Friday, April 19, 2013

ಮನೆಯಿಂದಲೇ ಡಬ್ಬಿಂಗ್ ಆರಂಭಿಸಿದ ಸಂಜಯ್ ದತ್



ಮುಂಬೈ, : 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಾಕಿ ಶಿಕ್ಷೆ ಅನುಭವಿಸುವುದಕ್ಕಾಗಿ ಜೈಲಿಗೆ ಶರಣಾಗುವ ಅವಧಿಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳಷ್ಟು ವಿಸ್ತರಿಸಿದ ಒಂದು ದಿನದ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಗುರುವಾರದಿಂದ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ್ದಾರೆ.
ದತ್ ತನ್ನ ಮನೆಯ ಒಂದು ಕೋಣೆಯನ್ನು ಡಬ್ಬಿಂಗ್ ಥಿಯೇಟರ್ ಆಗಿ ಪರಿವರ್ತಿಸಿದ್ದಾರೆ ಎಂದು ನಟನಿಗೆ ಆಪ್ತವಾಗಿರುವ ಮೂಲವೊಂದು ತಿಳಿಸಿದೆ. ಇಲ್ಲಿ ಅವರು ತನ್ನ ಬಾಕಿಯಿರುವ ಹಲವು ಚಿತ್ರಗಳಿಗಾಗಿ ಡಬ್ಬಿಂಗ್ ನಡೆಸಿದರು.
‘‘ಅವರು ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ತನ್ನ ಮಕ್ಕಳ ಜೊತೆ ಕಳೆಯಲು ಇಚ್ಛಿಸಿದ್ದಾರೆ. ಹಾಗಾಗಿ, ತನ್ನ ಎಲ್ಲ ಚಿತ್ರಗಳ ಡಬ್ಬಿಂಗನ್ನು ಶೀಘ್ರದಲ್ಲೇ ಮುಗಿಸಲು ನಿರ್ಧರಿಸಿದ್ದಾರೆ’’ ಎಂದು ಮೂಲ ಹೇಳಿದೆ.
‘ಝಂಜೀರ್’ ರಿಮೇಕ್‌ಗಾಗಿ ದತ್ ಪ್ರಿಯಾಂಕಾ ಚೋಪ್ರಾ ಮತ್ತು ರಾಮ್‌ಚರಣ್ ಜೊತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಇದಕ್ಕಾಗಿ ಅವರ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿದೆ.
ತನ್ನ ಚಿತ್ರಗಳನ್ನು ಮುಗಿಸುವುದಕ್ಕಾಗಿ ದತ್ ಕನಿಷ್ಠ ಇನ್ನೂ 25 ದಿನಗಳ ಶೂಟಿಂಗ್‌ನಲ್ಲಿ ಭಾಗವಹಿಸಬೇಕಾಗಿದೆ. ಆದರೆ, ಇದಕ್ಕೆ ಇಮ್ರಾನ್ ಹಶ್ಮಿ ಮತ್ತು ಪ್ರಿಯಾಂಕಾ ಚೋಪ್ರಾ ಮುಂತಾದ ತಾರೆಯರ ದಿನಾಂಕಗಳು ಜೊತೆಯಾಗಬೇಕಾಗಿದೆ

No comments:

Post a Comment