Wednesday, April 3, 2013

ಮೇಲ್ಮನವಿ ಸಲ್ಲಿಕೆಗೆ ವಿಳಂಬ;ಸುಪ್ರೀಂಕೋರ್ಟ್ ಸಿಬಿಐಗೆ ತರಾಟೆ;ಬಾಬರಿ ಮಸೀದಿ ಧ್ವಂಸ ಸಂಚು
ಬುಧವಾರ - ಏಪ್ರಿಲ್ -03-2013

ಹೊಸದಿಲ್ಲಿ,ಎ.2: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತಿತರರ ವಿರುದ್ಧ ಹೊರಿಸಲಾದ ಸಂಚಿನ ಆರೋಪವನ್ನು ಕೈಬಿಟ್ಟ ಅಲಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯಾಕೆ ವಿಳಂಬ ಮಾಡಲಾಯಿತೆಂದು ಸುಪ್ರೀಂಕೋರ್ಟ್ ಸಿಬಿಐಯನ್ನು ಪ್ರಶ್ನಿಸಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 167 ದಿನಗಳಷ್ಟು ವಿಳಂಬವಾಗಿರುವುದನ್ನು ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಗಮನಿಸಿದೆ. ಸಿಬಿಐಯ ಕಾನೂನು ಅಧಿಕಾರಿಯೊಬ್ಬರಿಂದಾಗಿ ಈ ವಿಳಂಬ ಉಂಟಾಯಿತೆಂದು ಅದು ಹೇಳಿದೆ.
ಆದರೆ ಪ್ರಕರಣದ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಬಿಐ, ಅಲಹಾಬಾದ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಬೇಕಿದ್ದ ಮೇಲ್ಮನವಿಯ ಕರಡು ಪ್ರತಿಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಸಾಲಿಸಿಟರ್ ಜನರಲ್‌ರ ಒಪ್ಪಿಗೆಯನ್ನು ಹಾಗೂ ಅಭಿಪ್ರಾಯವನ್ನು ಪಡೆಯಲು ವಿಳಂಬವಾದ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ತಡವಾಯಿತೆಂದು ತಿಳಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಅಫಿದಾವಿತ್ ಸಲ್ಲಿಸಿದ ಸಿಬಿಐ ಅಧಿಕಾರಿಯ ಹೆಸರನ್ನು ನ್ಯಾಯಪೀಠವು ತನ್ನ ಆದೇಶದಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಹಿರಿಯ ಕಾನೂನು ಅಧಿಕಾರಿಯೊಬ್ಬರು ಅದನ್ನು ಸಲ್ಲಿಸಬೇಕಿತ್ತೆಂದು ಅದು ಹೇಳಿದೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ, ಕಲ್ಯಾಣ್‌ಸಿಂಗ್, ಉಮಾ ಭಾರತಿ, ವಿನಯ್ ಕತಿಯಾರ್ ಹಾಗೂ ಮುರಳಿ ಮನೋಹರ್ ಜೋಶಿ ವಿರುದ್ಧದ ಸಂಚಿನ ಆರೋಪಗಳನ್ನು ಕೈಬಿಟ್ಟ ವಿಶೇಷ ಸಿಬಿಐ ನ್ಯಾಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಆಲಿಸುತ್ತಿದೆ.
ಬಾಬರಿ ಮಸೀದಿ ಧ್ವಂಸದ ಸಂಚಿನ ಆರೋಪದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ದೋಷಮುಕ್ತಗೊಂಡಿದ್ದ ಇತರರೆಂದರೆ ಸತೀಶ್ ಪ್ರಧಾನ್, ಸಿ.ಆರ್. ಬನ್ಸಾಲ್, ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಸಾಧ್ವಿ ಋತಂಭರಾ, ವಿ.ಎಚ್.ದಾಲ್ಮಿಯಾ, ಮಹಂತ್ ಅವೈದ್ಯನಾಥ್, ಆರ್.ವಿ.ವೇದಾಂತಿ, ಪರಮಹಂಸ ರಾಮಚಂದ್ರ ದಾಸ್, ಜಗದೀಶ್ ಮುನಿ ಮಹಾರಾಜ್, ಬಿ.ಎಲ್. ಶರ್ಮಾ, ನೃತ್ಯ ಗೋಪಾಲ್ ದಾಸ್, ಧರ್ಮದಾಸ್, ಸತೀಶ್ ನಾಗರ್ ಹಾಗೂ ಮೋರೇಶ್ವರ್ ರಾವ್.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚಿನ ಆರೋಪಗಳಿಂದ ಎಲ್.ಕೆ.ಅಡ್ವಾಣಿ ಮತ್ತಿತರರನ್ನು ಕೈಬಿಡುವ ವಿಶೇಷ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ 2010ರ ಮೇ 21ರಲ್ಲಿ ನೀಡಿದ ಆದೇಶವನ್ನು ಸಿಬಿಐ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಆದರೆ ಬಾಬರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅಡ್ವಾಣಿ ಮತ್ತಿತರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ರಾಯ್‌ಬರೇಲಿ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುನ್ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಸಿಬಿಐಗೆ ತಿಳಿಸಿದೆ.
ಅಡ್ವಾಣಿ ಹಾಗೂ ಇತರರ ವಿರುದ್ಧ ಸಿಬಿಐ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 153ಎ (ಸಮುದಾಯಗಳ ನಡುವೆ ಶತ್ರುತ್ವವನ್ನು ಬೆಳೆಸುವುದು),153ಬಿ ( ರಾಷ್ಟ್ರೀಯ ಭಾವೈಕ್ಯತೆಗೆ ಹಾನಿ) ಹಾಗೂ 505 ( ಸುಳ್ಳು ಹೇಳಿಕೆಗಳು, ಸಾರ್ವಜನಿಕ ಶಾಂತಿಯನ್ನು ಕದಡಿಸುವ ಉದ್ದೇಶದಿಂದ ವದಂತಿಗಳನ್ನು ಹರಡುವುದು) ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ
ಕೃಪೆ;ವಾ.ಭಾರತಿ 

No comments:

Post a Comment