Thursday, April 25, 2013

ಗೋವಾ ಬೀಚುಗಳಲ್ಲಿ ಮದ್ಯಪಾನ ನಿಷೇಧ



ಪಣಜಿ, : ಕಸಮಾಲಿನ್ಯವನ್ನು ತಡೆಗಟ್ಟಲು ಹಾಗೂ ಮಹಿಳಾ ಪ್ರವಾಸಿಗರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಗೋವಾ ಸರಕಾರವು ಕಡಲ ಕಿನಾರೆಗಳಲ್ಲಿ ಮದ್ಯಪಾನವನ್ನು ನಿಷೇಧಿಸಿದೆ.ಆದರೆ ಬೀಚುಗಳಲ್ಲಿರುವ ಭೋಜನಗೃಹ (ಶ್ಯಾಕ್)ಗಳಂತಹ ನಿಗದಿಪಡಿಸಿದ ಸ್ಥಳಗಳಲ್ಲಿ ಮದ್ಯವನ್ನು ಸೇವಿಸಬಹುದಾಗಿದೆಯೆಂದು ಗೋವಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ನಿಖಿಲ್ ದೇಸಾಯಿ ತಿಳಿಸಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ಕಿರಿಕಿರಿಯನ್ನು ಸೃಷ್ಟಿಸುವಂತಹ ಸಂಗತಿಗಳ ನಿಷೇಧಕ್ಕೆ ಅವಕಾಶವನ್ನು ನೀಡುವ ‘ಗೋವಾ ಪ್ರವಾಸೋದ್ಯಮ ಸ್ಥಳಗಳು (ರಕ್ಷಣೆ ಹಾಗೂ ನಿರ್ವಹಣೆ) ಕಾಯ್ದೆಯಡಿ ಈ ನಿಷೇಧವನ್ನು ಹೇರಲಾಗಿದೆ. ಹಾನಿಗೀಡಾಗುವುದು ಹಾಗೂ ಶಿಥಿಲಗೊಳ್ಳುವುದರಿಂದ ಪ್ರವಾಸೋದ್ಯಮದ ಸ್ಥಳಗಳನ್ನು ರಕ್ಷಿಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ.
ಬೀಚುಗಳಲ್ಲಿ ಮದ್ಯಪಾನ ನಿಷೇಧಿಸುವ ಆದೇಶವನ್ನು ತಕ್ಷಣವೇ ಜಾರಿಗೊಳಿಸುವಂತೆ ಗೋವಾ ಪೊಲೀಸ್ ಪಡೆಯ ದಳವಾದ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿ)ಗೆ ಸೂಚನೆ ನೀಡಲಾಗಿದೆಯೆಂದು ದೇಸಾಯಿ ಹೇಳಿದ್ದಾರೆ. ಈ ಕಾನೂನಿನ ಉಲ್ಲಂಘನೆಯು ಬಂಧನಕ್ಕೆ ಕಾರಣವಾಗುವುದೆಂದು ಅವರು ಹೇಳಿದ್ದಾರೆ.
ಆದರೆ ಬೀಚುಗಳಲ್ಲಿರುವ ಶ್ಯಾಕ್‌ಗಳು ಅಥವಾ ರಿಟೇಲ್ ಮದ್ಯ ಮಾರಾಟವು ಲಭ್ಯವಿರುವ ಇತರ ಸ್ಥಳಗಳಿಗೆ ಅನ್ವಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.ಬೀಚುಗಳಲ್ಲಿ ಎಸೆಯಲ್ಪಟ್ಟ ಮದ್ಯದ ಬಾಟಲಿಗಳ ಚೂರುಗಳಿಂದ ಪ್ರವಾಸಿಗರು ಗಾಯಗೊಳ್ಳುತ್ತಿರುವುದು ಹಾಗೂ ಬೀಚುಗಳಲ್ಲಿ ಪಾನಮತ್ತರು ಕಿರಿಕಿರಿಯುಂಟು ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹೇರಲಾಗಿದೆ.
ಭಾರತದ ಅತ್ಯಂತ ಜನಪ್ರಿಯ ಪ್ರವಾಸಿತಾಣವಾದ ಗೋವಾವು ಗಣನೀಯ ಸಂಖ್ಯೆಯ ವಿದೇಶಿ ಪ್ರವಾಸಿಗರು ಸೇರಿದಂತೆ ವರ್ಷಕ್ಕೆ 20.40 ಲಕ್ಷ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ.

No comments:

Post a Comment