Sunday, April 14, 2013

ಮೈಸೂರು: ಜೀವಂತ ದಹನ ಆಕಸ್ಮಿಕವಲ್ಲ, ಕೊಲೆ



 ಏಪ್ರಿಲ್ -14-2013

   *ಸಾವಿನ ಸಂಖ್ಯೆ ಆರಕ್ಕೆ ಏರಿಕೆ         *ಆರೋಪಿ ಶರೀಫ್ ಬಂಧನ
ಮೈಸೂರು, ಎ.13: ಉದಯಗಿರಿಯ ಅಝೀಝ್ ಸೇಠ್ ಬೀಡಿ ಕಾಲನಿಯಲ್ಲಿ ಕಳೆದ ಮುಂಜಾನೆ ಸಂಭವಿಸಿದ್ದ ಅಗ್ನಿ ದುರಂತ ಆಕಸ್ಮಿಕವಲ್ಲ, ಇದೊಂದು ದುಷ್ಕೃತ್ಯವೆಂಬುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಅಬ್ದುಲ್ ಶರೀಫ್ ಎಂಬಾತನನ್ನು ಬಂಧಿಸುವಲ್ಲಿ ವಿಶೇಷ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ. ಆರೋಪಿ ಅಬ್ದುಲ್ ಶರೀಫ್ ಕೆಎಸ್ಸಾರ್ಟಿಸಿ ಚಾಲಕನಾಗಿದ್ದು, ನಿನ್ನೆಯ ಘಟನೆಯಲ್ಲಿ ಮೃತಪಟ್ಟ ಅಮೀರ್ ಜಾನ್ ಬಳಿ ನಾಟಿ ಔಷಧಿ ಚಿಕಿತ್ಸೆ ಪಡೆಯುತ್ತಿದ್ದ. ಅವರೊಂದಿಗೆ ಹಣದ ವ್ಯವಹಾರವನ್ನೂ ಮಾಡಿದ್ದರಿಂದ ಹಣ ವಾಪಸ್ ಕೊಡಲು ಪೀಡಿಸುತ್ತಿದ್ದ. ಈ ಬಗ್ಗೆ ಅನೇಕ ಬಾರಿ ಇವರ ಮಧ್ಯೆ ಜಗಳಗಳಾಗುತ್ತಿತ್ತು. ಘಟನೆ ನಡೆದ ದಿನದ ಹಿಂದಿನ ರಾತ್ರಿಯೂ ವಾಗ್ವಾದವಾಗಿತ್ತು ಎನ್ನಲಾಗಿದೆ.ಹಗೆ ಸಾಧಿಸಲು ಎ.12ರ ಮುಂಜಾನೆ 3 ಗಂಟೆಯ ಸುಮಾರಿಗೆ ಆರೋಪಿ ಅಬ್ದುಲ್ ಶರೀಫ್, ಅಮೀರ್ ಜಾನ್‌ರ ಮನೆಯ ಬಳಿ ತೆರಳಿ ಕಾಟನ್ ವೇಸ್ಟ್‌ಗೆ ಪೆಟ್ರೋಲ್ ಮತ್ತು ಸೀಮೆಎಣ್ಣೆ ಹಾಕಿ ಮನೆಯೊಳಗೆ ತುರುಕಿ ಬೆಂಕಿ ಹಚ್ಚಿದ್ದಾನೆ.
ಬೆಂಕಿಯು ಮನೆಗೆಲ್ಲ ಆವರಿಸಿ 5 ಜನರ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.ಆರೋಪಿಗೂ ಸಣ್ಣ-ಪುಟ್ಟ ಸುಟ್ಟ ಗಾಯಗಳಾಗಿವೆ. ಇದು ಗಂಭೀರ ಪ್ರಕರಣವೆಂದು ಪರಿಗಣಿಸಿ ಡಿಸಿಪಿ ಶಾಂತನು ಸಿನ್ಹಾರ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ಈ ನಡುವೆ, ಇನ್ಸ್‌ಪೆಕ್ಟರ್‌ಗಳಾದ ಆರ್.ಪಿ.ಅಶೋಕ್ ಮತ್ತು ರಾಜಣ್ಣ ನೇತೃತ್ವದ ತಂಡ ಮೈಸೂರು ತಾಲೂಕು ಸಿಂಧುವಳ್ಳಿ ಗ್ರಾಮದ ತೋಟದ ಬಳಿ ಆರೋಪಿಯನ್ನು ಬಂಧಿಸಿದೆ. 
ಮತ್ತೋರ್ವ ಮಹಿಳೆ ಸಾವು: ನಿನ್ನೆ ನಡೆದ ದುರಂತದಲ್ಲಿ ತೀವ್ರ ಸುಟ್ಟಗಾಯಗಳಿಂದ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ಮೂವರಲ್ಲಿ ಅಫ್ರೋಝ್ ಬೇಗಂ (60) ಶನಿವಾರ ಮೃತಪಟ್ಟಿದ್ದಾರೆ. ನಿನ್ನೆಯ ಘಟನೆಯಲ್ಲಿ ಮೂವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲೀಗ ಅಫ್ರೋಝ್ ಸಾವಿUಡಾಗುವುದರೊಂದಿಗೆ ಮೃತರ ಸಂಖ್ಯೆ ಆರಕ್ಕೇರಿದೆ. ಉಳಿದ ಈರ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆ.ಆರ್.ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.                       
                 

No comments:

Post a Comment