Friday, April 19, 2013

ಐದು ವರ್ಷದ ಮಗುವಿನ ಮೇಲೆ ಭೀಕರ ಅತ್ಯಾಚಾರ;ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ



ಹೊಸದಿಲ್ಲಿ, : ಐದು ವರ್ಷದ ಮಗುವಿನ ಮೇಲೆ ನಡೆದ ಭೀಕರ ಅತ್ಯಾಚಾರ ದೇಶದ ರಾಜಧಾನಿಯನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ.
ಅತ್ಯಂತ ಗಂಭೀರವಾಗಿ ಗಾಯಗೊಂಡಿರುವ ಮಗು ಈಗ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದೆ.
ಮಗುವಿನ ಗುಪ್ತಾಂಗದ ಒಳಗೆ 200 ಎಂಎಲ್ ಗಾತ್ರದ ಬಾಟಲಿ ಮತ್ತು ಕೆಲವು ಮೇಣದ ಬತ್ತಿಗಳನ್ನು ತುರುಕಿಸಿದ್ದು ಅತ್ಯಾಚಾರದ ಭೀಕರತೆ ಮತ್ತು ಅತ್ಯಾಚಾರಿಯ ಪೈಶಾಚಿಕತೆಯನ್ನು ಸಾರಿ ಹೇಳುತ್ತಿತ್ತು.
ಇದು ಆಸ್ಪತ್ರೆಯ ವೈದ್ಯರನ್ನೇ ಆಘಾತಕ್ಕೀಡುಮಾಡಿದೆ. ಇಂಥ ಪ್ರಕರಣವನ್ನು ತಾನೆಂದೂ ನೋಡಿಲ್ಲ ಎಂದು ಸ್ವಾಮಿ ದಯಾನಂದ ಆಸ್ಪತ್ರೆಯ ವೈದ್ಯರೊಬ್ಬರು ಶುಕ್ರವಾರ ಹೇಳಿದರು.
‘‘ಮಗುವಿನ ತುಟಿ ಮತ್ತು ಗಲ್ಲಗಳಲ್ಲಿ ಗಾಯಗಳಿದ್ದವು ಮತ್ತು ಕುತ್ತಿಗೆಯಲ್ಲಿ ಜಜ್ಜಿದ ಗುರುತುಗಳಿದ್ದವು. ಇದು ಆಕೆಯ ಕುತ್ತಿಗೆ ಹಿಸುಕಲು ಪ್ರಯತ್ನ ನಡೆಸಲಾಗುತ್ತಿತ್ತು ಎಂಬುದನ್ನು ಸೂಚಿಸಿದೆ. ರಕ್ತದೊತ್ತಡ ಸಾಮಾನ್ಯಕ್ಕಿಂತ ಭಾರಿ ಪ್ರಮಾಣದಲ್ಲಿ ಕಡಿಮೆಯಿದೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಅದು ಜ್ವರದಿಂದ ನರಳುತ್ತಿತ್ತು’’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಟೆಂಡೆಂಟ್ ಆರ್.ಕೆ. ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದರು.
‘‘ಮಗುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಈಗ ಮಗು ತುರ್ತು ಚಿಕಿತ್ಸಾ ಘಟಕದಲ್ಲಿದೆ. ಮುಂದಿನ 24-48 ಗಂಟೆಗಳ ಅವಧಿಯಲ್ಲಿ ಮಗುವಿನ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗುವುದು’’ ಎಂದರು.
ಮಗುವನ್ನು ಎಪ್ರಿಲ್ 15ರಂದು ಅಪಹರಿಸಲಾಗಿತ್ತು ಹಾಗೂ ಅತ್ಯಾಚಾರಿಯ ಫ್ಲಾಟ್‌ನಲ್ಲಿ ಎರಡು ದಿನಗಳ ಕಾಲ ಆಹಾರ, ನೀರಿಲ್ಲದೆ ಕೂಡಿ ಹಾಕಲಾಗಿತ್ತು.
ಮೂವತ್ತು ವರ್ಷ ದಾಟಿದ ಅತ್ಯಾಚಾರಿಯು ಪೂರ್ವ ದಿಲ್ಲಿಯ ಗಾಂಧಿ ನಗರದ ಕಟ್ಟಡದ ನೆಲ ಅಂತಸ್ತಿನಲ್ಲಿ ವಾಸವಾಗಿದ್ದನು. ಅದೇ ನೆಲ ಅಂತಸ್ತಿನಲ್ಲಿ ಸಂತ್ರಸ್ತ ಮಗುವಿನ ಕುಟುಂಬವೂ ವಾಸಿಸುತ್ತಿತ್ತು ಎಂದು ಪೊಲೀಸರು ತಿಳಿಸಿದರು.
ಮಗುವಿನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಲಾಗಿತ್ತು ಎನ್ನಲಾಗಿದೆ. ಬುಧವಾರ ಸಂಜೆ ಮಗುವಿನ ಚೀತ್ಕಾರವನ್ನು ಕೇಳಿದ ಕುಟುಂಬ ಸದಸ್ಯರು ಮಗುವನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದರು.
ಈ ನಡುವೆ, ಮಗು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಹೊರಗೆ ಕುಟುಂಬ ಸದಸ್ಯರು, ನೆರೆಕರೆಯವರು ಮತ್ತು ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ದಿಲ್ಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆರೋಪಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಮಗುವನ್ನು ಎಐಎಂಎಸ್‌ನಂಥ ಒಳ್ಳೆಯ ಆಸ್ಪತ್ರೆಗೆ ಕೂಡಲೇ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
‘‘ಪೊಲೀಸರು ಪ್ರಕರಣವನ್ನು ಮುಚ್ಚಿಡಲು ಯತ್ನಿಸಿದರು ಹಾಗೂ ಮಗುವಿನ ಕುಟುಂಬ ಸದಸ್ಯರಿಗೆ 2000 ರೂ. ಕೊಟ್ಟು ಸುಮ್ಮನಿರಿಸಲು ಪ್ರಯತ್ನಿಸಿದರು. ಅದಕ್ಕೂ ಹೆಚ್ಚಾಗಿ, ಸೂಕ್ತ ಸೌಲಭ್ಯಗಳು ಮತ್ತು ಉಪಕರಣಗಳು ಇಲ್ಲದ ಆಸ್ಪತ್ರೆಯೊಂದಕ್ಕೆ ಮಗುವನ್ನು ಸೇರಿಸಲಾಗಿದೆ’’ ಎಂದು ಆಮ್ ಆದ್ಮಿ ಪಕ್ಷದ ವಕ್ತಾರೆ ಅಶ್ವಥಿ ಮುರಳೀಧರನ್ ಹೇಳಿದರು.
ಮಗು ಕಾಣೆಯಾದ ಬಳಿಕ ಪೊಲೀಸರಿಗೆ ದೂರು ನೀಡಲು ತಾನು ಹೋದರೂ, ಪೊಲೀಸರು ದೂರು ದಾಖಲಿಸಲಿಲ್ಲ ಎಂದು ಮಗುವಿನ ತಂದೆ ಸುದ್ದಿಗಾರರಿಗೆ ಹೇಳಿದರು.
ಆರೋಪಿಯ ತಂದೆ ವಶಕ್ಕೆ
ಮಗುವಿನ ಭೀಕರ ಅತ್ಯಾಚಾರಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

No comments:

Post a Comment