Wednesday, April 24, 2013

ವೈಫಲ್ಯಗಳ ಆಗರ ‘ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’: ಸಿಎಜಿ ವರದಿ ಬಹಿರಂಗ



ಹೊಸದಿಲ್ಲಿ,: ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎನ್‌ಆರ್‌ಇಜಿಎ)ಯಡಿ ಮಂಜೂರು ಮಾಡಲಾದ ಯೋಜನೆಗಳ ಅನುಷ್ಠಾನದಲ್ಲಿ ಭಾರೀ ವೈಫಲ್ಯವುಂಟಾಗಿರುವುದನ್ನು  ಮಹಾಲೇಖಪಾಲರ ವರದಿ (ಸಿಎಜಿ) ಬಯಲಿಗೆಳೆದಿದೆ. ದೇಶಾದ್ಯಂತ 14 ರಾಜ್ಯಗಳಲ್ಲಿ ಎನ್‌ಆರ್‌ಇಜಿಎ ಯೋಜನೆಯಡಿ ಅನುಮೋದನೆ ಪಡೆದ 1.26 ಲಕ್ಷ ಕೋಟಿಗೂ ಅಧಿಕ ಮೌಲ್ಯದ ೧೨೯ ಲಕ್ಷ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದರೂ, ಆ ಪೈಕಿ ಕೇವಲ ಶೇ.30ರಷ್ಟು ಯೋಜನೆಗಳು ಮಾತ್ರ ಪೂರ್ಣಗೊಂಡಿವೆಯೆಂದು ಅದು ಬಹಿರಂಗಪಡಿಸಿದೆ.ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶಗಳು ಈ ತನಕ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾದ ಒಟ್ಟು ನಿಧಿಯ  ಶೇ. ೨೦ರಷ್ಟು ಮಾತ್ರ ಬಳಸಿಕೊಂಡಿರುವುದಾಗಿ ವರದಿ ಹೇಳಿದೆ.ಈ ಯೋಜನೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರೂ ಅನುಷ್ಠಾನಗೊಳಿಸಿಲ್ಲವೆಂದು ಅದು ತಿಳಿಸಿದೆ.
ಈ ಯೋಜನೆಗೆ ಬೇಕಾದ ಸಿಬ್ಬಂದಿಯ ಕೊರತೆಯನ್ನು ನೀಗಿಸಬೇಕಾದ  ಅಗತ್ಯವಿರುವುದಾಗಿ ಸಿಎಜಿ ವರದಿ ತಿಳಿಸಿದೆ.ಕೇಂದ್ರ ಸರಕಾರವು ಜಾರಿಗೊಳಿಸಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು,  ಗ್ರಾಮೀಣ ಪ್ರದೇಶಗಳ ಜನರಿಗೆ ಒಂದು ಹಣಕಾಸು ವರ್ಷದಲ್ಲಿ  ನೂರು ದಿನಗಳ ಉದ್ಯೋಗವನ್ನು ಖಾತರಿಪಡಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.
ಆದಾಗ್ಯೂ  ಹಲವೆಡೆ ನೂರು ದಿನಗಳ ಈ ಯೋಜನೆಯನ್ನು 43 ದಿನಗಳಿಗೆ ಇಳಿಸಲಾಗಿದೆಯೆಂದು ಸಿಎಜಿ ತಿಳಿಸಿದೆ. ಎನ್‌ಆರ್‌ಇಜಿಎ ಯೋಜನೆಯಡಿ ಕೇವಲ ದಾಖಲೆಪತ್ರಗಳಲ್ಲಿ ಮಾತ್ರ ಹೆಸರಿರುವ  ‘ಕಾಲ್ಪನಿಕ’ ಕಾರ್ಮಿಕರು ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಂಡುಬರುತ್ತಾರೆ.
ಅಸ್ಸಾಂನಲ್ಲಿ ಈ ಯೋಜನೆಯ ಹಣವನ್ನು ವ್ಯಾಪಕವಾಗಿ ದುರುಪಯೋಗ  ಮಾಡಿಸಿಕೊಳ್ಳಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು ಅನುಷ್ಠಾನದ ಬಗ್ಗೆ ಕಣ್ಗಾವಲಿರಿಸುವಲ್ಲೂ ಕೇಂದ್ರ ಸರಕಾರ ವಿಫಲವಾಗಿದೆಯೆಂದು ವರದಿ ತಿಳಿಸಿದೆ.

No comments:

Post a Comment