Thursday, April 4, 2013

ಅತ್ಯಾಚಾರ ರಹಿತ ಸಮಾಜದೆಡೆ ಹೆಜ್ಜೆಯಿಡೋಣ ಏಪ್ರಿಲ್ -04-2013

ಈದೇಶ ಅತ್ಯಾಚಾರವನ್ನು ಕೊನೆಗೂ ಗಂಭೀರ ಅಪರಾಧವೆಂದು ಒಪ್ಪಿಕೊಂಡಿದೆ. ಹಲವು ಚರ್ಚೆ, ಭಿನ್ನಾಭಿಪ್ರಾಯಗಳ ಬಳಿಕ, ಮಹತ್ವದ ಅತ್ಯಾಚಾರ ವಿರೋಧಿ ವಿಧೇಯಕ ರಾಷ್ಟ್ರಪತಿಯ ಕೈ ಸೇರಿ, ಇದೀಗ ಬುಧವಾರ ಸಹಿಹಾಕುವುದರೊಂದಿಗೆ ಕಾಯ್ದೆ ಮಹತ್ವದ ಘಟ್ಟವನ್ನು ದಾಟಿ ಬಂದಿದೆ. ಬರೇ ಅತ್ಯಾಚಾರ ಮಾತ್ರವಲ್ಲ, ಆ್ಯಸಿಡ್ ದಾಳಿ ಯಂತಹ ಪ್ರಕರಣವನ್ನೂ ಈ ಕಾಯಿದೆ ಗಂಭೀರವಾಗಿ ಕಂಡಿದೆ. ಈ ಕಾಯ್ದೆಯ ಪ್ರಕಾರ 20 ವರ್ಷದ ವರೆಗೆ ಕಠಿಣ ಶಿಕ್ಷೆಯನ್ನು ಅತ್ಯಾಚಾರಿಗೆ ವಿಧಿಸಬಹುದಾಗಿದೆ. ಚುಡಾವಣೆ, ಅಶ್ಲೀಲ ದೃಶ್ಯ ವೀಕ್ಷಣೆಯಂತಹ ಅಪರಾಧಗಳಿಗೆ ಸುಮಾರು 10 ವರ್ಷ ಶಿಕ್ಷೆಯನ್ನು ವಿಧಿಸುವ ಅವಕಾಶವಿದೆ. ಆದರೆ ಇವೆಲ್ಲವೂ ಜಾರಿಗೊಳ್ಳುವುದು ಅಪರಾಧ ವೆಸಗಿರುವುದು ಸಾಬೀತಾದ ಬಳಿಕ ಎನ್ನುವ ಅಂಶವೂ ಮಹತ್ವದ್ದೇ ಆಗಿದೆ. ನಗರಗಳಲ್ಲಿ ವಿದ್ಯಾವಂತ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಕ್ಕೂ, ಗ್ರಾಮೀಣ ಪ್ರದೇಶಗಳಲ್ಲಿ ಬಲಾಢ್ಯ ವರ್ಗಗಳಿಂದ ಶೋಷಿತ ವರ್ಗಗಳ ಮೇಲೆ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸವಿದೆ. ಗ್ರಾಮೀಣ ಪ್ರದೇಶದ ಅತ್ಯಾಚಾರ ಸಾಬೀತಾಗುವುದು ಅಷ್ಟು ಸುಲಭ ವಿಲ್ಲ. ಪೊಲೀಸ್ ಇಲಾಖೆಯೇ ಇಲ್ಲಿ ಅತ್ಯಾಚಾರಿಗಳ ಪರವಾಗಿ ಕೆಲಸ ಮಾಡುವಾಗ, ಆರೋಪ ಸಾಬೀತಾಗುವುದು ಮತ್ತು ಆರೋಪಿಗಳಿಗೆ ಶಿಕ್ಷೆಯಾಗುವುದು ಕನಸಿನ ಮಾತೇ ಸರಿ. ಆದರೂ, ಸಣ್ಣದೊಂದು ಬೆಳಕಿನ ಕಿರಣ ಅತ್ಯಾಚಾರವೆನ್ನುವ ಕೆಡುಕಿನ ಮೇಲೆ ಬಿದ್ದಿದೆ. ಸ್ವತಂತ್ರ ಭಾರತದಲ್ಲಿ ಎಂದೋ ಜಾರಿ ಯಾಗ ಬೇಕಾಗಿದ್ದ ಕಾನೂನು, 21ನೆ ಶತಮಾನದ ಒಂದು ದಶಕ ಉರುಳಿದ ಬಳಿಕ ಜಾರಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಈಗಲಾದರೂ ಜಾರಿಯಾಯಿತಲ್ಲ ಎನ್ನುವ ಸಣ್ಣದೊಂದು ನೆಮ್ಮದಿಯಷ್ಟೇ ನಮ್ಮದು.
ಇದೇ ಸಂದರ್ಭದಲ್ಲಿ ನಾವು ಅತ್ಯಾಚಾರಕ್ಕೆ ಪೂರಕವಾಗಿ ಕೆಲಸ ಮಾಡುವ ಇತರ ಅಂಶಗಳ ಕಡೆಗೂ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಅತ್ಯಾಚಾರವೆಸಗುವುದು ತಪ್ಪು ಎನ್ನುವುದನ್ನು ಒಪ್ಪಿಕೊಳ್ಳುವ ಹಾಗೆಯೇ ಅತ್ಯಾಚಾರ ಎಸಗಲು ಪ್ರಚೋದನೆ ನೀಡುವುದೂ ತಪ್ಪು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅದನ್ನು ಒಪ್ಪಿ ಕೊಳ್ಳದೆ, ಅತ್ಯಾಚಾರವನ್ನು ಎಲ್ಲ ತಪ್ಪು ಗಳಂತೆಯೇ ಒಂದು ಅಪರಾಧ ಎಂದು ಗುರುತಿಸುವುದು ನಮ್ಮ ವೌಢ್ಯವಾಗುತ್ತದೆ. ಒಬ್ಬ ಕೊಲೆಗಾರ, ಕಳ್ಳನ ಮನಸ್ಥಿತಿಗೂ ಅತ್ಯಾಚಾರಗೈದವನ ಮನಸ್ಥಿತಿಗೂ ವ್ಯತ್ಯಾಸ ವಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅತ್ಯಾಚಾರಕ್ಕೆ ಕಾರಣವಾಗುವುದು ಪರಿಸ್ಥಿತಿ ಮತ್ತು ಸಂದರ್ಭ. ಅನೇಕ ಸಂದರ್ಭದಲ್ಲಿ ಪ್ರಚೋದನೆಯೂ ಅನಿರೀಕ್ಷಿತವಾಗಿ ಒಂದು ಅತ್ಯಾಚಾರ ಮನಸ್ಥಿತಿ ಯನ್ನು ಸೃಷ್ಟಿಸಬಹುದಾಗಿದೆ. ಹಾಗೆಯೇ ಮದ್ಯ, ಡ್ರಗ್ಸ್ ಇತ್ಯಾದಿಗಳೂ ಅವರ ವಿವೇಕವನ್ನು ನಾಶ ಮಾಡಿ, ಅವರನ್ನು ಅತ್ಯಾಚಾರದೆಡೆಗೆ ಪ್ರೇರೇಪಿಸಬಹುದಾಗಿದೆ. ಮಾಮೂಲಿ ಸಂದರ್ಭದಲ್ಲಿ ಸಜ್ಜನನಾಗಿರುವ ವ್ಯಕ್ತಿ, ಮಧ್ಯರಾತ್ರಿ, ಮದ್ಯದ ಅಮಲಿನಲ್ಲಿ, ಏಕಾಂಗಿಯಾಗಿರುವ ಹೆಣ್ಣಿನ ಜೊತೆಗೆ ಅಸಭ್ಯವಾಗಿ ವರ್ತಿಸುವ ಸಂದರ್ಭವಿದೆ. ಆತನ ಆ ಸ್ಥಿತಿಗೆ ಎಲ್ಲವೂ ಹೊಣೆಯಾಗಿರುತ್ತದೆ. ಅವನನ್ನು ಅಂತಹ ಕೆಡುಕಿನ ಮನಸ್ಥಿತಿಗೆ ದೂಡಿ, ಅತ್ಯಾಚಾರಗೈಯುವುದಕ್ಕೆ ಪ್ರಚೋದಿ ಸಿದ ಎಲ್ಲವನ್ನೂ ನಾವು ಪ್ರಶ್ನಿಸಬೇಕಾಗುತ್ತದೆ.
ಆದುದರಿಂದ ಅತ್ಯಾಚಾರಗಳಿಲ್ಲದ ಸಮಾಜದ ಹೊಣೆಯನ್ನು ಕೇವಲ ಹೊಸ ಕಾಯ್ದೆಗಷ್ಟೇ ಹೊರಿಸದೆ ಅದನ್ನು ಸಾಮೂಹಿಕ ಜವಾಬ್ದಾರಿ ಎಂದು ಕೈಗೆತ್ತಿಕೊಳ್ಳಬೇಕು. ಮೊತ್ತ ಮೊದಲು ಹೆಣ್ಣನ್ನು ಒಂದು ಸರಕಿನಂತೆ ನೋಡುವ, ಬಿಂಬಿಸುವ ಆಧುನಿಕ ಮನಸ್ಥಿತಿ ಯನ್ನು ನಾವು ಪುನರ್ವಿಮರ್ಶೆಗೆ ಒಡ್ಡಬೇಕಾ ಗಿದೆ. ಆಧುನಿಕತೆ ಹೆಣ್ಣಿಗೆ ಸ್ವಾತಂತ್ರವನ್ನು, ಭದ್ರತೆಯನ್ನು ನೀಡಿದೆ ಎನ್ನುವ ನಂಬಿಕೆಯನ್ನೇ ಮತ್ತೊಮ್ಮೆ ನಿಕಷಕ್ಕೆ ಒಡ್ಡಬೇಕಾಗಿದೆ. ತುಂಡು ವಸ್ತ್ರದಲ್ಲಿ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಯಾವ ಕಾರಣಕ್ಕೂ ಆಧುನಿಕತೆಯನ್ನು ಪ್ರತಿನಿಧಿಸುವುದಿಲ್ಲ. ಅವಳನ್ನು ಸಿನಿಮಾಗಳು ಮತ್ತು ಜಾಹೀರಾತುಗಳು ಅಪ್ಪಟ ಮಾರುಕಟ್ಟೆಯ ಸರಕಾಗಿ ಬಳಸುತ್ತಿದೆ. ತಮ್ಮ ಸಿನಿಮಾ ಓಡುವುದಕ್ಕಾಗಿ ಹೆಣ್ಣನ್ನು ಅರೆನಗ್ನಗೊಳಿಸಿ ಕುಣಿಸುವುದಕ್ಕೂ, ಹಿಂದೆ ಧರ್ಮದ ಹೆಸರಲ್ಲಿ ಆಕೆಯನ್ನು ಸರಕಾಗಿ ಮಾರಾಟ ಮಾಡುತ್ತಿದ್ದು ದಕ್ಕೆ ಅಂತರ ತೀರಾ ತೆಳು. ಎರಡರಲ್ಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ. ತುಂಡು ಬಟ್ಟೆ ತನ್ನ ಹಕ್ಕು ಎನ್ನುವುದನ್ನು ಆಕೆಯ ಬಾಯಿಯಿಂದ ವ್ಯವಸ್ಥೆ ಹೇಳಿಸಬಹುದು. ಆದರೆ, ಲೈಂಗಿಕತೆ ಎನ್ನುವುದು ಪ್ರಚೋದನೆಯಿಂದ ನಡೆಯು ವಂತಹದು. ಹೆಣ್ಣಿನ ಅಂಗಾಂಗಗಳಿಂದ ಪುರುಷ ಪ್ರಚೋದನೆಗೊಳಗಾಗುವುದು ನಿಜ ಎಂದಾದರೆ, ಉದ್ದೇಶ ಪೂರ್ವಕವಾಗಿ ಆ ಪ್ರಚೋದನೆಯನ್ನು ಮಾಡುವ ಮಹಿಳೆಯೂ ಅಪರಾಧಿಯಾಗುತ್ತಾಳೆ. ಇಂದಿನ ಅಶ್ಲೀಲ ಸಿನಿಮಾಗಳು, ನೃತ್ಯಗಳು, ಅಮಲು ಪದಾರ್ಥ ಗಳೆಲ್ಲವೂ ಪರೋಕ್ಷವಾಗಿ ಅತ್ಯಾಚಾರಕ್ಕೆ ಕಾರಣ ವಾಗುತ್ತವೆ. ಇವನ್ನೆಲ್ಲ ಮಟ್ಟಹಾಕದೆ, ಬರೇ ಕಾಯ್ದೆಯನ್ನು ಮುಂದಿಟ್ಟು ಅತ್ಯಾಚಾರವನ್ನು ತಡೆಯಬಹುದು ಎನ್ನುವುದು ಮೂರ್ಖತನ ವಾಗುತ್ತದೆ.ಅಶ್ಲೀಲತೆಗೆ ಸೃಜನಶೀಲತೆ ಮತ್ತು ಕಲೆಯ ಮುಖವಾಡವನ್ನು ಹಲವು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದು ಆಧುನಿಕತೆಯ ಇನ್ನೊಂದು ಸೋಗಲಾಡಿತನ. ತುಂಡು ಬಟ್ಟೆ ಹೆಣ್ಣನ್ನು ಸಬಲೆಯನ್ನಾಗಿ ಮಾಡದು. ಅವಳು ಸುಶಿಕ್ಷಿತಳಾಗಿ ವೈದ್ಯಳಾಗಿ, ಪೊಲೀಸ್ ಅಧಿಕಾರಿಣಿಯಾಗಿ, ಎಂಜಿಯರ್ ಆಗಿ ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರಿಕೆ ಯನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಹೆಣ್ಣು ಹೆಚ್ಚು ಹೆಚ್ಚು ಗೌರವಾನ್ವಿತಳಾಗುತ್ತಾ ಹೋಗುತ್ತಾಳೆ. ಹೆಣ್ಣಿನ ಕುರಿತಂತೆ ಸಮಾಜದ ದೃಷ್ಟಿಯೂ ಬದಲಾಗುತ್ತಾ ಹೋಗುತ್ತದೆ. ಪುರುಷ ಪ್ರಧಾನ ಸಮಾಜದ ಹಿಡಿತವೂ ಸಡಿಲವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ಯಾವ ಕಾಯ್ದೆಯ ಬಳಕೆಯೂ ಇಲ್ಲದೆ, ನೈತಿಕ ಪ್ರಜ್ಞೆಯ ಮೂಲಕವೇ ಅತ್ಯಾಚಾರ ರಹಿತ ಸಮಾಜವೊಂದು ಸೃಷ್ಟಿಯಾಗಬೇಕು. ಆಗ ನಮ್ಮ ನಾಗರಿಕತೆಗೆ ನಿಜವಾದ ಅರ್ಥ ಬರುತ್ತದೆ.

No comments:

Post a Comment