Wednesday, April 24, 2013

ಮಾನಸ ಸರೋವರಕ್ಕೆ ಕಲ್ಲುಚೀನಾ ಭಾರತ ಗಡಿಯಲ್ಲಿ ತಿಕ್ಕಾಟ ನಿಧಾನಕ್ಕೆ ತೀವ್ರತೆಯನ್ನು ಪಡೆಯುತ್ತಿದೆ. ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿರುವ ಭಾರತೀಯ ಭೂಪ್ರದೇಶದಲ್ಲಿ ಚೀನಾ ಸೈನಿಕರು ಠಾಣೆಯನ್ನು ನಿರ್ಮಿಸಿಕೊಂಡಿದ್ದಾರೆ. ಮಾತ್ರವಲ್ಲ ಬಹಳಷ್ಟು ಪ್ರದೇಶವನ್ನು ಕೈವಶ ಮಾಡಿಕೊಂಡಿದ್ದಾರೆ.ಇದೀಗ ಭಾರತ ‘ಸೇನೆಯನ್ನು ಹಿಂದೆಗೆಯಬೇಕು’ ಎಂದು ಹೇಳುತ್ತಿದ್ದರೆ, ತಾನು ಎಲ್‌ಎಸಿಯನ್ನು ಉಲ್ಲಂಘಿಸಿಲ್ಲ ಎಂದು ಚೀನಾ ಎಂದಿನಂತೆ ಹಟ ಹಿಡಿದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಅದರ ಲಾಭವನ್ನು ಪಡೆಯುವುದಕ್ಕೆ ಪಕ್ಕದ ಪಾಕಿಸ್ತಾನ, ನೇಪಾಳದಂತಹ ದೇಶಗಳು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ, ಭಾರತ ಈ ಕುರಿತಂತೆ ಗಂಭೀರವಾಗಿ ಕಾರ್ಯಾಚರಣೆಗಿಳಿಯ ಬೇಕಾಗಿದೆ. ಯಾವ ಕಾರಣಕ್ಕೂ ಯುದ್ಧವನ್ನು ಆಹ್ವಾನಿಸಿಕೊಳ್ಳದೆ, ಮಾತುಕತೆಯ ಮೂಲಕವೇ ಪರಿಹಾರವನ್ನು ಕಂಡುಕೊಳ್ಳುವುದು ಭಾರತದ ಪಾಲಿಗೆ ಅತಿ ಹೆಚ್ಚು ಲಾಭದಾಯಕವೂ ಆಗಿದೆ.
ಭಾರತ-ಚೀನಾ ನಡುವಿನ ತಿಕ್ಕಾಟ ಇಂದು ನಿನ್ನೆಯದಲ್ಲ. 60ರ ದಶಕದಲ್ಲಿ ಚೀನಾ ಮಾಡಿದ ದ್ರೋಹದ ಗಾಯ ಇನ್ನೂ ಹಸಿಯಾಗಿಯೇ ಇದೆ. ಒಂದೆಡೆ ಭಾಯಿ ಭಾಯಿ ಎಂದು ಕೈಕುಲುಕಿ ಹೋದ ಚೀನಾ, ಮತ್ತೊಂಡೆ ಬೆನ್ನಿಗೆ ಇರಿಯಿತು. ಅದರಿಂದಾಗಿ ಭಾರತದ ಲೆಕ್ಕವಿಲ್ಲದಷ್ಟು ಸೈನಿಕರು ಹತರಾದರು. ಸ್ನೇಹವನ್ನು ನಂಬಿದ ನೆಹರೂ ಮೋಸ ಹೋದರು. ಆ ದುಃಖವೇ ಅವರನ್ನು ಕೊನೆಗೆ ಬಲಿತೆಗೆದುಕೊಂಡಿತು. ಇದಾದ ಬಳಿಕ ಭಾರತ-ಚೀನಾ ನಡುವೆ ನಿಧಾನಕ್ಕೆ ಸಂಬಂಧ ಚಿಗುರಿತಾದರೂ ಅದು ಆಗಾಗ ಬಿರುಕು ಬಿಡುತ್ತಲೂ ಇತ್ತು.
ಒಂದು ರೀತಿಯಲ್ಲಿ ಸಂಬಂಧವೆನ್ನುವುದು ತೇಪೆ ಕೆಲಸವಾಗಿತ್ತು. ಆಳದಲ್ಲಿ ಚೀನಾವು ಭಾರತವನ್ನು ಪ್ರತಿಸ್ಪರ್ಧಿಯೆಂದೇ ಭಾವಿಸಿಕೊಂಡಿದೆ. ಆದುದರಿಂದಲೇ ಅದು ಒಳಗೊಳಗೆ ಪಾಕಿಸ್ತಾನವನ್ನು ತನ್ನ ಮಿತ್ರನನ್ನಾಗಿಸಿದೆ. ನೇಪಾಳದಲ್ಲಿ ನಕ್ಸಲ್‌ಗಳಿಗೆ ಮಾರಕಾಸ್ತ್ರಗಳನ್ನು ವಿತರಿಸಿ ಭಾರತದ ವಿರುದ್ಧ ಛೂ ಬಿಟ್ಟಿದೆ. ಈಶಾನ್ಯ ಭಾರತದ ಇಂದಿನ ದುಃಸ್ಥಿತಿಯ ಹಿಂದೆ ಚೀನಾದ ಕೈವಾಡ ಬಹಳಷ್ಟಿದೆ. ನಕ್ಸಲೀಯರಿಗೆ ಮಾರಕಾಸ್ತ್ರಗಳನ್ನು ಪೂರೈಸುತ್ತಿರುವುದೇ ಚೀನಾ ಎನ್ನುವ ಮಾತಿದೆ. ಸಂಬಂಧವನ್ನು ಉಳಿಸಿಕೊಳ್ಳುವ ಒಂದೇ ಒಂದು ಕಾರಣಕ್ಕಾಗಿ ಭಾರತ ತುಟಿಬಿಗಿದುಕೊಂಡಿದೆ. ಆದರೆ ಚೀನಾ ಪದೇ ಪದೇ ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಲೇ ಬಂದಿದೆ.
ಈಗಾಗಲೇ ಚೀನಾದ ಕೈಯಲ್ಲಿ ಭಾರತದ ಭಾವನಾತ್ಮಕ ಕ್ಷೇತ್ರವಾಗಿರುವ ಮಾನಸರೋವರವಿದೆ. ಭಾರತೀಯರ ಮನಸ್ಸಿನಂತಿರುವ ಮಾನಸಸರೋವರವನ್ನು ಅದು ಕಲಕುತ್ತಲೇ ಬಂದಿದೆ. ಇಂದು ನಾವು ಪಾಕಿಸ್ತಾನವನ್ನು ಭಾರತದ ಪರಮವೈರಿಯೆಂಬಂತೆ ವೈಭಕರಿಸುತ್ತಾ ಬಂದಿದ್ದೇವೆ. ಗಡಿಯಲ್ಲಿ ಸಣ್ಣ ತಂಟೆ ನಡೆದರೂ ಭಾರತದ ಸಂಘಪರಿವಾರ ‘ಯುದ್ಧ ಯುದ್ಧ’ ಎಂದು ಚೀರುತ್ತದೆ. ಆದರೆ ಪಾಕಿಸ್ತಾನಕ್ಕಿಂತಲೂ ಅತ್ಯಧಿಕ ಭೂಮಿ ಚೀನಾದ ಕೈಯಲ್ಲಿದೆ.
ಶಿವನ ತಂಗುದಾಣವೇ ಅವರ ಹಿಡಿತದಲ್ಲಿದ್ದಾಗಲೂ ಸಂಘಪರಿವಾರ ಬಾಲ ಮಡಚಿಕೂತಿದೆ. ಅಂದರೆ ಸಂಘಪರಿವಾರಗಳಿಗೆ ಬೇಕಾಗಿರುವುದು ಪಾಕಿಸ್ತಾನದ ಜೊತೆಗಿನ ಯುದ್ಧವಲ್ಲ. ಬದಲಿಗೆ ಪಾಕಿಸ್ತಾನದ ಹೆಸರಲ್ಲಿ ಭಾರತವನ್ನು ವಿಚ್ಛಿದ್ರಗೊಳಿಸುವುದು ಅದರ ಉದ್ದೇಶ. ಪಾಕಿಸ್ತಾನದ ಜೊತೆಗೆ ವರ್ತಿಸಿದಂತೆ ಭಾರತ ಚೀನಾದ ಜೊತೆಗೆ ವರ್ತಿಸದೇ ತನ್ನ ಗರಿಷ್ಠ ಸಹನೆಯನ್ನು ಪಾಲಿಸಬೇಕಾಗಿದೆ.
ದೇಶದೊಳಗಿನ ಸಂಘಪರಿವಾರದ ರಾಜಕೀಯ ಅದರೊಳಗೆ ನುಸುಳದಂತೆಯೂ ನೋಡಿಕೊಳ್ಳಬೇಕಾಗಿದೆ. ಪಾಕಿಸ್ತಾನವನ್ನು ನಿರ್ವಹಿಸುವ ರೀತಿಗೂ ಚೀನಾವನ್ನು ನಿರ್ವಹಿಸುವ ರೀತಿಗೂ ವ್ಯತ್ಯಾಸವಿದೆ. ಚೀನಾ ನಮ್ಮ ನೆಲವನ್ನು ಆಕ್ರಮಿಸಿರುವುದು ಇದೇ ವೊದಲಲ್ಲ. ಅರುಣಾಚಲ ತನಗೆ ಸೇರಿದ್ದು ಎಂದು ಈ ಹಿಂದೆ ಚೀನಾ ಹೇಳಿಕೊಂಡಿತ್ತು. ಅಷ್ಟು ಮಾತ್ರವಲ್ಲ, ಅರುಣಾಚಲದ ಮುಖ್ಯಮಂತ್ರಿಯ ಆಗಮನ ಸಾವನ್ನು ನಿರಾಕರಿಸಿತ್ತು. ಆದರೆ ಭಾರತ ಬಲವಾದ ಹೇಳಿಕೆಯ ಮೂಲಕ ಅರುಣಾಚಲದ ಮೇಲಿನ ಹಕ್ಕನ್ನು ಪ್ರತಿಪಾದಿಸಿ, ಉಳಿಸಿಕೊಂಡಿತ್ತು. ಆದರೆ ಅರುಣಾಚಲದ ವಿವಾದ ಮಾತ್ರ ಮುಗಿದಿಲ್ಲ. ಅದಿನ್ನೂ ಲಾವಾರಸದಂತೆ ತಳದಲ್ಲಿ ಹರಿಯುತ್ತಲೇ ಇದೆ.
ಚೀನಾ-ಭಾರತ ನಡುವಿನ ವೈಷಮ್ಯವನ್ನು ಪಾಕಿಸ್ತಾನ ತನಗೆ ಪೂರಕವಾಗಿ ಬಳಸಿಕೊಂಡಿದೆ. ತನ್ನ ಕೈಯಲ್ಲಿದ್ದ ಕಾಶ್ಮೀರದ ಭೂಮಿಯನ್ನು ಚೀನಾಕ್ಕೆ ಒಪ್ಪಿಸುವ ಮೂಲಕ ಅದರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡಿದೆ. ಅಮೆರಿಕದ ಸ್ನೇಹದಿಂದ ಪಾಕಿಸ್ತಾನ ಪಾಠ ಕಲಿತಂತಿಲ್ಲ. ತನ್ನ ಸಾರ್ವಭೌಮತೆಯನ್ನೇ ಅಮೆರಿಕಕ್ಕೆ ಬಲಿಕೊಟ್ಟಿರುವ ಪಾಕಿಸ್ತಾನ ಇದೀಗ ಭಾರತಕ್ಕೆ ಹೆದರಿ ಚೀನಾದ ಜೊತೆ ಸ್ನೇಹ ಬೆಳೆಸಿಕೊಂಡಿದೆ. ಲಡಾಕ್‌ನಲ್ಲಿ ಚೀನಾ ನೆಲೆಯಾಗಿದೆಯಾದರೂ, ಆಳದಲ್ಲಿ ಪಾಕಿಸ್ತಾನದ ಕುಮ್ಮಕ್ಕು ಕೂಡ ಇದೆ. ಇದನ್ನು ಯಾವ ಕಾರಣಕ್ಕೂ ಯುದ್ಧದಿಂದ ಪರಿಹರಿಸುವುದಕ್ಕೆ ಭಾರತ ಮುಂದಾಗಬಾರದು.
ಅಂತಾರಾಷ್ಟ್ರೀಯ ಮಟ್ಟದ ಮಾತುಕತೆಯಲ್ಲೇ ಇದು ಪರಿಹಾರವಾಗುವುದು ಏಷ್ಯಾ ಉಪಖಂಡದ ಶಾಂತಿಯ ದೃಷ್ಟಿಯಿಂದ ಅತ್ಯಗತ್ಯ.ಯುದ್ಧದಿಂದ ಕಳೆದುಕೊಳ್ಳುವುದರ ಹೊರತು ಬೇರೇನೂ ಪಡೆಯುವುದಕ್ಕೆ ಸಾಧ್ಯವಿಲ್ಲ. ಇದರ ಅನುಭವ ಈಗಾಗಲೇ ಉಭಯ ದೇಶಗಳಿಗೂ ಆಗಿದೆ. ಆದುದರಿಂದ, ಲಡಾಕ್‌ನಲ್ಲಿ ಎಲ್‌ಎಸಿ ಒಪ್ಪಂದದ ಪ್ರಕಾರ ಉಭಯ ದೇಶ ತಮ್ಮ ತಮ್ಮ ಗೆರೆಗಳ ಒಳಗಿರುವುದು ಅತ್ಯಗತ್ಯ. 

No comments:

Post a Comment