Thursday, April 18, 2013

ಚುನಾವಣಾ ಸ್ಫೋಟ!ಏಪ್ರಿಲ್ -18-2013

ಕರ್ನಾಟಕದ ನೆಲಕ್ಕೆ ತೀರಾ ಅಪರಿಚಿತವಾಗಿರುವ ರಾಜಕೀಯ ಸ್ಫೋಟಗಳು ನಿಧಾನಕ್ಕೆ ತಮ್ಮ ಮೀಸೆಯನ್ನು ಹೊಗ್ಗಿಸುತ್ತಿವೆಯೋ ಎಂಬ ಅನುಮಾನ ಹುಟ್ಟಿಸುವಂತೆ ರಾಜ್ಯದ ಮಲ್ಲೇಶ್ವರಂನಲ್ಲಿ ಸ್ಫೋಟವೊಂದು ಸಂಭವಿಸಿದೆ. ಮೊದಲು ಸಿಲಿಂಡರ್ ಸ್ಫೋಟವೆಂದು ಬಗೆದದ್ದು, ಬಳಿಕ ಬಾಂಬ್ ಸ್ಫೋಟವಾಗಿ ಪರಿವರ್ತನೆಗೊಂಡು ಜನರನ್ನು ತಲ್ಲಣಿಸುವಂತೆ ಮಾಡಿದೆ. ಸುಮಾರು 15ಮಂದಿ ಈ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಸರಣಿ ಸ್ಫೋಟವೊಂದು ನಡೆದು ಜನರನ್ನು ಅಲುಗಾಡಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪವೂ ಒಂದು ಸ್ಫೋಟ ಸಂಭವಿಸಿ, ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕರನ್ನು ತಳಕು ಹಾಕಿ, ತನಿಖೆಯ ದಾರಿಯನ್ನು ಭಾಗಶಃ ಮುಚ್ಚಿ ಬಿಡಲಾಗಿದೆ. ಅವೆಲ್ಲ ನಮ್ಮ ನೆನಪಿನಿಂದ ಮಾಸುವುದಕ್ಕೆ ಮುನ್ನವೇ ಇದೀಗ ಮಲ್ಲೇಶ್ವರಂ ಸಮೀಪ ಸ್ಫೋಟ ಸಂಭವಿಸಿದೆ. ಎಂದಿನಂತೆ ಚಾನೆಲ್‌ಗಳು ವಿದೇಶಿ, ಸ್ವದೇಶಿ ಉಗ್ರರ ಸಂಘಟನೆಗಳ ಹೆಸರುಗಳನ್ನು ಮಂತ್ರಗಳಂತೆ ಉಚ್ಚರಿಸುತ್ತಿವೆ. ಇತ್ತ ಪೊಲೀಸರು, ತನಿಖೆ ಆರಂಭವಾದ ಬಳಿಕವಷ್ಟೇ ಸತ್ಯ ಹೊರ ಬೀಳಲಿದೆ ಎಂದು ಹೇಳುತ್ತಿದ್ದಾರೆ.
ಹಾಗೊಂದು ವೇಳೆ ಬುಧವಾರ ಸಂಭವಿಸಿರುವುದು ಬಾಂಬ್ ಸ್ಫೋಟವೇ ಆಗಿದ್ದರೆ ಅದನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಹಾಗೆಯೇ ಯಾವುದೇ ವಿದೇಶಿ ಉಗ್ರ ಸಂಘಟನೆಯ ಹೆಸರನ್ನು ಹೇಳಿ, ಪೊಲೀಸರು ತಮ್ಮ ಕರ್ತವ್ಯವನ್ನು ಮುಗಿಸುವಂತೆಯೂ ಇಲ್ಲ. ಯಾಕೆಂದರೆ ಇದು ಚುನಾವಣೆಯ ಕಾಲ. ಸ್ಫೋಟಗಳು ಸಂಭವಿಸಿದಾಗೆಲ್ಲ ಈ ದೇಶದಲ್ಲಿ ಅದರ ಲಾಭವನ್ನು ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘಪರಿವಾರ ಸಂಘಟನೆಗಳು ತಮ್ಮದಾಗಿಸುತ್ತಾ ಬಂದಿವೆ.
ಹಲವು ಸ್ಫೋಟಗಳನ್ನು ನೇರವಾಗಿ ಸಂಘ ಪರಿವಾರ ಸಂಘಟನೆ ಗಳೇ ನಡೆಸಿ, ಅವುಗಳನ್ನು ಬೇರೆಯವರ ಮೂತಿಗೆ ಒರೆಸಿ, ಮೊಸಳೆ ಕಣ್ಣೀರು ಸುರಿಸಿದುದೂ ಇತಿಹಾಸ. ಚುನಾವಣೆಯ ಸಂದರ್ಭದಲ್ಲಿ ಇಂತಹ ಸ್ಫೋಟಗಳು ಸಂಭವಿಸಿ ದಾಗ ಅದರ ಲಾಭವನ್ನು ಯಾವ ಯಾವ ಪಕ್ಷಗಳು ತಮ್ಮದಾಗಿಸಿಕೊಳ್ಳಬಹುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಬಿಜೆಪಿ ಕಚೇರಿಗೆ ಸಮೀಪದಲ್ಲಿ ನಡೆದಿದೆ ಎನ್ನುವುದು ಬುಧವಾರ ನಡೆದ ಸ್ಫೋಟದ ಇನ್ನೊಂದು ಹೆಗ್ಗಳಿಕೆ. ಹೀಗೆ ಚುನಾವಣಾ ರಾಜಕೀಯ ವಾಸನೆ, ಗಂಧಕದ ಜೊತೆಗೆ ತಳಕು ಹಾಕಿಕೊಂಡಿರುವುದನ್ನು ಯಾರೂ ಊಹಿಸ ಬಹುದಾಗಿದೆ.
ಸ್ಫೋಟದ ಹಿಂದೆ ರಾಜಕೀಯದ ನೆರಳನ್ನು ಅನುಮಾನಿಸುವುದಕ್ಕೆ ಕಾರಣಗಳಿವೆ. ಕಳೆದ ಮಹಾಚುನಾವಣೆಯ ಸಂದರ್ಭದಲ್ಲಿ, ಇನ್ನೇನು ಮತದಾನ ನಡೆಯಬೇಕು ಎನ್ನುವ ಹೊತ್ತಿನಲ್ಲಿ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿತು. ಈ ಸ್ಫೋಟ ಸಂಭವಿಸಿದ ಬೆನ್ನಿಗೇ, ಕರ್ನಾಟಕದಲ್ಲಿ ಉಗ್ರರು ಎಂದು ಮಾಧ್ಯಮಗಳು ಬೊಬ್ಬೆ ಇಡತೊಡಗಿದವು. ಸಿಮಿ, ಇಂಡಿಯನ್ ಮುಜಾಹಿದೀನ್ ಎಂದು ಚಾನೆಲ್‌ಗಳು ತಮ್ಮ ಕಲ್ಪನೆಗಳನ್ನು ಹರಿಯ ಬಿಟ್ಟವು. ಬಿಜೆಪಿಯಂತೂ ಇದರ ಸರ್ವಪ್ರಯೋಜನವನ್ನು ಪಡೆದುಕೊಂಡಿತು.
ನ್ಯಾಯಾಲಯದಲ್ಲಿ ಸ್ಫೋಟ ನಡೆದ ಕುರಿತಂತೆ ಒಂದಿಷ್ಟೂ ಖೇದವಿಲ್ಲದ ಪಕ್ಷಗಳು, ಇದರಿಂದ ತಾವೆಷ್ಟು ಲಾಭ ಪಡೆದುಕೊಳ್ಳಬಹುದು ಎಂದು ಯೋಚಿಸಿ, ಹೇಳಿಕೆಗಳನ್ನು ನೀಡತೊಡಗಿದವು. ಆದರೆ ಈ ಸ್ಫೋಟ ನಡೆದ ಕೆಲವೇ ಸಮಯ ದಲ್ಲಿ ಸತ್ಯ ಹೊರಬಿತ್ತು. ಶ್ರೀರಾಮಸೇನೆಯ ಕಾರ್ಯಕರ್ತರೆನಿಸಿಕೊಂಡವರೇ ನ್ಯಾಯಾಲಯ ಸ್ಫೋಟವನ್ನು ನಡೆಸಿದ್ದರು. ಅಷ್ಟೇ ಅಲ್ಲ, ಹಲವು ಕ್ರಿಮಿನಲ್ ಚಟುವಟಿಕೆಗಳು ಇವರಿಂದ ನಡೆದಿದ್ದವು. ನ್ಯಾಯಾಲಯ ಸ್ಫೋಟದ ಹಿಂದೆ ರಾಜಕೀಯ ಉದ್ದೇಶ ಹೊರತು ಇನ್ನೇನೂ ಇರಲಿಲ್ಲ. ಕೊನೆಗೂ ಅವರನ್ನು ಬಂಧಿಸಲಾಯಿತು.
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಬಂಧಿತರ ಜೊತೆಗೆ ತನಗೆ ಸಂಬಂಧವಿಲ್ಲ ಎಂದು ಹೇಳಿಕೊಂಡರು. ಆದರೆ ಪ್ರಧಾನ ಆರೋಪಿ ಜಂಬಗಿಯ ಜೊತೆಗೆ ಪ್ರಮೋದ್ ಮುತಾಲಿಕ್‌ಗಿರುವ ಸಂಬಂಧ ವನ್ನು ಅದಾಗಲೇ ಪತ್ರಿಕೆಗಳು ಬಯಲಿಗೆಳೆದಿ ದ್ದವು. ಬಳಿಕ ಜಂಬಗಿಯನ್ನು ಜೈಲಿನಲ್ಲೇ ನಿಗೂಢವಾಗಿ ಕೊಂದು ಹಾಕಲಾಯಿತು. ಇದೀಗ ಅದೇ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ.
ಒಂದೆಡೆ ಭಯೋತ್ಪಾದನೆ, ಉಗ್ರರ ಕುರಿತಂತೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿರುವ ಬಿಜೆಪಿ, ಮಗದೊಂದೆಡೆ ಉಗ್ರರ ಜೊತೆಗೆ ನೇರ ಸಂಬಂಧ ಹೊಂದಿದ ಆರೋಪವಿರುವ ಮುತಾಲಿಕ್‌ರನ್ನು ತನ್ನ ಮಡಿಲಲ್ಲಿ ಕೂರಿಸಿ ಹಾಲೂಡುತ್ತಿದೆ. ಇದೀಗ ಈ ಬಾರಿಯ ಚುನಾವಣೆಯ ಹೊತ್ತಿಗೆ ಮತ್ತೆ ಸ್ಫೋಟ ಸಂಭವಿಸಿದಾಗ ಅದರಲ್ಲಿ ರಾಜಕೀಯ ವನ್ನು ಸಂಶಯಿಸುವುದು ಸಹಜವೇ ಆಗಿದೆ.ಸದ್ಯಕ್ಕೆ ದಿವಾಳಿ ಸ್ಥಿತಿಯಲ್ಲಿರುವ ಬಿಜೆಪಿ ಒಂದಿಷ್ಟು ಮತಗಳನ್ನು ಗಳಿಸಬೇಕಾದರೆ,ಒಂದೋ ಕೋಮುಗಲಭೆ ನಡೆಯಬೇಕು. ಇಲ್ಲವಾದರೆ ಸ್ಫೋಟ ನಡೆಯಬೇಕು. ಇದೀಗ ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದೆ. ಸಂಘಪರಿವಾರ ಪ್ರೇರಿತ ಮಾಧ್ಯಮಗಳು ಆ ಸ್ಫೋಟಕ್ಕೆ ರೆಕ್ಕೆ ಪುಕ್ಕಗಳನ್ನು ಕಟ್ಟುತ್ತಿವೆ.

ಸ್ಫೋಟದ ಹಿಂದಿರುವ ರಾಜಕೀಯ ಏನೇ ಇರಲಿ. ಈ ಸ್ಫೋಟದ ಕುರಿತಂತೆ ಗಂಭೀರ ತನಿಖೆ ನಡೆಯಬೇಕು ಮತ್ತು ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದೀನ್ ಇರಲಿ ಅಥವಾ ಪ್ರಮೋದ್ ಮುತಾಲಿಕ್‌ರ ಶ್ರೀರಾಮಸೇನೆಯಿರಲಿ. ಅವರನ್ನು ತಕ್ಷಣ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸಬೇಕು. ಅದಕ್ಕಾಗಿ ಇದರ ತನಿಖೆಯನ್ನು ರಾಜ್ಯದ ಪೊಲೀಸರಿಗೆ ವಹಿಸಿ ಕೈತೊಳೆದುಕೊಳ್ಳದೆ ರಾಜ್ಯ ಸರಕಾರ ಕೇಂದ್ರದ ಸಹಾಯವನ್ನು ಪಡೆದುಕೊಳ್ಳಬೇಕು. 15 ಜನರನ್ನು ಗಾಯಗೊಳಿಸಿದ ಈ ದುರಂತ ಕರ್ನಾಟಕದ ಪರಂಪರೆಗೆ ಒಂದು ಕಳಂಕ. ಈ ಕಳಂಕವನ್ನು ಪ್ರಾಯೋಜಿಸಿದ ಯಾರೇ ಇರಲಿ, ಅವರನ್ನು ಕರ್ನಾಟಕದ ಜನತೆ ದೂರವಿಡಬೇಕು

No comments:

Post a Comment