Sunday, April 14, 2013

ನೀರಿಗಾಗಿ ಹಾಹಾಕಾರ: ಇದು ಮೋದಿ ಮಾದರಿಯ ಗುಜರಾತ್! ಏಪ್ರಿಲ್ -15-2013

ರಾಜ್‌ಕೋಟ್, : ಒಂದೆಡೆ ಗುಜರಾತ್ ಮಾದರಿಯನ್ನು ರಾಜಕೀಯ ತಂತ್ರವಾಗಿ ಮೋದಿ ಬಳಸಲು ಹೊರಟಿ ದ್ದಾರೆ. ಆದರೆ ವಿಪರ್ಯಾಸವೆಂದರೆ, ಗುಜರಾತ್ ತೀವ್ರ ತರದ ಕ್ಷಾಮದಿಂದ ಬಳಲುತ್ತಿದ್ದು, ಸೌರಾಷ್ಟ್ರ ಹಾಗೂ ಕಛ್ ಪ್ರದೇಶಗಳಲ್ಲಿ ನೀರಿಲ್ಲದೆ ಭೂಮಿ ಬಿರುಕು ಬಿಟ್ಟಿದೆ ಹಾಗೂ ಜನರು ಒಂದೇ ಒಂದು ಕೊಡ ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಇದನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ.
ಕಳೆದ 11 ವರ್ಷಗಳಿಂದ ಸಾಮಾನ್ಯವಾಗಿದ್ದ ಮುಂಗಾರು ಈ ಬಾರಿ ಕೈಕೊಟ್ಟ ಕಾರಣ ಅಂದಾಜು ಶೇ.10ರಿಂದ 15ರಷ್ಟು ವಾಣಿಜ್ಯ ಬೆಳೆಗಳು ನಾಶವಾಗಿವೆ.
ಬೇಸಿಗೆ ಆರಂಭವಾಗಿರುವಂತೆಯೇ ಅರ್ಧದಷ್ಟು ರಾಜ್ಯದ ನೀರಿನ ಪರಿಸ್ಥಿತಿ ಬಿಗಡಾಯಿಸಿದೆ. ದೊಡ್ಡ ಹಾಗೂ ಸಣ್ಣ ಜಲಾಶಯಗಳು ಒಣಗಿ ಹೋಗಿರುವುದರಿಂದ ಗ್ರಾಮೀಣ ಪ್ರದೇಶಗಳ ಮಹಿಳೆಯರು ಪ್ರತಿದಿನ 2-3 ಕಿ.ಮೀ. ದೂರದಿಂದ ನೀರನ್ನು ಹೊತ್ತು ತರಬೇಕಾಗಿದೆ.
ಮೋದಿ ಇತ್ತೀಚೆಗೆ ಹೊಸದಿಲ್ಲಿ ಹಾಗೂ ಕೋಲ್ಕತಾಗಳಲ್ಲಿ, ನರ್ಮದಾ ಯೋಜನೆಯಿಂದ ಬಹು ದೂರದ ವರೆಗೆ ಕೊಳವೆ ನೀರು ಪೂರೈಕೆಯಾಗುತ್ತಿದೆಯೆಂದು ಪ್ರತಿಪಾದಿಸಿದ್ದರು.
ಆದರೆ, ಕ್ಷಣ ಮಾತ್ರವೇ ಬಂದು ಮಾಯವಾಗುವ ಟ್ಯಾಂಕರ್‌ಗಳಿಂದ ಒಂದೇ ಒಂದು ಬಕೆಟ್ ನೀರು ಪಡೆಯಲು ಜನರು ಹರ ಸಾಹಸ ಪಡುವ ದೃಶ್ಯ ಹಳ್ಳಿಗಳಲ್ಲಿ, ಕಛ್, ಸೌರಾಷ್ಟ್ರ ಹಾಗೂ ರಾಜ್ಯದ ಉತ್ತರದ ಕೆಲವು ಭಾಗಗಳಲ್ಲಿ ಸಾಮಾನ್ಯವಾಗಿದೆ.
ಕುಡಿಯುವ ನೀರಿನ ತೀವ್ರ ಅಭಾವವಿರುವುದರಿಂದ ತಮ್ಮ ಮಕ್ಕಳು ಬಾಯಾರುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಕೇವಲ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಟ್ಯಾಂಕರ್‌ಗಳ ಮೂಲಕ ನಿಯಮಿತವಾಗಿ ನೀರು ಪೂರೈಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್‌ಕೋಟ್ ಜಿಲ್ಲೆಯ ಜೇಟ್‌ಪುರ ಪಟ್ಟಣ ನಿವಾಸಿ ಸರೋಜ್ ಮಕ್ವಾನಾ ಎಂಬವರು ದೂರಿದ್ದಾರೆ. ಅಲ್ಲಿಗೆ ಪ್ರತಿ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ.

ತಮ್ಮದು ಅತ್ಯಂತ ದುರ್ಗಮ ಪ್ರದೇಶವಾಗಿದ್ದು, 1998ರಲ್ಲಿ ಕೇಶು ಭಾಯಿ ಪಟೇಲರ ಸರಕಾರವಿದ್ದಾಗ ಖಂಭತ್ ಕೊಲ್ಲಿಯಲ್ಲಿ ಅಣೆಕಟ್ಟು ನಿರ್ಮಿಸಿ 9 ನದಿಗಳ ನೀರನ್ನು ಶೇಖರಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. 14 ವರ್ಷಗಳ ಬಳಿಕವೂ ಅದೀಗ ಅಧ್ಯಯನದ ಹಂತದಲ್ಲೇ ಇದೆ ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.

ಆದರೆ ಸರಕಾರವು ನೀರಿನ ಅಭಾವವಿದೆ ಯೆಂಬುದನ್ನು ಒಪ್ಪುವುದಿಲ್ಲ. ಕಳೆದ 6 ತಿಂಗಳುಗಳಿಂದ ಈ ಪ್ರದೇಶಗಳಿಗೆ ಹೆಚ್ಚು ನೀರು ಕಳುಹಿಸಲಾಗುತ್ತಿದೆಯೆಂದು ಅದು ಪ್ರತಿಪಾದಿ ಸುತ್ತಿದೆ. ಸರಕಾರ ಕಛ್ ಹಾಗೂ ಸೌರಾಷ್ಟ್ರಗಳಿಗೆ ನೀರು ಒದಗಿಸಲು ಸಮರೋಪಾದಿ ಯೋಜನೆಯೊಂದರ ಜಾರಿಗೆ ನಿರ್ಧರಿಸಿದೆ.

ವಿಪಕ್ಷ ಕಾಂಗ್ರೆಸ್ ನೀರಿನ ಪರಿಸ್ಥಿತಿಯ ಕುರಿತು ಸುಳ್ಳು ಮಾಹಿತಿ ಹರಡಿ ಜನರ ದಾರಿ ತಪ್ಪಿಸುತ್ತಿದೆಯೆಂದು ಸರಕಾರದ ವಕ್ತಾರ ಹಾಗೂ ವಿತ್ತ ಸಚಿವ ನಿತಿನ್ ಪಟೇಲ್ ಆರೋಪಿಸಿದ್ದಾರೆ.

No comments:

Post a Comment