Monday, April 29, 2013

ಕಾಂಗ್ರೆಸ್ ಪಾಲಿಗೆ ಕೃಷ್ಣನೋ, ಶಕುನಿಯೋ?‘ಉಂಡು ಹೋದ, ಕೊಂಡೂ ಹೋದ’ ಗಾದೆ ಕಾಂಗ್ರೆಸ್‌ನ ಹಿರಿಯರಾದ ಎಸ್.ಎಂ.ಕೃಷ್ಣ ಅವರಿಗೆ ತುಂಬಾ ಸೊಗಸಾಗಿ ಅನ್ವಯವಾಗುತ್ತದೆ. ಇರುವಷ್ಟು ದಿನ ಕಾಂಗ್ರೆಸ್ ಎನ್ನುವ ಪಿತ್ರಾರ್ಜಿತ ಆಸ್ತಿಯನ್ನು ಕುಳಿತು ಉಂಡು ತೇಗಿದ ಅಸಾಮಿ, ಇದೀಗ ಹೋಗುವಾಗ ಕಾಂಗ್ರೆಸನ್ನೂ ಜೊತೆಗೇ ಕೊಂಡು ಹೋಗುವ ಹವಣಿಕೆಯಲ್ಲಿದ್ದಾರೆ. ರಾಜ್ಯದ ಎಲ್ಲ ನಾಯಕರು, ಕಾಂಗ್ರೆಸ್ ಇನ್ನೇನು ಅಧಿಕಾರಕ್ಕೇ ಬಂದೇ ಬಿಟ್ಟಿತು ಎಂದು ನೆಲ ಬಿಟ್ಟು ಕುಣಿಯುತ್ತಿರುವಾಗ, ಕೃಷ್ಣ ಮೆಲ್ಲಗೆ ತನ್ನ ಎಂದಿನ ತಂತ್ರವನ್ನು ಆರಂಭಿಸಿದ್ದಾರೆ. ಎಸ್.ಎಂ.ಕೃಷ್ಣ ಅವರು ಪ್ರಚಾರ ಕಣಕ್ಕೆ ಇಳಿದರು ಎನ್ನುವಾಗಲೇ ಕಾಂಗ್ರೆಸ್‌ನೊಳಗೆ ಒಂದು ರೀತಿಯ ಅಳುಕು ಆರಂಭವಾಗಿತ್ತು. ಯಾರಾದರೂ ತನ್ನನ್ನು ಪ್ರಚಾರಕ್ಕೆಂದು ಕರೆಯಬಹುದು, ಅಥವಾ ಸೋನಿಯಾ ಗಾಂಧಿಯಿಂದ ಸಂದೇಶ ಬರಬಹುದು ಎಂದು ಮನೆಯ ಆರಾಮ ಕುರ್ಚಿಯಲ್ಲಿ ಕಾದು ಸುಸ್ತಾದ ಎಸ್.ಎಂ.ಕೃಷ್ಣ, ತನಗಾಗಿ ಯಾರೂ ಕಾಯುತ್ತಿಲ್ಲ ಎಂದು ಗೊತ್ತಾದೊಡನೆ ಆರಾಮ ಕುರ್ಚಿಯಿಂದ ಎದ್ದು, ಪ್ರಚಾರದ ಕಣಕ್ಕೆ ದುಮುಕಿದ್ದಾರೆ.
‘ತನ್ನ ಋಣವನ್ನು ಈ ಮೂಲಕ ತೀರಿಸುತ್ತಿದ್ದೇನೆ’ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಆದರೆ ಎಸ್. ಎಂ. ಕೃಷ್ಣ, ಕಾಂಗ್ರೆಸ್‌ನ್ನು ಮುಗಿಸುವುದಕ್ಕಾಗಿ ಪ್ರಚಾರಕ್ಕಿಳಿದಿದ್ದಾರೆ ಎನ್ನುವುದು ಬಟಾ ಬಯಲಾಗುತ್ತಿದೆ. ಬಿಜೆಪಿಯ ವಿರುದ್ಧ ಹೇಳಿಕೆಗಳನ್ನು ನೀಡುವ ಬದಲು, ಕಾಂಗ್ರೆಸ್ ನಾಯಕರ ವಿರುದ್ಧವೇ ಹೇಳಿಕೆಯನ್ನು ನೀಡುತ್ತಾ ಕೃಷ್ಣ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಸಿದ್ದು, ಪರಮೇಶ್ವರ್, ಅಂಬರೀಶ್ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯದ ಕಿಡಿ ಕಾರಿದ್ದಾರೆ. ಅಂದರೆ, ಅವರು ಬೀದಿಗಿಳಿದಿರುವುದೇ ಕಾಂಗ್ರೆಸ್ ವಿರುದ್ಧ ಎನ್ನುವುದು ಈ ಮಾತಿನ ಮೂಲಕವೇ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಕಾಂಗ್ರೆಸ್ ಪಕ್ಷದ ಮೂಲಕ ಸರ್ವವನ್ನು ಅನಾಯಾಸವಾಗಿ ಅನುಭವಿಸಿದವರು ಎಸ್. ಎಂ. ಕೃಷ್ಣ. ತನ್ನ ಆಕ್ಸ್‌ಫರ್ಡ್ ಇಂಗ್ಲಿಷ್‌ನ ಬಲದಿಂದಲೇ ವರಿಷ್ಠರ ಪ್ರೀತಿಯನ್ನು ಗೆದ್ದು, ರಾಜ್ಯದ ಗದ್ದುಗೆ ಹಿಡಿದವರು. ಯಾವತ್ತೂ ಜನಸಾಮಾನ್ಯರಿಗೆ ಹತ್ತಿರವಾದವರಲ್ಲ ಕೃಷ್ಣ. ಆದುದರಿಂದಲೇ, ಅವರಿಗೆ ಜನರೊಂದಿಗೆ ನೇರಮುಖಾಮುಖಿಯ ಅಗತ್ಯ ಅಷ್ಟಾಗಿ ಬರಲಿಲ್ಲ. ಉಳಿದವರೆಲ್ಲ ಬೀದಿ ಬೀದಿ ಅಲೆದು ಬೆವರು ಸುರಿಸುತ್ತಿರುವಾಗ, ಇವರು ಎಸಿ ಕೋಣೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಂಡವರು.
ಎಂದಿಗೂ ಒಕ್ಕಲಿಗರು ಇವರನ್ನು ತನ್ನ ಸಮುದಾಯದ ಪ್ರತಿನಿಧಿ ಎಂದು ಭಾವಿಸಿರಲಿಲ್ಲ. ಆದರೂ, ಒಕ್ಕಲಿಗರ ಪ್ರತಿನಿಧಿಯಾಗಿ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡರು. ಯಾರದೋ ಶ್ರಮ, ಬಲದಿಂದ ಕಾಂಗ್ರೆಸ್ ಬಹುಮತ ಪಡೆದಾಗ ಇವರು ಮುಖ್ಯಮಂತ್ರಿಯಾಗಿಯೂ ಗುರುತಿಸಿಕೊಂಡರು. ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಈ ನಾಡಿಗೆ ಸಲ್ಲಿಸಿದ ಸೇವೆಯ ಫಲವನ್ನು ಕಾಂಗ್ರೆಸ್ ಇಂದಿಗೂ ಅನುಭವಿಸುತ್ತಿದೆ.
ಬೆಂಗಳೂರನ್ನೇ ತನ್ನ ಕರ್ನಾಟಕ ಎಂದು ಭಾವಿಸಿಕೊಂಡ ಎಸ್.ಎಂ.ಕೃಷ್ಣ, ಭಾಗಶಃ ನಾಡನ್ನು ಐಟಿಗಳಿಗೂ ಬಿಟಿಗಳಿಗೂ ಒತ್ತೆಯಿಟ್ಟರು.ಇವರ ಬಲದಿಂದಲೇ ಇನ್ಫೋಸಿಸ್‌ನ ಮುಖ್ಯಸ್ಥರು ಸೊಕ್ಕಿನ ಮಾತುಗಳಿಂದ ಪ್ರತಿ ಸರಕಾರವಾಗಿ ಮಾರ್ಪಟ್ಟರು.ಈ ನಾಡನ್ನು ಆಳುತ್ತಿರುವುದು ಎಸ್.ಎಂಕೃಷ್ಣನೋ ಅಥವಾ ಇನ್ಫೋಸಿಸ್‌ನ ಮುಖ್ಯಸ್ಥರೋ ಎಂಬ ಅನುಮಾನ ಜನರಲ್ಲಿ ಹುಟ್ಟ ತೊಡಗಿತು. ಅದಕ್ಕೆ ಪೂರಕವಾಗಿ ಕೆಲವು ಆಂಗ್ಲ ಪತ್ರಿಕೆಗಳು, ಕಾರ್ಪೊರೇಟ್ ವಲಯದ ಕುಮ್ಮಕ್ಕಿನಿಂದ ಕೃಷ್ಣರನ್ನು ಆಡಿ ಹೊಗಳತೊಡಗಿದವು.
ರೈತರ ಆತ್ಮಹತ್ಯೆ ಸರಣಿಯಲ್ಲಿ ಹೆಚ್ಚಳ ಕಂಡಿರುವುದು ಎಸ್.ಎಂ.ಕೃಷ್ಣ ಅವರ ಆಡಳಿತದ ಅವಧಿಯಲ್ಲಿ. ರೈತರ ಸಬ್ಸಿಡಿಗಳು ಒಂದರ ಹಿಂದೆ ಒಂದು ಕಡಿತವಾದರೂ, ಐಟಿ ಬಿಟಿಗಳ ಸಬ್ಸಿಡಿಗಳಿಗೆ ಯಾವ ತೊಂದರೆಯೂ ಆಗಲಿಲ್ಲ. ಇಡೀ ಕರ್ನಾಟಕದ ರೈತರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದರೆ, ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಾಣುತ್ತಿದ್ದರು. ಇಡೀ ಕರ್ನಾಟಕದ ಅಭಿವೃದ್ಧಿಯ ಸಮತೋಲನ ತಪ್ಪಿದ್ದೇ ಎಸ್.ಎಂ.ಕೃಷ್ಣ ಅವರ ಆಡಳಿತದ ಅವಧಿಯಲ್ಲಿ.
ಇದಾದ ಬಳಿಕ ಕಾಂಗ್ರೆಸ್, ಇತಿಹಾಸದಲ್ಲೇ ಮೊದಲ ಬಾರಿ ಹೀನಾಯ ಸೋಲನ್ನು ಕಂಡಿತು. ಮತ್ತೆ ಕಾಂಗ್ರೆಸ್‌ನ್ನು ಕಟ್ಟಿ ನಿಲ್ಲಿಸಬೇಕಾದ ಜವಾಬ್ದಾರಿ ಕೃಷ್ಣ ಅವರ ಮೇಲಿತ್ತು. ಆದರೆ ಅವರು ಸುಲಭದಲ್ಲಿ ಹೆಗಲು ಜಾರಿಸಿಕೊಂಡರು. ರಾಜ್ಯದಿಂದಲೇ ಪರಾರಿಯಾಗಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರವನ್ನು ಅನುಭವಿಸಿದರು. ಕಾಂಗ್ರೆಸ್ ಹೀನಾಯ ಸ್ಥಿತಿಯನ್ನು ತಲುಪಿದಾಗಲೂ ಅವರು ರಾಜ್ಯದ ಕಡೆಗೆ ಕಣ್ಣು ಹಾಯಿಸಲಿಲ್ಲ. ಇದಾದ ಬಳಿಕವೂ ಕಾಂಗ್ರೆಸ್ ಇವರನ್ನು ಕೈ ಬಿಟ್ಟಿರಲಿಲ್ಲ. ಕೇಂದ್ರದಲ್ಲಿ ಯುಪಿಎ ಸರಕಾರ ಗಟ್ಟಿಯಾದಾಗ, ಕೇಂದ್ರಕ್ಕೆ ಅಮರಿಕೊಂಡರು.
ಅನಾಯಾಸವಾಗಿ ವಿದೇಶಾಂಗ ಸಚಿವ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡರು. ಅಲ್ಲೂ ಹಾಸ್ಯಾಸ್ಪದರಾದರು. ಓದಬೇಕಾದ ಭಾಷಣವನ್ನು ಮರೆತು, ಇನ್ನಾವುದೋ ಭಾಷಣವನ್ನು ಓದಿ ದೇಶದ ಮರ್ಯಾದೆ ತೆಗೆದರು. ತನ್ನ ಅಪಕ್ವ ನಡವಳಿಕೆಗಳಿಂದ ವಿದೇಶಗಳ ಮಾಧ್ಯಮಗಳಲ್ಲಿ ತಮಾಷೆಗೊಳಗಾದರು. ದೇಶವನ್ನು ತಮಾಷೆಗೀಡು ಮಾಡಿದರು. ಇದೆಲ್ಲ ಬೆಳವಣಿಗೆಗಳ ಬಳಿಕ ಎಸ್.ಎಂ.ಕೃಷ್ಣ ಅವರಿಗೆ ವಯಸ್ಸಾಗಿರುವುದು ವರಿಷ್ಠರ ಗಮನಕ್ಕೆ ಬಂತು. ಆದುದರಿಂದ, ನಿಮಗಿನ್ನು ವಿಶ್ರಾಂತಿ ಬೇಕಾಗಿದೆ ಎಂದು ಬೆಂಗಳೂರಿಗೆ ಚಂದದಿಂದ ಕಳುಹಿಸಿಕೊಟ್ಟಿತು.
ಕಾಂಗ್ರೆಸ್‌ನಿಂದ ಇಷ್ಟೆಲ್ಲವನ್ನು ಪಡೆದು, ಉಂಡು, ಎಸ್.ಎಂ.ಕೃಷ್ಣ ಅವರ ಅಧಿಕಾರದ ಹಸಿವು ಇಂಗಿದಂತಿಲ್ಲ. ಇದೀಗ ಕಾಂಗ್ರೆಸ್ ಗೆಲುವಿಗೆ ಸನಿಹದಲ್ಲಿದೆ ಎನ್ನುವುದು ಅರಿವಿಗೆ ಬಂದಾಕ್ಷಣ ಅವರಿಗೆ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ತಾನೂ ಕಾಂಗ್ರೆಸ್ ನಾಯಕ ಎಂದು ಬೀದಿಗಿಳಿದು ಪ್ರಚಾರದ ನಟನೆ ಮಾಡುತ್ತಿದ್ದಾರೆ. ಯುದ್ಧದ ಸಂದರ್ಭದಲ್ಲಿ ಶಲ್ಯನಂತೆ ಸಿದ್ದರಾಮಯ್ಯನಿಗೆ ಕಿರುಕುಳ ನೀಡಲು ಹೊರಟಿದ್ದಾರೆ.
ಕಾಂಗ್ರೆಸ್‌ನ ದುರಂತ ಎಸ್.ಎಂ.ಕೃಷ್ಣರಂತಹ ಮುದಿ ನಾಯಕರ ಕೈಯಲ್ಲಿದೆ. ಇವರಿಗೆ ನಿವೃತ್ಥಿಯ ಅವಧಿಯೆನ್ನುವುದಿಲ್ಲ. ವೃದ್ಧಾಪ್ಯ ಎರಗಿ ನಡೆಯಲಾಗದಿದ್ದರೂ, ಅಧಿಕಾರವನ್ನು ಯುವಕರಿಗೆ ಬಿಟ್ಟುಕೊಡುವ ದೊಡ್ಡ ಮನಸ್ಸಿಲ್ಲ. ಹೀಗಿರುವಾಗ ಕಾಂಗ್ರೆಸ್‌ನ್ನು ಸೋಲಿಸಲು ಇನ್ನೊಂದು ಬಿಜೆಪಿಯ ಅಗತ್ಯವಿದೆಯೆ? ಕಾಂಗ್ರೆಸ್‌ನ ಎಲೆಯಲ್ಲಿ ಉಂಡು, ಅದೇ ಎಲೆಗೆ ಮೂತ್ರ ಹೊಯ್ಯುವ ಈ ವೃದ್ಧ ನಾಯಕರೇ ಕಾಂಗ್ರೆಸ್‌ನ ನಾಶಕ್ಕೆ ಸಾಕಾಗುವುದಿಲ್ಲವೆ?

No comments:

Post a Comment