Tuesday, April 2, 2013

ಇಟಲಿಯ ನಾವಿಕರಿಂದ ಬೆಸ್ತರ ಹತ್ಯೆ ಪ್ರಕರಣ: ತನಿಖೆ ಎನ್‌ಐಎಗೆ ಹಸ್ತಾಂತರ ಏಪ್ರಿಲ್ -02-2013

ಹೊಸದಿಲ್ಲಿ,: ಕೇರಳ ಸಮುದ್ರ ಪ್ರದೇಶದಲ್ಲಿ ಇಟಲಿಯ ನಾವಿಕರಿಂದ ಇಬ್ಬರು ಭಾರತೀಯ ಬೆಸ್ತರ ಹತ್ಯೆ ಪ್ರಕಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸೋಮವಾರ ಹಸ್ತಾಂತರಿಸಲಾಗಿದೆ.
ಬೆಸ್ತರ ಹತ್ಯೆ ಪ್ರಕರಣದ ಆರೋಪಿಗಳಾದ ಇಟಲಿಯ ಇಬ್ಬರು ನಾವಿಕರ ವಿಚಾರಣೆಯನ್ನು ಭಾರತದಲ್ಲಿ ನಡೆಸಲು ಕೇರಳ ಸರಕಾರಕ್ಕೆ ಅಧಿಕಾರವಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ನಿರ್ಧರಿಸಿತ್ತು.

ಎನ್‌ಐಎ ಪ್ರಕರಣದ ತನಿಖೆಯನ್ನು ಹೊಸತಾಗಿ ಆರಂಭಿಸಲಿದ್ದು, ಅದು ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಅಥವಾ ಸುಪ್ರೀಂಕೋರ್ಟ್‌ನ ಸಮಾಲೋಚನೆಯೊಂದಿಗೆ ಕೇಂದ್ರ ಸರಕಾರವು ಸ್ಥಾಪಿಸುವ ಇನ್ನಾವುದೇ ವಿಶೇಷ ಕೋರ್ಟ್‌ನಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಲಿದೆಯೆಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಇಟಲಿಯ ಎನ್ರಿಕಾ ಲೆಕ್ಸಿ ಹಡಗಿನ ಇಬ್ಬರು ನಾವಿಕರಾದ ಮ್ಯಾಸ್ಸಿಮಿಲಿಯಾನೊ ಲ್ಯಾಟ್ಟೊರ್ ಹಾಗೂ ಸಲ್ವದೊರ್ ಗಿರೊಮ್ ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆಗೈದ ಆರೋಪಿಗಳಾಗಿದ್ದಾರೆ.
ಕೇರಳದ ಕರಾವಳಿಯಿಂದ 20.5 ನಾಟಿಕಲ್ ಮೈಲ್ ದೂರದ ಸಾಗರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವು ಕೇರಳ ಪೊಲೀಸರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಪ್ರಕರಣವನ್ನು ಕೇಂದ್ರ ಸರಕಾರವು ವಿಶೇಷ ನ್ಯಾಯಾಲಯದಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್ ಜನವರಿ 18ರಂದು ಆದೇಶ ನೀಡಿತ್ತು

No comments:

Post a Comment