Tuesday, April 16, 2013

ಪ್ರಬಲ ಭೂಕಂಪಕ್ಕೆ ಉತ್ತರ ಭಾರತ ತತ್ತರ

 ಗುವಾಹಟಿ,: ಪಾಕಿಸ್ತಾನದಲ್ಲಿ ಮಂಗಳವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ. ಅಸ್ಸಾಂನಲ್ಲಿ ಲಘು ಭೂಕಂಪದಿಂದ ಉಂಟಾದ ಭೂ ಕುಸಿತದಿಂದ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಭೂ ಕಂಪಿಸಿದ ಸಂದರ್ಭದಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳ ಪೈಕಿ ಜೆಹಿರುಲ್ ನೆಸ್ಸಾ ಎಂಬ ಮಗು ಭೂ ಕುಸಿತದಿಂದಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇನ್ನಿಬ್ಬರು ಬಾಲಕರಾದ ಮೊಯಿದುಲ್ ಇಸ್ಲಾಂ ಹಾಗೂ ಕಮಲಾ ಖಾತುಮ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಸ್ಸಾಂನಲ್ಲಿ ಬೆಳಗ್ಗೆ 6.53ಕ್ಕೆ ಭೂ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಭೂಕಂಪನ ಉಂಟಾಗಿದ್ದು ನಿದ್ರಿಸುತ್ತಿದ್ದ ಜನತೆ ಭಯಭೀತರಾಗಿ ಎಚ್ಚೆತ್ತು ಕಟ್ಟಡಗಳಿಂದ ಹೊರಗೆ ಓಡಿ ಬಂದರು. ಅಸ್ಸೋಂನ ಡರ್ರಾಂಗ್ ಜಿಲ್ಲೆ ಭೂಕಂಪದ ಕೇಂದ್ರವಾಗಿತ್ತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಭೂಕಂಪನದಿಂದ ಬಾಗಿಲುಗಳು ಮತ್ತು ಕಿಟಿಕಿಗಳು ಅಲುಗಾಡಿವೆ. ಅಸ್ಸೋಂನ ನೆರೆರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲಪ್ರದೇಶ ಮತ್ತು ಮಣಿಪುರಗಳಲ್ಲೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಶಿಲ್ಲಾಂಗ್‌ನ ಪ್ರಾದೇಶಿಕ ಭೂಕಂಪ ಮಾಪನ ಕೇಂದ್ರ ವಿವರಿಸಿದೆ. ಅಸ್ಸೋಂ ಮತ್ತು ಈಶಾನ್ಯ ಭಾರತದ ಎಲ್ಲ ರಾಜ್ಯಗಳನ್ನು ದೇಶದ ಭೂಕಂಪ ಶಾಸ್ತ್ರೀಯ ಭೂಪಟದಲ್ಲಿ ಝೆಡ್ ವಲಯದಲ್ಲಿ ವರ್ಗೀಕರಿಸಲಾಗಿದ್ದು ಈ ವಲಯದಲ್ಲಿ ಭೂಕಂಪಗಳ ಸಾಧ್ಯತೆ ಅಧಿಕವಾಗಿರುತ್ತದೆ. ತೀವ್ರ ಕಂಪನ: ಇರಾನ್ ಮತ್ತು ಪಾಕಿಸ್ತಾನದ ಗಡಿ ಪ್ರದೇಶ ಭೂಕಂಪನದ ಕೇಂದ್ರ ಬಿಂದುವಾಗಿದ್ದು, 8 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಸತತ 28 ಸೆಕೆಂಡುಗಳ ಭೂಮಿ ಕಂಪಿಸಿದ್ದು, ಪಾಕಿಸ್ತಾನವಷ್ಟೇ ಅಲ್ಲದೆ ದುಬೈ, ಕುವೈಟ್ ಮತ್ತು ಇರಾನ್ ದೇಶಗಳಲ್ಲಿಯೂ ಭೂಕಂಪನವಾಗಿದೆ. ಹಲವು ಕಟ್ಟಡಗಳು ನೆಲಕ್ಕುರುಳಿದ್ದು, ಘಟನೆಯಲ್ಲಿ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಆದರೆ ಇರಾನ್‌ನಲ್ಲಿ ಮನೆಯ ಗೋಡೆ ಕುಸಿದ ಪರಿಣಾಮ ವ್ಯಕ್ತಿಯೊಬ್ಬನಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತದ ಉತ್ತರ ಭಾಗದಲ್ಲಿ ಅನೇಕ ಕಡೆ ಭೂಮಿ ಕಂಪಿಸಿದ್ದು, ಕಾಶ್ಮೀರದ ಶ್ರೀನಗರ, ದೆಹಲಿ, ಚಂಡೀಗಡ, ಹರಿಯಾಣ, ಗುಜರಾತ್‌ನ ಅಹಮದಾಬಾದ್, ನೋಯ್ಡಾ, ರಾಜಸ್ತಾನ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದಂತೆಯೇ ಹೊರಗೆ ಓಡಿ ಬಂದ ಜನರು ಭಯಭೀತಗೊಂಡಿದ್ದಾರೆ.

No comments:

Post a Comment