Saturday, April 6, 2013

ಸೂತಕದ ಮನೆಯಲ್ಲೂ ನಿತಾಕತ್ ಸಂಕಷ್ಟ



- ಏಪ್ರಿಲ್ -06-2013

ಮಂಗಳೂರು:ಹರೆಯದ ಇಬ್ಬರು ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದಾರೆ, ಇರುವ ಒಬ್ಬ ಮಗನಾದರೂ ಬಂದು ಸಾಂತ್ವನ ಹೇಳಿಯಾನು ಎಂದರೆ, ರಿಯಾದ್‌ನಲ್ಲಿರುವ ಅವನಿಗೆ ಅಲ್ಲೀಗ ಆರಂಭವಾಗಿರುವ ನಿತಾಕತ್ ಕಾನೂನು ಹಿಡಿದಿಟ್ಟಿದೆ. ಕಲ್ಲಾಪು ಸಮೀಪದ ನಿವಾಸಿ  ಮುಹಮ್ಮದ್ ಅಬ್ದುಲ್ ಖಾದರ್ ಎಂಬವರ ಪುತ್ರರಾದ ಉಮರ್ ರಶೀದ್ (24) ಮತ್ತು ಮುಹಮ್ಮದ್ ನೌಶಾದ್(22) ನಿನ್ನೆ ಬೆಳಗ್ಗೆ ಎಕ್ಕೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲಿ ಪೋಷಕರಿಗೆ ಆಸರೆಯಾಗುತ್ತಾರೆ ಎಂದು ಕೊಂಡಿದ್ದ ಮಕ್ಕಳಿಬ್ಬರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಮಂಗಳೂರಿನ ಅಳಕೆಯಲ್ಲಿ ಲಾರಿಗೆ ಸರಕು ಲೋಡ್-ಅನ್ ಲೋಡ್ ಮಾಡುವ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ ಸಹೋದರರು ಎಂದಿನಿಂತೆ ಜೊತೆಯಾಗಿ ಬೈಕ್‌ನಲ್ಲಿ ಕೆಲಸಕ್ಕೆ ಬರುತ್ತಿದ್ದಾಗ ಹಿಂದಿನಿಂದ ಬಂದ ಬಸ್ ಢಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ಸಹೋದರರ ಮೇಲೆ ಬಸ್ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದು ಇಳಿ ವಯಸ್ಸಿನ ತಂದೆ  ತಾಯಿಗೆ ಆಘಾತವಾಗಿ ಕಾಡಿತ್ತು. ಈ ಆಘಾತದಿಂದ ಅವರು ಇನ್ನೂ ಹೊರಗೆ ಬಂದಿಲ್ಲ. ಯಾರೊಂದಿಗೂ ಮಾತನಾಡುವ ಮನಃಸ್ಥಿತಿಯಲ್ಲಿ ಅವರಿಲ್ಲ. ಈಗ ಹಿರಿಯ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ರಿಯಾದ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಹಿರಿಯ ಪುತ್ರ ಅಬ್ದುಲ್ ಖಾದರ್ ಜಾವೇದ್(26) ಈ ದುಃಖದ ಸಮಯದಲ್ಲೂ ತವರಿಗೆ ಮರಳಲಾಗದ ಸಂಕಷ್ಟದಲ್ಲಿದ್ದಾರೆ.
ಮೂರು ವರ್ಷಗಳ ಹಿಂದೆ ಆಝಾದ್ ವಿಸಾದಲ್ಲಿ ರಿಯಾದ್‌ಗೆ ಹೋಗಿದ್ದ ಜಾವೇದ್ ಅಲ್ಲಿ ಪ್ರಾಯೋಜಕನ (ಕಪಿಲ್) ಹೊರತಾದ ಕಡೆ ಕೆಲಸ ಮಾಡಿಕೊಂಡಿದ್ದರು. ದುರದೃಷ್ಟವಶಾತ್ ಸೌದಿ ಅರೇಬಿಯಾದ ಆಡಳಿತ ನಿತಾಕತ್ (ಸ್ವದೇಶಿಕರಣ) ಕಾನೂನು ಜಾರಿ ಮಾಡಿತ್ತು. ಈ ಕಾನೂನಿನಂತೆ ಮೂಲ ಪ್ರಾಯೋಜಕನ ಬಳಿಯಲ್ಲದೆ ಬೇರೆ ಕಡೆಗಳಲ್ಲಿ ಕೆಲಸ ಮಾಡುವಂತಿಲ್ಲ. ಬೇರೆಡೆ ಕೆಲಸ ಮಾಡುತ್ತಿರುವವರು ಶಿಕ್ಷೆಗೆ ಗುರಿಯಾಗುತ್ತಾರೆ.
ತವರಿಗೆ (ಸ್ವದೇಶಕ್ಕೆ) ಹಿಂದಿರುಗಬೇಕಿದ್ದರೆ ಮೂಲ ಪ್ರಯೋಜಕನ ಅನುಮತಿ ಪಡೆಯಬೇಕು ಬದಲಾದ ಕಾನೂನಿನಲ್ಲಿ ಈ ಅನುಮತಿಗಾಗಿ ಹಲವು ದಾಖಲೆ ಪತ್ರಗಳ ಹಾಗೂ ಶುಲ್ಕ ತೆರಬೇಕಿದೆ. ಶುಲ್ಕ ತೆರಲು ಸಿದ್ಧನಿಲ್ಲದ ಪ್ರಾಯೋಜನಕನ ಪರವಾಗಿ ಜಾವೇದ್‌ರವರೆ ಶುಲ್ಕ ತೆರಬೇಕಾಗುತ್ತದೆ. ಕಾರ್ಮಿಕನಾಗಿ ದುಡಿಯುತ್ತಿದ್ದ ಜಾವೇದ್ ಊರಿಗೆ ಬರುವುದೇ ಕಷ್ಟವಾಗಿರುವಾಗ ಅಲ್ಲಿಯ ದಂಡ ರೂಪದ ಶುಲ್ಕ ಭರಿಸಲು ಶಕ್ತರಾಗಿಲ್ಲ.
ರಿಯಾದ್‌ನಲ್ಲಿರುವ ಜಾವೇದ್‌ರ ಬಂಧು-ಮಿತ್ರರು ಒಟ್ಟಾಗಿ ಶುಲ್ಕ ಭರಿಸಿ ಕಪಿಲನ ಮನವೊಲಿಸಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಪುತ್ರನ ಬರುವಿಕೆಗಾಗಿ ಇಲ್ಲಿ ಪೋಷಕರು ಕಾಯುತ್ತಿದ್ದಾರೆ. ಸಹೋದರಿ (6 ತರಗತಿಯಲ್ಲಿದ್ದಾಳೆ) ತಂದೆ-ತಾಯಿಗೆ ಆಶ್ರಯ ಆಗಿದ್ದವರೇ ಉಮರ್ ರಶೀದ್ ಮತ್ತು ಮುಹಮ್ಮದ್ ನೌಶಾದ್. ಬಿಕಾಂ ಪದವೀಧರನಾಗಿದ್ದ ರಶೀದ್ ಒಳ್ಳೆಯ ಉದ್ಯೋಗ ಪಡೆದು  ಇಳಿವಯಸ್ಸಿನಲ್ಲಿ ಆಸರೆಯಾದಾನು ಎಂದುಕೊಂಡಿದ್ದೆ.  ವಿಧಿ ನಮ್ಮ ಆಸೆಯನ್ನೇ ಕಿತ್ತುಕೊಂಡಿತು ಎಂದು ಬೇಸರಿಸುತ್ತಾರೆ ಮೃತರ ತಂದೆ ಮುಹಮ್ಮದ್ ಅಬ್ದುಲ್ ಖಾದರ್.
ತಂದೆಯನ್ನೂ ಕರೆಸಿಕೊಂಡಿದ್ದರು
ಉಮರ್ ರಶೀದ್ ಮತ್ತು ಮುಹಮ್ಮದ್ ನೌಶಾದ್ ಇಬ್ಬರೂ ಶ್ರಮಜೀವಿಗಳು  ಇಳಿವಯಸ್ಸಿನಲ್ಲೂ ವಿದೇಶದಲ್ಲಿ ದುಡಿಯುತ್ತಿದ್ದ ತಂದೆಯನ್ನು ಆರು ತಿಂಗಳ ಹಿಂದೆಯಷ್ಟೇ ಊರಿಗೆ ಕರೆಸಿ ಕೊಂಡಿದ್ದರು.ವಿದೇಶದಲ್ಲಿದ್ದ ತಂದೆ ಸ್ವದೇಶಕ್ಕೆ ಬರಲಾಗದ ಸಂಕಷ್ಟದಲ್ಲಿ ಸಿಲುಕಿದ್ದರು. ಇಲ್ಲಿಂದಲೇ 1.8ಲಕ್ಷರೂ ಹೊಂದಿಸಿ ಕಳುಹಿಸಿ ತಂದೆ ಸುರಕ್ಷಿತವಾಗಿ ಮನೆಗೆ ಹಿಂದಿರುಗುವಂತೆ ವ್ಯವಸ್ಥೆ ಮಾಡಲು ಶ್ರಮಿಸಿದ್ದರು. ಇಷ್ಟು ದಿನ ದುಡಿದದ್ದು, ಸಾಕು ಈಗ ನಾವು ನಿಮ್ಮನ್ನು ಸಾಕುತ್ತೇವೆ ನೆಮ್ಮದಿಯಾಗಿರಿ ಎಂದು ತಂದೆಗೆ ಹೇಳಿದ್ದ ಎನ್ನುವ ವಿಶಾಲ ಮನೋಭಾವದ ಮಕ್ಕಳು ಇನ್ನಿಲ್ಲವಾದರು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರ ಸಂಬಂಧಿ ಯೂಸೂಫ್ ಪಟ್ಲ. 

No comments:

Post a Comment