Friday, April 12, 2013

ಆಧುನಿಕ ಮುಖವಾಡದಲ್ಲಿ ಅಗ್ರಹಾರಗಳುಈ ಹಿಂದೆ ಪ್ರತಿ ಊರಿನಲ್ಲಿ ಪರಿಶಿಷ್ಟರಿಗೊಂದು, ಬ್ರಾಹ್ಮಣರಿಗೊಂದು ಅಗ್ರಹಾರ ಎಂಬಿತ್ಯಾದಿಯಾಗಿ ಇದ್ದುದು ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಆಗಮಿಸಿ, ಅದನ್ನು ಭಾಗಶಃ ನಾಶಮಾಡಿರುವುದು ನಾವು ಕಂಡುಂಡ ಸಂಗತಿಯಾಗಿದೆ. ಬ್ರಾಹ್ಮಣರಷ್ಟೇ ಇರುವ ಓಣಿ, ದಲಿತರು ಬದುಕುವ ಕೇರಿ ಎಂಬ ವಿಂಗಡಣೆ ಜಾತಿಯ ಹೆಸರನಲ್ಲಿ ಮನುಷ್ಯನ ವಿಂಗಡಣೆಯೂ ಹೌದು. ಈ ಹಿಂದೆ ಅಗ್ರಹಾರಕ್ಕೆ ದಲಿತರು, ಶೂದ್ರರು ಕಾಲಿಡುವಂತಿರಲಿಲ್ಲ. ‘ಅದೆಲ್ಲ ಹಿಂದಿನ ಕಾಲದಲ್ಲಿ. ಈಗ ಅದಕ್ಕೆ ಬೆಲೆಯಿಲ್ಲ’ ಎಂದು ಕೆಲವರು ವಾದ ಮಾಡುವುದಿದೆ. ಆ ಮನಸ್ಥಿತಿ ಇನ್ನೂ ಅಳಿದಿಲ್ಲ ಎನ್ನುವುದಕ್ಕೆ ಇದೀಗ ಅಗ್ರಹಾರಗಳು ಹೊಸ ರೂಪದಲ್ಲಿ ನಮ್ಮ ನಡುವೆ ಮರು ಹುಟ್ಟು ಪಡೆಯುತ್ತಿವೆ. ಆಧುನಿಕ ವೇಷದಲ್ಲಿರುವ ಈ ಅಗ್ರಹಾರಗಳಿಗೆ, ಅಭಿವೃದ್ಧಿಯ ಮುಖವಾಡವನ್ನು ತೊಡಿಸಲಾಗಿದೆ. ವಿಪರ್ಯಾಸವೆಂದರೆ, ಮೇಲ್ವರ್ಗದ ಜನರಿಗಾಗಿಯೇ ನಿರ್ಮಾಣವಾಗುತ್ತಿರುವ ಈ ಅಗ್ರಹಾರಗಳಿಗೆ ಸರಕಾರವೂ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ. ಬೆಂಗಳೂರು ಐಟಿ-ಬಿಟಿಯ ಮೂಲಕ ವಿಶ್ವದಾದ್ಯಂತ ತನ್ನ ಗಮನವನ್ನು ಸೆಳೆಯುತ್ತಿದೆ.
ಆದರೆ ದುರದೃಷ್ಟವಶಾತ್, ಇದೇ ಬೆಂಗಳೂರಿನ ಸಮೀಪದಲ್ಲೇ ಎರಡು ವಿಶೇಷ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ಇದರ ಹೆಗ್ಗಳಿಕೆಯೇನು ಎಂದರೆ, ಒಂದು ಲೇಔಟ್ ಸಂಪೂರ್ಣ ಬ್ರಾಹ್ಮಣರಿಗಾಗಿ ನಿರ್ಮಾಣವಾಗುತ್ತಿದೆ. ಇನ್ನೊಂದು ಲಿಂಗಾಯತರಿಗಾಗಿ ನಿರ್ಮಾಣವಾಗುತ್ತಿದೆ.ಇದಕ್ಕಾಗಿ ಈಗಾಗಲೇ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ. ಬ್ರಾಹ್ಮಣರಿಗಾಗಿಯೇ ಮೀಸಲಾದ ಉಪನಗರಕ್ಕೆ ಶಂಕರ ಅಗ್ರಹಾರಂ ಎಂದು ಹೆಸರಿಸಲಾಗುವುದಂತೆ. ಲಿಂಗಾಯತರಿಗಾಗಿಯೇ ಇರುವ ಅಗ್ರಹಾರ ವನ್ನು ‘ಶರಣಾರ್ಥಿ ಸಂಗಮ’ ಎಂದು ಹೆಸರಿಸಲಾಗುವುದಂತೆ.
ಒಂದೆಡೆ ಆರೆಸ್ಸೆಸ್ ಹಿನ್ನೆಲೆಯಿರುವ ಸಂಘಟನೆ ಬ್ರಾಹ್ಮಣ ಬಡಾವಣೆಯ ಉಸ್ತುವಾರಿಯನ್ನು ನೋಡಿ ಕೊಳ್ಳಲು ಮುಂದೆ ಬಂದಿದೆ. ಸಂವಿಧಾನಕ್ಕೆ ಅಪ್ಪಟ ವಿರೋಧವಾಗಿರುವ ಈ ಯೋಜನೆ ಬರೇ ಬಡಾವಣೆ ಮಾತ್ರವಲ್ಲ. ಈಗಾಗಲೇ ಸತ್ತು ಬದುಕಿರುವ ಜಾತೀಯತೆಯನ್ನು ಮತ್ತೆ ಎತ್ತಿ ನಿಲ್ಲಿಸುವ ಪ್ರಯತ್ನವೂ ಹೌದು. ಈಗಾಗಲೇ ಉಳಿದ ಕೆಳ ಜಾತಿಗಳೊಂದಿಗೆ ಬದುಕಲು ಸಾಧ್ಯವಾಗದೆ ಏದುಸಿರು ಬಿಡುತ್ತಿರುವ ಈ ಮೇಲ್ಜಾತಿಯ ಜನ ತಮಗಾಗಿಯೇ ಒಂದು ಬಡಾವಣೆಯನ್ನು ಕಟ್ಟಿ ಅಲ್ಲಿ ತಮ್ಮದೇ ನಾಡೊಂದನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಇದೊಂದು ಆರಂಭ ಮಾತ್ರ. ಇದರಲ್ಲಿ ಯಶಸ್ವಿ ಕಂಡರೆ ಮುಂದಿನ ದಿನಗಳಲ್ಲಿ ಇಂತಹ ಬಡಾವಣೆಗಳು ರಾಜ್ಯಾದ್ಯಂತ ವಿಸ್ತರಿಸುವ ಸಾಧ್ಯತೆಗಳಿವೆ.

ಈ ಬಡಾವಣೆ ಸಂವಿಧಾನ ವಿರೋಧಿ ಎಂದು ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದಾರೆ. ಆದರೆ ಜಾತಿ ಮತ್ತು ಮಠಗಳ ತಳಹದಿಯಲ್ಲಿ ನಿಂತಿರುವ ಬಿಜೆಪಿ ಸರಕಾರ ಈ ಕುರಿತಂತೆ ಮೃದು ಧೋರಣೆ ತಳೆದಿದೆ. ಇದನ್ನು ಖಂಡತುಂಡವಾಗಿ ವಿರೋಧಿಸಿ, ಈ ಯೋಜನೆಯನ್ನು ಹಮ್ಮಿಕೊಂಡವರ ಮೇಲೆ ಕ್ರಮಕೈಗೊಳ್ಳುವ ಯಾವುದೇ ಕಾರ್ಯ ಇಲ್ಲಿಯವರೆಗೆ ನಡೆದಿಲ್ಲ. ಹೀಗೆ ಮುಂದುವರಿದರೆ, ಮುಂದೆ ದಲಿತರ ಬಡವಾಣೆ, ಮುಸ್ಲಿಮರ ಬಡಾವಣೆ, ಒಕ್ಕಲಿಗರ ಬಡಾವಣೆ ಎಂದು ಅಧಿಕೃತವಾಗಿ ಉಪನಗರಗಳು ನಿರ್ಮಾಣಗೊಳ್ಳುತ್ತಾ, ಇಡೀ ನಾಡು ಜಾತಿ, ಧರ್ಮದ ಹೆಸರಿನಲ್ಲಿ ಹಂಚಿ ಚೂರಾಗುವ ದಿನಗಳು ದೂರವಿಲ್ಲ.
ಅದಕ್ಕೆ ಮೊದಲು ಈ ಯೋಜನೆಯನ್ನು ನಾಡಿನ ಜನತೆ ಶತಾಯುಗತಾಯ ವಿರೋಧಿಸಬೇಕಾಗಿದೆ. ಈಗಾಗಲೇ ನಮ್ಮ ಮಕ್ಕಳು,ಮುಸ್ಲಿಮರ ಶಾಲೆ,ಬ್ರಾಹ್ಮಣ ಶಾಲೆ, ಕ್ರಿಶ್ಚಿಯನ್ನರ ಶಾಲೆ ಎಂದು ಗುರುತಿಸಿಕೊಳ್ಳುತ್ತಿರುವ ಶಾಲೆಗಳಲ್ಲಿ ಓದುತ್ತಿದ್ದಾರೆ. ಒಂದು ಸಮುದಾಯದ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮತ್ತೊಂದು ಸಮುದಾಯದ ಪರಿಚಯವೇ ಸಿಗದಂತಾಗಿದೆ.
ಈ ಹಿಂದೆ ಸರಕಾರಿ ಶಾಲೆಗಳಲ್ಲಿ ಸರ್ವ ಜಾತಿ, ಧರ್ಮಗಳ ಜೊತೆಗೆ ಒಂದಾಗಿ ಕಲಿಯುವ ಅವಕಾಶ ಈಗಿನ ಮಕ್ಕಳಿಗೆ ಇಲ್ಲದಂತಾಗಿದೆ. ಇದೀಗ ಬೇರೆ ಬೇರೆ ಜಾತಿಗಳಿಗೆ ಅವರದೇ ಆದ ಬಡಾವಣೆಗಳು ನಿರ್ಮಾಣವಾದರೆ, ಇಲ್ಲಿ ನಾಡು ಎನ್ನುವುದು ಎಲ್ಲಿ ಉಳಿಯಿತು? ಮುಂದಿನ ದಿನಗಳಲ್ಲಿ ಈ ಬಡಾವಣೆಗಳಿಗೆ ಕಾಲಿಟ್ಟ ದಲಿತರು ಹಲ್ಲೆಗೊಳಗಾಗಬಹುದು.
ಬ್ರಾಹ್ಮಣರ ಬಡಾವಣೆಗೆ ದಲಿತರು, ಇನ್ನಿತರ ಜಾತಿ ಧರ್ಮೀಯರು ಕಾಲಿಡುವಂತಿಲ್ಲ, ಹಾಗೆಯೇ ಮುಸ್ಲಿಮರ ಬಡಾವಣೆಗಳಿಗೆ ಇತರ ಧರ್ಮೀಯರು ಕಾಲಿಡುವಂತಿಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಗಬಹುದು.ಹೊಸ ರೂಪದಲ್ಲಿ ಆಧುನಿಕ ಅಗ್ರಹಾರಗಳು ತಲೆಯೆತ್ತಬಹುದು. ಆದುದರಿಂದಲೇ, ಈ ಯೋಜನೆಯ ಉದ್ದೇಶವೇ ನೀಚತನದಿಂದ ಕೂಡಿದೆ.ಜಾತೀಯ ವಿಷದಿಂದ ಕಲುಷಿತವಾಗಿದೆ. ಸರಕಾರ ತಕ್ಷಣ ಈ ಯೋಜನೆಗೆ ತಡೆಯೊಡ್ಡಬೇಕಾಗಿದೆ.

No comments:

Post a Comment