Sunday, April 7, 2013

ಅಡ್ವಾಣಿ-ಮೋದಿ ತಿಕ್ಕಾಟ


ಅಡ್ವಾಣಿ-ಮೋದಿ ತಿಕ್ಕಾಟ ಏಪ್ರಿಲ್ -07-2013

*ಮುಂದಿನ ಪ್ರಧಾನಿ ಅಭ್ಯರ್ಥಿ ಅಡ್ವಾಣಿ: ಬಿಜೆಪಿ ಮುಖಂಡ ಗೋಯಲ್
*ಹೇಳಿಕೆಯಿಂದ ಬಿಜೆಪಿಯಲ್ಲಿ ಸಂಚಲನ   *ನರೇಂದ್ರ ಮೋದಿ ಬೆಂಬಲಿಗರಿಗೆ ಮುಜುಗರ
ಹೊಸದಿಲ್ಲಿ,: ಕೇಂದ್ರದಲ್ಲಿ ಮುಂದಿನ ಸರಕಾರವು ಎಲ್.ಕೆ. ಅಡ್ವಾಣಿಯವರ ನಾಯಕತ್ವದಲ್ಲಿ ರಚನೆಯಾಗಲಿದೆಯೆಂದು ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷ ವಿಜಯ್ ಗೋಯಲ್ ಹೇಳಿಕೆ ನೀಡಿರುವುದು ಪಕ್ಷದಲ್ಲಿ ಭಾರೀ ಗೊಂದಲವನ್ನು ಸೃಷ್ಟಿಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಉತ್ಸಾಹದಲ್ಲಿರುವ ಬಿಜೆಪಿಗೆ ಪಕ್ಷದ ಹಿರಿಯ ನಾಯಕನ ಈ ಅನಿಸಿಕೆಯು ಕಸಿವಿಸಿಯುಂಟುಮಾಡಿದೆ. ಬಿಜೆಪಿಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಹೊಸದಿಲ್ಲಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ವಿಜಯ್‌ಗೋಯಲ್ ‘‘ಕೇಂದ್ರದಲ್ಲಿ ಮುಂದಿನ ಸರಕಾರವು ಎಲ್.ಕೆ. ಅಡ್ವಾಣಿಯವರ ನಾಯಕತ್ವದಲ್ಲಿ ರಚನೆಯಾಗಲಿದೆಯೇ ಹೊರತು ಬೇರಾರಿಂದಲೂ ಅಲ್ಲ’’ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಡ್ವಾಣಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಗ ಬದಲಿಸಿದ ಗೋಯಲ್
ಗೋಯಲ್‌ರ ಹೇಳಿಕೆಯು ಬಿಜೆಪಿಯ ಅಂತರಿಕ ವಲಯಗಳಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿದೆಯೆಂದು ಟಿವಿ ವಾಹಿನಿಗಳು ವರದಿ ಮಾಡಿವೆ. ತದನಂತರ ಗೋಯಲ್ ಸ್ಪಷ್ಟೀಕರಣವೊಂದನ್ನು ನೀಡಿ, ಮುಂದಿನ ಸರಕಾರವು ಅಡ್ವಾಣಿಯವರ ಮಾರ್ಗದರ್ಶನದಲ್ಲಿ ರಚಿಸಲ್ಪಡುವುದೆಂದು ತಾನು ಹೇಳಿರುವುದಾಗಿ  ತಿಳಿಸಿದರು.ತನ್ನ ಭಾಷಣದುದ್ದಕ್ಕೂ ಗೋಯಲ್, ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಯವರ ಗುಣಗಾನ ಮಾಡಿದರು. ವಾಜಪೇಯಿ ಅಸ್ವಸ್ಥರಾಗಿರುವು ದರಿಂದ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸರಕಾರ ರಚನೆಯತ್ತ ಮುನ್ನಡೆದಾಗ, ಆಗ ಅಡ್ವಾಣಿಯವರ ಮಾರ್ಗ ದರ್ಶನವನ್ನು ಪಕ್ಷವು ಕೋರಲಿದೆ ಯೆಂದು ಗೋಯಲ್ ಹೇಳಿದರು

No comments:

Post a Comment