Friday, April 19, 2013

ಇವರು ಕೇವಲ ಒಂದು ತಿಂಗಳಿಗೆ ಹೆಂಡತಿಯರು!ಹೈದರಾಬಾದ್‌ನಲ್ಲಿ ಬಡತನ, ವರದಕ್ಷಿಣೆ ಸಮಸ್ಯೆಯ ಭೀಕರ ರೂಪ ;ಪ್ರವಾಸಿ ವೇಶ್ಯಾವಾಟಿಕೆಯನ್ನು ಬಹಿರಂಗಪಡಿಸಿದ ಯುವತಿಯರು ಏಪ್ರಿಲ್ -19-2013

ಹೈದರಾಬಾದ್, ಎ.18: ಇಸ್ಲಾಮಿಕ್ ಕಾನೂನನ್ನು ದುರುಪಯೋಗಪಡಿಸಿಕೊಂಡು, ಬಡತನ, ವರದಕ್ಷಿಣೆ ಇತ್ಯಾದಿಗಳ ಸಮಸ್ಯೆಗಳಿಂದ ನರಳುತ್ತಿರುವ ಹೆಣ್ಣುಮಕ್ಕಳನ್ನು ಒಂದು ತಿಂಗಳ ಮದುವೆಯೆಂಬ ವೇಶ್ಯಾವಾಟಿಕೆಗೆ ನೂಕುತ್ತಿರುವ ಘಟನೆಗಳು ಹೈದರಾಬಾದ್‌ನಿಂದ ವರದಿಯಾಗಿವೆ.
ದಕ್ಷಿಣ ಭಾರತದ ಹೈದರಾಬಾದ್‌ನಲ್ಲಿ ಈ ಪ್ರಕರಣ ಬಹಿರಂಗವಾಗಿದ್ದು, ಶ್ರೆಮಂತ ವಿದೇಶಿ ಪುರುಷರು, ಸ್ಥಳೀಯ ಏಜೆಂಟ್‌ಗಳು, ಖಾಝಿಗಳು ಹಾಗೂ ಸರಕಾರದಿಂದ ನೇಮಿಸಲ್ಪಟ್ಟಿರುವ ಕೆಲವು ಧರ್ಮಗುರುಗಳು ಸಕ್ರಿಯವಾಗಿ ಭಾಗವಹಿಸಿ ನಗರ ಪ್ರದೇಶದ ಮುಸ್ಲಿಂ ಕುಟುಂಬಗಳಲ್ಲಿನ ಬಡ ಯುವತಿ ಯರನ್ನು ಶೋಷಿಸುತ್ತಿರುವುದನ್ನು ಸಂಘಟನೆಯೊಂದು ಬಹಿರಂಗಗೊಳಿಸಿದೆ.
ಈ ಇಸ್ಲಾಮ್ ಕಾನೂನಿನ ದುರುಪಯೋಗದ ಕುರಿತಂತೆ ಹಿರಿಯ ಧಾರ್ಮಿಕ ಮುಖಂಡರು ಮತ್ತು ಮುಸ್ಲಿಮ್ ನಾಯಕರೂ ಧ್ವನಿಯೆತ್ತಿದ್ದಾರೆ.
ಸುಡಾನ್ ದೇಶದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ನಾಲ್ಕು ವಾರಕ್ಕಷ್ಟೆ ಸೀಮಿತವಾಗುವಂತೆ ಬಾಲಕಿಯೊಬ್ಬಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ್ದು, ಪ್ರಕರಣದಲ್ಲಿ ಹುಡುಗಿಯ ತಂದೆಯು ಕೂಡ ಭಾಗಿಯಾಗಿ ಬಲತ್ಕ್ಕಾರದ ಮದುವೆಗೆ ತನ್ನ ಸಮ್ಮತಿಯನ್ನು ಸೂಚಿಸಿದ್ದಾನೆೆ ಎಂದು ವರದಿಯಾಗಿದೆ.
ಪ್ರಸ್ತುತ ಸಂತ್ರಸ್ತೆಯ ಹೆಸರು ನೌಶೀನ್ ತಬಸ್ಸುಮ್ ಎಂದಾಗಿದ್ದು ಬಲತ್ಕಾರದ ಮದುವೆಯಿಂದ ತನ್ನನ್ನು ರಕ್ಷಿಸಿಕೊಳ್ಳಲಿಕ್ಕೋಸ್ಕರ ಆಕೆಯು ನಾಪತ್ತೆಯಾದ ಬಳಿಕ ಪ್ರಕರಣವು ತೀವ್ರ ಸ್ವರೂಪವನ್ನು ಪಡೆದುಕೊಂಡು ನಾಗರಿಕ ಸಮಾಜದೊಳಗೆ ಚರ್ಚೆಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ.
ಹೊಟೇಲೊಂದರಲ್ಲಿ ಸುಡಾನ್ ದೇಶದ ತೈಲ ಕಂಪೆನಿಯ ಅಧಿಕಾರಿಯೊಬ್ಬರಿಗೆ ಆಕೆಯು ಸೇರಿದಂತೆ ಇನ್ನಿತರ ಮೂವರು ಯುವತಿಯರನ್ನು ಅತ್ತಿಗೆ ಪರಿಚಯಿಸಿಕೊಟ್ಟಳು ಎಂದು ಹುಡುಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ವರನನ್ನು 44 ವರ್ಷ ವಯಸ್ಸಿನ ಉಸಾಮ ಇಬ್ರಾಹೀಂ ಮುಹಮ್ಮದ್ ಎಂದು ಗುರುತಿಸಲಾಗಿದ್ದು, ಈ ಹಿಂದೆಯೇ ಆತ ಖಾರ್ತೊಮಿನಲ್ಲಿ ಎರಡು ಮಕ್ಕಳನ್ನು ವಿವಾಹವಾಗಿದ್ದ ಎನ್ನುವ ಮಾಹಿತಿಯು ಬಹಿರಂಗವಾಗಿದೆ.
ಬಳಿಕ ಹೈದರಾಬಾದ್‌ಗೆ ಆಗಮಿಸಿದ ಈತ ಪ್ರಸ್ತುತ ಬಾಲಕಿಯನ್ನು ವಿವಾಹವಾಗಿದ್ದು, ಸ್ಥಳೀಯ ಖಾಝಿ ಮದುವೆಯ ಧಾರ್ಮಿಕ ವಿಧಿ ವಿಧಾನ ಕಾರ್ಯವನ್ನು ನಡೆಸಿಕೊಟ್ಟಿದ್ದರು ಎಂದು ತಿಳಿದುಬಂದಿದೆ.
ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಪ್ರಕಾರ ಉಸಾಮ ಬಾಲಕಿಯ ಅತ್ತಿಗೆಗೆ 1,00,000 ರೂ. ಸಂಭಾವನೆ ನೀಡಿದ್ದು,ಇದರಲ್ಲಿ 70,000 ರೂ.ವನ್ನು ಬಾಲಕಿಯ ಹೆತ್ತವರಿಗೆ ನೀಡಲಾಗಿದೆ. ತಲಾ 5,000ರೂ.ಗಳಂತೆ ಖಾಝಿ ಹಾಗೂ ಉರ್ದು ತರ್ಜುಮೆದಾರನಿಗೆ ಮತ್ತು ಇನ್ನುಳಿದ 20,000 ರೂ.ಯನ್ನು ತನ್ನಲ್ಲಿಯೇ ಆಕೆ ಇರಿಸಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಮದುವೆ ಪ್ರಮಾಣ ಪತ್ರವನ್ನು ತಲಾಕ್ ನಾಮ ಎಂಬ ಹೆಸರಿನಿಂದ ಪ್ರಕಟಿಸಲಾಗಿದ್ದು ಇದರಲ್ಲಿ ವರನು ರಜೆಯ ನಂತರ ಹುಡುಗಿಗೆ ವಿಚ್ಛೇದನ ನೀಡುವುದಾಗಿ ಸ್ಪಷ್ಟವಾಗಿ ಬರೆದುಕೊಡಲಾಗಿದೆ ಎನ್ನುವ ಕಳವಳಕಾರಿ ವಿಷಯವನ್ನು ಅವರು ತಿಳಿಸಿದ್ದಾರೆ.
‘‘ಮದುವೆಯ ಮರುದಿನ ವಧುವಿನ ಮನೆಗೆ ಆಗಮಿಸಿದ ವರ ತನ್ನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಕೆಯನ್ನು ಪುಸಲಾಯಿಸಿದರೂ ಆಕೆ ಅದನ್ನು ಸಾರಸಗಟಾಗಿ ತಿರಸ್ಕರಿಸಿದಳು. ಆಕೆಯು ಯುವತಿಯಾಗಿದ್ದು ತನ್ನ ತಂದೆಗಿಂತಲೂ ಜಾಸ್ತಿ ಪ್ರಾಯದವನಾದ ವರನ ಜೊತೆ ಹೇಗೆ ದೇಹ ಹಂಚಿಕೊಳ್ಳಲಿ? ಎಂದು ಪ್ರಶ್ನಿಸಿದ್ದಳು’’ ಎಂದು ಟೆಲಿಗ್ರಾಫ್‌ನಲ್ಲಿ ಇನ್ಸ್‌ಪೆಕ್ಟರ್ ಕುಮಾರ್‌ತಿಳಿಸಿದ್ದಾರೆ.
ಯುವತಿಯು ಮನೆಯಿಂದ ಪರಾರಿಯಾಗಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆದಳು ಎಂದು ಇನ್ಸ್‌ಪೆಕ್ಟರ್ ಮಾಹಿತಿ ನೀಡಿದರು. ಹೈದರಾಬಾದ್‌ನಲ್ಲಿ ಈ ರೀತಿಯ ಡಝನ್‌ಗಟ್ಟಲೆ ಮದುವೆಗಳು ನಡೆದ ಕುರಿತು ಕುಮಾರ್ ಊಹೆ ವ್ಯಕ್ತಪಡಿಸಿದ್ದಾರೆ.
ಸುಡಾನ್ ವ್ಯಕ್ತಿಯ ಬಂಧನದ ನಂತರ ದೂರವಾಣಿಯ ಮೂಲಕ ಖಾರ್ಟೊಮ್‌ನಲ್ಲಿರುವ ಕುಮಾರ್ ಸ್ನೇಹಿತರೊಬ್ಬರು ಹಿಂದಿನ ಭೇಟಿಯಲ್ಲಿ ಇದೇ ವ್ಯಕ್ತಿ 40 ದಿನಕ್ಕನ್ವಯವಾಗುವಂತೆ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದ ಎನ್ನುವ ಮಾಹಿತಿಯನ್ನು ನನಗೆ ತಿಳಿಸಿದ್ದಾರೆಂದು ಕುಮಾರ್ ಹೇಳಿದ್ದಾರೆ.
ಪ್ರವಾಸಿಗರ ಪ್ರಕಾರ ಇಸ್ಲಾಮಿ ಕಾನೂನಿನಲ್ಲಿ ಇಂತಹ ಮದುವೆಗಳು ಸಮ್ಮತಾರ್ಹ ಎನ್ನುವ ಭಾವನೆಯೇ ಈ ಪ್ರಕಾರದ ಮದುವೆಗಳು ನಡೆಯಲು ಕಾರಣವಾಗಿದೆ.
ಆದರೆ ಹಿರಿಯ ಧಾರ್ಮಿಕ ಮುಖಂಡರು, ಧರ್ಮ ಗುರುಗಳು ಈ ಮದುವೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವೇಶ್ಯಾವಾಟಿಕೆಗೆ ಇಸ್ಲಾಮ್‌ನ ಕಾನೂನನ್ನು ದುರುಪಯೋಗಗೊಳಿಸಲಾಗುತ್ತಿದೆ ಎಂದೂ ಅವರು ಕಿಡಿ ಕಾರಿದ್ದಾರೆ. ಈ ಜಾಲದೊಳಗೆ ಸಿಲುಕಿರುವ ಹೆಚ್ಚಿನ ಹೆಣ್ಣುಮಕ್ಕಳು ಬಡತನ ಮತ್ತು ವರದಕ್ಷಿಣೆಯ ಬಲಿಪಶುಗಳು ಎನ್ನುವುದೂ ತನಿಖೆಯಿಂದ ಹೊರಬಿದ್ದಿದೆ.
ಹೈದರಾಬಾದ್‌ನ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಾಜದ ಕಾರ್ಯಕರ್ತೆ ಶಿರಾಝ್ ಆಮಿನ ಖಾನ್ ಪ್ರಕಾರ ಹೈದರಾಬಾದ್‌ನಲ್ಲಿ ಇಂತಹ ಕನಿಷ್ಠ 15 ಒಪ್ಪಂದ ಮದುವೆಗಳು ನಡೆದಿವೆ. ಈ ಸಂಖ್ಯೆಯು ತಿಂಗಳು ಕಳೆದಂತೆ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
‘‘ ವಿದೇಶಿಯರು ಹೈದರಾಬಾದ್‌ನಲ್ಲಿನ ಬಡತನವನ್ನು ಗುರುತಿಸಿಯೇ, ಮದುವೆಯಾಗಲು ಇಲ್ಲಿಗೆ ಆಗಮಿಸುತ್ತಾರೆ. ಕಿತ್ತು ತಿನ್ನುವ ಬಡತನಕ್ಕೆ ಪರಿಹಾರವೊದಗಿಸುವ ಸಲುವಾಗಿ ಸುಮಾರು 40ರಿಂದ 50 ಶೇ. ಕುಟುಂಬಗಳು ಇಂತಹ ಮದುವೆಗೆ ಒಪ್ಪುತ್ತದೆ. ಇದು ನಿಲ್ಲಲೇಬೇಕು. ಇದರ ವಿರುದ್ಧ ಗಂಭೀರವಾದ ಚಳವಳಿಯು ನಡೆಯಬೇಕಾಗಿದೆ ’’ ಎಂದು ಅವರು ಹೇಳಿದ್ದಾರೆ.

No comments:

Post a Comment