Wednesday, April 24, 2013

ಉಳ್ಳಾಲ ಮಂಗಳೂರಾದರೂ ಬಿಡಲಿಲ್ಲ ಯು.ಟಿ. ಕುಟುಂಬದ ನಂಟು


ಉಳ್ಳಾಲ ಮಂಗಳೂರಾದರೂ ಬಿಡಲಿಲ್ಲ ಯು.ಟಿ. ಕುಟುಂಬದ ನಂಟು

 ಮಂಗಳೂರು: ಮಂಗಳೂರು ಕ್ಷೇತ್ರವಾಗಿ ಹೆಸರಿಸಲ್ಪಟ್ಟಿದ್ದರೂ ಉಳ್ಳಾಲವೆಂದೇ ಜನಪ್ರಿಯವಾಗಿರುವ ಕ್ಷೇತ್ರವನ್ನು ದಿ.ಯು.ಟಿ.ಫರೀದ್ ಮತ್ತು ಅವರ ಪುತ್ರ ಹಾಲಿ ಶಾಸಕ ಯು.ಟಿ.ಖಾದರ್ ಒಟ್ಟು 24 ವರ್ಷಗಳ ಕಾಲ ಹಾಗೂ 1999ರಿಂದ ಸತತ 14 ವರ್ಷಗಳ ಕಾಲ ಅಪ್ಪ-ಮಗ ಪ್ರತಿನಿಧಿಸಿದ್ದಾರೆ.
ಮುಸ್ಲಿಮರ ಮತಗಳೇ ನಿರ್ಣಾಯಕವಾಗಿರುವ ಈ ಕ್ಷೇತ್ರದಿಂದ 1972ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ನಿಂದ ದಿ.ಯು.ಟಿ.ಫರೀದ್ ವಿಧಾನಸಭೆ ಪ್ರವೇಶಿಸಿದರು. ಮತ್ತೆ ಮೂರು ಬಾರಿ ಇದೇ ಕ್ಷೇತ್ರದಿಂದ ಫರೀದ್ ಶಾಸಕರಾಗಿ ಆಯ್ಕೆಯಾದರು. 2004ರಲ್ಲಿ ಶಾಸಕರಾಗಿದ್ದಲೇ ಯು.ಟಿ. ಫರೀದ್ ನಿಧನರಾದರು. ತಂದೆಯ ಅವಧಿಯಲ್ಲೇ ಕ್ಷೇತ್ರದ ಮತದಾರರೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದ ಹಾಗೂ ಜನಾರ್ದನ ಪೂಜಾರಿಯವರ ಗರಡಿಯಲ್ಲಿ ಪಳಗಿದ ಯುವನಾಯಕ ಯು.ಟಿ.ಖಾದರ್ ಚುನಾವಣಾ ಅಖಾಡಕ್ಕಿಳಿದು ಮೊದಲ ಯತ್ನದಲ್ಲೇ ಶಾಸಕರಾದರು. ಹಿರಿಯ ನಾಯಕರಾದ ಮೊಯ್ಲಿ, ಆಸ್ಕರ್, ರಮಾನಾಥ ರೈ ಮತ್ತಿತರರ ಸಂಪೂರ್ಣ ಪ್ರೋತ್ಸಾಹ ಖಾದರ್‌ಗೆ ಸಿಕ್ಕಿದೆ. ಮತದಾರರಿಗೆ ಯಾವುದೇ ಸಮಯದಲ್ಲಿ ಸುಲಭವಾಗಿ ಕೈಗೆ ಸಿಗುವ ಶಾಸಕ ಎಂಬುದು ಖಾದರ್‌ರ ಹಿರಿಮೆ. ಹಾಗಾಗಿ ಮತ್ತೆ 2008ರಲ್ಲೂ ಖಾದರ್‌ರನ್ನು ಉಳ್ಳಾಲದ ಮತದಾರರು ಬೆಂಬಲಿಸಿ ಗೆಲ್ಲಿಸಿದರು. ಇದೀಗ ಹ್ಯಾಟ್ರಿಕ್ ವಿಜಯದ ಗುರಿಯೊಂದಿಗೆ ಮತ್ತೆ ಖಾದರ್ ಕಣದಲ್ಲಿದ್ದಾರೆ. ಪ್ರಮುಖ ಎದುರಾಳಿಗಳಾಗಿ ಈ ಬಾರಿ ಬಿಜೆಪಿಯಿಂದ ಚಂದ್ರಹಾಸ್ ಉಳ್ಳಾಲ್ ಇದ್ದಾರೆ. ಜೆಡಿಎಸ್‌ನಿಂದ ಅಝೀಝ್ ಮಲಾರ್ ಸ್ಪರ್ಧಿಸುತ್ತಿದ್ದಾರೆ. ಸಿಪಿಎಂ, ಕೆಜೆಪಿ, ಎಸ್‌ಡಿಪಿಐ, ಜೆಡಿಯು ಕೂಡ ಇಲ್ಲಿಂದ ಸ್ಪರ್ಧೆಗಿಳಿದಿವೆ. ಜೊತೆಗೆ 6 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
1957ರಿಂದ 2008ರವರೆಗಿನ 13 ವಿಧಾನಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ 10 ಬಾರಿ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಆಯ್ಕೆಯಾಗಿರುವುದು ಈ ಕ್ಷೇತ್ರದ ವಿಶೇಷತೆ. ಅದರಲ್ಲೂ ಈ ಕ್ಷೇತ್ರದಿಂದ 1972ರಿಂದ ಆರಂಭಿಸಿ ನಾಲ್ಕು ಬಾರಿ ದಿ. ಯು.ಟಿ.ಫರೀದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, ಎರಡು ಬಾರಿ ಮಗ ಯು.ಟಿ.ಖಾದರ್ ಈ ಕ್ಷೇತ್ರದ ಶಾಸಕರಾಗಿರುವುದು ದಾಖಲೆ. 1957ರಲ್ಲಿ ಮಂಗಳೂರು-2 ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಕ್ಷೇತ್ರ 1978ರಲ್ಲಿ ಉಳ್ಳಾಲ ಕ್ಷೇತ್ರವಾಗಿ, 2008ರಲ್ಲಿ ಮಂಗಳೂರು ಕ್ಷೇತ್ರವಾಗಿ ಹೆಸರಿಸಲ್ಪಟ್ಟಿದೆ. ಅಂದ ಹಾಗೆ, ಈ ಕ್ಷೇತ್ರದಲ್ಲಿ 1962ರಲ್ಲಿ ಸಿಪಿಐನ ಎ. ಕೃಷ್ಣ ಶೆಟ್ಟಿ, 1983ರಲ್ಲಿ ಸಿಪಿಎಂನ ಪಿ. ರಾಮಚಂದ್ರ ರಾವ್ ಹಾಗೂ 1994ರಲ್ಲಿ ಬಿಜೆಪಿಯ ಕೆ. ಜಯರಾಮ ಶೆಟ್ಟಿ ಜಯಗಳಿಸಿದ್ದಾರೆ. 
ಕೆಲಸ ಮಾಡಿದವರು ಆಯ್ಕೆಯಾಗುತ್ತಾರೆ: ಡಾ. ಉದಯ ಬಾರ್ಕೂರು
ವಂಶಾಡಳಿತದ ಅಪವಾದ ರಾಷ್ಟ್ರ ರಾಜಕೀಯ ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲೂ ಸುದ್ದಿ ಮಾಡುತ್ತಿದೆ. ಆದರೆ ಮಂಗಳೂರು ಕ್ಷೇತ್ರವನ್ನು ನಾನು ತೀರಾ ಹತ್ತಿರದಿಂದ ಕಂಡವನಾದ್ದರಿಂದ ಈ ವಂಶಾಡಳಿತದ ಮಾತು ಅಪ್ರಸ್ತುತ ಅಂತ ನನಗನ್ನಿಸುತ್ತೆ. ಕ್ಷೇತ್ರದ ಮತ ದಾರರು ಬುದ್ಧಿವಂತರು. ಹಾಗಾಗಿ ಕ್ಷೇತ್ರಕ್ಕೆ ಏನು ದಕ್ಕಿದೆ? ಏನು ಅಭಿವೃದ್ಧಿ ಆಗಿದೆ? ಮತದಾರರಿಗೆ ಯಾವ ರೀತಿ ಯಲ್ಲಿ ಸ್ಪಂದಿಸುತ್ತಾರೆ? ಎಂಬುದು ಮಾತ್ರ ಅಂತಿಮವಾಗಿ ಮುಖ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲ ಯದ ಚರಿತ್ರೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಉದಯ ಬಾರ್ಕೂರು ಅಭಿಪ್ರಾಯಿಸುತ್ತಾರೆ. ಕಳೆದ ಅವಧಿಯಲ್ಲಿ ನಾನು ಕಂಡಂತೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಇದಕ್ಕೆ ಈಗಿನ ಶಾಸಕ ಯು.ಟಿ. ಖಾದರ್‌ರವರು ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ದೊರಕಿದ ಅನುದಾನವನ್ನು ಜವಾಬ್ದಾರಿಯುತವಾಗಿ ಬಳಸಿ ಕೊಂಡಿರುವುದು ಇಲ್ಲಿನ ರಸ್ತೆಗಳು, ಅಭಿವೃದ್ಧಿ ಕೆಲಸಗಳನ್ನು ಕಂಡಾಗ ತಿಳಿದುಬರುತ್ತದೆ. ನಾನು ಕಂಡಂತೆ, ಕ್ಷೇತ್ರದ ಸುತ್ತ ದಿನನಿತ್ಯ ಸಂಚರಿಸುವ ಖಾದರ್ ಜನರ ನಡುವೆಯೇ ಇದ್ದುಕೊಂಡು ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕಾರಣ ಅವರನ್ನು ಮತದಾರರು ಮರು ಆಯ್ಕೆ ಮಾಡಿದ್ದಾರೆಯೇ ಹೊರತು ಅದನ್ನು ಖಂಡಿತಾ ವಂಶಾಡಳಿತ ಎಂದು ಹೇಳಲಾಗದು. ಮಾತ್ರವಲ್ಲ, ತಂದೆ ದಿ. ಯು.ಟಿ. ಫರೀದ್‌ರ ಕಾಲದಲ್ಲಿ ಕೈಗೆತ್ತಿಕೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಕೂಡಾ ಮುಂದುವರಿಸುವಲ್ಲಿ ಆಸಕ್ತಿ ವಹಿಸಿದ್ದರು. ಹಾಗಾಗಿಯೇ, ತಂದೆಯ ಮರಣ ಸಂದರ್ಭ ಅವರು ಅನುಕಂಪದ ಅಲೆಯಲ್ಲಿ ಗೆದ್ದು ಬಂದಿದ್ದರೆಂಬ ಮಾತುಗಳು ಕೇಳಿತ್ತಾದರೂ, ಮತ್ತೆ ಒಂದು ವರ್ಷದ ಆಡಳಿತದಲ್ಲಿನ ಅವರ ಕಾರ್ಯ ವೈಖರಿಯನ್ನು ಕಂಡ ಮತದರಾರರು ಅವರನ್ನು ಗೆಲ್ಲಿಸಿದ್ದಾರೆ ಎನ್ನಬಹುದು. ಸರಕಾರದಿಂದ ಕ್ಷೇತ್ರಗಳಿಗೆ ಲಭಿಸುವ ಅನುದಾನ ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ಜಾಸ್ತಿ. ಆದರೆ ಆ ಕಾಲದ ಪರಿಸ್ಥಿತಿ, ಸರಕಾರದ ಬಳಿ ಇದ್ದ ಜನರ ತೆರಿಗೆ ಹಣದ ಪ್ರಮಾಣವನ್ನೆಲ್ಲಾ ಗಮನಿಸಬೇಕಾಗುತ್ತದೆ. ಹಾಗಿದ್ದರೂ ಸರಕಾರದಿಂದ ಎಷ್ಟೇ ಅನುದಾನ ದೊರಕಿದರೂ ಅದನ್ನು ಸಮರ್ಥವಾಗಿ, ಜವಾಬ್ದಾರಿಯುತ ವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುವ ಹೊಣೆಗಾರಿಯೂ ಅಭ್ಯರ್ಥಿ ಗಳಿಗೆ ಅಗತ್ಯವಾಗಿರುತ್ತದೆ ಎನ್ನುತ್ತಾರೆ ಉದಯ ಬಾರ್ಕೂರು. 
ಜನಸಾಮಾನ್ಯರ ನಡುವಿನ ರಾಜಕಾರಣಿ: ಅಬ್ದುರ್ರಹ್ಮಾನ್
ಯು.ಟಿ.ಖಾದರ್ ಜನಸಾಮಾನ್ಯರ ನಡುವಿನ ತಳಮಟ್ಟದ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸೇರಿದಂತೆ ಇಲ್ಲಿನ ಇತರ ಧರ್ಮ, ಸಮುದಾಯದ ಜನರ ನಡುವೆ ಸೌಹಾರ್ದ ಯುತವಾಗಿ ಜೀವನಕ್ಕೆ ಪೂರಕವಾದ ವಾತಾವರಣ ಕಲ್ಪಿಸುವಲ್ಲಿ ಖಾದರ್ ಸಹಕರಿಸಿದ್ದಾರೆ ಎನ್ನುತ್ತಾರೆ ಮಂಗಳ ಗ್ರಾಮೀಣ ಯುವಕ ಸಂಘ ಹಾಗೂ ಕಿದ್ಮತುಲ್ ಇಸ್ಲಾಂ ಅಸೋಸಿಯೇಶನ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ.
ರಾಷ್ಟ್ರೀಯ ಪಕ್ಷವೊಂದರಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬಹಳಷ್ಟಿರುತ್ತದೆ. ಪಕ್ಷಕ್ಕೋಸ್ಕರ ಮುತುವರ್ಜಿ ಯಿಂದ ಕೆಲಸ ಮಾಡಿದವರಿಗೆ ಪಕ್ಷದವರು ಟಿಕೆಟ್ ನೀಡುತ್ತಾರೆ. ತನಗೆ ನೀಡಿದ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ, ಜನರ ಅನುರಾಗವನ್ನು ಹೊಂದಿರುವ ಜನನಾಯಕನನ್ನು ಮತದಾರರು ಚುನಾಯಿಸುತ್ತಾರೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ 6 ಮಂದಿ ಮುಸ್ಲಿಂ ಅಭ್ಯರ್ಥಿ ಗಳೇ ಖಾದರ್ ಅವರ ಜೊತೆ ಪೈಪೋಟಿಗೆ ಇಳಿದಿದ್ದರೂ ಅವರ ಗೆಲುವಿಗೆ ಯಾವುದೇ ರೀತಿಯ ಬಾಧಕವಾಗದು. ಕಳೆದ ಎರಡು ಅವಧಿಯಲ್ಲೂ ಖಾದರ್‌ರವರು ಕ್ಷೇತ್ರದಲ್ಲಿ ಯಾವುದೇ ಸಣ್ಣ ಪುಟ್ಟ ಕಲಹಗಳು ಏರ್ಪಟ್ಟಾಗಲೂ ಎಲ್ಲಾ ಜಾತಿ, ಮತ, ಧರ್ಮದವರಿಗೆ ಪೂರಕವಾಗಿ ಸೌಹಾರ್ದ ಯುತವಾಗಿ ಸಮಸ್ಯೆ ಬಗೆಹರಿಸಿ ಕ್ಷೇತ್ರದಲ್ಲಿ ಶಾಂತಿಯ ವಾತಾವರಣವನ್ನು ಕಲ್ಪಿಸಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ ಖಾದರ್ ವ್ಯಕ್ತಿತ್ವವೇ ಅವರಿಗೆ ಪೂರಕವಾಗಲಿದೆ ಎಂದು ಅಬ್ದುರ್ರಹ್ಮಾನ್ ಹೇಳುತ್ತಾರೆ. 2007ರ ಚುನಾವಣೆಯಲ್ಲಿ ಯು.ಟಿ.ಖಾದರ್ ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಚಂದ್ರಶೇಖರ ಉಚ್ಚಿಲ ವಿರುದ್ಧ 8032 ಮತಗಳ ಅಂತರದಿಂದ ಜಯಗಳಿಸಿದ್ದರೆ, 2008ರ ಚುನಾವಣೆಯಲ್ಲಿ, ಪದ್ಮನಾಭ ಕೊಟ್ಟಾರಿ (ಪ್ರಸ್ತುತ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ವಿಟ್ಲ ಕ್ಷೇತ್ರದ ಮಾಜಿ ಶಾಸಕ) ವಿರುದ್ಧದ ಜಯದ ಅಂತರ 7049ಕ್ಕೆ ಇಳಿಕೆ ಯಾಗಿತ್ತು. ಇದೀಗ ಬಿಜೆಪಿಯಿಂದ ಕ್ಷೇತ್ರದಿಂದ ಸ್ಪರ್ಧಿಸಿ ರುವ ಚಂದ್ರಹಾಸ ಉಳ್ಳಾಲ್ ಮಾಜಿ ಕಾಂಗ್ರೆಸ್ಸಿಗ. ಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಾಗಿದ್ದ ಚಂದ್ರಹಾಸ ಉಳ್ಳಾಲ್, 2008ರ ಎಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

‘ಬಿಜೆಪಿ ಪ್ರಾಯೋಜಿತ ಬಂಡಾಯ’

ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನೇರವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬ ಅನಿಸಿಕೆ ಯೊಂದಿಗೆ ಮತ ವಿಭಜನೆಗಾಗಿ ಬಿಜೆಪಿ ಪ್ರಾಯೋಜಿತ ಅಭ್ಯರ್ಥಿ ಗಳನ್ನು ಕಣಕ್ಕಿಳಿ ಸಲಾಗಿದೆ. ಇದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಡ್ಡಿಯಾಗದು ಎಂದು ಇಂದು ಅಸೈಗೋಳಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಖಾದರ್ ಅಭಿಪ್ರಾಯಿಸಿದ್ದಾರೆ. ಪಕ್ಷದ ತತ್ವ ಆದರ್ಶಗಳು, ಕಾರ್ಯಕರ್ತರು ಹಾಗೂ ನಾಯಕರ ಆಶೀರ್ವಾದಿಂದ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

No comments:

Post a Comment