Monday, April 15, 2013

ಕೋಮುವಾದಿಗಳಿಗೆ ಸಣ್ಣದೊಂದು ಮೂಗುದಾರ ಏಪ್ರಿಲ್ -15-2013

ಕ್ರೀಡೆಯನ್ನು ಧರ್ಮಾಂಧರಿಂದ, ಕೋಮು ವಾದಿಗಳಿಂದ ದೂರವಿಡಲು ರಾಜಸ್ಥಾನ ಕ್ರೀಡಾ ಮಂಡಳಿ ಅನುಸರಿಸುತ್ತಿರುವ ನೀತಿಯೊಂದು, ಇದೀಗ ಆರೆಸ್ಸೆಸ್‌ನ  ಕೆಂಗಣ್ಣಿಗೆ ಗುರಿಯಾಗಿದೆ. ಕ್ರೀಡಾ ಮಂಡಳಿಯಿಂದ ನೆರವನ್ನು ಕೋರುವ ಯಾವುದೇ ಕ್ರೀಡಾಳುಗಳು, ಕೋಮುವಾದಿ ಸಂಘಟನೆಗಳ ಜೊತೆಗೆ ಗುರುತಿಸಿಕೊಳ್ಳಬಾರದು ಎಂಬ ಅಫಿದಾವಿತ್‌ಗೆ ಸಹಿ ಹಾಕಬೇಕಾಗಿದೆ. ಇದು ತೀರಾ ಇತ್ತೀಚಿನ ನಿಯಮವೇನೂ ಅಲ್ಲ. ಅಥವಾ ಕೇವಲ ರಾಜಸ್ಥಾನದ ನಿಲುವೂ ಅಲ್ಲ. ಕೆಲವು ರಾಜ್ಯಗಳು ಕೆಲವು ಸಂದರ್ಭಗಳಲ್ಲಿ ಕೆಲವು ಆಯ್ಕೆಗಳನ್ನು ಮಾಡುವಾಗ ಇಂತಹ ನಿಯಮಗಳಿಗೆ ಕಡ್ಡಾಯ ಸಹಿ ಹಾಕಿಸಿ ಕೊಳ್ಳುತ್ತವೆ. ಆದರೆ ಇದರ ವಿರುದ್ಧ ಇತ್ತೀಚೆಗೆ ಆರೆಸ್ಸೆಸ್ ಕೆಂಡವಾಗಿದೆ. ಈ ನಿಯಮ ಕೇವಲ ಆರೆಸ್ಸೆಸ್‌ಗೆ ಮಾತ್ರ ಅನ್ವಯಿಸಿಲ್ಲ. ಆರೆಸ್ಸೆಸ್ ಅಥವಾ ಮುಸ್ಲಿಮರೊಳಗಿರುವ ಸಂಘಟನೆಗಳೂ ಇದರ ವ್ಯಾಪ್ತಿಗೆ ಬರುತ್ತವೆ.  ಇದು ಮುಖ್ಯವಾಗಿ ಬಿಜೆಪಿಗೆ ಹಾಗೆಯೇ ಎಬಿವಿಪಿಗೆ ಸಿಟ್ಟು ತರಿಸಿದೆ.
ಈಗಾಗಲೇ ರಾಜಸ್ಥಾನದಲ್ಲಿ ಈ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.“ಆರೆಸ್ಸೆಸ್ ಕೋಮುವಾದಿ ಸಂಘಟನೆಯಲ್ಲ. ಕೋಮುವಾದಕ್ಕೂ ಆರೆಸ್ಸೆಸ್‌ಗೂ ತಳಕು ಹಾಕಬಾರದು” ಎನ್ನುವುದು ಆರೆಸ್ಸೆಸ್‌ನ ವಾದ.ನಿಜ.ಆರೆಸ್ಸೆಸ್ ಬರೇ ಕೋಮುವಾದಿ ಸಂಘಟನೆಯಲ್ಲ.ಅದರ ಹಂತವನ್ನು ದಾಟಿ ಅದೀಗ ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಿಕೊಳ್ಳುತ್ತಿದೆ. ದೇಶಾದ್ಯಂತ ಸಂಭವಿಸಿರುವ ಬಾಂಬು ಸ್ಫೋಟಗಳಲ್ಲಿ ಅದರ ಮುಖಂಡರು ಗುರುತಿಸಲ್ಪಡುತ್ತಿದ್ದಾರೆ. ಆರೆಸ್ಸೆಸ್ಸನ್ನೇ ನಿಷೇಧಿಸಬೇಕಾದ ಸಂದರ್ಭದಲ್ಲಿ, ಅದರೊಳಗೆ ಭಾಗಿಯಾಗಿರುವ ಯಾವನೇ ಸದಸ್ಯನಿಗೂ ಸರಕಾರಿ ನೆರವು ಸಿಗುವುದಿಲ್ಲ ಎಂಬ ಅಫಿದಾವಿತ್ ಒಂದು ವಿಡಂಬನೆ ಮಾತ್ರವಾಗಿದೆ.
ಆರೆಸ್ಸೆಸ್ ಇಂದು ಮಾಡುತ್ತಿ ರುವ ಅವಾಂತರಗಳನ್ನು ಗಮನಿಸಿದರೆ, ಅದರಲ್ಲಿರುವ ಸದಸ್ಯರಿಗೆ ಎಲ್ಲ ವಿಭಾಗಗಳಲ್ಲೂ ನಿಷೇಧವನ್ನು ಹೇರಬೇಕು. ಬರೇ ಕ್ರೀಡೆಯ ನೆರವಿಗೆ ಸಂಬಂಧಿಸಿರುವುದಕ್ಕಾಗಿ ಮಾತ್ರವಲ್ಲ. ಮುಖ್ಯವಾಗಿ ಆರೆಸ್ಸೆಸ್‌ಗೇ ನಿಷೇಧ ಹೇರು ವಂತಹ ಸಂದರ್ಭ ಬಂದಿದೆ. ವಿಪರ್ಯಾಸ ಗಮನಿಸಿ. ರಾಜಸ್ಥಾನದಲ್ಲಿ ಕ್ರೀಡೆಗೆ ನೆರವು ಪಡೆಯುವ ಕ್ರೀಡಾಳುಗಳಿಗೆ ಆರೆಸ್ಸೆಸ್ ಅಥವಾ ಇತರ ಕೋಮುವಾದಿ ಸಂಘಟನೆಗಳ ಜೊತೆಗೆ ನಂಟಿರಬಾರದು ಎಂದು ಹೇಳುತ್ತಿದ್ದರೆ, ದಕ್ಷಿಣಕನ್ನಡದಂತಹ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಆರೆಸ್ಸೆಸ್‌ನ ಜೊತೆಗೆ ಸೇರಿಕೊಂಡು ವಿವೇಕಾನಂದರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಾರೆ. 
ಯುವಕರಿಗೆ ಆರೆಸ್ಸೆಸ್‌ನ ಮುಖಂಡ ಪ್ರಭಾಕರ ಭಟ್ಟರಿಂದ ಉಪನ್ಯಾಸ ಏರ್ಪಡಿಸುತ್ತಾರೆ. ಕ್ರೀಡೆಯೆನ್ನುವುದು ಕೇವಲ ದೈಹಿಕ ಸದೃಢತೆಯ ಉದ್ದೇಶವನ್ನಷ್ಟೇ ಹೊಂದಿಲ್ಲ. ಅದು ಮಾನಸಿಕ ಸದೃಢತೆಯನ್ನು ಉದ್ದೀಪಿಸುತ್ತದೆ. ಸ್ನೇಹ, ಸೌಹಾರ್ದ ಮೊದಲಾದ ಮೌಲ್ಯಗಳನ್ನು ಕ್ರೀಡೆ ಒಳಗೊಂಡಿದೆ. ಇಂದು ಇಡೀ ದೇಶವನ್ನು ಬೆಸೆಯುವಲ್ಲಿ ಕ್ರೀಡೆಯ ಸಾಮರ್ಥ್ಯ ಅತಿ ದೊಡ್ಡದು. ಅದು ಬೇರೆ ಬೇರೆಯಾದವರನ್ನು ಒಂದಾಗಿಸುವ ಶಕ್ತಿಯನ್ನು ಹೊಂದಿದೆ. ಆದುದರಿಂದ, ಕೋಮುವಾದಿಗಳ ಸಹವಾಸ ದಿಂದ ಕ್ರೀಡಾಳುಗಳು ದೂರವಿರಬೇಕು ಎಂದು ಬಯಸಿದರೆ ಅದರಲ್ಲಿ ತಪ್ಪಿಲ್ಲ. ಅದು ಕ್ರೀಡೆಗೆ ಪೂರಕವಾದುದು.
ಇಂದು ಈ ಮಾನದಂಡ, ಈ ಅಫಿದಾವಿತ್ ಎಲ್ಲ ಕ್ಷೇತ್ರಗಳಿಗೂ ಲಾಗುವಾಗಬೇಕಾಗಿದೆ. ಇಂದು ಆರೆಸ್ಸೆಸ್ ಎಂಬ ವಿಷವೃಕ್ಷದ ಬೇರು ಎಲ್ಲೆಲ್ಲ ಹರಿಡಿದೆ ಎನ್ನುವುದು ನಮಗೆಲ್ಲ ತಿಳಿದಿರುವುದೇ ಆಗಿದೆ. ಸೇನೆ, ಪೊಲೀಸ್ ಇಲಾಖೆ, ಸರಕಾರಿ ಇಲಾಖೆಗಳು, ಮಾಧ್ಯಮ ಕ್ಷೇತ್ರ ಇಲ್ಲೆಲ್ಲ ವಿಷ ಬಳ್ಳಿಯಂತೆ ಆರೆಸ್ಸೆಸ್ ಮನಸ್ಸುಗಳು ಆವರಿಸಿಕೊಂಡಿವೆ.  ಇಂದು ಕೋಮು ಗಲಭೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಯಾಕೆ ಸಾಧ್ಯವಾಗುತ್ತಿಲ್ಲವೆಂದರೆ, ಪೊಲೀಸ್ ಇಲಾಖೆಯೊಳಗೇ ಖಾಕಿ ವೇಷದಲ್ಲಿ ಆರೆಸ್ಸೆಸ್‌ನ ಜನರು ತೂರಿಕೊಂಡಿದ್ದಾರೆ.
ಸೇನೆಯಲ್ಲಿಯೂ ಕೇಸರಿ ಉಗ್ರವಾದಿಗಳು ಸೇರಿಕೊಂಡಿದ್ದಾರೆ ಎನ್ನುವುದಕ್ಕೆ ಅತಿ ದೊಡ್ಡ ಉದಾಹರಣೆಯಾಗಿ ನಮ್ಮ ಮುಂದೆ ಕ.ಪುರೋಹಿತ್ ಎಂಬಾತನಿದ್ದಾನೆ. ಯಾವುದೇ ಸರಕಾರಿ ಇಲಾಖೆಯಲ್ಲಿ, ಬಸ್‌ಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯಲ್ಲಿ ಆಗಾಗ ಇಂತಹ ಕೋಮುವಾದಿ ಜನರನ್ನು ನಾವು ನೋಡುವುದಿದೆ.ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರನ್ನು ಕಂಡಾಗ ಭುಸುಗುಟ್ಟುವ ಅದೆಷ್ಟೋ ಅಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ಸೇರಿಕೊಂಡಿದ್ದಾರೆ. ಇದರಿಂದಾಗಿ ವಿವಿಧ ಇಲಾಖೆಗಳ ಹೆಸರು ಕೆಡುತ್ತಿದೆ. ಪೊಲೀಸ್ ಇಲಾಖೆಯಂತೂ ಇತ್ತೀಚಿನ ದಿನಗಳಲ್ಲಿ ಆರೆಸ್ಸೆಸ್‌ನ ಕಸದಬುಟ್ಟಿಯೋ ಎಂಬಂತಾಗಿದೆ.
ಐಬಿಯಂತಹ ಇಲಾಖೆಯಲ್ಲೂ ಆರೆಸ್ಸೆಸ್ ಮನಸ್ಥಿತಿ ಸೇರಿಕೊಂಡಿರುವುದರಿಂದ, ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಭಯೋತ್ಪಾದನೆಯ ವದಂತಿಗಳು ಹರಡುವುದಕ್ಕೆ ಕಾರಣವಾಗಿದೆ. ಪತ್ರಿಕಾ ಕ್ಷೇತ್ರದಲ್ಲಿ ಆರೆಸ್ಸೆಸ್ ಮನಸ್ಥಿತಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.ಈ ಎಲ್ಲ ಕಾರಣಗಳಿಂದ, ಯಾವುದೇ ಸರಕಾರಿ ಕೆಲಸಕ್ಕೆ ಸೇರುವ ಅಭ್ಯರ್ಥಿ- ಅದರಲ್ಲೂ ಮುಖ್ಯವಾಗಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಅಭ್ಯರ್ಥಿಗಳು-ತಾವು ಯಾವುದೇ ಕೋಮುವಾದಿ ಸಂಘಟನೆಗಳ ಸದಸ್ಯರಾಗಿಲ್ಲ, ಗುರುತಿಸಿಕೊಂಡಿಲ್ಲ ಎನ್ನುವ ಅಫಿದಾವಿತ್‌ಗೆ ಸಹಿ ಹಾಕಬೇಕು.
ಆರೆಸ್ಸೆಸ್ ನಂತಹ ಕೋಮುವಾದಿ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡ ಅಭ್ಯರ್ಥಿಗಳನ್ನು ಯಾವುದೇ ಸರಕಾರಿ ಹುದ್ದೆಗೆ ಸೇರಿಸಿಕೊಳ್ಳಬಾರದು. ಇದರಿಂದ ಎರಡು ಲಾಭವಿದೆ. ಒಂದು, ಸರಕಾರಿ ಇಲಾಖೆಗಳು ಕೋಮುವಾದ ಮುಕ್ತವಾಗುತ್ತವೆ. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಇಂತಹ ಸಂಘಟನೆಗಳಿಂದ ದೂರವುಳಿಯುತ್ತಾರೆ. ಇದರಿಂದ ವಿದ್ಯಾರ್ಥಿಗಳು ಹಾದಿ ತಪ್ಪುವುದು ಉಳಿಯುತ್ತದೆ. ಆದುದರಿಂದ ರಾಜಸ್ಥಾನ ಕ್ರೀಡೆಯಲ್ಲಿ ಅನುಸರಿಸುವಂತಹ ನಿಯಮ ತಕ್ಷಣದಿಂದ ಸರಕಾರಿ ಇಲಾಖೆಗಳ ಹುದ್ದೆಗಳಿಗೂ ಅನ್ವಯವಾಗುವಂತೆ ನೋಡಿಕೊಳ್ಳಬೇಕು.
ಸರಕಾರಿ ಉದ್ಯೋಗಿಳು ಸಾರ್ವಜನಿಕವಾಗಿ ಕೋಮು ವಾದಿಗಳೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಈ ಮೂಲಕ ಸಣ್ಣದೊಂದು ಕಡಿವಾಣ ಹಾಕಿದಂತಾಗುತ್ತದೆ.                                    

No comments:

Post a Comment