Thursday, April 4, 2013

ಮಂಗಳೂರಿನಿಂದ ದಮಾಮ್‌ಗೆ ಹಾರಿದ ಇಂಡಿಯಾ ಎಕ್ಸ್‌ಪ್ರೆಸ್


ಮಂಗಳೂರಿನಿಂದ ದಮಾಮ್‌ಗೆ ಹಾರಿದ ಇಂಡಿಯಾ ಎಕ್ಸ್‌ಪ್ರೆಸ್


ಗುರುವಾರ - ಏಪ್ರಿಲ್ -04-2013

♦ಪ್ರಥಮ ನೇರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ
ಮಂಗಳೂರು, ಎ.3: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಮಾಮ್‌ಗೆ ಪ್ರಥಮ ವಿಮಾನವಿಂದು ಹಾರಾಟ ಆರಂಭಿಸುವ ಮೂಲಕ ಸೌದಿ ಅರೇಬಿಯಾದಲ್ಲಿರುವ ಕರಾವಳಿಯ ಅನಿವಾಸಿ ಭಾರತೀಯರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಕರಾವಳಿ ಕರ್ನಾಟಕ ಹಾಗೂ ಸೌದಿ ಅರೇಬಿಯಾವನ್ನು ನೇರವಾಗಿ ಬೆಸೆಯುವ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ನೇರ ವಿಮಾನದ ಪ್ರಥಮ ಹಾರಾಟವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಯಾಣಿಕರು ಸಂತಸದಿಂದ ಸ್ವಾಗತಿಸಿದರು.
ಈ ಪ್ರಥಮ ವಿಮಾನದ ಯಾನದಲ್ಲಿ 109 ಕಲ್ಲಿಕೋಟೆಯ ಹಾಗೂ 56 ಮಂಗಳೂರಿನ ಪ್ರಯಾಣಿಕರು ತೆರಳಿ ದ್ದಾರೆ. 2 ತಾಣಗಳ ನಡುವೆ ವಿಮಾನ ಯಾನದ ಅವಧಿ ಸುಮಾರು 4:30 ಗಂಟೆಗಳಾಗಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಥಮ ನೇರ ವಿಮಾನ ಯಾನಕ್ಕೆ ಸಂಬಂಧಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕೃತ ಕಾರ್ಯಕ್ರಮ ಆಯೋಜಿಸಲಾಗಿರಲಿಲ್ಲ. ಆದರೂ ಸಂಜೆ 3 ಗಂಟೆಯ ಸುಮಾರಿಗೆ ಪ್ರಯಾಣಿಕರ ಪ್ರವೇಶ ದಾಖಲೆ ಮಾಡುವ ಔಪಚಾರಿಕ ಕಾರ್ಯಕ್ರಮದ ಮೂಲಕ ನೇರ ವಿಮಾನಕ್ಕೆ ಸ್ವಾಗತ ಕೋರಲಾಯಿತು.
ಈ ಸಂದರ್ಭ ಉಪಸ್ಥಿತರಿದ್ದ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಯು.ಟಿ.ಖಾದರ್ ಹಾಗೂ ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಂನ ಅಧ್ಯಕ್ಷ ಮುಹಮ್ಮದ್ ಆಸಿಫ್, ಅನಿವಾಸಿ ಉದ್ಯಮಿ ಝಕರಿಯಾ ಬಜ್ಪೆ ಕುಟುಂಬ ಸಹಿತ ಪ್ರಥಮ ವಿಮಾನದಲ್ಲಿ ದಮಾಮ್‌ಗೆ ಪ್ರಯಾಣಿಸಿದರು. ಕಲ್ಲಿಕೋಟೆಯಿಂದ ಇಂದು ಅಪರಾಹ್ನ 3 ಗಂಟೆಯ ಸುಮಾರಿಗೆ 109 ಪ್ರಯಾಣಿಕ ರೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ 4 ಗಂಟೆಗೆ ಬಂದಿಳಿದ ಐಎಕ್ಸ್ 385 ವಿಮಾನವು ಮಂಗಳೂರಿನ 56 ಪ್ರಯಾಣಿಕರನ್ನು ಹೊತ್ತು ಸಂಜೆ 5ರ ವೇಳೆಗೆ ದಮಾಮ್ ಸಮೀಪದ ಧಹರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿತು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಉಪ ಮಹಾ ಪ್ರಬಂಧಕ ಮೆಲ್ವಿನ್ ಡಿಸಿಲ್ವ ಪ್ರಥಮ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೋರ್ಡಿಂಗ್ ಕಾರ್ಡ್‌ಗಳನ್ನು ಹಸ್ತಾಂತರಿಸುವ ಮೂಲಕ ಪ್ರಥಮ ವಿಮಾನ ಯಾನಕ್ಕೆ ಸ್ವಾಗತ ಕೋರಿದರು. ಮಂಗಳೂರು-ದಮಾಮ್ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಾರದಲ್ಲಿ 2 ದಿನ (ಬುಧವಾರ ಮತ್ತು ಶನಿವಾರ) ಹಾರಾಟ ನಡೆಸಲಿದೆ. ಮರಳಿ ದಮಾನ್‌ನಿಂದ ಮಂಗಳೂರಿಗೆ ಗುರುವಾರ ಮತ್ತು ರವಿವಾರ ಯಾನವಿರುತ್ತದೆ.
ಈ ಸಂದರ್ಭ ‘ವಾರ್ತಾಭಾರತಿ’ ಜೊತೆ ಪ್ರತಿಕ್ರಿಯಿಸಿದ ಅವರು, ‘ದಮಾಮ್ ನಡುವೆ ನೇರ ವಿಮಾನದ ಬೇಡಿಕೆ ಕೊನೆಗೂ ಈಡೇರಿ ದಂತಾಗಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಒಂದು ತಿಂಗಳ ಅವಧಿಗೆ ವಿಮಾನ ಯಾನ ಬುಕ್ ಆಗಿದೆ’’ ಎಂದರು. ‘‘2006 ಅಕ್ಟೋಬರ್ 3ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರಿನಿಂದ ದುಬೈಗೆ ವಾರದಲ್ಲಿ 3ರಂತೆ ವಿಮಾನ ಯಾನ ಆರಂಭಿಸಿದೆ. ಪ್ರಸ್ತುತ ದುಬೈ, ಕುವೈತ್, ಬಹರೈನ್, ದೋಹ, ಅಬುಧಾಬಿ, ಮಸ್ಕತ್ ಹಾಗೂ ಇದೀಗ ದಮಾಮ್ ಸೇರಿದಂತೆ ಒಟ್ಟು 24 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 13 ದೇಶೀಯ ವಿಮಾನಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಡಿ ಕಾರ್ಯನಿರ್ವಹಿಸುತ್ತಿವೆ’’ ಎಂದು ತಿಳಿಸಿದರು.
ಪ್ರಥಮ ವಿಮಾನದಲ್ಲಿ ಪ್ರಯಾಣಿಕನಾಗಿ ಸಾಗುತ್ತಿರುವ ಯು.ಟಿ.ಖಾದರ್ ಮಾಧ್ಯಮದ ವರ ಜತೆ ಪ್ರತಿಕ್ರಿಯಿಸುತ್ತಾ, ಕರಾವಳಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಈ ನೇರ ವಿಮಾನ ಯಾನ ಕರಾವಳಿ ಭಾಗದ ಪ್ರಯಾಣಿಕ ರಿಗಷ್ಟೇ ಅಲ್ಲ, ಕೇರಳ ಹಾಗೂ ಕಾರವಾರದಿಂದ ತೆರಳುವ ಪ್ರಯಾಣಿಕರಿಗೂ ಪ್ರಯೋಜನವಾ ಗಲಿದೆ ಎಂದರು.
 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆ್ಯನ್ಸ್‌ಬರ್ಟ್ ಡಿಸೋಜ ಈ ಸಂದರ್ಭ ಉಪಸ್ಥಿತರಿದ್ದರು.

‘ಆರಾಮದಾಯಕವಾಗಲಿದೆ ಪಯಣ...’
-‘‘ದಮಾಮ್‌ಗೆ ಇದು ನನ್ನ ದ್ವಿತೀಯ ಪ್ರಯಾಣ. ನೇರ ವಿಮಾನ ಯಾನ ಬಹಳಷ್ಟು ಸಮಯ ವನ್ನು ಉಳಿತಾಯ ಮಾಡುತ್ತದೆ ಹಾಗೂ ಆರಾಮವಾಗಿ ನಮ್ಮ ಪಯಣ ನಡೆಸಲು ಸಹಕಾರಿಯಾ ಗಲಿದೆ ಎಂಬುದು ನನ್ನ ಭಾವನೆ’’ ಎನ್ನುತ್ತಾರೆ ತಾಯಿ ಹಾಗೂ ಸಹೋದರ- ಸಹೋದರಿಯರ ಜೊತೆ ದಮಾಮ್‌ಗೆ ತೆರಳುವ ಖುಷಿಯಲ್ಲಿದ್ದ ಪಿಯುಸಿ ವಿದ್ಯಾರ್ಥಿ ಮಂಜೇಶ್ವರದ ಅದ್ನಾನ್.
-‘‘ದಮಾಮ್‌ಗೆ ನನ್ನದಿದು ಆರನೆ ಪ್ರಯಾಣ. ನನ್ನ ಪತಿ ಅಮೀರ್ ಅಬ್ಬಾಸ್ ದಮಾಮ್‌ನಲ್ಲಿ ನೆಲೆಸಿದ್ದಾರೆ. ಇದೀಗ ನನ್ನ ನಾಲ್ಕು ಮಕ್ಕಳೊಂದಿಗೆ ರಜಾ ದಿನಗಳನ್ನು ಕಳೆಯಲು ದಮಾಮ್‌ಗೆ ತೆರಳುತ್ತಿದ್ದೇವೆ. ದಮಾಮ್‌ಗೆ ನೇರ ವಿಮಾನ ಯಾನದಿಂದ ತುಂಬಾ ಖುಷಿಯಾಗಿದೆ’’ ಎನ್ನುತ್ತಾರೆ ಮಂಜೇಶ್ವರದ ಕುಂಜತ್ತೂರಿನ ನಿವಾಸಿ ತಾಹಿರಾ.
-‘‘ಸೌದಿಗೆ ನನ್ನ ಪ್ರಥಮ ಭೇಟಿಯು ಪ್ರಥಮ ನೇರ ವಿಮಾನದ ಮೂಲಕ ಆಗುತ್ತಿರುವುದಕ್ಕೆ ಸಂತಸವಾಗುತ್ತಿದೆ’’ ಎನ್ನುತ್ತಾರೆ ಸೌದಿಗೆ ಮೊದಲ ಬಾರಿ ತೆರಳುತ್ತಿರುವ ಪ್ರಕಾಶ್ ಪಿರೇರ.
-‘‘ಪ್ರತಿ ಬಾರಿ ದಮಾಮ್‌ಗೆ ಪ್ರಯಾಣಿಸಬೇಕಾದರೆ ನಾವು ಬಹರೈನ್, ಮುಂಬೈ ಅಥವಾ ದುಬೈಗೆ ತೆರಳಬೇಕಾಗಿತ್ತು. ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನವನ್ನು ನಾವು ಏರಬೇಕಾಗಿತ್ತು. ಇದೀಗ ಮಂಗಳೂರಿನಿಂದ ನೇರ ವಿಮಾನ ಯಾನದಿಂದ ತುಂಬಾ ಖುಷಿಯಾಗಿದೆ’’ ಎಂದು ಕಳೆದ ಸುಮಾರು 13 ವರ್ಷಗಳಿಂದ ಮಕ್ಕಳು ಹಾಗೂ ಪತಿಯ ಜೊತೆ ದಮಾಮ್‌ನಲ್ಲಿ ನೆಲೆಸಿರುವ ಲವೀನಾ ಡಿಸೋಜ ಅಭಿಪ್ರಾಯಿಸಿದ್ದಾರೆ

No comments:

Post a Comment