Tuesday, April 9, 2013

ಬಾಯಿಯಲ್ಲೇ ಮೂತ್ರ ಹೊಯ್ದ ಉಪಮುಖ್ಯಮಂತ್ರಿ ಪವಾರ್


 ಏಪ್ರಿಲ್ -09-2013

ಮಾತನಾಡಬೇಕಾದ ಬಾಯಿಯ ಮೂಲಕ ಮೂತ್ರವನ್ನೂ ಮಾಡಬಹುದು ಎನ್ನುವುದನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾಧಿಸಿ ತೋರಿಸಿದ್ದಾರೆ. ತನ್ನ ಸ್ಥಾನದ ಘನತೆಯನ್ನು ಮರೆತು, ನೀರಿಗಾಗಿ ಹಪಹಪಿ ಸುವ ರೈತರ ವಿರುದ್ಧ ಅಕ್ಷರಶಃ ಅವರು ಮೂತ್ರ ವನ್ನೇ ಸುರಿಸಿದ್ದಾರೆ. ‘‘ಅಣೆಕಟ್ಟುಗಳೇ ನೀರಿಲ್ಲದೆ ಬತ್ತಿ ಹೋಗುತ್ತಿರುವಾಗ, ಕುಡಿಯೋಕೆ ನೀರನ್ನು ಎಲ್ಲಿಂದ ಕೊಡೋದು? ನಾವೇನೂ ಡ್ಯಾಮ್‌ಗಳನ್ನು ಮೂತ್ರ ಮಾಡಿ ತುಂಬಿಸ ಲಾಗುತ್ತದೆಯೆ? ಇಷ್ಟಕ್ಕೂ ಕುಡಿಯುವುದಕ್ಕೇ ನೀರಿಲ್ಲದಿರುವಾಗ ಮೂತ್ರ ಮಾಡುವುದಾ ದರೂ ಹೇಗೆ...?’’ ಎಂದು ಪ್ರತಿಭಟನಾ ನಿರತರನ್ನು ವ್ಯಂಗ್ಯವಾಡಿದ್ದಾರೆ. ಒಬ್ಬ ಉಪಮುಖ್ಯಮಂತ್ರಿ ಮಾತನಾಡುವ ರೀತಿಯೇ ಇದು? ಇದನ್ನು ಉಪ ಮುಖ್ಯಮಂತ್ರಿ ತನ್ನ ಬಾಯಿಯಿಂದ ಸುರಿಸಿದ ಮೂತ್ರವೆಂದಲ್ಲದೆ ಇನ್ನೇನೆಂದು ಕರೆಯಲು ಸಾಧ್ಯ? ಮಹಾರಾಷ್ಟ್ರ ದೇಶದಲ್ಲೇ ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಪಡೆದಿದೆ. ಬರಗಾಲ, ಕುಡಿಯುವ ನೀರಿನ ಕೊರತೆ ಈ ರಾಜ್ಯದಲ್ಲಿ ಪ್ರತಿವರ್ಷ ಸುದ್ದಿ ಮಾಡುತ್ತದೆ. ಈ ಬಾರಿಯೂ ಇದಕ್ಕಿಂತ ಭಿನ್ನವಾದ ವಾತಾವರಣ ವಿಲ್ಲ. ಸೊಲ್ಲಾಪುರ, ಅಹ್ಮದ್‌ನಗರ, ಸಾಂಗ್ಲಿ, ಸತಾರ, ಬೀಡ್ ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿಗಾಗಿಯೂ ತತ್ತರಿಸುತ್ತಿದ್ದಾರೆ. ಇಲ್ಲಿನ ಅಣೆಕಟ್ಟಿನ ನೀರು ಇದ್ದೂ ಇಲ್ಲದಂತಾ ಗಿದೆ. ಜನರು ಕಳೆದ ಕೆಲವು ತಿಂಗಳಿನಿಂದ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಇಲ್ಲಿನ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ.
ಜನರ ಕೂಗಿಗೆ ಕಿವಿಯಾಗುವ ಬದಲು, ಉಪಮುಖ್ಯಮಂತ್ರಿ ಅಜಿತ್ ಪವಾರ್ ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿದ್ದಾರೆ. ಸಾವಿರಾರು ಕೋಟಿ ರೂ. ಹಗರಣಗಳ ಆರೋಪವನ್ನು ಎದುರಿಸುತ್ತಿರುವ ಅಜಿತ್ ಪವಾರ್ ತನ್ನ ಹಾಗೂ ಸಂಬಂಧಿ ಶರದ್ ಪವಾರ್‌ರ ವ್ಯಕ್ತಿತ್ವಕ್ಕೆ ಒಪ್ಪುವಂತಹ ಹೇಳಿಕೆಯನ್ನೇ ನೀಡಿದ್ದಾರೆ. ಆ ಮೂಲಕ ಈ ನಾಡಿನ ರೈತರ, ಜನರ ಕುರಿತಂತೆ ಸರಕಾರಕ್ಕೆ ಯಾವ ರೀತಿಯ ಕಾಳಜಿಯಿದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಬರಗಾಲ ಪೀಡಿತ ಜನರಿಗೆ ಮೂತ್ರವನ್ನು ಕುಡಿಸಲು ಹೊರಟ ಅಜಿತ್ ಪವಾರ್, ಮತ ನೀಡಿದ ಜನರಿಗೆ ದ್ರೋಹ ಬಗೆದಿದ್ದಾರೆ. ಇದೀಗ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರಾದರೂ, ಅವರ ಬಾಯಿಯಿಂದ ಹೊರಬಿದ್ದ ಹೊಲಸು ಮಾತು, ಒಟ್ಟು ವ್ಯವಸ್ಥೆಯೊಳಗಿನ ಕೊಳಚೆಯನ್ನು ಎತ್ತಿ ತೋರಿಸಿದೆ. ಈ ಅಜಿತ್ ಪವಾರ್ ಕೇಂದ್ರದ ಹಿರಿಯ ಸಚಿವ ಶರದ್ ಪವಾರ್‌ರ ತಮ್ಮನ ಮಗ. ಶರದ್ ಪವಾರ್ ಕೃಷಿ ಸಚಿವರಾಗಿ ಈ ದೇಶಕ್ಕೆ ಕೊಟ್ಟ ಕೊಡುಗೆ ಏನು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಹೆಸರಿಗಷ್ಟೇ ಕೃಷಿ ಸಚಿವರಾಗಿ ಕ್ರಿಕೆಟ್ ಜಗತ್ತಿನಲ್ಲೇ ದಿನ ಸವೆಸುತ್ತಿದ್ದ ಶರದ್ ಪವಾರ್, ದೇಶದ ಆಹಾರ ಸಮಸ್ಯೆಯಲ್ಲಿ ಮಹತ್ತರ ಪಾತ್ರವಹಿಸಿದವರು. ಇವರ ಅವಧಿಯಲ್ಲೇ, ಭಾರತದ ಗೋದಾಮಿ ನೊಳಗೆ ಸಹಸ್ರಾರು ಕ್ವಿಂಟಲ್ ಧಾನ್ಯ ಕೊಳೆತು ಗೊಬ್ಬರವಾಗಿ ಹೋಯಿತು. ಕೊಳೆತು ಹೋದರೂ ಕೊಟ್ಟು ಹೋಗದು ಎಂಬಂತೆ, ಜನಸಾಮಾನ್ಯರಿಗೆ ಸಬ್ಸಿಡಿ ಆಹಾರ ಕೊಡುವು ದರ ಕುರಿತಂತೆ ತೀವ್ರ ತಕರಾರು ತೆಗೆದವರೂ ಇದೇ ಶರದ್ ಪವಾರ್. ಆದರೆ ಇವರನ್ನು ಅಜಿತ್ ಪವಾರ್ ಮೀರಿಸಲು ಹೊರಟಿದ್ದಾರೆ.
ಅಜಿತ್ ಪವಾರ್ ಕೂಡ ಕೃಷಿ ಹಿನ್ನೆಲೆ ಯಿಂದಲೇ ಬಂದವರು. ಕಬ್ಬು ಸಹಕಾರಿ ಒಕ್ಕೂಟದಿಂದಲೇ ಅವರ ರಾಜಕೀಯ ಜೀವನ ಆರಂಭವಾಯಿತು. ಕಬ್ಬು ಕೃಷಿಕರನ್ನು ಮುಂದಿಟ್ಟುಕೊಂಡೇ ಅವರು ರಾಜಕೀಯ ವಾಗಿ ಮೇಲೆ ಬಂದರು. ಜನಸಾಮಾನ್ಯರ ಬದುಕಿನಲ್ಲಿ ನೀರಿನ ಅಗತ್ಯವನ್ನು ಇವರು ತಿಳಿಯದವರೇನೂ ಅಲ್ಲ. ಇಲ್ಲಿ ರೈತರು ಕೇಳುತ್ತಿರುವುದು ತಮ್ಮ ತೋಟಗಳಿಗೆ ನೀರಲ್ಲ. ಬದಲಿಗೆ ಕುಡಿಯುವುದಕ್ಕೆ ನೀರನ್ನು ಕೇಳುತ್ತಿದ್ದಾರೆ. ಹಾಗೆ ನೀರನ್ನು ಕೇಳಿದವರಿಗೆ ಅಜಿತ್ ಮೂತ್ರ ಕುಡಿಯಲು ಸಲಹೆ ನೀಡಿದ್ದಾರೆ. ಅವರ ಮಾತಿನಲ್ಲಿರುವ ಅಮಾನವೀಯತೆ, ಕ್ರೌಯ ನಿಜಕ್ಕೂ ಖಂಡನೀಯ. ಬರೇ ಕ್ಷಮೆ ಯಾಚನೆಯಿಂದ ಇದು ಮುಗಿಯುವುದಿಲ್ಲ. ಈ ಮಾತಿಗಾಗಿ ಅವರು ತನ್ನ ಸ್ಥಾನವನ್ನೇ ತ್ಯಜಿಸಬೇಕಾಗಿದೆ. ಇಂತಹದೊಂದು ಅಮಾನವೀಯ ಹೇಳಿಕೆ ಯನ್ನು ನೀಡಲು ಕಾರಣವೂ ಇದೆ. ಈ ಹೇಳಿಕೆ ಆಕಸ್ಮಿಕವಾಗಿ ಬಿದ್ದುದಲ್ಲ. ನೀರಿಗಾಗಿ ಪ್ರತಿಭಟಿಸುತ್ತಿರುವವರ ಮೇಲಿನ ಸಿಟ್ಟಿನಿಂದ ಇಂತಹ ಮಾತನ್ನು ಆಡಿದ್ದಾರೆ. ಡ್ಯಾಂನಲ್ಲಿ ನೀರು ಸುಮ್ಮನೆ ಖಾಲಿಯಾದುದೇನೂ ಅಲ್ಲ. ಪವಾರ್ ಕುಟುಂಬಗಳ ಮಾಲಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಕಬ್ಬು ಅರೆಯುವ ಕಾರ್ಖಾನೆ ಗಳಿವೆ. ಈ ಕಾರ್ಖಾನೆಗಳಿಗೆ ಸಾಕಷ್ಟು ನೀರು ಬೇಕಾಗಿದೆ. ಈ ನೀರನ್ನು ಪವಾರ್ ಕುಟುಂಬ ತಮ್ಮ ಮೂತ್ರವನ್ನು ಹೊಯ್ದು ಭರಿಸುವುದ ಕ್ಕಾಗುವುದಿಲ್ಲ. ಅಂತಹ ಪ್ರಯತ್ನವನ್ನೂ ಅವರು ಮಾಡಿಲ್ಲ. ಬದಲಿಗೆ ಈ ಪರಿಸರದ ಡ್ಯಾಂನ ನೀರನ್ನು ಅಧಿಕೃತವಾಗಿಯೂ, ಅನಧಿಕೃತ ವಾಗಿಯೂ ಬಳಸುತ್ತಿದ್ದಾರೆ. ಪರಿಣಾಮವಾಗಿ ಡ್ಯಾಂ ಬರಿದಾಗಿದೆ. ಮುಖ್ಯವಾಗಿ ಕುಡಿಯುವ ನೀರನ್ನು ಪೂರೈಸಿದ ಬಳಿಕವಷ್ಟೇ ಕಾರ್ಖಾನೆ ಗಳು ತಮ್ಮ ಪಾಲಿನ ನೀರನ್ನು ಪಡೆದು ಕೊಳ್ಳಬೇಕು. ಆದರೆ ಪವಾರ್ ಮಾಲಕತ್ವದ ಕಾರ್ಖಾನೆಗಳು ಜನರ ಕುಡಿಯುವ ನೀರನ್ನೂ ಕಾರ್ಖಾನೆಗಳಿಗೆ ಬಳಸುತ್ತದೆ ಎಂಬ ಆರೋಪ ವಿದೆ. ರೈತರ ಸಾರ್ವಜನಿಕ ಪ್ರತಿಭಟನೆ ಈ ಕಾರಣದಿಂದಲೇ ಪವಾರ್ ಕುಟುಂಬಕ್ಕೆ ಸಿಟ್ಟು ತರಿಸಿದೆ. ಆದುದರಿಂದಲೇ, ಅವರು ನೀಚವಾದ ಮಾತುಗಳಿಂದ ಪ್ರತಿಭಟನ ನಿರತರನ್ನು ವ್ಯಂಗ್ಯ ಮಾಡಿದ್ದಾರೆ.
ಪವಾರ್ ತಕ್ಷಣ ಈ ಜನರ ಬೇಡಿಕೆಗೆ ಸ್ಪಂದಿಸಬೇಕು. ಈ ಭಾಗದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು. ಅನಧಿಕೃತವಾಗಿ ತನ್ನ ಕಾರ್ಖಾನೆಗಳಿಗೆ ಬಳಸುತ್ತಿರುವ ನೀರನ್ನು ಜನರ ಕಡೆಗೆ ತಿರುಗಿಸಬೇಕು. ಹಾಗೆಯೇ, ತಾನು ಹೇಳಿದ ಮಾತುಗಳಿಗೆ ಕ್ಷಮೆಯಾಚಿಸಿ, ಸ್ಥಾನದಿಂದ ಕೆಳಗಿಳಿಯಬೇಕು. ಇಲ್ಲವಾದರೆ, ಮುಂದಿನ ಚುನಾವಣೆಯಲ್ಲಿ ಜನರೇ ಪವಾರ್ ಕುಟುಂಬಕ್ಕೆ ಮೂತ್ರ ಕುಡಿಸಲಿದ್ದಾರೆ.
ಕೃಪೆ:ವಾ.ಭಾರತಿ 

No comments:

Post a Comment