Friday, April 19, 2013

ಈ ವಿಶ್ವದಲ್ಲಿರುವುದು ಎರಡೇ ಸಮುದಾಯಏಪ್ರಿಲ್ -19-2013
ಈ ವಿಶ್ವದಲ್ಲಿರುವುದು ಎರಡೇ ಸಮುದಾಯ

ಬಿ. ಎಂ. ಬಶೀರ್

ಭಾರತದಲ್ಲಿ ಅಲ್ಪಸಂಖ್ಯಾತರು ಕೇವಲ ಬಿಜೆಪಿಯಿಂದ ಅಥವಾ ಮೋದಿಯಂತಹ ನಾಯಕ ರಿಂದಷ್ಟೇ ಆತಂಕವನ್ನು ಎದುರಿಸುತ್ತಾರೆ ಎನ್ನುವುದು ಎಷ್ಟು ಸತ್ಯ? ಸಿಖ್ ಹತ್ಯಾಕಾಂಡದಲ್ಲಿ ಕೇವಲ ಕಾಂಗ್ರೆಸಿಗರಷ್ಟೇ ಭಾಗವಹಿಸಿದ್ದರು ಎನ್ನುವುದು ಎಷ್ಟರಮಟ್ಟಿಗೆ ಸತ್ಯ? ಈ ಎರಡು ಪ್ರಶ್ನೆಗಳನ್ನು ನಾವು ಉಜ್ಜಿ ನೋಡಬೇಕಾಗಿದೆ. ಸಿಖ್ ಹತ್ಯಾಕಾಂಡ ಈ ದೇಶದಲ್ಲಿ ನಡೆದುದು ಇಂದಿರಾಗಾಂಧಿಯ ಹತ್ಯೆಯ ಕಾರಣಕ್ಕಾಗಿಯಷ್ಟೇ ಅಲ್ಲ, ಸಿಕ್ಖರು ಈ ದೇಶದಲ್ಲಿ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೂ ಅವರ ಮೇಲೆ ಅಂದು ಆ ಪರಿಯ ಹಿಂಸೆ ನಡೆಯಿತು. ಆ ಹಿಂಸೆಯಲ್ಲಿ ಭಾಗವಹಿಸಿದ್ದು ಕೇವಲ ಕಾಂಗ್ರೆಸ್ ಕಾರ್ಯ ಕರ್ತರು ಅಥವಾ ಮುಖಂಡರು ಮಾತ್ರ ಎನ್ನುವುದು ಅತಿ ದೊಡ್ಡ ಸುಳ್ಳು. ಆಳದಲ್ಲಿ ಸಿಖ್ ಸಮು ದಾಯದ ಜೊತೆಗೆ ತೀವ್ರ ಅಸಮಾಧಾನವನ್ನು ಹೊಂದಿದ್ದ ಆರೆಸ್ಸೆಸ್ ನಾಯಕರೂ ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ಅಸಹನೆಯನ್ನು  ತೀರಿಸಿ ಕೊಂಡರು.
ಸಿಖ್ ಹತ್ಯಾಕಾಂಡ ದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮುಖಂಡರಿದ್ದರೂ, ಆಳದಲ್ಲಿ ಆರೆಸ್ಸೆಸ್ ಮನಸ್ಸು ಭಾರೀ ಕೆಲಸ ವನ್ನು ಮಾಡಿತ್ತು. ಸಿಖ್ಖರು ಅಂದು ಆ ಪರಿಯ ಹಿಂಸೆಯನ್ನು ಎದುರಿಸಿದ್ದು ಯಾಕೆಂದರೆ, ಅವರು ಈ ದೇಶದ ಅಲ್ಪ ಸಂಖ್ಯಾತ ಸಮುದಾಯ ವಾಗಿದ್ದರು.
ವಿಶ್ವದಲ್ಲಿ ‘ಅಲ್ಪಸಂಖ್ಯಾತ’ ಎನ್ನುವುದೇ ಒಂದು ಸಮುದಾಯ. ಇವರು ಮುಸ್ಲಿಮರಾಗಿ ರಬಹುದು, ಹಿಂದೂಗಳಾಗಿರಬಹುದು, ಬೌದ್ಧ ರಾಗಿರಬಹುದು, ತಮಿಳರಾಗಿರಬಹುದು. ಭಾರತದಲ್ಲಿ ಮುಸ್ಲಿಮರ ಮೇಲೆ ಹೇಗೆ ಹಿಂಸೆ, ದಬ್ಬಾಳಿಕೆ ನಡೆಯುತ್ತಿದೆಯೋ ಹಾಗೆಯೇ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೂ ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಯಾಕೆಂದರೆ ಹಿಂದೂಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು.
ಬಾಂಗ್ಲಾದಲ್ಲೂ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ಯಾಕೆಂದರೆ ಅಲ್ಲಿ ಅವರದು ಅಲ್ಪಸಂಖ್ಯಾತ ಸಮುದಾಯ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಬೌದ್ಧರ ಮೇಲೆ ಶಂಕರಾಚಾರ್ಯ ನೇತೃತ್ವದಲ್ಲಿ ಭಾರೀ ನರಮೇಧ ನಡೆಯಿತು. ಬೌದ್ಧರನ್ನು ಕಂಡ ಕಂಡಲ್ಲಿ ಅಟ್ಟಾಡಿಸಿ ಅವರನ್ನು ಕೊಂದು ಹಾಕಲಾಯಿತು. ಇಂದು ಅದೇ ಬೌದ್ಧರು ಶ್ರೀಲಂಕಾದಲ್ಲಿ, ಮ್ಯಾನ್ಮಾರ್‌ನಲ್ಲಿ ರಾಕ್ಷಸರಾಗಿ ಮೆರೆದಿರುವುದನ್ನು ನಾವು ಕಂಡಿದ್ದೇವೆ. ಬೌದ್ಧ ಧರ್ಮವನ್ನು ನಾವು ಅಹಿಂಸೆಯ ಸಂಕೇತ ಎಂದು ಕೊಂಡಾಡುತ್ತೇವೆ.
ಜಗತ್ತಿನಲ್ಲಿ ಬೌದ್ಧರು ಬಹುಸಂಖ್ಯಾತರಾಗಿ ರುವಲ್ಲೆಲ್ಲ ಹಿಂಸೆ ಬರ್ಬರ ರೂಪವನ್ನು ತಾಳಿದೆ. ಥಾಯ್ಲೆಂಡ್‌ನಲ್ಲಿ 2004ರಲ್ಲಿ ನಡೆದ ಕೋಮು ಗಲಭೆಯಲ್ಲಿ ಒಂದೆರಡು ದಿನಗಳಲ್ಲಿ 200 ಮಂದಿ ಅಮಾಯಕ ಮುಸ್ಲಿಮರನ್ನು ಧರ್ಮದ ಹೆಸರಿನಲ್ಲಿ ಇದೇ ಬೌದ್ಧರು ಕೊಂದು ಹಾಕಿದ್ದರು. ಮ್ಯಾನ್ಮಾರ್‌ನಲ್ಲಿ ಬೌದ್ಧರು ಕ್ರೌರ್ಯ ಮೆರೆಯು ತ್ತಿರುವುದನ್ನು ಕಳೆದ ಕೆಲವು ತಿಂಗಳಿನಿಂದ ನೋಡುತ್ತಿದ್ದೇವೆ. ಜಗತ್ತಿನ ಅತಿ ಸಣ್ಣ ಧರ್ಮ ವಾಗಿರುವ ಬೌದ್ಧಧರ್ಮ ಅವಕಾಶ ಸಿಕ್ಕಿದಾಗ ಯಾವುದೇ ಬಹುಸಂಖ್ಯಾತ ಧರ್ಮಕ್ಕಿಂತ ಕಡಿಮೆ ಹಿಂಸೆಯನ್ನು ಎಸಗಲಿಲ್ಲ. ಶ್ರೀಲಂಕಾದ ಹಿಂಸೆಯಲ್ಲಿ ಬೌದ್ಧ ಸನ್ಯಾಸಿಗಳ ನೇರ ಪಾತ್ರವಿದೆ ಎನ್ನುವುದು ಈಗಾಗಲೇ ವರದಿಯಿಂದ ಬಯಲಾಗಿದೆ.
ಆದುದರಿಂದಲೇ, ನಾವು ಭಾರತದ ಕೋಮು ಗಲಭೆಯನ್ನು ಬರೇ ಬಿಜೆಪಿಗಷ್ಟೇ ನಂಟು ಹಾಕುವುದಕ್ಕಾಗುವುದಿಲ್ಲ. ಬ್ರಾಹ್ಮಣ್ಯವೆನ್ನುವುದು ಮೈಗೂಡಿಸಿಕೊಂಡಿರುವುದು ಕೇವಲ ಬಿಜೆಪಿ ಮಾತ್ರವಲ್ಲ. ಇಲ್ಲಿನ ಕಾಂಗ್ರೆಸ್, ಎಡಪಕ್ಷಗಳ ನಾಯಕರ ಆಳದಲ್ಲೂ ಬ್ರಾಹ್ಮಣ ಹೆಡೆಯಾಡು ವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಬಿಜೆಪಿ ಸರಕಾರಗಳೆಲ್ಲ ಅಳಿದು ಇಡೀ ದೇಶ ಕಾಂಗ್ರೆಸ್‌ಮಯವಾದರೆ ಇಲ್ಲಿ ಕೋಮುಗಲಭೆ ಶಾಶ್ವತವಾಗಿ ಅಳಿದು ಹೋಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ.
ಈ ದೇಶದ ಇತಿಹಾಸ ವನ್ನು ಗಮನಿಸಿದರೆ, ಹೆಚ್ಚಿನ ಕೋಮುಗಲಭೆಗಳಲ್ಲಿ ಕೇವಲ ಬಿಜೆಪಿ ಮತ್ತು ಆರೆಸ್ಸೆಸ್ಸಿಗರು ಮಾತ್ರ ಭಾಗವಹಿಸಿರುವುದಲ್ಲ. ಆಳದಲ್ಲಿ ಕಾಂಗ್ರೆಸ್‌ನ ಬಹುತೇಕ ನಾಯಕರು ಬಿಜೆಪಿ ಯನ್ನು ಇಷ್ಟಪಡದಿದ್ದರೂ, ಅವರ ಕೋಮು ನಿಲುವನ್ನು ಇಷ್ಟಪಡುತ್ತಾರೆ. ಅನೇಕ ಕಾಂಗ್ರೆಸ್ ನಾಯಕರು ಆಳದಲ್ಲಿ ಆರೆಸ್ಸೆಸ್‌ನ ‘ದೇಶಭಕ್ತಿ’ ಯನ್ನು ಇಷ್ಟಪಡುತ್ತಾರೆ. ಯಾಕೆಂದರೆ, ಆ ದೇಶಭಕ್ತಿ, ಮುಸ್ಲಿಮರನ್ನು ಅಥವಾ ಅಲ್ಪಸಂಖ್ಯಾತ ರನ್ನು ದ್ವೇಷಿಸುತ್ತದೆ.
ಈ ದೇಶದಲ್ಲಿ ಕೋಮುಗಲಭೆ ಸಂಭವಿಸಿದ ಇಸವಿ ಮತ್ತು ಆಗ ಯಾವ ಸರಕಾರವಿತ್ತು ಎನ್ನುವುದನ್ನು ಗಮನಿಸಿದರೆ ಇದು ಅರ್ಥ ವಾಗುತ್ತದೆ. 1990ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಭೀಕರ ಕೋಮುಗಲಭೆಗೆ ಸುಮಾರು 400 ಮಂದಿ ಮುಸ್ಲಿಮರು ಬಲಿಯಾದರು. ಈ ಸಂದರ್ಭದಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಸರಕಾರ ವಿತ್ತು. ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿದ್ದರು. 1990ರಲ್ಲಿ ಅಲಿಘರ್‌ನಲ್ಲಿ ನಡೆದ ಕೋಮು ಗಲಭೆಗೆ ಸುಮಾರು ೨೦೦ ಅಲ್ಪಸಂಖ್ಯಾತರು ಬಲಿಯಾದರು.
ಆಗ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಇದ್ದುದು ಮುಲಾಯಂ ಸಿಂಗ್ ಯಾದವ್. 1992ರಲ್ಲಿ ಸೂರತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಸುಮಾರು 200 ಮಂದಿ ಬಲಿಯಾದರು. ಆಗ ಅಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಆಳ್ವಿಕೆ ನಡೆಸುತ್ತಿತ್ತು. 1993ರಲ್ಲಿ ಮುಂಬೈಯಲ್ಲಿ ಭೀಕರ ಕೋಮುಗಲಭೆ ನಡೆಯಿತು. ಸುಮಾರು 1000 ಸಾವಿರ ಜನರು ಅದಕ್ಕೆ ಬಲಿಯಾದರು. ಆಗ ಅಲ್ಲಿದ್ದ ಸರಕಾರ ಕಾಂಗ್ರೆಸ್. ಸುಧಾಕರ ನಾಯ್ಕ್ ಮುಖ್ಯಮಂತ್ರಿ ಯಾಗಿದ್ದರು.
ಆ ಸಾವು ನೋವಿನ ಗಾಯಗಳು ಇನ್ನೂ ಒಣಗಿಲ್ಲ. ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಎಲ್ಲ ಬಿಡಿ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೇ ಬಾಬರೀ ಮಸೀದಿ ಕುಸಿದು ಬಿತ್ತು. ಆಗ ಈ ದೇಶದ ಪ್ರಧಾನಿ ಯಾಗಿದ್ದವರು ನರಸಿಂಹ ರಾವ್. ಈತ ಧರ್ಮದಲ್ಲಿ ಮಾತ್ರ ಬ್ರಾಹ್ಮಣನಲ್ಲ. ಮನಸ್ಸಿನಲ್ಲೂ ಬ್ರಾಹ್ಮಣ. ಕಾಂಗ್ರೆಸ್‌ನ ನಾಯಕನಾದಾಕ್ಷಣ ತನ್ನೊಳಗಿನ ಬ್ರಾಹ್ಮಣ್ಯವನ್ನು ಬಲಿಕೊಡ ಬೇಕೆಂದಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಇದನ್ನೇ ಮಾಡಿದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಹೆಗ್ಗಳಿಕೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೇ ಸೇರಬೇಕು. 
ಒಬ್ಬ ಎಡಪಕ್ಷದ ನಾಯಕನ ಆಳದಲ್ಲೂ ಮುಸ್ಲಿಮ್ ದ್ವೇಷ ವಿರುವುದನ್ನು ನಾನು ನೋಡಿದ್ದೇನೆ. ಅಲ್ಪಸಂಖ್ಯಾತರ ಕುರಿತಂತೆ ಅವನೊಳಗೆ ವಿಚಿತ್ರ ದ್ವೇಷ ಮತ್ತು ಸೇಡನ್ನು ಅಲ್ಲಿ ಕಂಡಿದ್ದೆ. ಆಳವಾಗಿ ಬ್ರಾಹ್ಮಣ್ಯದ ವಿಚಿತ್ರ ರೂಪಾಂತರ ಅದು. ಅವನು ಎಡಪಕ್ಷದವನಾಗಿದ್ದರೂ ಅವನ ಆಳದಲ್ಲಿ ಬ್ರಾಹ್ಮಣ್ಯ ಇನ್ನೂ ಹೆಡೆಯಾಡುತ್ತಲೇ ಇತ್ತು.  ಹೀಗಿರುವಾಗ ನಾವು ಮೋದಿಗೆ ಶಿಕ್ಷೆಯಾದಾಕ್ಷಣ ಅಥವಾ ಬಿಜೆಪಿ ಸರ್ವನಾಶ ವಾದಾಕ್ಷಣ ಇಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆ ಸಿಗುತ್ತದೆ ಎಂದು ನಂಬುವುದಾದರೂ ಹೇಗೆ. ಅಲ್ಪಸಂಖ್ಯಾತರು ಯಾವ ಧರ್ಮಕ್ಕೆ ಬೇಕಾದರೂ ಸೇರಿರಲಿ. ಅವರ ಭದ್ರತೆ ಸರಕಾರದ ಹೊಣೆ.
ಆ ಕರ್ತವ್ಯದಲ್ಲಿ ದೌರ್ಬಲ್ಯಗಳು ಕಾಣಿಸಿಕೊಂಡಾಗ ಬಹು ಸಂಖ್ಯಾತರೊಳಗಿರುವ ದುಷ್ಕರ್ಮಿಗಳು ಚುರುಕಾಗು ತ್ತಾರೆ. ದೋಚುವುದಕ್ಕೆ, ಕೊಲ್ಲುವುದಕ್ಕೆ, ಅಕ್ರಮಗಳನ್ನು ನಡೆಸುವುದಕ್ಕೆ ಅವರಿಗೆ ಪರೋಕ್ಷವಾಗಿ ಕುಮ್ಮಕ್ಕು ಸಿಕ್ಕಿದಂತಾಗುತ್ತದೆ. ಆಗ ಸಂಭವಿಸುವುದು ಕೋಮುಗಲಭೆ. ಕೋಮು ಗಲಭೆಯಿಂದ ರಾಜಕೀಯ ಪಕ್ಷಗಳಿಗೆ ಲಾಭವಿದೆ. ಹಾಗೆಯೇ ಸ್ಥಳೀಯ ದರೋಡೆ ಕೋರರಿಗೆ, ಗೂಂಡಾಗಳಿಗೆ, ವ್ಯಾಪಾರಿಗಳಿಗೆ, ವಂಚಕರಿಗೆ, ದಲ್ಲಾಳಿಗಳಿಗೆ, ಪರಸ್ಪರ ಸ್ಪರ್ಧಿಗಳಿಗೆ...ಹೀಗೆ ಹಲವು ವರ್ಗಗಳಿಗೆ ಲಾಭವಿದೆ. ನಷ್ಟ ಕೇವಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ.
ಇದೇ ಸಂದರ್ಭದಲ್ಲಿ ನಾನು ಆಗಾಗ ಮುಸ್ಲಿಮ್ ಗೆಳೆಯರ ಜೊತೆಗೆ ಕೇಳುತ್ತಿದ್ದ ಪ್ರಶ್ನೆ ಇದು. “ಈ ದೇಶದಲ್ಲಿ ಮುಸ್ಲಿಮರು ಶೇ. 80ರಷ್ಟಿದ್ದು, ಹಿಂದೂಗಳು ಶೇ. 20 ರಷ್ಟಿದ್ದರೆ  ಅವರ ಸ್ಥಿತಿ ಏನಾಗುತ್ತಿತ್ತು?” ಇದಕ್ಕೆ ಸ್ಪಷ್ಟ ಉತ್ತರ ಕೊಡುವಲ್ಲಿ ಎಲ್ಲ ಗೆಳೆಯರೂ ಹಿಂಜರಿದಿದ್ದರು. ನಾನೇ ಉತ್ತರಿಸಬೇಕಾಯಿತು “ಹಿಂದೂಗಳು ಶೇ. ೨೦ ರಷ್ಟಿದ್ದರೆ ಅವರ ಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು.”.
ಯಾಕೆಂದರೆ ಈ ವಿಶ್ವದಲ್ಲಿ ಎರಡೇ ಸಮು ದಾಯ ಇರುವುದು. ಒಂದು ಬಹುಸಂಖ್ಯಾತ. ಇನ್ನೊಂದು ಅಲ್ಪಸಂಖ್ಯಾತ. ಒಂದು ಪ್ರಬಲ ಸಮುದಾಯ. ಇನ್ನೊಂದು ದುರ್ಬಲ ಸಮುದಾಯ. ಅಲ್ಪಸಂಖ್ಯಾತರು ಎಂದಾಕ್ಷಣ ನಾವು ಅವರನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಎಂಬ ಕಣ್ಣಿನಲ್ಲಿ ನೋಡಬೇಕಾಗಿಲ್ಲ. ಪಾಕಿಸ್ತಾನದ ಹಿಂದೂಗಳು, ಶ್ರೀಲಂಕಾದ ತಮಿಳರು, ಮ್ಯಾನ್ಮಾರ್‌ನ ಮುಸ್ಲಿಮರು ಎಲ್ಲರೂ ಅಲ್ಪಸಂಖ್ಯಾತರೇ. ಭಾರತದ ಅಲ್ಪಸಂಖ್ಯಾತರನ್ನು ಕೆಂಗಣ್ಣಿನಿಂದ ನೋಡುವವರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರ ಕುರಿತಂತೆ ಮಾತನಾಡುವ ನೈತಿಕತೆಯಿರುವುದಿಲ್ಲ.
ಅಲ್ಪಸಂಖ್ಯಾತರೆಂದರೆ  ಯಾವುದೇ ಒಂದು ನಿರ್ದಿಷ್ಟ ಧರ್ಮವಲ್ಲ. ಅವೆಲ್ಲವನ್ನೂ  ಮೀರಿದ ಒಂದು ದುರ್ಬಲ ಸಮುದಾಯ. ಅವರೆಲ್ಲಿದ್ದರೂ, ಹೇಗಿದ್ದರೂ ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ. ಇದು ನನ್ನ ಮಾತಲ್ಲ. ಮಹಾತ್ಮಗಾಂಧೀಜಿಯ ಮಾತು. 

No comments:

Post a Comment