Thursday, April 11, 2013

ಮಅದನಿ ವಿಚಾರಣೆ ತ್ವರಿತ ಗತಿಯಲ್ಲಿ ನಡೆಯಲಿ: ಅಹಿಂದ ಒಕ್ಕೂಟ ಆಗ್ರಹ


ಏಪ್ರಿಲ್ -11-2013

ಬೆಂಗಳೂರು,: ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಸಂಬಂಧ ರಾಜ್ಯದ ಪೊಲೀಸರು ಬಂಧಿಸಿರುವ ಪಿಡಿಪಿ ಮುಖ್ಯಸ್ಥ ಅಬ್ದುನ್ನಾಸರ್ ಮಅದನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ  ಮಾನವೀಯ  ನೆಲೆಯಲ್ಲಿ  ಜಾಮೀನು ಮಂಜೂರು ಮಾಡಿ ತುರ್ತು ಚಿಕಿತ್ಸೆ ಕೊಡಿಸಬೇಕು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಹಿಂದ ಒಕ್ಕೂಟ ಆಗ್ರಹಿಸಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕುಗಳ ಹೋರಾಟಗಾರ ಅಶೋಕ್ ಮ್ಯಾಥ್ಯೂ, ನ್ಯಾಯಾಲಯವು ಮಅದನಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ನೀಡಿರುವ ಸಲಹೆಯನ್ನು ಸರಕಾರ ನಿರ್ಲಕ್ಷಿಸಿದೆ. ಅಲ್ಲದೆ,  ರಹಸ್ಯವಾಗಿ ಪ್ರಕರಣದ ತನಿಖೆ ನಡೆಸುವ ಮೂಲಕ ಮಅದನಿಗೆ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದರು.ಅಬ್ದುನ್ನಾಸರ್ ಮಅದನಿ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇರಳ  ಸರಕಾರ ‘ರಾಜೀವ್‌ಗಾಂಧಿ  ಪ್ರಶಸ್ತಿ’ ನೀಡಿದೆ. ಅಲ್ಲದೆ, ಅವರಿಗೆ ಇನ್ನಿತರ ಸಂಘಟನೆಗಳ ಮೂಲಕ ಹಲವಾರು ಪ್ರಶಸ್ತಿಗಳು ಸಂದಿವೆ. ಇಂತಹ ವ್ಯಕ್ತಿಯನ್ನು ಬಿಜೆಪಿ ಸರಕಾರ ಮತ್ತು ಆರ್‌ಎಸ್‌ಎಸ್ ರಾಜಕೀಯ ಪ್ರೇರಿತವಾಗಿ ಬಲಿಪಶು ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅನಂತರ ಮಾತನಾಡಿದ ಸಂಘಟನೆಯ ಸದಸ್ಯ  ಜಗದೀಶ್, ಕಾಸರಗೋಡಿನಿಂದ ತಿರುವನಂತಪುರದವರೆಗೆ ಸ್ವತಃ ‘ಭಯೋತ್ಪಾದನಾ ವಿರೋಧಿ ದೇಶ ಸುರಕ್ಷಾ ಯಾತೆ’ ಮಾಡಿರುವ ಮಅದನಿ ಭಯೋತ್ಪಾದನಾ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಕೇವಲ ಸುಳ್ಳು ಆರೋಪವಾಗಿದ್ದು, ಇದು ಬಿಜೆಪಿಯ ಓಟ್ ಬ್ಯಾಂಕ್ ರಾಜಕಾರಣದ ಸಂಚಾಗಿದೆ ಎಂದು ಆರೋಪಿಸಿದರು. ಮರ್ ಬಸಲಿಯಾಸ್ ಮಾರ್ತೋಮಾ ಮಾತನಾಡಿ, ಆರೆಸೆಸ್ಸ್‌ನವರು ಸಿಡಿಸಿದ ಬಾಂಬ್‌ನಿಂದಾಗಿ ಮಅದನಿ ತಮ್ಮ ಒಂದು ಕಾಲನ್ನು  ಕಳೆದುಕೊಂಡಿದ್ದಾರೆ.
ಅಲ್ಲದೆ, ಗಂಭೀರ ಸ್ವರೂಪದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಸೇರಿದಂತೆ ಇನ್ನಿತರ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ತನಿಖೆಯ ವೇಳೆ ಪೊಲೀಸರು ನೀಡಿದ ಹೈವೋಲ್ಟೇಜ್ ಬೆಳಕಿನಿಂದ ಅವರ ಕಣ್ಣಿನ ರೆಟಿನಾ ಒಡೆದಿದ್ದು ಒಂದು ಕಣ್ಣಿನ ದೃಷ್ಟಿ ನಷ್ಟವಾಗಿದೆ ಎಂದು ಅವರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ದೇವಿ ಪ್ರಸಾದ್‌ಶೆಟ್ಟಿ, ಸಿನಿಮಾ ನಿರ್ದೇಶಕ ಕೆ.ಪಿ.ಶಶಿ, ಮುಸ್ಲಿಂ ಲೀಗ್‌ನ ಮುಹಮ್ಮದ್ ಇಲ್ಯಾಸ್, ಜೆಡಿಎಸ್‌ನ ರಿಜ್ವಾನ್ ಬಪ್ನದ್, ಕೇರಳ ಜೆಎಂಫ್‌ನ ಷಹೀರ್ ಮೌಲ್ವಿ, ಪಿಡಿಪಿಯ ಮುಹಮ್ಮದ್ ರಜೀಬ್, ಬಶೀರ್ ಮಂಜೇಶ್ವರ್, ಶಫಿ ನದ್ವಿ, ಹನೀಫಾ ಪೊಸೊಅತ್ ಮತ್ತು ರಝಾಖ್ ಮಂಗಳೂರು ಹಾಜರಿದ್ದರು.

No comments:

Post a Comment