Sunday, April 14, 2013

ರಾಜಸ್ತಾನ: ಕ್ರೀಡಾಳುಗಳಿಗೆ ನೆರವು ಬೇಕಾದರೆ ಕೋಮುಸಂಘಟನೆಗಳ ಜೊತೆ ನಂಟಿರಬಾರದು: ಕ್ರೀಡಾಮಂಡಳಿ ಸೂಚನೆಗೆ ಆರೆಸ್ಸೆಸ್ ಕೆಂಡ



 ಏಪ್ರಿಲ್ -14-2013

ಜೈಪುರ,: ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿ(ಆರ್‌ಎಸ್‌ಎಸ್‌ಸಿ)ಯಿಂದ ನಗದು ನೆರವನ್ನು ಕೋರುವ ಕ್ರೀಡಾಳುಗಳು ತಮಗೆ ಯಾವುದೇ ಕೋಮು ಸಂಘಟನೆಗಳ ಜೊತೆ ನಂಟಿಲ್ಲವೆಂದು ಘೋಷಿಸುವ ಅಫಿದಾವಿತ್‌ಗೆ ಸಹಿ ಹಾಕಬೇಕಾಗಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದೆ.
ಕ್ರೀಡಾಪಟುಗಳಿಂದ ಅಫಿದಾವಿತ್‌ಗೆ ಸಹಿ ಹಾಕಿಸುವುದನ್ನು ಖಂಡಿಸಿ, ಸಂಘಪರಿವಾರದ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ಸದಸ್ಯರು ಕ್ರೀಡಾಮಂಡಳಿ ಇತ್ತೀಚೆಗೆ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪ್ರತಿಭಟನೆ ನಡೆಸಿದರು.
ಎಬಿವಿಪಿ ಕಾರ್ಯಕರ್ತರು, ಕ್ರೀಡಾಮಂಡಳಿ ಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಸ್ಟೇಡಿಯಂನ್ನು ಪ್ರವೇಶಿಸಿದ ತಮ್ಮನ್ನು ತಡೆಯ ಲೆತ್ನಿಸಿದ ಪೊಲೀಸರೊಂದಿಗೆ ಹೊಕೈನಡೆಸಿದರು.
ಏತನ್ಮಧ್ಯೆ ತಮಗೆ ಆರೆಸ್ಸೆಸ್ ಜೊತೆ ಸಂಪರ್ಕ ವಿಲ್ಲವೆಂದು ಕ್ರೀಡಾಪಟುಗಳಿಂದ ಅಫಿದಾವಿತ್‌ಗೆ ಸಹಿಹಾಕಿಸಿಕೊಳ್ಳುತ್ತಿರುವ ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿಯ ಕ್ರಮವನ್ನು ರಾಜ್ಯ ಬಿಜೆಪಿ ವಕ್ತಾರ ಕೈಲಾಸ್ ನಾಥ್ ಭಟ್ ಖಂಡಿಸಿದ್ದಾರೆ.
‘‘ಆರೆಸ್ಸೆಸ್ ಭಯೋತ್ಪಾದಕ ಸಂಘಟನೆಯಲ್ಲ, ಅದು ದೇಶದ ಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟಿದೆ. ಒಂದು ವೇಳೆ ಅಫಿದಾವಿತ್ ಕೋಮುವಾದಿ ಸಂಘಟನೆಗಳಿಗಷ್ಟೇ ಸೀಮಿತವಾಗಿದ್ದರೆ ಪರ ವಾಗಿಲ್ಲ. ಆದರೆ ಕೋಮುವಾದಕ್ಕೂ ಆರೆಸ್ಸೆಸ್‌ಗೂ ಸಂಬಂಧವನ್ನು ಕಲ್ಪಿಸುವುದು ಸಹಿಸಲು ಸಾಧ್ಯವೇ ಇಲ್ಲ. ಈ ಅಫಿದಾವಿತನ್ನು ಕೂಡಲೇ ಹಿಂದೆಗೆದು ಕೊಳ್ಳಬೇಕೆಂದು ಬಿಜೆಪಿ ಆಗ್ರಹಿಸುತ್ತದೆ’’ ಎಂದವರು ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಕಳೆದ ಕೆಲವು ಸಮಯದಿಂದ ಕ್ರೀಡಾಮಂಡಳಿ ಹಾಗೂ ಕ್ರೀಡಾ ಇಲಾಖೆಯು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದೆ. ತಾನು 1986ರಿಂದ ಕ್ರೀಡಾ ಇಲಾಖೆಯು ಜಾರಿಗೊಳಿಸಿ ರುವ ಆದೇಶವನ್ನು ಅನುಸರಿಸುತ್ತಿರುವುದಾಗಿ ಕ್ರೀಡಾಮಂಡಳಿ ಹೇಳಿಕೊಂಡಿದೆ. ಆದರೆ ಇಂತಹ ನೀತಿ ನಿಯಮಗಳನ್ನು ರೂಪಿಸುವ ಹೊಣೆಯನ್ನು ಕ್ರೀಡಾಮಂಡಳಿಗೆ ವಹಿಸಲಾಗಿದೆ ಯೆಂದು ಕ್ರೀಡಾ ಇಲಾಖೆ ಹೇಳಿಕೊಂಡಿದೆ.
ಏತನ್ಮಧ್ಯೆ ರಾಜಸ್ಥಾನ ರಾಜ್ಯ ಕ್ರೀಡಾ ಮಂಡಳಿಯ ಈ ವಿವಾದಾತ್ಮಕ ಅಫಿದಾವಿತ್‌ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಬಾನ್‌ರಿಂದಲೂ ವಿರೋಧ ವ್ಯಕ್ತವಾಗಿದೆ. ಆಟಗಾರರನ್ನು ಅವರ ಕ್ರೀಡಾ ಸಾಮರ್ಥ್ಯದ ಮೂಲಕವೇ ಆಳೆಯ ಬೇಕಾಗಿದೆಯೆಂದು ಅವರು ಹೇಳಿದ್ದಾರೆ.
ಧರ್ಮದ ಆಧಾರದಲ್ಲಿ ಕ್ರೀಡಾಪಟುಗಳನ್ನು ವಿಭಜಿಸುವುದು ತಪ್ಪೆಂದು ಬಿಜೆಪಿಯ ಇನ್ನೋರ್ವ ಹಿರಿಯ ನಾಯಕ ಸತೀಶ್ ಪೂರ್ಣಿಯಾ ಹೇಳಿದ್ದಾರೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಯಶಸ್ಸು ಪಡೆದ ಕ್ರೀಡಾಳುಗಳಿಗೆ ಕ್ರೀಡಾಮಂಡಳಿಯು 2 ಕೋಟಿ ರೂ.ಗಳ ನೆರವನ್ನು ವಿತರಿಸಿದೆ. ರಾಜಸ್ಥಾನದ ಖ್ಯಾತ ಅಥ್ಲೆಟ್ ಘಮಂಡಾ ರಾಮ್‌ಗೆ 3.5 ಲಕ್ಷ ರೂ.ಗಳ ಪುರಸ್ಕಾರ ನೀಡಿ ಗೌರವಿಸಿದೆ.

No comments:

Post a Comment