Wednesday, April 17, 2013

ಬಿಜೆಪಿಯ ಹರಕೆಯ ಕುರಿ ಈಶ್ವರಪ್ಪಏಪ್ರಿಲ್ -17-2013

ನಿರೀಕ್ಷೆಯಂತೆ ಈಶ್ವರಪ್ಪ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಹೂಡುವುದಕ್ಕೆ ಕೈಯಲ್ಲಿ ಮುಕ್ಕಾಲು ಕಾಸೂ ಇಲ್ಲದ ಬಿಜೆಪಿಯ ಅತ್ಯಂತ ದೈನೇಸಿ ಸ್ಥಿತಿಗೆ ಕನ್ನಡಿ ಈಶ್ವರಪ್ಪ. ಒಂದು ಸ್ಪಷ್ಟ ಉದ್ದೇಶ, ನಿರೀಕ್ಷೆ, ದೂರದೃಷ್ಟಿ ಇಲ್ಲದೆ ರಾಜಕೀಯ ನಡೆಸಿದ ಈಶ್ವರಪ್ಪ ಮುಸ್ಲಿಮರ ವಿರುದ್ಧ ಬಾಯಿಗೆ ಬಂದುದನ್ನು ವಾಂತಿ ಮಾಡಿಕೊಂಡ ಆರೋಪವನ್ನು ಎದುರಿಸುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣು ಅವರ ಮೇಲೆ ಬಿದ್ದಿದೆ. ತನ್ನ ತಪ್ಪನ್ನು ಸರಿಮಾಡುವ ಭಾಗವಾಗಿ ಅವರು ಚುನಾವಣಾ ಆಯೋಗದ ವಿರುದ್ಧವೇ ಎಗರಿ ಬಿದ್ದಿದ್ದಾರೆ. ಒಟ್ಟಿನಲ್ಲಿ, ಅನಗತ್ಯವಾಗಿ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಈ ವಿವಾದ ಅವರಿಗೆ ರಾಜಕೀಯವಾಗಿ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಎನ್ನುವುದನ್ನು ಈಶ್ವರಪ್ಪನವರೇ ವಿವರಿಸಬೇಕು.ತನ್ನ ಕೆಟ್ಟ ನಾಲಗೆಯ ಮೂಲಕ ಈಶ್ವರಪ್ಪ ನಾಯಕನ ವರ್ಚಸ್ಸನ್ನು ಎಂದೋ ಕಳೆದು ಕೊಂಡಿದ್ದಾರೆ. ತನ್ನದೇ ಸ್ವಂತಿಕೆ, ಆಲೋಚನಾ ಶಕ್ತಿ ಇತ್ಯಾದಿಗಳನ್ನು ಹೊಂದಿಲ್ಲದ  ಇವರನ್ನು ಮುಂದಿಟ್ಟುಕೊಂಡು ಅನಂತಕುಮಾರ್, ಆರೆಸ್ಸೆಸ್ ತಮಗೆ ಬೇಕಾದ ಹಾಗೆ ಆಟವಾಡುತ್ತಿದೆ. ಆದರೆ ಇದೆಲ್ಲವನ್ನು ತಿಳಿಯದ ಈ ಬಕರಾ, ತೋರಣದ ತಳಿರ ಮೇಯುವ ಕುರಿಯಂತೆ ಆಡುತ್ತಿದೆ.
ಒಂದಲ್ಲ ಒಂದು ದಿನ ಆರೆಸ್ಸೆಸ್ ರಾಜಕೀಯಕ್ಕೆ ಬಲಿಯಾಗಲೇ ಬೇಕಾಗಿರುವ ಈಶ್ವರಪ್ಪ, ರಾಜ್ಯದ ರಾಜಕಾರಣಿಗಳಲ್ಲಿ ಅತ್ಯಂತ ಹೆಚ್ಚು ತಮಾಷೆಗೂ, ಅನುಕಂಪಕ್ಕೂ ಅರ್ಹವಾಗುವವರು. ಬಿಜೆಪಿ ತನ್ನಿಂದ ಬಹಳಷ್ಟು ನಿರೀಕ್ಷಿಸುತ್ತಿದೆ ಎಂದೆಲ್ಲ ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಅವರು, ಯಡಿಯೂರಪ್ಪ ಇಲ್ಲದ ಮುಂದಿನ ದಿನಗಳಲ್ಲಿ ತಾನೇ ನಾಯಕನಾಗಿ ಬೆಳೆಯುವ ಅವಕಾಶವಿದೆ ಎಂದು ಭ್ರಮಿಸಿಕೊಂಡಿದ್ದಾರೆ. ಅವರನ್ನು ಮುಂದಕ್ಕೆ ಬಿಟ್ಟುಕೊಂಡು ಅನಂತಕುಮಾರ್, ಸುರೇಶ್ ಕುಮಾರ್ ವೊದಲಾದ ಆರೆಸ್ಸೆಸ್ ನಾಯಕರು ತಮ್ಮ ರಾಜಕೀಯ ತಂತ್ರಗಳನ್ನು ಹೂಡುತ್ತಿದ್ದಾರೆ.
ನಿಜವಾದ ಆರೆಸ್ಸೆಸ್ ಸಿದ್ಧಾಂತಗಳ ತಳಹದಿಯಲ್ಲಿ ಬೆಳೆದವರು ದಿ.ವಿ.ಎಸ್.ಆಚಾರ್ಯ, ಸುರೇಶ್‌ಕುಮಾರ್‌ರಂತಹ ನಾಯಕರು. ಅವರು ಎಂದಿಗೂ ತಮ್ಮ ನಾಲಗೆಯನ್ನು ಯದ್ವಾತದ್ವಾ ಹರಿಸಿದವರಲ್ಲ. ರಾಜಕೀಯದಲ್ಲಿ ಎಲ್ಲವನ್ನು ಶೂದ್ರರಿಂದ ಮಾಡಿಸಿಕೊಂಡು ತಾವು ಮಾತ್ರ ಸಜ್ಜನ ರಾಜಕಾರಣಿಗಳು ಎಂದು ಹೆಸರು ಪಡೆದುಕೊಂಡರು. ಸುರೇಶ್ ಕುಮಾರ್‌ರನ್ನೇ ನೋಡಿ. ಹಗರಣವೊಂದರಲ್ಲಿ ಭಾಗಿಯಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾದರೂ ಆರೆಸ್ಸೆಸ್ ಪತ್ರಕರ್ತರು ಅವರನ್ನು ಸಜ್ಜನ, ಹುತಾತ್ಮ ಎಂಬಿತ್ಯಾಗಿ ಬಿಂಬಿಸಿದರು.
ಆದರೆ ಈ ಸೌಲಭ್ಯ ಯಡಿ ಯೂರಪ್ಪ ಸೇರಿದಂತೆ ಉಳಿದ ಶೂದ್ರರಿಗೆ ಸಿಗಲಿಲ್ಲ. ನಿಜವಾದ ಮೇಲ್ವರ್ಣೀಯ ಆರೆಸ್ಸೆಸ್ಸಿಗರು ಯಾವತ್ತೂ ತಮ್ಮ ವರ್ಚಸ್ಸನ್ನು ಕೆಡಿಸಿಕೊಳ್ಳಲಿಲ್ಲ. ಬದುಕಿನುದ್ದಕ್ಕೂ ‘ಸಜ್ಜನ’ ಎಂಬ ಮುಖವಾಡದೊಳಗೆ ರಾಜಕೀಯ ನಡೆಸಿದರು. ಆದರೆ ಈಶ್ವರಪ್ಪನವರಂತಹ ಶೂದ್ರ ಕುರಿಗಳು ಸದ್ದು ಮಾಡುತ್ತಾ ತಮ್ಮನ್ನು ತಾವು ಆರೆಸ್ಸೆಸ್ಸಿಗರೆಂದು ಬಿಂಬಿಸಿಕೊಳ್ಳಲು ಯತ್ನಿಸಿದವು. ಆದರೆ ಯಾವತ್ತೂ ಆರೆಸ್ಸೆಸ್ ಇವರನ್ನು ಪೂರ್ಣ ಪ್ರಮಾಣವಾಗಿ ಒಪ್ಪಿಕೊಂಡಿಲ್ಲ. ತಮ್ಮ ಕಾರ್ಯಸಾಧನೆಗಾಗಿ ಇವರನ್ನು ಬಳಸಿಕೊಂಡು ಬರುತ್ತಿವೆ.
ಇದನ್ನರಿಯದ ಈಶ್ವರಪ್ಪ, ಸಿಟಿ. ರವಿ, ಸುನೀಲ್ ಕುಮಾರ್‌ರಂತಹ ನಾಯಕರು ಮೈತುಂಬ ಕ್ರಿಮಿನಲ್ ಕೇಸುಗಳನ್ನು ಆವಾಹಿಸಿ ಕೊಂಡು, ಕಂಡಕಂಡಲ್ಲಿ ಕ್ರಿಮಿನಲ್‌ಗಳಂತೆ ‘ನಾಲಗೆ ಸೀಳುತ್ತೇವೆ, ತಲೆ ಕಡಿಯುತ್ತೇವೆ’ ಎಂದು ಆಡುತ್ತಾ ಆರೆಸ್ಸೆಸ್ಸಿಗರನ್ನು ಮೆಚ್ಚಿಸಲು ಪ್ರಯತ್ನಿಸಿದರು. ಪ್ರತಿಫಲ ಏನು ಸಿಕ್ಕಿತು ಎನ್ನುವುದು ಗೊತ್ತೇ ಇದೆ. ಕೆಲವು ತಿಂಗಳ ಸಚಿವ ಸ್ಥಾನಕ್ಕಾಗಿ ಸಿ.ಟಿ.ರವಿ ಏನೇನೆಲ್ಲ ಒದ್ದಾಡಬೇಕಾಯಿತು. ಸುನೀಲ್‌ಕುಮಾರ್ ಬಳಸಿ ಎಸೆದ ಬಾಳೆ ಎಲೆಯಂತಿದ್ದಾರೆ.  ಸದಾನಂದ ಗೌಡರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಎಂಬ ನಿಷ್ಪ್ರಯೋಜಕ ಗೌರವವನ್ನು ನೀಡಿ ಬಾಯಿ ಮುಚ್ಚಿಸಲಾಗಿದೆ.
ಈ ಶೂದ್ರ ನಾಯಕರೆಲ್ಲರೂ ಇಂದು ಸಮಾಜದಲ್ಲಿ ಕ್ರಿಮಿನಲ್‌ಗಳೆಂಬಂತೆ ಬಿಂಬಿತವಾಗುತ್ತಿದ್ದರೆ,  ಆರೆಸ್ಸೆಸ್‌ನ ನಿಜವಾದ ನಾಯಕರಾದ ಸುರೇಶ್‌ಕುಮಾರ್, ಅನಂತಕುಮಾರ್‌ರಂತಹವರು ಸಜ್ಜನರಾಗಿ ಮೆರೆಯುತ್ತಿದ್ದಾರೆ.ಈವರೆಗೂ ಬಿಜೆಪಿಯೊಳಗೆ ನಡೆಯುತ್ತಿದ್ದುದೇನು ಎನ್ನುವುದು ಈಗ ಬಯಲಾಗಿದೆ. ಅನಂತಕುಮಾರ್‌ರನ್ನು ಮುಂದಿನ ಮುಖ್ಯಮಂತ್ರಿ ಮಾಡುವುದ ಕ್ಕಾಗಿಯೇ ಯಡಿಯೂರಪ್ಪರನ್ನು ಬಿಜೆಪಿ ಯಿಂದ ಹೊರಹಾಕುವ ತಂತ್ರವನ್ನು ಮಾಡಿ ಅದರಲ್ಲಿ ಆರೆಸ್ಸೆಸ್ ಯಶಸ್ವಿಯಾಗಿದೆ.
ಇತ್ತ ಸುರೇಶ್ ಕುಮಾರ್  “ಅನಂತಕುಮಾರ್ ಮುಖ್ಯಮಂತ್ರಿಯಾಗುವುದಾದರೆ ನಾನದನ್ನು ಬೆಂಬಲಿಸುತ್ತೇನೆ” ಎಂಬ ಸಜ್ಜನ ಮಾತುಗಳ ನ್ನಾಡುತ್ತಿದ್ದಾರೆ. ಈಶ್ವರಪ್ಪನವರೆಂಬ ಬಾಯಿ ಬಡುಕರು ಇದನ್ನು ಅರ್ಥಮಾಡದೆ, ಏನೋ ಮಾಡಲು ಹೋಗಿ, ಇನ್ನೇನೇನೋ ಆಗುತ್ತಿದ್ದಾರೆ.ಈಶ್ವರಪ್ಪನವರನ್ನು ಯಥಾವತ್ ಹೋಲುವ ಮಾಜಿ ಬಿಜೆಪಿ ನಾಯಕಿ ಉಮಾಭಾರತಿಯವರನ್ನು ನಾವು ಈ ಸಂದರ್ಭದಲ್ಲಿ ನೆನೆದು ಕೊಳ್ಳಬೇಕಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನ ಹಿಂದುತ್ವಕ್ಕಾಗಿ ಈ ಶೂದ್ರ ಹೆಣ್ಣು ಮಗಳು ಬೀದಿ ಬೀದಿಯಲ್ಲಿ ನಿಂತು ಕ್ರಿಮಿನಲ್‌ಗಳಂತೆ ಭಾಷಣ ಮಾಡತೊಡಗಿದರು.
ಮೈತುಂಬಾ ಕೇಸುಗಳನ್ನು ಜಡಿದುಕೊಂಡರು. ಅದಕ್ಕೆ ಸಿಕ್ಕಿದ ಫಲ ಏನು ಎನ್ನುವುದನ್ನು ನಾವು ಕಂಡಿದ್ದೇವೆ. ಉಮಾ ಭಾರತಿಯವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೆಸೆಯ ಲಾಯಿತು. ಬಿಜೆಪಿಯಿಂದಲೂ ಹೊರ ನಡೆಯುವ ಸನ್ನಿವೇಶ ನಿರ್ಮಾಣವಾಯಿತು. ಬಳಿಕ ಮರಳಿ ಬಿಜೆಪಿಗೆ ಆಗಮಿಸಿದ ಅವರಿಗೆ ಉತ್ತರ ಪ್ರದೇಶದ ಚುನಾವಣಾ ನೇತೃತ್ವವನ್ನು ವಹಿಸಿ, ಪರೋಕ್ಷವಾಗಿ ಮುಗಿಸಿ ಬಿಡಲಾಯಿತು.
ಇಂದು ರಾಜಕೀಯದಲ್ಲಿ ಹೇಳ ಹೆಸರಿಲ್ಲದಂತಾಗಿದ್ದಾರೆ ಉಮಾಭಾರತಿ. ಇದೇ ಸಂದರ್ಭದಲ್ಲಿ ಸುಶ್ಮಾಸ್ವರಾಜ್ ಎನ್ನುವ ಬ್ರಾಹ್ಮಣ ಹೆಣ್ಣು ಮಗಳು, ದಿಲ್ಲಿಯ ವರಿಷ್ಠ ಸ್ಥಾನದಲ್ಲಿ ಮೆರೆಯುತ್ತಿದ್ದಾರೆ. ಬಂಗಾರು ಲಕ್ಷ್ಮಣ್‌ರನ್ನು ಹೇಗೆ ಬಿಜೆಪಿ ಹೊಸಕಿ ಹಾಕಿತು ಎನ್ನುವ ಉದಾಹರಣೆಯೂ ನಮ್ಮ ಮುಂದಿದೆ. ಇಷ್ಟೆಲ್ಲ ಉದಾಹರಣೆಗಳ ನಡುವೆಯೂ ಈಶ್ವರಪ್ಪ ಬಿಜೆಪಿ ಹೆಣೆದ ಬಲೆಯ ಹುಳವಾಗಿ ರಾರಾಜಿಸುತ್ತಿರು ವುದು ಶೂದ್ರರ ದುರಂತವೇ ಸರಿ. 

No comments:

Post a Comment