Sunday, April 7, 2013

ಮಣಿಪುರದ ಪ್ರಾಣ ಸಂಕಟಏಪ್ರಿಲ್ -06-2013

ಮಣಿಪುರದಲ್ಲಿ ಇತ್ತೀಚೆಗೆ ನಡೆದ 6 ಎನ್‌ಕೌಂಟರ್ ಪ್ರಕರಣಗಳು ನಕಲಿಯೆಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ಯೊಂದು ಹೇಳಿದೆ. ಈ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಕೊಲ್ಲಲ್ಪಟ್ಟ 12 ವರ್ಷದ ಬಾಲಕನೊಬ್ಬ ಸೇರಿದಂತೆ ಬಲಿಯಾದವರು ಯಾರೂ ಕ್ರಿಮಿನಲ್ ಹಿನ್ನಲೆ ಹೊಂದಿರಲಿಲ್ಲ ಎಂದು ಸಮಿತಿ ತಿಳಿಸಿದೆ. ನಾಗ ಜನತಾ ಚಳವಳಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನು ಮಣಿಪುರದಲ್ಲಿ ನಿಯೋಜಿತ ಗೊಂಡಿರುವ ಭದ್ರತಾ ಪಡೆಗಳು ಅನುಸರಿಸಿಲ್ಲ ಎಂಬುದು ಈ ವರದಿಯಿಂದ ಸ್ಪಷ್ಟವಾಗುತ್ತದೆ. ಈಶಾನ್ಯ ರಾಜ್ಯವಾದ ಮಣಿಪುರದ ಜನತೆಯ ಗೋಳಿಗೆ ಕೊನೆಯೆಂಬುದಿಲ್ಲ.  ಗುಡ್ಡಗಾಡು ಮತ್ತು ಕಣಿವೆ ಪ್ರದೇಶಗಳಿಂದ ಕೂಡಿದ ಈ ರಾಜ್ಯದ ಪ್ರಜೆಗಳನ್ನು ಸರಕಾರ ಮನುಷ್ಯರೆಂದು ಪರಿಗಣಿಸಿಲ್ಲ.
ತಮ್ಮ ಹಕ್ಕುಗಳಿಗಾಗಿ ಹೋರಾಡುವ ಈ ಜನರನ್ನು ಹತ್ತಿಕ್ಕಲೆಂದು ಇಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯೆಂಬ ಕರಾಳ ಕಾನೂನೊಂದು ಐದು ದಶಕಗಳಿಂದ ಅಸ್ತಿತ್ವದಲ್ಲಿದೆ. ತಮ್ಮ ಪ್ರದೇಶದ ಸ್ವಾಯತ್ತೆಗಾಗಿ ಹೋರಾಡುತ್ತಿದ್ದ ಬುಡಕಟ್ಟು ಜನರನ್ನು ಹತ್ತಿಕ್ಕಲು ರೂಪಿಸಿದ ಕರಾಳ ಶಾಸನದಿಂದ ಮಣಿಪುರದ ಜನತೆ ಬಳಲಿ ಬೆಂಡಾಗಿ ಹೋಗಿದೆ. ನಕಲಿ ಎನ್‌ಕೌಂಟರ್‌ಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು ನಿತ್ಯ ಸಂಗತಿಗಳಾಗಿವೆ.
ಮಣಿಪುರ ಜನತೆಯ ಪ್ರಾಣವನ್ನು ಹೀರುತ್ತಿರುವ ಈ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾನೂನನ್ನು ರದ್ದುಪಡಿಸ ಬೇಕೆಂದು ಇರೋಮ್ ಶರ್ಮಿಳಾ ಚಾನು ಕಳೆದ 12 ವರ್ಷಗಳಿಂದ ನಿರಶನ ನಡೆಸುತ್ತಿದ್ದಾರೆ. ಉಗ್ರ ಹೋರಾಟ ಮಾಡುವವರಿಗೆ ಶಾಂತಿಯ ಉಪದೇಶ ನೀಡುವ ಸರಕಾರವು ಗಾಂಧಿ ಮಾರ್ಗದಲ್ಲಿ ನಿರಶನ ನಡೆಸಿದ ಶರ್ಮಿಳಾರ ನೋವಿಗೆ ಈವರೆಗೂ ಸ್ಪಂದಿಸಿಲ್ಲ.
ಅಲ್ಲಿರುವ ಸೇನಾ ಪಡೆಯ ಯೋಧರು ಬುಡಕಟ್ಟು ಯುವತಿಯರ ಮೇಲೆ ಅತ್ಯಾಚಾರ ನಡೆಸಿದ ಅನೇಕ ಪ್ರಕರಣಗಳು ನಡೆದಿವೆ. ಇದನ್ನು ಪ್ರತಿಭಟಿಸಿ ಮಣಿಪುರದ ರಾಜಧಾನಿ ಇಂಫಾಲದಲ್ಲಿ ಅಲ್ಲಿನ ಮಹಿಳೆಯರು ಬಟ್ಟೆ ಬಿಚ್ಚಿ ಬೆತ್ತಲೆ ಮೆರವಣಿಗೆ ಮಾಡಿ ಸೇನಾ ಪಡೆಗಳ ಯೋಧರ ದುಷ್ಕೃತ್ಯವನ್ನು ಖಂಡಿಸಿದ್ದರು.
ಈ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾನೂನಿನಿಂದ ಮಣಿಪುರದಲ್ಲಿ ದಂಗೆಕೋರರ ಹಾವಳಿಯೇನೂ ಕಡಿಮೆಯಾಗಿಲ್ಲ. 1980ರಲ್ಲಿ ದಂಗೆಕೋರರ 5 ಗುಂಪುಗಳು ಮಾತ್ರ ಇದ್ದವು. ಈಗ ಅವುಗಳ ಸಂಖ್ಯೆ 35ಕ್ಕಿಂತ ಹೆಚ್ಚಾಗಿದೆ. ಭದ್ರತಾ ಪಡೆಗಳಿಂದ ಈವರೆಗೂ 5 ಸಾವಿರ ಮಂದಿ ಕೊಲ್ಲಲ್ಪಟ್ಟಿದ್ದಾರೆ. ಅನೇಕ ಮಂದಿ ಗಂಭೀರ ಗಾಯಗಳಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಂತಲೇ ಕರಾಳ ಕಾನೂನನ್ನು  ರದ್ದುಮಾಡಬೇಕೆಂದು ನ್ಯಾಯಮೂರ್ತಿ ಜೀವನ ರೆಡ್ಡಿ ಆಯೋಗ ಶಿಫಾರಸು ಮಾಡಿದೆ. ಆದರೂ ಸರಕಾರ ಒಂದು ಹಠ ಹಿಡಿದಿದೆ.
ಸಶಸ್ತ್ರ ಪಡೆಗಳ ಈ ವಿಶೇಷಾಧಿಕಾರ ಕಾಯ್ದೆ ಎಷ್ಟು ದುರುಪಯೋಗವಾಗುತ್ತಿದೆ ಎಂದರೆ ಈ ಕಾನೂನಿನ ರಕ್ಷಣೆ ಪಡೆದು ಭದ್ರತಾ ಪಡೆಯ ಕೆಲವರು ಮಾದಕ ವಸ್ತುಗಳ ಕಳ್ಳ ವ್ಯಾಪಾರ ನಡೆಸಿದ್ದಾರೆ. ಇದು ಕೋಟ್ಯಂತರ ರೂ.ಗಳ ವಹಿವಾಟು ಆಗಿದೆ. ಇಂತಹ ದಂಧೆಯಲ್ಲಿ ತೊಡಗಿದ್ದ ಇಂಫಾಲ ಸೇನಾಧಿಕಾರಿ ಕರ್ನಲ್ ಅಜಯ್ ಚೌಧುರಿ ಎಂಬಾತನನ್ನು ಇತ್ತೀಚೆಗೆ ಬಂಧಿಸಿ ಆತನಿಂದ 28 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳ ವ್ಯಾಪಾರ ಒಂದೆಡೆ ಅವ್ಯಾಹತವಾಗಿ ನಡೆದಿದ್ದರೆ ಇನ್ನೊಂದೆಡೆ ಮಣಿಪುರದಲ್ಲಿ ಏಡ್ಸ್ ವ್ಯಾಧಿ ವ್ಯಾಪಕವಾಗಿ ಹಬ್ಬುತ್ತಿದೆ. ಸಾವಿರಾರು ಯುವಕ ಯುವತಿಯರು ಹೆಚ್‌ಐವಿಗೆ ಬಲಿಯಾಗುತ್ತಿದ್ದಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಸರಕಾರವೂ ಈ ಅನೈತಿಕ ದಂಧೆಗೆ ಕುಮ್ಮಕ್ಕು ಕೊಡುತ್ತಿದೆ. ಹೀಗಾಗಿ ಒಂದು ಕಾಲದಲ್ಲಿ ರಮಣೀಯವಾಗಿದ್ದ ಮಣಿಪುರ ಇಂದು ಅಸಹನೀಯ ನರಕವಾಗಿದೆ.
ವೇಶ್ಯಾವಾಟಿಕೆ ಹಾಗೂ ಮಾದಕ ವಸ್ತುಗಳ ವ್ಯಾಪಾರದ ವಿರುದ್ಧ ಬೀದಿಗೆ ಇಳಿದು  ಮಣಿಪುರದ ಜನತೆ ಹೋರಾಡುತ್ತಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಮಹಿಳೆಯರು ನೇರವಾಗಿ ಕಾರ್ಯಾಚರಣೆಗೆ ಇಳಿದು ಇಂತಹ ಮಾದಕ ವಸ್ತುಗಳ ವ್ಯಾಪಾರಿಗಳನ್ನು ಬಂಧಿಸ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ಇಂಫಾಲದ ವಿಮಾನ ನಿಲ್ದಾಣದ ಬಳಿ ಹಾಗೂ ಅಂಚೆ ಕಚೇರಿಯ ಹತ್ತಿರ ಕೋಟ್ಯಂತರ ರೂ. ಮೊತ್ತದ ನಾರ್ಕೊಟಿಕ್ ವಸ್ತುಗಳು ಪತ್ತೆಯಾಗಿದ್ದರೂ ಈ ದಂಧೆಯಲ್ಲಿ ತೊಡಗಿದ್ದ ಪ್ರಭಾವಿ ವ್ಯಕ್ತಿಗಳನ್ನು ಬಂಧಿಸಲು ರಾಜ್ಯ ಸರಕಾರ ಅನುಮತಿ ನೀಡಿಲ್ಲ.
ಮಣಿಪುರದಲ್ಲಿ ಸರಕಾರ ಇದೇ ರೀತಿ ದಮನ ನೀತಿಯನ್ನು ಅನುಸಿರಿಸಿದರೆ ಅಲ್ಲಿನ ಜನತೆಯ ಹೋರಾಟ ಇನ್ನಷ್ಟು ಉಗ್ರರೂಪ ತಾಳುತ್ತದೆ. ಈಗ ಇರೋಮ್ ಶರ್ಮಿಳಾರಂಥವರು ಗಾಂಧಿ ಮಾರ್ಗದಲ್ಲಿ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ಜನತೆ ಅಯುಧ ಹಿಡಿದು ಬೀದಿಗೆ ಬರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಮಣಿಪುರ, ಮೇಘಾಲಯ, ಅಸ್ಸಾಂ, ನಾಗಲ್ಯಾಂಡ್, ಅರುಣಾಚಲ ಸೇರಿದಂತೆ ಈಶಾನ್ಯ ರಾಜ್ಯಗಳ ಸಂಸ್ಕೃತಿ, ಭಾಷೆ, ಜೀವನ ವಿಧಾನ ವಿಭಿನ್ನವಾಗಿದೆ. ಈ ಜನರ ಅಸ್ಮಿತೆಯನ್ನು ಸರಕಾರ ಮನ್ನಿಸಬೇಕಾಗಿದೆ. ಆ ಮೂಲಕ ಅವರ ಹೃದಯವನ್ನು ಗೆದ್ದರೆ ಮಾತ್ರ ಸಮಸ್ಯೆಗೆ ಶಾಂತಿಯುತವಾದ ಪರಿಹಾರ ದೊರೆತಂತಾಗುತ್ತದೆ. 

No comments:

Post a Comment