Sunday, April 14, 2013

ಮೂಢನಂಬಿಕೆಯಿಂದ ಎರಡು ವರ್ಷದ ಬಾಲಕನನ್ನೇ ಬಲಿಗೊಟ್ಟ ಮಹಿಳೆಯ ಬಂಧನ



 ಏಪ್ರಿಲ್ -15-2013

 ಚೆನ್ನೈ,: ತನ್ನ ಕುಟುಂಬವನ್ನು ಕಾಡುತ್ತಿರುವ ಘೋರ ಶಾಪವೊಂದರಿಂದ ವಿಮೋಚನೆ ಪಡೆಯಬಹುದೆಂಬ ಮೂಢನಂಬಿಕೆಯಿಂದ 35 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಸೋದರಳಿಯನ ಎರಡೂವರೆ ವರ್ಷದ ಪುತ್ರನನ್ನೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದ ಧಾರುಣ ಘಟನೆ ಚೆನ್ನೈಯಲ್ಲಿ ನಡೆದಿದೆ.
ಎಂಕೆಬಿ ನಗರ್ ಪ್ರದೇಶದ ಬಿ.ವಿ.ನಗರ್ ಕಾಲನಿಯಲ್ಲಿ ಮಂಗಳವಾರ ಈ ಭೀಕರ ಕೊಲೆ ಕೃತ್ಯ ನಡೆದಿದ್ದು, ಅದು ಶನಿವಾರವಷ್ಟೇ ಬೆಳಕಿಗೆ ಬಂದಿತು. ಹತ್ಯೆಯಾದ ಬಾಲಕ ಗಿಷ್ಣು ಗಾರೆ ಕೆಲಸದ ಕಾರ್ಮಿಕ ಸೆಂಥಿಲ್ ಕುಮಾರ್ ಹಾಗೂ ಗೀತಾ ದಂಪತಿಯ ಏಕಮಾತ್ರ ಪುತ್ರನಾಗಿದ್ದಾನೆ.
ಈ ದಂಪತಿಯ ಮನೆಯ ಒಂದು ಭಾಗದಲ್ಲಿ ಗಿಷ್ಣುವಿನ ಚಿಕ್ಕಮ್ಮ ಮಹೇಶ್ವರಿ ವಾಸಿಸುತ್ತಿದ್ದಳು. ದಂಪತಿಯು ಮನೆಯಲ್ಲಿಲ್ಲದಿರುವಾಗ ಗಿಷ್ಣುನ ಲಾಲನೆ ಪಾಲನೆಯನ್ನು ಮಹೇಶ್ವರಿಯೇ ನೋಡಿಕೊಳ್ಳುತ್ತಿದ್ದಳು.
ಮಂಗಳವಾರದಂದು ಸೆಂಥಿಲ್ ಹಾಗೂ ಗೀತಾ ಹೊರಹೋಗಿದ್ದಾಗ, ಮಹೇಶ್ವರಿ ಜೋರಾಗಿ ಬೊಬ್ಬೆ ಹೊಡೆಯುತ್ತಾ ಗಿಷ್ಣು ಆಕಸ್ಮಿಕವಾಗಿ ನೆರೆಮನೆಯ ಸೋಫಿಯಾ ಎಂಬಾಕೆಯ 3 ಅಡಿ ಅಳದ ಪ್ಲಾಸ್ಟಿಕ್ ತೊಟ್ಟಿಯಲ್ಲಿ ಮುಳುಗಿಬಿಟ್ಟನೆಂದು ಹೇಳಿದಳು. ಆಬಳಿಕ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಸಫಲವಾಗದೆ ಆತ ಕೊನೆಯುಸಿರೆಳೆದನು.
ಮಾರನೆ ದಿನ ಬಾಲಕನ ಶವದ ಅಂತ್ಯಸಂಸ್ಕಾರ ನಡೆಸಲಾಯಿತು. ಆದಾಗ್ಯೂ ಶನಿವಾರ ಸೋಫಿಯಾ ಎಂ.ಕೆ.ಬಿ. ನಗರ್ ಪೊಲೀಸ್ ಠಾಣೆಗೆ ಆಗಮಿಸಿ, ಮಗುವನ್ನು ಮಹೇಶ್ವರಿ ಬರ್ಬರವಾಗಿ ಹತ್ಯೆಗೈದಿದ್ದಾಳೆಂದು ದೂರು ನೀಡಿದಳು.

ಬಾಲಕನನ್ನು ಮಹೇಶ್ವರಿಯು ನೀರಿನ ತೊಟ್ಟಿಗೆ ದೂಡುತ್ತಿರುವುದನ್ನು ತಾನು ಕಂಡಿರುವುದಾಗಿಯೂ ಸೋಫಿಯಾ ದೂರಿನಲ್ಲಿ ತಿಳಿಸಿದ್ದಾಳೆ. ‘‘ಕೊಲೆ ನಡೆಯುತ್ತಿರುವು ದನ್ನು ನಾನು ಕಂಡಿರುವೆ. ಆದರೆ ಪೊಲೀಸರಿಗೆ ದೂರು ನೀಡಲು ನಾನು ತುಂಬಾ ಹೆದರಿದ್ದೆ. ಆನಂತರ ನಾನು ಈ ಬಗ್ಗೆ ಪತಿಯಲ್ಲಿ ತಿಳಿಸಿದೆ. ಅವರು ತನಗೆ ಪೊಲೀಸರಿಗೆ ದೂರು ನೀಡುವಂತೆ ಹುರಿದುಂಬಿಸಿದರು’’ ಎಂದು ಆಕೆ ಹೇಳಿದ್ದಾಳೆ.
ಸೋಫಿಯಾಳ ದೂರನ್ನು ಆಧರಿಸಿ ಪೊಲೀಸರು ಮಹೇಶ್ವರಿಯನ್ನು ಬಂಧಿಸಿದ್ದಾರೆ. ತಾನು ಬಾಲಕನ ಕೊಲೆ ಮಾಡಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ ಹಾಗೂ ಅದೊಂದು ಆಕಸ್ಮಿಕವಾಗಿ ನಡೆದ ಘಟನೆಯೆಂಬಂತೆ ತೋರ್ಪಡಿಸಲು ಯತ್ನಿಸಿದ್ದಾಗಿಯೂ ಆಕೆ ಹೇಳಿದ್ದಾಳೆ.
ಕಳೆದ ರವಿವಾರ ಮಹೇಶ್ವರಿ ಜ್ಯೋತಿಷಿಯೊಬ್ಬನನ್ನು ಭೇಟಿಯಾಗಿದ್ದಳು. ಆಕೆಯ ಕುಟುಂಬಕ್ಕೆ ದೊಡ್ಡದೊಂದು ಶಾಪವಿದೆಯೆಂದೂ ಅದರಿಂದಾಗಿ ಆಕೆಯ ಕುಟುಂಬಿಕರ ನಡುವೆ ವಿರಸವುಂಟಾಗುತ್ತಿದೆಯೆಂದು ಜ್ಯೋತಿಷಿ ಹೇಳಿದ್ದ. ಅದಕ್ಕೆ ಪರಿಹಾರವಾಗಿ ಸರವೊಂದನ್ನು ನೀಡಿ, ಅದನ್ನು ಕುತ್ತಿಗೆಗೆ ಹಾಕುವಂತೆ ತಿಳಿಸಿದ್ದ. ಆ ಸರವನ್ನು ಹಾಕಿದ ಬಳಿಕ ಮಹೇಶ್ವರಿ ಮೈಮೇಲೆ ಪರಿವೆ ಇಲ್ಲದಂತೆ ವರ್ತಿಸತೊಡಗಿದಳು ಹಾಗೂ ಕೊಲೆಯನ್ನು ನಡೆಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ

No comments:

Post a Comment