Wednesday, April 3, 2013

ಸೌದಿಗೆ ಏರ್‌ಇಂಡಿಯಾದ ನೇರ ವಿಮಾನ ಯಾನ ಆರಂಭ; ಇಂದು ದಮಾಮ್‌ಗೆ ಪ್ರಥಮ ವಿಮಾನ ಹಾರಾಟಏಪ್ರಿಲ್ -03-2013

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ಅಸ್ತಿತ್ವದ 6 ದಶಕಗಳ ಇತಿಹಾಸ ದಲ್ಲಿ ಇದೇ ಪ್ರಥಮ ಬಾರಿಗೆ ಮಂಗಳೂರು ಹಾಗೂ ಸೌದಿ ಅರೇಬಿಯಾವನ್ನು ಬೆಸೆಯುವ ಕರಾವಳಿಯ ವಿಮಾನ ಪ್ರಯಾಣಿಕರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಎ. 3ರಿಂದ ಸೌದಿ ಅರೇಬಿಯಾದ ದಮಾಮ್‌ಗೆ ನೇರ ವಿಮಾನ ಯಾನ ಆರಂಭಗೊಳ್ಳಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ. ಪ್ರಸ್ತುತ ವಾರದಲ್ಲಿ ಎರಡು ದಿನಗಳಲ್ಲಿ ಈ ನೇರ ವಿಮಾನ ಯಾನ ಮಂಗಳೂರು- ದಮಾಮ್ ನಡುವೆ ಹಾರಾಟ ನಡೆಸಲಿದೆ. ಬುಧವಾರ ಮತ್ತು ಶನಿವಾರ ಮಂಗಳೂರು ವಿಮಾನ ನಿಲ್ದಾಣದಿಂದ ಸಂಜೆ 5 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ದಮಾಮ್‌ಗೆ ಹೊರಡಲಿದೆ. ಮರಳಿ ಪ್ರಯಾಣದಲ್ಲಿ ದಮಾಮ್‌ನಿಂದ ಗುರುವಾರ ಮತ್ತು ರವಿವಾರ ಅಲ್ಲಿನ ಸ್ಥಳೀಯ ಕಾಲಮಾನ 8:30ಕ್ಕೆ ಮಂಗಳೂರಿಗೆ ಹೊರಡಲಿದೆ. ಪ್ರಯಾಣದ ಅವಧಿ 4ಗಂಟೆ 20ನಿಮಿಷ. ತೈಲ ಸಂಪದ್ಭರಿತ ರಾಷ್ಟ್ರವಾದ ಸೌದಿ ಅರೇಬಿಯಾ ಹಾಗೂ ಕರಾವಳಿಯ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ನೇರ ವಿಮಾನ ಯಾನದ ಬೇಡಿಕೆ ಇಂದು ನಿನ್ನೆಯದಲ್ಲ. ಕರಾವಳಿಯಿಂದ ಸೌದಿ ಅರೇಬಿಯಾಕ್ಕೆ ತೆರಳುವವರ ಸಂಖ್ಯೆಯೂ ಅತ್ಯಧಿಕ. ಹಾಗಾಗಿ ಈ ನೇರ ವಿಮಾನ ಯಾನವು ಮಂಗ ಳೂರಿನ ಅನಿವಾಸಿ ಭಾರತೀಯರಿಗಷ್ಟೇ ಅಲ್ಲ, ಕರಾವಳಿ ಕರ್ನಾಟಕ, ಉತ್ತರ ಕೇರಳ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಅನಿವಾಸಿ ಭಾರತೀಯರಿಗೂ ಅನುಕೂಲವಾಗಲಿದೆ.
 ಗಲ್ಫ್ ದೇಶಕ್ಕೆ ಮತ್ತೊಂದು ಸೇರ್ಪಡೆ: ಗಲ್ಫ್ ರಾಷ್ಟ್ರಕ್ಕೆ ಸಂಬಂಧಿ ಸಿದಂತೆ ಈಗಾಗಲೆ ಏರ್ ಇಂಡಿಯಾ ಏಕ್ಸ್‌ಪ್ರೆಸ್ ದುಬೈಗೆ ವಾರದಲ್ಲಿ 2 ದಿನ, ಅಬುಧಾಬಿ-ಮಸ್ಕತ್ ವಾರಕ್ಕೆ ಮೂರು ದಿನ, ಕುವೈಟ್‌ಗೆ ವಾರಕ್ಕೆ 3ದಿನ, ದೋಹಕ್ಕೆ ವಾರಕ್ಕೆ ಒಂದು ದಿನ ಹಾಗೂ ಬಹರೈನ್‌ಗೆ ವಾರಕ್ಕೆ ಒಂದು ದಿನ ವಿಮಾನ ಯಾನದ ಸೇವೆ ನೀಡುತ್ತಿದ್ದು ಇದೀಗ ದಮಾಮ್‌ಗೆ ವಾರದಲ್ಲಿ ಎರಡು ದಿನಗಳ ವಿಮಾನ ಯಾನದ ಸೌಕರ್ಯ ಹೊಸ ಸೇರ್ಪಡೆಯಾಗಿದೆ.

No comments:

Post a Comment