Wednesday, April 17, 2013

ನಕಲಿ ನೋಟುಗಳ ಪತ್ತೆಗೆ ಬ್ಯಾಂಕ್‌ಗಳ ಜೊತೆ ಸಹಕರಿಸಿ: ಗ್ರಾಹಕರಿಗೆ ಆರ್‌ಬಿಐ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಸಲಹೆ


ನಕಲಿ ನೋಟುಗಳ ಪತ್ತೆಗೆ ಬ್ಯಾಂಕ್‌ಗಳ ಜೊತೆ ಸಹಕರಿಸಿ: ಗ್ರಾಹಕರಿಗೆ ಆರ್‌ಬಿಐ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಸಲಹೆ


ಏಪ್ರಿಲ್ -17-2013

ಮಂಗಳೂರು, : ಗ್ರಾಹಕರು ತಮಗೆ ನಕಲಿ ನೋಟುಗಳು ದೊರೆತಾಗ ಆರೋಪಿಗಳನ್ನು ಪತ್ತೆಹಚ್ಚು ವಲ್ಲಿ ಬ್ಯಾಂಕ್‌ಗಳ ಜೊತೆ ಸಹಕರಿಸುವುದು ಅತ್ಯಗತ್ಯ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ. ಚಕ್ರವರ್ತಿ ಗ್ರಾಹಕರಿಗೆ ಸಲಹೆ ನೀಡಿದ್ದಾರೆ. 
ನಗರದ ಕಾರ್ಪೊರೇಶನ್ ಬ್ಯಾಂಕ್ ಸಭಾಂಗಣ ದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಕುರಿತಂತೆ ಗ್ರಾಹಕರ ದೂರು, ಸಮಸ್ಯೆಗಳ ಕುರಿತಾಗಿ ಆರ್‌ಬಿಐ ವತಿ ಯಿಂದ ಆಯೋಜಿಸಲಾದ ‘ಪುರಭವನ’ ಕಾರ್ಯ ಕ್ರಮದಲ್ಲಿ ಗ್ರಾಹಕರೊಬ್ಬರ ದೂರಿಗೆ ಸ್ಪಂದಿಸುತ್ತಾ ಅವರು ಈ ಸಲಹೆ ನೀಡಿದರು. 
ನಕಲಿ ನೋಟುಗಳನ್ನು ಗ್ರಾಹಕರು ಗುರುತಿಸುವುದು ಕಷ್ಟಸಾಧ್ಯವಾಗಿರುವುದರಿಂದ ಕೆಲವೊಮ್ಮೆ ವ್ಯವಹಾರದ ವೇಳೆ ಬ್ಯಾಂಕ್ ಅಥವಾ ಎಟಿಎಂಗಳಿಂದಲೇ ಕಳ್ಳನೋಟು ಪತ್ತೆಯಾದರೆ ಅದನ್ನು ಹಿಂಪಡೆಯಲು ಬ್ಯಾಂಕ್ ಸಿಬ್ಬಂದಿ ಹಿಂದೇಟು ಹಾಕುತ್ತಾರೆ. ಅಲ್ಲದೇ ನಕಲಿ ನೋಟು ಹೊಂದಿದ ಗ್ರಾಹಕರನ್ನೇ ಕಳ್ಳರಂತೆ ನೋಡಿ ಮುಜಗರಗೊಳಪಡಿಸುವ ಸಂದರ್ಭಗಳೂ ಇವೆ ಎಂದು ಗ್ರಾಹಕ ಸದಾಶಿವ ಎಂಬವರು ಆತಂಕ ವ್ಯಕ್ತಪಡಿಸಿದರು. 
ಆರ್‌ಬಿಐ ಯಾವತ್ತೂ ನಕಲಿ ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ನಗೆಚಟಾಕಿಯಿಂದಲೇ ಪ್ರತಿಕ್ರಿಯೆ ನೀಡಿದ ಡಾ.ಚಕ್ರವರ್ತಿ, ನಕಲಿ ನೋಟು ಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದಾದಲ್ಲಿ ನಕಲಿ ನೋಟುಗಳನ್ನು ಮುದ್ರಿಸುವವರು ಅದನ್ನೆಲ್ಲಾ ತಿಳಿದುಕೊಂಡು ಮತ್ತಷ್ಟು ಜಾಗೃತರಾಗಿ ಈ ದಂಧೆ ಮತ್ತಷ್ಟು ವ್ಯಾಪಕವಾಗುವ ಸಾಧ್ಯತೆಗಳಿವೆ ಎಂದವರು ವಿವರಿಸಿದರು.
ಮಾತ್ರವಲ್ಲದೆ, ಬ್ಯಾಂಕ್‌ಗಳಲ್ಲಿ ನಕಲಿ ನೋಟುಗಳು ಕಂಡುಬರುವುದು ಕಷ್ಟ ಸಾಧ್ಯ. ಅಂತಹ ನಿರ್ದಿಷ್ಟ ಪ್ರಕರಣ ಗಳಿದ್ದಲ್ಲಿ ಅದರ ಬಗ್ಗೆ ತಕ್ಷಣ ದೂರು ನೀಡಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‌ನವರು ಕ್ರಮ ಕೈಗೊಳ್ಳಬೇಕಾ ಗುತ್ತದೆ. ಈ ಸಂದರ್ಭ ಗ್ರಾಹಕರು ಕೂಡಾ ನಕಲಿ ನೋಟು ಮುದ್ರಕರನ್ನು ಪತ್ತೆ ಹಚ್ಚುವಲ್ಲಿ ಬ್ಯಾಂಕ್ ಹಾಗೂ ಸಂಬಂಧಪಟ್ಟವರ ಜೊತೆ ಸಹಕರಿಸುವುದು ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು. 
ಹರಿದ ನೋಟು ಬದಲಾಯಿಸದಿದ್ದರೆ ಒಂಬಡ್ಸ್‌ಮನ್‌ಗೆ ದೂರು ನೀಡಿ
ಯಾವುದೇ ಕಾರಣಕ್ಕೂ ನೋಟುಗಳಲ್ಲಿನ ಸಂಖ್ಯೆಗಳು ಸರಿಯಾಗಿದ್ದು, ಹರಿದಿದ್ದಲ್ಲಿ ಅವುಗಳನ್ನು ಬದಲಾಯಿಸಲು ಬ್ಯಾಂಕ್‌ಗಳು ಹಿಂಜರಿಯುವಂತಿಲ್ಲ. ಹಾಗೇನಾದರೂ ಬದಲಾಯಿಸಲು ಹಿಂದೇಟು ಹಾಕಿದರೆ ಬ್ಯಾಂಕಿಂಗ್ ಒಂಬಡ್ಸ್‌ಮನ್‌ಗೆ ದೂರು ನೀಡಿ ಎಂದು ಡಾ. ಚಕ್ರವರ್ತಿ ತಿಳಿಸಿದರು. 
ನೋಟುಗಳಲ್ಲಿ ಬರಯಲೇಬಾರದು....!
ಪೆನ್ನು ಅಥವಾ ಪೆನ್ಸಿಲ್ ಸೇರಿದಂತೆ ನೋಟುಗಳ ಮೇಲೆ ಯಾವುದೇ ರೀತಿಯಲ್ಲಿ ಬರೆದು ನೋಟಿನ ಅಂದವನ್ನು ಕೆಡಿಸಬಾರದೆಂಬ ಆರ್‌ಬಿಐ ನಿರ್ದೇಶನ ವಿದ್ದರೂ ಕೆಲವೊಮ್ಮೆ ಬ್ಯಾಂಕ್‌ನ ಸಿಬ್ಬಂದಿಯೇ ನೋಟಿನ ಮೇಲೆ ಬರೆದು ಅಂದಗೆಡಿಸುವುದು ಸಾಮಾನ್ಯ. ಬ್ಯಾಂಕ್ ಸಿಬ್ಬಂದಿ ಕೂಡಾ ನಮ್ಮ ಸಮಾಜದವರೇ ಆಗಿರುವುದರಿಂದ ಈ ರೀತಿಯ ವರ್ತನೆ ಸಾಮಾನ್ಯ. ಈ ಬಗ್ಗೆ ಸಿಬ್ಬಂದಿಗೆ ಅರಿವಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಬ್ಯಾಂಕ್ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಒಂಬುಡ್ಸ್‌ಮನ್‌ಗೆ ದೂರು ನೀಡಿ
ಬ್ಯಾಂಕ್‌ಗಳಿಂದ ಗ್ರಾಹಕರಿಗೆ ಉಂಟಾಗುವ ನಾನಾ ರೀತಿಯ ಸಮಸ್ಯೆಗಳ ಬಗ್ಗೆ ಗ್ರಾಹಕರು ಬ್ಯಾಂಕ್‌ನ ಸೇವಾ ಕೇಂದ್ರಗಳಿಗೆ ದೂರು ನೀಡ ಬೇಕು. 30 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಅಥವಾ ಉತ್ತರ ಸಿಗದಿದ್ದಲ್ಲಿ ಗ್ರಾಹಕರು ನೇರವಾಗಿ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕಾಗಿ 1996ರಲ್ಲಿ ಒಂಬಡ್ಸ್‌ಮನ್ ಯೋಜನೆ ಜಾರಿಯಾಗಿದ್ದರೂ ಈ ಬಗ್ಗೆ ಅರಿವಿನ ಕೊರತೆ ಇದೆ. ಈ ನಿಟ್ಟಿನಲ್ಲಿ ಆರ್‌ಬಿಐ ವತಿಯಿಂದ ರಾಜ್ಯದ ಆಯ್ದ ನಗರ ಗಳಲ್ಲಿ ಈ ಪುರಭವನ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಗಳೂರು ನಗರದಲ್ಲಿ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಡಾ.ಚಕ್ರವರ್ತಿ ಹೇಳಿದರು.
ಸುಮಾರು ಒಂದು ಗಂಟೆ ಕಾಲ ಗ್ರಾಹಕರ ಸಮಸ್ಯೆಗಳು, ಸಲಹೆಗಳನ್ನು ಅವರು ಆಲಿಸಿ ಪ್ರತಿಕ್ರಿಯಿಸಿದರು. ವಿಜಯಾ ಬ್ಯಾಂಕಿನ ಅಧ್ಯಕ್ಷ ಎಚ್.ಎಸ್. ಉಪೇಂದ್ರ ಕಾಮತ್, ಸಿಂಡಿಕೇಟ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ.ಜಿ. ಸಾಂಘ್ವಿ, ಬ್ಯಾಂಕಿಂಗ್ ಕೋರ್ಸ್ ಆ್ಯಂಡ್ ಸ್ಟಾಂಡರ್ಡ್ ಬೋರ್ಡ್ ಆಫ್ ಇಂಡಿಯಾ (ಬಿಸಿಎಸ್‌ಬಿಐ)ದ ಅಧ್ಯಕ್ಷ ಎ.ಸಿ.ಮಹಾಜನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಪೊರೇಶನ್ ಬ್ಯಾಂಕಿನ ಆಡಳಿತ ನಿರ್ದೇಶಕ ಅಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ವಿಭಾಗದ ಒಂಬಡ್ಸ್‌ಮನ್ ಎಂ.ಪಳನಿ ಸ್ವಾಮಿ ಸ್ವಾಗತಿಸಿದರು. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್ ವಂದಿಸಿದರು. ವಿಜಯ ವಾಗ್ವ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment