Thursday, April 25, 2013

ಡೆಂಗ್ ಭೀತಿಯಲ್ಲಿ ಕಾಸರಗೋಡುಕಾಸರಗೋಡು,: ಜಿಲ್ಲೆಯಲ್ಲಿ ಮಾರಕ ಡೆಂಗ್ ಭೀತಿಯಲ್ಲಿದೆ. ಈ ವರ್ಷ ವ್ಯಾಪಕವಾಗಿ ಡೆಂಗ್ ಜ್ವರ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.  ಕಾಞಂಗಾಡ್, ನೀಲೇಶ್ವರ ನಗರಸಭೆ ಸೇರಿದಂತೆ 18ಗ್ರಾಮ ಪಂಚಾಯತ್‌ಗಳಲ್ಲಿ ರೋಗ ಖಚಿತಪಡಿಸಿದೆ. ಈಗಾಗಲೇ 38 ಮಂದಿಯಲ್ಲಿ ಡೆಂಗ್ ಪತ್ತೆಯಾಗಿದೆ. 122 ಮಂದಿ ರೋಗಕ್ಕೆ ತುತ್ತಾಗಿದ್ದರು. ಕಳ್ಳಾರ್ ಪಂ.ನಲ್ಲಿ ತಪಾಸಣೆಗೆ ತಲುಪಿದ 27 ಮಂದಿಯಲ್ಲಿ 9ಮಂದಿಯಲ್ಲಿ ಡೆಂಗ್ ಪತ್ತೆಯಾಗಿದೆ. ಪನತ್ತಾಡಿಯಲ್ಲಿ 20ರಲ್ಲಿ 3 ಮಂದಿ, ಕಯ್ಯೂರ್ ಚೀಮೇನಿಯಲ್ಲಿ  5 ಮಂದಿಯಲ್ಲಿ 4, ಕಿನಾನೂರು ಕರಿಂದಳದಲ್ಲಿ 9 ಮಂದಿಯಲ್ಲಿ 3, ಕಾಞಂಗಾಡ್ ನಗರ ಸಭೆಯಲ್ಲಿ 16ರಲ್ಲಿ ಮೂವರು, ಅಜಾನೂರಿನಲ್ಲಿ 7 ಮಂದಿಯಲ್ಲಿ ನಾಲ್ವರು, ಕೋಡೋಂಬೆಳ್ಳೂರಿನಲ್ಲಿ 9ರಲ್ಲಿ ಇಬ್ಬರು, ವೆಸ್ಟ್ ಎಳೇರಿಯದಲ್ಲಿ ನಾಲ್ವರಲ್ಲಿ ಓರ್ವ ಕುಂಬಳೆಯಲ್ಲಿ ಇಬ್ಬರಲ್ಲಿ ರೋಗ ಖಚಿತಪಡಿಸಿದೆ.
ಕುತ್ತಿಕೋಲ್, ಈಸ್ಟ್ ಎಳೇರಿ, ಬಲ್ಲಾಳ್ ಪಂಚಾಯತ್‌ಗಳಲ್ಲಿ ರೋಗ ಪತ್ತೆಯಾಗಿದೆ. ಇನ್ನಷ್ಟು ಮಂದಿ ರೋಗಕ್ಕೆ ತುತ್ತಾಗಿದ್ದಾರೆಂದು ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಅಡಿಕೆ ತೋಟ, ರಬ್ಬರ್ ತೋಟಗಳಲ್ಲಿ ಡೆಂಗ್ ಹರಡುವ ಸೊಳ್ಳೆಗಳ ತಾಣವಾಗಿದೆ. ಕಂಗಿನ ಹಾಳೆಯಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಡೆಂಗ್ ಮಾರಣಾಂತಿಕವಾಗಿರುವುದರಿಂದ ಜನರು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಜ್ವರ, ಶರೀರ ನೋವು, ಕಣ್ಣಿನ ಒಳಭಾಗದಲ್ಲಿ ಹಾಗೂ ದೇಹದಲ್ಲಿ ಕೆಂಪು ಕಲೆ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಶೀಘ್ರವಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಇದರಿಂದ ಅಪಾಯವು ಹೆಚ್ಚಾಗಲಿದೆ. ಡೆಂಗ್ ನಿಯಂತ್ರಣ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೋಗ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಭೆ ತೀರ್ಮಾನಿಸಿತು.  ಮಾತ್ರವಲ್ಲ ಸ್ವಚ್ಛತೆಗೆ ಆದ್ಯತೆ ನೀಡಲು ತೀರ್ಮಾನಿಸಿತು.ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ವಿಲೆವಾರಿ ಮಾಡುವವರ ವಿರುದ್ಧ ಶಿಕ್ಷಾರ್ಹ ಕ್ರಮ ತೆಗೆದು ಕೊಳ್ಳಲಾಗುವುದು.
ಹೊಳೆ, ರಸ್ತೆ ಬದಿಗಳಲ್ಲಿ ಮಾಲಿನ್ಯ ಎಸೆಯುವವರನ್ನು ಪತ್ತೆಹಚ್ಚಲು ಕ್ರಮ ತೆಗೆದುಕೊಳ್ಳಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು  ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಸಕ ಇ. ಚಂದ್ರ ಶೇಖರನ್, ಉಪ ಜಿಲ್ಲಾಧಿಕಾರಿ ವೆಂಕಟೇಶ್‌ಪತಿ ಹಾಗೂ ಆರೋಗ್ಯಧಿಕಾರಿ, ಕುಟುಂಬಶ್ರೀ ಹಾಗೂ ಇನ್ನಿತರ ಜಿಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು.   

No comments:

Post a Comment