಂದಲೂ ಪ್ರಭಾವಿತವಾಗಿದೆ. 
ನಂಬೂದರಿಗಳ ವಿರುದ್ಧ ಗುರು ನಾರಾಯಣರು ನಡೆಸಿದ ಹೋರಾಟ, ಗಾಂಧೀಜಿಯನ್ನು, ವಿವೇಕಾನಂದರನ್ನೂ ಸೆಳೆದಿತ್ತು. ಇಡೀ ದಕ್ಷಿಣ ಭಾರತವೇ ನಾರಾಯಣಗುರುಗಳ ಪ್ರಭಾವಕ್ಕೆ ಸಿಲುಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬಿಲ್ಲವರಿಗಾಗಿ ನಾರಾಯಣ ಗುರುಗಳೇ ಆಗಮಿಸಿ, ಕುದ್ರೋಳಿ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿ ಹೋದರು.
ನಾರಾಯಣಗುರುಗಳ ವಿಶೇಷತೆಯೆಂದರೆ, ಅವರ ಹೋರಾಟದಲ್ಲಿ ಮುಸ್ಲಿಮರೂ ಭಾಗವಹಿಸಿದ್ದರು. ಶಿವಗಿರಿ ಮಠದ ಸ್ಥಾಪನೆಯಲ್ಲಿ ಮುಸ್ಲಿಮರ ಕಾಣಿಕೆಗಳೂ ಇವೆ. ಎಲ್ಲ ಸಮುದಾಯವನ್ನು ಒಂದು ಗೂಡಿಸಿ ಅವರು ತನ್ನ ಆಧ್ಯಾತ್ಮಿಕ ಹೋರಾಟವನ್ನು ಮುನ್ನಡೆಸಿ ದರು. ಶಿವಗಿರಿ ಈ ಕಾರಣಕ್ಕೆ ಕೇರಳ ಮಾತ್ರವಲ್ಲ ಇಡೀ ಭಾರತಕ್ಕೆ ಮುಖ್ಯವಾಗುತ್ತದೆ. ಮನುತ ತ್ವದ ವಿರುದ್ಧ ಹಗಲು ರಾತ್ರಿ ಸೆಣೆಸಿದ ಗುರುಗಳು ಸ್ಥಾಪಿಸಿದ ಶಿವಗಿರಿ ಮಠದಿಂದ ಇಂದಿಗೂ ಕೇರಳ ಜಾತ್ಯತೀತವಾಗಿ ಮುನ್ನಡೆಯುತ್ತಿದೆ.  ಇಂತಹ ಕ್ಷೇತ್ರಕ್ಕೆ ಇದೀಗ ನರೇಂದ್ರ ಮೋದಿ ತನ್ನ ಪಾದವನ್ನು ಊರುತ್ತಿದ್ದಾರೆ. ಕೇರಳದಲ್ಲಿ ಇದರ ವಿರುದ್ಧ ವ್ಯಾಪಕ ಟೀಕೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ, ಈ ದೇಶದೊಳಗಿರುವ ಇನ್ನೊಂದು ಮಠದೊಳಗೆ ಕಾಲಿಡಬಾರದು, ಪ್ರವೇಶಿಸಬಾರದು ಎಂದು ಆಜ್ಞೆ ಮಾಡುವ, ಫತ್ವಾ ಹೊರಡಿಸುವ ಹಕ್ಕು ಯಾರಿಗೂ ಇಲ್ಲ. ಆದರೆ ಕೆಲವು ತಾತ್ವಿಕ ಕಾರಣಗಳಿಗಾಗಿ ನಾವು ಮೋದಿಯ ಶಿವಗಿರಿಯ ಭೇಟಿಯನ್ನು ಖಂಡಿಸಲೇ ಬೇಕಾಗುತ್ತದೆ. ನಾರಾಯಣಗುರುಗಳು ತನ್ನ ಜೀವನದುದ್ದಕ್ಕೂ ಯಾವ ಮನುವಾದವನ್ನು ವಿರೋಧಿಸಿದರೋ ಅದೇ ಮನುವಾದದ ವಾರಸುದಾರರಾಗಿ ನರೇಂದ್ರ ಮೋದಿ ಕೆಲಸ ಮಾಡುತ್ತಿರುವವರು. ಗುಜರಾತ್‌ನಲ್ಲಿ ಇಂದಿಗೂ ದಲಿತರು ಹೀನಾಯ ಬದುಕನ್ನು ಸವೆಸುತ್ತಿದ್ದಾರೆ.
ಧರ್ಮದ ಹೆಸರಿನಲ್ಲಿ ಸಾವಿರಾರು ಮುಸ್ಲಿಮರನ್ನು ಕೊಂದು ಹಾಕಿದ ಪಾಪ ನರೇಂದ್ರ ಮೋದಿಯನ್ನು ಸುತ್ತಿಕೊಂಡಿದೆ. ನಾರಾಯಣಗುರುಗಳು ಏನನ್ನು ವಿರೋಧಿಸಿದರೋ ಅವುಗಳಿಗೆಲ್ಲ ವಾರಸುದಾರ ನಾನು ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ, ಅವರ ಶಿವಗಿರಿ ಭೇಟಿ ಎಷ್ಟು ಮಟ್ಟಿಗೆ ಸರಿ? ಎಂಬ ಪ್ರಶ್ನೆ ತಲೆಯೆತ್ತುತ್ತದೆ. ಶಿವಗಿರಿಗೂ ಮೋದಿಗೂ ಯಾವ ರೀತಿಯಲ್ಲೂ ಹೋಲಿಕೆ, ಸಂಬಂಧಗಳು ಇಲ್ಲದೇ ಇರುವಾಗ, ಆ ಮಠದ ಆಡಳಿತ ಮಂಡಳಿ ಅವರನ್ನೇ ತಮ್ಮ ೧೦೦ನೆ ವರ್ಷಾಚರಣೆಗೆ ಕರೆಯಲು ಕಾರಣವೇನು?
ನಾರಾಯಣಗುರುಗಳು ಸ್ಥಾಪಿಸಿದ ಶಿವಗಿರಿಯನ್ನು ಇದೀಗ ಮನುವಾದಿ, ಕೇಸರಿ ಕಾಳಸರ್ಪಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ ಎಂದು ಇದರ ಅರ್ಥವಲ್ಲವೆ? ನಾರಾಯಣಗುರುಗಳು ಬದುಕಿದ್ದಿದ್ದರೆ ಅವರು ಇಂದು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು?ಇಂದು ನಾರಾಯಣಗುರುಗಳನ್ನು ಮಾತ್ರವಲ್ಲ ಅಂಬೇಡ್ಕರ್‌ರಂತಹ ನಾಯಕರನ್ನೂ ಸಂಘಪರಿವಾರ ಹೈಜಾಕ್ ಮಾಡಲು ಯತ್ನಿಸಿದೆ.
ಜಾತೀಯತೆಯನ್ನು ಎತ್ತಿ ಹಿಡಿಯುವ, ದಲಿತರನ್ನು ತುಳಿಯುವ ಮನುವಾದದ ತಳಹದಿಯಲ್ಲಿ ನಿಂತಿರುವ ಕೇಸರಿ ಪಡೆಗಳು ತಮ್ಮ ವೇದಿಕೆಯಲ್ಲಿ ಅಂಬೇಡ್ಕರ್ ಚಿತ್ರವನ್ನು ಹಾಕುವುದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ? ಕೇರಳದಲ್ಲಿ ನಡೆಯುತ್ತಿರುವುದು ಅದೇ ಆಗಿದೆ. ಕೇರಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಸರಿ ಪಡೆಗಳಿಗೆ ತೀರಾ ಕಷ್ಟವಾಗುತ್ತಿದೆ. ಅವರಿಗೆ ಅಲ್ಲಿ ಅತಿ ದೊಡ್ಡ ತಡೆಯಾಗಿರುವುದೇ ನಾರಾಯಣ ಗುರುಗಳು ಮತ್ತು ಅವರ ತತ್ವ.ಆದುದರಿಂದ ಅವರು ನಾರಾಯಣ ಗುರುಗಳನ್ನೇ ಹೈಜಾಕ್ ಮಾಡಲು ಹೊರಟಿದ್ದಾರೆ.ಇಡೀ ಶಿವಗಿರಿಯ ಮಠವನ್ನೇ ತಮ್ಮ ರಾಜಕೀಯಕ್ಕೆ ಬಲಿಪಶು ಮಾಡಲು ಮುಂದಾಗಿದ್ದಾರೆ.
ಆದುದರಿಂದ ಬರೇ ಮೋದಿಯನ್ನು ಶಿವಗಿರಿಗೆ ಭೇಟಿ ನೀಡದಂತೆ ಪ್ರತಿರೋಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಡೀ ಶಿವಗಿರಿ ಮತ್ತು ನಾರಾಯಣಗುರುಗಳ ಹೈಜಾಕ್‌ನ್ನು ತಪ್ಪಿಸಬೇಕಾಗಿದೆ. ಯಾವ ಶೋಷಿತರಿಗೆ ವೈದಿಕರಿಂದ ನಾರಾಯಣಗುರುಗಳು ಬಿಡುಗಡೆಯನ್ನು ನೀಡಿದರೋ, ಅದೇ ಶೋಷಿತರು ಇಂದು ನಾರಾಯಣಗುರುಗಳು ವೈದಿಕರ ಕೈವಶವಾಗುವುದನ್ನು ತಪ್ಪಿಸಬೇಕಾಗಿದೆ. ಈ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ಕೇರಳವನ್ನೂ, ದೇಶವನ್ನು ಕೇಸರಿ ವರ್ಗದಿಂದ ಕಾಪಾಡಬೇಕಾಗಿದೆ.
 krupe: v.bharathi

No comments:

Post a Comment