Thursday, April 4, 2013

ಅಲ್ಪಸಂಖ್ಯಾತರ ಕಡೆಗಣನೆಯಿಂದ ದೇಶದ ಪ್ರಗತಿಗೆ ಹಾನಿ: ರಾಹುಲ್ಏಪ್ರಿಲ್ -04-2013

ಹೊಸದಿಲ್ಲಿ: ಅಲ್ಪಸಂಖ್ಯಾತರ ಅವಗಣನೆಯು ದೇಶದ ಬೆಳವಣಿಗೆಗೆ ಧಕ್ಕೆಯುಂಟು ಮಾಡುತ್ತಿದೆಯೆಂದು ಗುರುವಾರ ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಅತ್ಯಂತ ದಿಟ್ಟ ಹಾಗೂ ಸದೃಢವಾದ ನವಭಾರತದ ನಿರ್ಮಾಣದಲ್ಲಿ ಕೈಜೋಡಿಸುವಂತೆ ಭಾರತೀಯ ಕೈಗಾರಿಕಾ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ರಾಷ್ಟ್ರೀಯ ಕೈಗಾರಿಕಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ತಾನು ಪ್ರಧಾನಿಯಾಗುವೆನೇ ಅಥವಾ ಇಲ್ಲವೇ ಎಂಬ ಕುರಿತು ಕೇಳಿಬರುತ್ತಿರುವ ಮಾತುಗಳು ಅಪ್ರಸ್ತುತವಾದವೆಂದು ಹೇಳಿದ್ದಾರೆ. ದೇಶದ ಎಲ್ಲಾ ಸಮಸ್ಯೆಗಳನ್ನು ಒಬ್ಬ ವ್ಯಕ್ತಿಯಿಂದಲೇ ಬಗೆಹರಿಸಲು ಸಾಧ್ಯವಿಲ್ಲವೆಂದೂ ಅವರು ಅಭಿಪ್ರಾಯಿಸಿದ್ದಾರೆ.
ಜನಸಾಮಾನ್ಯರ ಸಬಲೀಕರಣ ಹಾಗೂ ಎಲ್ಲಾ ರಂಗಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ದೇಶದಲ್ಲಿ ರಚನಾತ್ಮಕ ಬದಲಾವಣೆಯನ್ನು ತರಬೇಕಾದ ಅಗತ್ಯವಿದೆಯೆಂದು ರಾಹುಲ್ ಹೇಳಿದರು.
ದಿಟ್ಟ ಹಾಗೂ ಸದೃಢವಾದ ನವಭಾರತವನ್ನು ನಿರ್ಮಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ಕರೆ ನೀಡಿದ ರಾಹುಲ್, ದೇಶದ ಆರ್ಥಿಕ ಬೆಳವಣಿಗಾಗಿ ಉದ್ಯಮ ರಂಗವು ಸರಕಾರದ ಜೊತೆ ಕೈಜೋಡಿಸಬೇಕೆಂದು ಹೇಳಿದರು.
ಯುಪಿಎ ಸರಕಾರದ ಅಡಿ ದೇಶವು ತ್ವರಿತಗತಿಯ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ . ವಿವಿಧ ಸಮುದಾಯಗಳ ನಡುವೆ ಉದ್ವಿಗ್ನತೆ ಶಮನಗೊಳಿಸುವಲ್ಲಿ ಹಾಗೂ ಸೌಹಾರ್ದತೆ ಬೆಸೆಯುವಲ್ಲಿ ಯುಪಿಎ ಯಶಸ್ವಿಯಾಗಿರುವುದೇ ಇದಕ್ಕೆ ಕಾರಣವೆಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಧೋರಣೆ ಹೊಂದಿರುವ ಆರೋಪಗಳನ್ನು ಎದುರಿಸುತ್ತಿರುವ ಗುಜರಾತ್ ಮುಖ್ಯಮಂತ್ರಿಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ರಾಹುಲ್, ಬಡವರು, ಅಲ್ಪಸಂಖ್ಯಾತರು ಹಾಗೂ ದಲಿತರು ಸೇರಿದಂತೆ ವಿವಿಧ ವರ್ಗಗಳ ಜನರನ್ನು ಪ್ರತ್ಯೇಕಿಸುವುದರಿಂದ ಅತಿ ದೊಡ್ಡ ಅಪಾಯವುಂಟಾಗುತ್ತದೆ. ಇದರಿಂದಾಗಿ ದೇಶದ ಎಲ್ಲ ಜನರೂ ಬಾಧಿತರಾಗುತ್ತಾರೆಂದು ಕಳವಳ ವ್ಯಕ್ತಪಡಿಸಿದರು.

No comments:

Post a Comment