Tuesday, April 9, 2013

ಬೆಂಕಿಗೆ ಹಾರಿ ಮೂವರು ಸಾ್ವಮೀಜಿಗಳ ಆತ್ಮಹತೆಯ;ಚೌಳಿ ಮಠದ ಕಿರಿಯ ಸ್ವಾಮೀಜಿಗಳ ನಿಗೂಢ ಸಾವು ಏಪ್ರಿಲ್ -09-2013

ಬೀದರ್, ಎ.8: ನಗರದ ಹೊರ ವಲಯದಲ್ಲಿನ ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳು ನಿಗೂಢ ರೀತಿಯಲ್ಲಿ ‘ಅಗ್ನಿಪ್ರವೇಶ’ ಮಾಡಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಗಿನ ಜಾವ ನೌಬಾದ್ ಬಳಿಯ ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೌಳಿಮಠದ ಆವರಣದಲ್ಲೇ ನಡೆದಿದೆ.
 
‘ಸಾವಿಗೆ ಶರಣಾದ’ ಕಿರಿಯ ಸ್ವಾಮೀಜಿಗಳನ್ನು ಆಂಧ್ರಪ್ರದೇಶ ಮೂಲದ ಜಗನ್ನಾಥ ಸ್ವಾಮೀಜಿ (30), ಬೀದರ್ ಜಿಲ್ಲೆ ಔರಾದ್ ತಾಲೂಕಿನ ಮಣ್ಣೂರು ಗ್ರಾಮದ ಈರಾರೆಡ್ಡಿ ಸ್ವಾಮೀಜಿ (52) ಹಾಗೂ ಚೌಳಿ ಗ್ರಾಮದ ಪ್ರಣವ್ ಸ್ವಾಮೀಜಿ (16)ಎಂದು ಗುರುತಿಸಲಾಗಿದೆ.
ಮೂರು ಮಂದಿ ಸ್ವಾಮೀಜಿಗಳು ತಮ್ಮ ಗುರು ಗಳಾದ ಗಾನೇಶ್ವರ ಅವಧೂತ ಮಹಾರಾಜ್ ಸ್ವಾಮೀಜಿ ಜೀವಂತ ಸಮಾಧಿಯಾದ ಹಿನ್ನೆಲೆ ಯಲ್ಲಿ ತೀವ್ರ ಮನನೊಂದು ಸೋಮವಾರ ಬೆಳಗಿನಜಾವ 5 ಗಂಟೆಯ ಸುಮಾರಿಗೆ ಮಠದ ಆವರಣದಲ್ಲಿನ ಕಟ್ಟಿಗೆಯ ರಾಶಿಗೆ ಬೆಂಕಿ ಹಚ್ಚಿ ಅಗ್ನಿ ಪ್ರವೇಶಿಸಿ ಸಜೀವ ದಹನ ವಾಗಿದ್ದಾರೆಂದು ಪೊಲೀ ಸರು ತಿಳಿಸಿದ್ದಾರೆ.
‘ಗುರುಗಳಾದ ಗಾನೇಶ್ವರ ಅವಧೂತ ಮಹಾರಾಜ್ ಸ್ವಾಮೀಜಿಯವರ ಸೇವೆಯೇ ನಮ್ಮ ಪರಮ ಗುರಿ. ಅವರಿಲ್ಲದ ಮೇಲೆ ನಾವು ಯಾರ ಸೇವೆ ಮಾಡಬೇಕು’ ಎಂದು ಸಾವಿಗೆ ಮುನ್ನ ಪತ್ರ ವೊಂದನ್ನು ಬರೆದಿಟ್ಟು ಅವರು ಅಗ್ನಿ ಪ್ರವೇಶ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿರಿಯ ಸ್ವಾಮೀಜಿ ಪ್ರಣವ್, ಬೀದರ್ ತಾಲೂಕಿನ ಚೌಳಿ ಗ್ರಾಮದ ನಿವಾಸಿಯಾಗಿದ್ದು, ಎಂಟನೆ ತರಗತಿ ಅಭ್ಯಾಸ ಮಾಡುತ್ತಿದ್ದರು. ಇಪ್ಪತ್ತೆರಡು ವರ್ಷಗಳ ಜಗನ್ನಾಥ ಸ್ವಾಮೀಜಿ ಆಂಧ್ರ ಮೂಲದವರು. ಐವತ್ತು ವರ್ಷಗಳ ಈರಾರೆಡ್ಡಿ ಸ್ವಾಮೀಜಿ ಮಣ್ಣೂರು ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಚೌಳಿ ಮಠದ ಆವರಣದಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಮೂರು ಮಂದಿ ಸ್ವಾಮೀಜಿಗಳ ಮೃತದೇಹಗಳನ್ನು ಹೊರ ತೆಗೆದ ಬಳಿಕ ಬೀದರ್ ಸರಕಾರಿ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಲಾಗಿದೆ.
ಆ ಬಳಿಕ ಹಿರಿಯ ಗುರುಗಳಾದ ಗಾನೇಶ್ವರ ಅವದೂತ ಮಹಾರಾಜ್ ಸ್ವಾಮೀಜಿ ಸಮಾಧಿಯ ಪಕ್ಕದಲ್ಲೆ ಕಿರಿಯ ಸ್ವಾಮೀಜಿಗಳಾದ ಜಗನ್ನಾಥ ಸ್ವಾಮೀಜಿ, ಪ್ರಣವ್ ಸ್ವಾಮೀಜಿ ಹಾಗೂ ಈರಾರೆಡ್ಡಿ ಸ್ವಾಮೀಜಿಗಳ ಅಪಾರ ಸಂಖ್ಯೆಯ ಭಕ್ತ ವೃಂದದ ಸಮ್ಮುಖದಲ್ಲೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಾವಿಗೆ ಮುನ್ನ ಬರೆದ ಪತ್ರದ ವಿವರ: ‘ನಾವು ಸ್ವಇಚ್ಛೆಯಿಂದ ಜೀವ ಸಮಾಧಿ ಆಗುತ್ತಿದ್ದೇವೆ. ನಮ್ಮ ಸ್ವಧಾಮ ಕೈಲಾಸಕ್ಕೆ ಹೋಗುತ್ತಿದ್ದೇವೆ. ಆ ದೇವರೆ ನಮಗೆ ತಂದೆ-ತಾಯಿ ಎಲ್ಲವೂ. ನಮಗೆ ಬಂಧು, ಬಳಗ, ಶತ್ರು, ಮಿತ್ರರು ಯಾರು ಇಲ್ಲ. ನಮಗೆ ಸರ್ವಸ್ವವೂ ಮಠವೇ ಆಗಿದೆ. ನಮ್ಮ ಅಗ್ನಿ ಸಮಾಧಿಗೆ ಯಾರು ಕಾರಣರಲ್ಲ. ಯಾರಿಗೂ ತೊಂದರೆ ಕೊಡಬೇಡಿ. ಅಗ್ನಿಪ್ರವೇಶ ಮಾಡುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೆವು.
ಹಿರಿಯ ಶ್ರೀಗಳ ಸಾವಿನಿಂದ ನೊಂದು ಈ ನಿರ್ಧಾರ ಕೈಗೊಂಡಿದ್ದೇವೆ. ಗಾನೇಶ್ವರ ಅವದೂತ ಮಹಾರಾಜ್ ಸ್ವಾಮೀಜಿ ೆ.28ರಂದು ಜೀವಂತ ಸಮಾಧಿಯಾಗಿದ್ದರು. ಸ್ವಾಮೀಜಿಗಳ ಸಾವಿನಿಂದ ಬೇಸರವಾಗಿದೆ. ಅವರಿಲ್ಲದ ಮೇಲೆ ನಾವು ಯಾರ ಸೇವೆ ಮಾಡಬೇಕು. ಸ್ವಇಚ್ಛೆಯಿಂದ ಅಗ್ನಿಸಮಾಧಿ ನಿರ್ಧಾರ ಮಾಡಿದ್ದೇವೆ ಎಂದು ಪತ್ರ ಬರೆದು ಮಠದ ಗೋಡೆಗೆ ಅಂಟಿಸಿ ಅಗ್ನಿ ಪ್ರವೇಶ ಮಾಡಿದ್ದಾರೆಂದು ತಿಳಿದು ಬಂದಿದೆ.
ನಿಗೂಢ ಘಟನೆಗಳು: 2012ರ ಡಿಸೆಂಬರ್ 31ರಂದು ಚೌಳಿ ಮಠದ ಗಾನೇಶ್ವರ ಅವದೂತ ಮಹಾರಾಜ್ ಸ್ವಾಮೀಜಿಯ ಪಟ್ಟ ಶಿಷ್ಯ ಮಾರುತಿ ಸ್ವಾಮೀಜಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಮತ್ತು ಚೂರಿ ಇರಿತವಾಗಿತ್ತು. ಈ ಸಂಬಂಧ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಈ ಮಧ್ಯೆ 2013ರ ಜನವರಿ 31ರಂದು ಕಿರಿಯ ಸ್ವಾಮೀಜಿ ಮಾರುತಿ ಶ್ರೀಗಳ ಅಪಹರಣ ನಡೆದಿದ್ದು, ಅವರು ಈವರೆಗೂ ಪತ್ತೆಯಾಗಿಲ್ಲ. ಈ ಮಧ್ಯೆ 2013ರ ಫೆ.28ರಂದು ಮಠದ ಗುರುಗಳಾದ ಗಾನೇಶ್ವರ ಅವದೂತ ಮಹಾರಾಜ್ ಸ್ವಾಮೀಜಿಯ ಜೀವ ಸಮಾಧಿಯಾಗಿದ್ದರು. ಆದರೆ, ಇಂದು ಮೂರು ಮಂದಿ ಕಿರಿಯ ಸ್ವಾಮೀಜಿಗಳು ನಿಗೂಢ ರೀತಿಯಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದು, ಮೂರು ಮಂದಿಯ ಮೃತದೇಹಗಳು ಜೋಡಿಸಿದ್ದ ರೀತಿಯಲ್ಲಿ ಪತ್ತೆಯಾಗಿದ್ದು, ಸಂಶಯಗಳಿಗೆ ಪುಷ್ಟಿ ನೀಡುವಂತಿವೆ ಎಂದು ಮಠದ ಭಕ್ತರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಜನವಾಡ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಸರಕಾರವೇ ಆರೋಪಿ: ಚೌಳಿಮಠದಲ್ಲಿ ಕೆಲ ದಿನಗಳಿಂದ ಆಗುತ್ತಿರುವ ಕೃತ್ಯಗಳನ್ನು ತಡೆಯುವಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಫಲರಾಗಿದ್ದಾರೆಂದು ಮಠದ ಭಕ್ತರು ಆರೋಪಿಸಿದ್ದಾರೆ

No comments:

Post a Comment