Tuesday, April 9, 2013

ಹೆಲ್ಮೆಟ್ ರಹಿತ ಬೈಕ್ ಚಾಲನೆಗಾಗಿ ಗೋವಾ ಶಾಸಕರಿಗೆ ದಂಡ: ಪಾರಿಕ್ಕರ್


ಏಪ್ರಿಲ್ -09-2013

ಪಣಜಿ, ಎ.8: ಕಳೆದ ಶುಕ್ರವಾರ ಗೋವಾ ವಿಧಾನಭವನಕ್ಕೆ ಹೆಲ್ಮೆಟ್ ಧರಿಸದೆ ಮೋಟಾರ್ ಬೈಕ್‌ಗಳಲ್ಲಿ ಆಗಮಿಸಿದ್ದ 6 ಮಂದಿ ಶಾಸಕರಿಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ ಯೆಂದು ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಇಂದಿಲ್ಲಿ ತಿಳಿಸಿದ್ದಾರೆ.
ಕಾನೂನು ಉಲ್ಲಂಘನೆಗಾಗಿ ಅವರಿಗೆ ದಂಡ ವಿಧಿಸಲಾಗಿದೆ. ಸರಕಾರ ದಂಡದಿಂದ ಸ್ವಲ್ಪ ಶ್ರೀಮಂತವಾಗಿದೆ. ಆದರೆ ಅದು ಎಷ್ಟೆಂದು ತನಗೆ ಗೊತ್ತಿಲ್ಲ. ಆದರೆ, ಈ ಘಟನೆಯನ್ನು ಹೆಲ್ಮೆಟ್ ವಿವಾದಕ್ಕೆ ಧನಾತ್ಮಕ ದಿಕ್ಕನ್ನು ಕೊಡಲು ಉಪಯೋಗಿಸಲು ನಿರ್ಧರಿಸಲಾಗಿದೆ ಎಂದವರು ವಿಧಾನಸಭೆಯಲ್ಲಿ ಹೇಳಿದರು.
ಸಂಪುಟ ಸಚಿವರೊಬ್ಬರು ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದ ಚಿತ್ರವೊಂದು ಈ ಮೊದಲು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಕಾನೂನನ್ನು ಮುಕ್ತವಾಗಿ ಉಲ್ಲಂಘಿಸಿದ ಶಾಸಕರಿಗೆ ಪಾರಿಕ್ಕರ್ ವಾಗ್ದಂಡನೆ ವಿಧಿಸಿದರು. ಶಾಸಕರು ಎಚ್ಚರದಿಂದಿರಬೇಕು.
ಅವರು ಕಾನೂನನ್ನು ಪಾಲಿಸಬೇಕು. ಕಾನೂನು ಉಲ್ಲಂಘಿಸುವ ಅಧಿಕಾರ ಯಾರಿಗೂ ಇಲ್ಲ. ಇದೊಂದು ತಪಾಗಿದ್ದು, ಅದಕ್ಕವರು ದಂಡ ತೆತ್ತಿದ್ದಾರೆಂದು ಅವರು ಹೇಳಿದರು.
‘‘ನೀವು ಬುದ್ಧಿವಂತರೆಂಬ ಕಾರಣಕ್ಕಾಗಿ ಜನರು ನಿಮ್ಮನ್ನು ಮತ ನೀಡಿ ಕಳುಹಿಸಿದ್ದಾರೆ’’ ಎಂದು ತನ್ನ ತಲೆಗೆ ಬೆರಳಿನಿಂದ ಕುಟ್ಟಿಕೊಂಡು ಸಾಭಿನಯದಿಂದ ಹೇಳಿದ ಪಾರಿಕ್ಕರ್, ‘‘ನಿಮ್ಮ ತಲೆಗಳ ಬಗ್ಗೆ ಜಾಗೃತೆಯಿಂದಿರಿ’’ ಎಂದು ಎಚ್ಚರಿಕೆ ನೀಡಿದರು.
ಕಾರ್ಲೋಸ್ ಅಲ್ಮೆಡಾ, ಪ್ರಮೋದ್ ಸಾವಂತ್, ಗ್ಲೆನ್ ಟಿಕ್ಲೊ(ಬಿಜೆಪಿ), ರೋಹನ್ ಬವುಂಟೆ, ಅವರ್ತಾನೊ ಫುರ್ತಾಡೊ(ಪಕ್ಷೇತರ) ಹಾಗೂ ವಿಕ್ಫಿ ಪಚೇಕೊ(ಜಿವಿಪಿ) ಕಳೆದ ಶುಕ್ರವಾರ ಮಿನಿರ್ಯಾಲಿಯೊಂದರಲ್ಲಿ ಪಣಜಿಯಿಂದ ವಿಧಾನಭವನಕ್ಕೆ ಎನ್‌ಫೀಲ್ಡ್ ಬುಲೆಟ್ ಹಾಗೂ ಡಾರ್ಲಿ ಡೇವಿಸನ್ ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸದೆ ಬಂದಿದ್ದರು.

No comments:

Post a Comment