Thursday, April 25, 2013

ನಿದ್ರೆಯ ಬಗ್ಗೆ ಒಂದಿಷ್ಟು..................


ನಿದ್ದೆಯ ರಹಸ್ಯವನ್ನು ಕಂಡುಹಿಡಿಯುವ ಸಲುವಾಗಿ ವಿಜ್ಞಾನಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು ಸಂಶೋಧನೆ ನಡೆಸುತ್ತಿದ್ದಾರೆ. ಆದರೂ ನಿದ್ದೆಯ ರಹಸ್ಯ ವನ್ನು ಯಾರಿಂದಲೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ರಹಸ್ಯವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ ನಿದ್ದೆಯು ಒಳ್ಳೆಯ ಆರೋಗ್ಯದ ಲಕ್ಷಣವಾಗಿದೆ ಎಂದು ತಿಳಿದಿದೆ. ಕೆಲವರಿಗೆ ದೇವರ ದಯೆಯಿಂದ ನಿದ್ದೆಯ ವರದಾನವೇ ಲಭಿಸಿರುತ್ತದೆ. ಅಂತಹವರಿಗೆ ಎಲ್ಲಿ ಮಲಗಿದರೂ, ಎಂತಹ ಪರಿಸ್ಥಿತಿಯಲ್ಲೂ ಸುಖವಾದ ನಿದ್ದೆ ಬರುತ್ತಿದೆ. ಆದರೆ ಕೆಲವರಿಗೆ ಸುಖದ ಸುಪ್ಪತ್ತಿಗೆಯಲ್ಲಿ ಮಲಗಿದರೂ ಕೂಡಾ ನಿದ್ದೆಯು ಹತ್ತಿರ ಸುಳಿಯುವುದೇ ಇಲ್ಲ. ನಿದ್ದೆ ಬರದೆ ರಾತ್ರಿಯಿಡೀ ಮಗ್ಗಲು ಬದಲಾಯಿಸುತ್ತಾ ಮಾನಸಿಕ ಹಿಂಸೆ ಪಡುತ್ತಾ ಸುಖಕರ ನಿದ್ದೆಗಾಗಿ ತಳಮಳಿಸುತ್ತಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಿದ್ರಾನಾಶವು ಇಂದಿನ ಆಧುನಿಕ ಜೀವನದ ಒಂದು ಮಹಾರೋಗವಾಗಿದೆ.
ಮಾನಸಿಕ ಹಾಗೂ ಆರ್ಥಿಕ ಒತ್ತಡದಿಂದಾಗಿ ನಿದ್ದೆಯು ನಮ್ಮ ಹತ್ತಿರ ಸುಳಿಯುವುದೇ ಇಲ್ಲ. ಮಹಾನಗರಗಳು ಹಾಗೂ ದೊಡ್ಡಪಟ್ಟಣಗಳಲ್ಲಿ ವಾಸಿಸುವ ಶೇ.೩೦ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಇಂತಹವರಿಗೆ ರಕ್ತದೊತ್ತಡ, ಹೃದಯಾಘಾತ ಮತ್ತು ಮೆದುಳಿನ ರಕ್ತಸ್ರಾವದಂತಹ ಪ್ರಾಣಘಾತಕರೋಗಗಳು ಉದ್ಭವಿಸು ತ್ತವೆ. ಜಾಗರಣೆಯಿಂದ ಉಂಟಾಗುವ ರೋಗಗಳಿಗೂ ಜಡಭರಿತ ನಿದ್ದೆಗೂ ಸಂಬಂಧವಿದೆ. ನಿದ್ದೆಗೆ ಸಂಬಂಧಿಸಿದ ರೋಗಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಒಂದು ಕಡಿಮೆ ನಿದ್ದೆ ಬರುವುದರಿಂದ ಉಂಟಾಗುವ ರೋಗಗಳು ಮತ್ತೊಂದು ಅಧಿಕ ನಿದ್ದೆಯಿಂದ ಉಂಟಾಗುವ ರೋಗಗಳು.
ನಿದ್ರಾಹೀನತೆಯಿರುವ ರೋಗಿಗಳಿಗೆ ಅನೇಕ ದಿನಗಳಲ್ಲಿ ನಿದ್ದೆಯೇ ಬರುವುದಿಲ್ಲ.ರಾತ್ರಿಯಿಡೀ ನಿದ್ರೆಯಿಲ್ಲದೆ ಬಳಲುತ್ತಿರುತ್ತಾರೆ. ಇಂತಹವರಿಗೆ ದಿನವಿಡಿ ತುಂಬಾ ತೊಂದರೆಯುಂಟಾಗುತ್ತದೆ. ಇಡೀ ದಿನ ಬಳಲಿಕೆ ಮತ್ತು ನಿಶ್ಯಕ್ತಿಯು ತಲೆದೋರುತ್ತದೆ. ಇಂತಹವರು ಯಾವುದೇ ಕೆಲಸವನ್ನು ಸರಿಯಾಗಿ ಮಾಡುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಹೀಗೆಯೇ ಸಮಯದ ತನಕ ನಿದ್ರಾನಾಶ ವಾಗುತ್ತಿದ್ದರೆ ಅವರ ಕಾರ್ಯಶಕ್ತಿ ಕುಂಠಿತವಾಗಿ ಅವರ ವ್ಯಕ್ತಿತ್ವದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳು ತಲೆದೋರುತ್ತವೆ. ಇಂತಹವರು ವಾಹನ ನಡೆಸುತ್ತಿದ್ದರೆ ಅಪಘಾತವುಂಟಾಗುವ ಸಂಭವವಿರುತ್ತದೆ.
ಮಾನಸಿಕ ಒತ್ತಡದಂತಹ ರೋಗಗಳಿಗೆ ಬೇಗನೆ ಬಲಿಯಾಗುತ್ತಾರೆ.ನಿದ್ರಾಹೀನತೆಯಿಂದ ಉಂಟಾಗುವ ರೋಗಗಳು ಅನೇಕ ರೂಪದಲ್ಲಿ ಕಂಡುಬರುತ್ತವೆ. ಬಹುತೇಕವಾಗಿ ನಮ್ಮ ಶರೀರದಲ್ಲಿ ಅಡಗಿರುವ ರೋಗದ ಲಕ್ಷಣವಾಗಿ ನಿದ್ರಾಹೀನತೆಯು ತಲೆದೋರುತ್ತದೆ. ಕೆಲವರಿಗೆ ಮಲಗಿದ ನಂತರ ತುಂಬಾ ಸಮಯದ ತನಕ ನಿದ್ದೆ ಸುಳಿಯುವುದೇ ಇಲ್ಲ. ತುಂಬಾ ಹೊತ್ತಾದ ಮೇಲೆ ನಿದ್ದೆ ಬಂದರೂ ಇಂತಹವರು ತುಂಬಾ ಹೊತ್ತು ಮಲಗಿರುತ್ತಾರೆ. ಇಂತಹವರ ಜೀವನ ಕ್ರಮವೇ ಬದಲಾಯಿಸುತ್ತದೆ.
ಶಿಫ್ಟ್ ಪ್ರಕಾರ ಕೆಲಸ ಮಾಡುವವರ ಜೀವನ ಕ್ರಮ ಅನಿಯಮಿತ ವಾಗಿರುತ್ತದೆ. ಕೆಲವರಿಗೆ ಚೆನ್ನಾಗಿ ನಿದ್ದೆ ಬರುತ್ತದೆ. ನಡುನಡುವೆ ಎಚ್ಚರವಾಗುತ್ತಾರೆ. ಸ್ವಲ್ಪ ಸಮಯವೇ ನಿದ್ದೆ ಆದರೆ ಬರುತ್ತದೆ. ಡಾ.ಮನ್‌ಚಂದಾ ಹೇಳಿಕೆಯಂತೆ ನಿದ್ರಾಹೀನತೆಯ ಕಾರಣಗಳನ್ನು ‘ನಿದ್ರೆಯ ಅಧ್ಯಯನ’ (ಸ್ಲೀಪ್ ಸ್ಟಡೀಸ್)ದ ಮೂಲಕ ಸ್ಥಿತಿ, ಶ್ವಾಸನಾಳದ ಸ್ಥಿತಿ, ರಕ್ತಪ್ರವಾಹದ ಸ್ಥಿತಿಯನ್ನು ಕಂಡುಹಿಡಿಯಬಹುದು. ಇದರಿಂದಾಗಿ ರೋಗಿಯು ನಿದ್ದೆಯ ವೇಳೆಯಲ್ಲಿ ಯಾವ ಸ್ಥಿತಿಯಲ್ಲಿರುತ್ತಾನೆ ಎಂದು ತಿಳಿಯಬಹುದು.
ಅತಿಯಾದ ನಿದ್ದೆಗಿಂತ ಸುಖಕರವಾದ ನಿದ್ದೆಯು ಮಹತ್ವದ್ದಾಗಿದೆ ಎಂದು ಡಾ.ಮನ್‌ಚಂದಾ ಹೇಳುತ್ತಾರೆ. ಸಾಮಾನ್ಯವಾಗಿ 7ರಿಂದ ೮ಗಂಟೆಗಳ ಕಾಲನಿದ್ದೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ಸುಖಕರವಾದ ನಿದ್ದೆಯಾದರೆ ಸಾಮಾನ್ಯವಾಗಿ 4ರಿಂದ 5ಗಂಟೆಗಳ ನಿದ್ದೆಯು ಸಾಕಾಗುತ್ತದೆ.ನಿದ್ದೆಯ ಎರಡು ಸ್ಥಿತಿಗಳಿರುತ್ತವೆ. ಮೊದಲನೆಯದು ‘ರ‍್ಯಾಮ್ ಸ್ಲೀಪ್’ (ರ‍್ಯಾಪೆಡ್ ಮೂಮೆಂಟ್).ಎರಡನೆಯದು ‘ನಾನ್ ರ‍್ಯಾಮ್ ಸ್ಲೀಪ್’(ನಾನ್ ರ‍್ಯಾಪೆಡ್ ಐ ಮೂಮೆಂಟ್). ಸಾಮಾನ್ಯವಾಗಿ ರ‍್ಯಾಮ್‌ಸ್ಲೀಪ್ ಶೇ.20 ಅಥವಾ 25ರಿಂದ ಅಧಿಕವಾಗಿರುವುದಿಲ್ಲ.
ಆದರೆ ಇದು ಶೇ. 50ಕ್ಕಿಂತ ಅಧಿಕವಾದರೆ ಅಂತಹವರಿಗೆ ರಾತ್ರಿಯಿಡೀ ಕನಸು ಬೀಳುತ್ತಿರುತ್ತದೆ. ಆದ್ದರಿಂದ ಸುಖಕರ ನಿದ್ದೆ ಮಾಡಿದ ಸಮಾಧಾನ ಸಿಗುವುದಿಲ್ಲ. ಇದರಿಂದ ಮರುದಿನ ಅಲಸ್ಯ ಹಾಗೂ ಬಳಲಿಕೆಯುಂಟಾದಂತೆ ತೋರುತ್ತಿರುತ್ತದೆ. ನಿದ್ರಾಹೀನತೆಯು ಯಾವುದೇ ವಯಸ್ಸಿನ ವ್ಯಕ್ತಿಯಲ್ಲೂ ತಲೆದೋರುತ್ತದೆ. ಸ್ತ್ರೀಯರು ಈ ರೋಗಕ್ಕೆ ತುತ್ತಾಗುತ್ತಾರೆ. ಶೇ. 60ರಷ್ಟು ವ್ಯಕ್ತಿಗಳಲ್ಲಿ ನಿದ್ರಾಹೀನತೆಯು ಬೇರೆ ಯಾವುದಾದರೂ ರೋಗದ ಲಕ್ಷಣವಾಗಿರುತ್ತದೆ.
ನಿದ್ರಾಹೀನತೆಯು ಅನೇಕ ಕಾರಣಗಳಿಂದ ಉಂಟಾಗುತ್ತದೆ. ‘ರೆಸ್ಟ್‌ಲೆಸ್ ಲೆಗ್ ಸಿಂಡ್ರಾಮ್’ ಇದೊಂದು ಕಾರಣವಾಗಿದೆ. ಈ ರೋಗಕ್ಕೆ ತುತ್ತಾದವರ ಕಾಲುಗಳು ನಿದ್ದೆಯಲ್ಲೂ ಅಲ್ಲಾಡುತ್ತಿರುತ್ತವೆ. ಕೆಲವರ ತಲೆಯಲ್ಲಿ ನಿದ್ದೆಯಲ್ಲೂ ಅನೇಕ ವಿಚಾರಗಳು ಸುಳಿದಾಡುತ್ತಿರುತ್ತವೆ. ಆದ್ದರಿಂದ ನಡುನಡುವೆ ನಿದ್ದೆಯಿಂದ ಎಚ್ಚರವಾಗುತ್ತಿರುತ್ತಾರೆ. ನಿದ್ರಾಹೀನತೆಯು ಅದರ ಕೆಲವು ಲಕ್ಷಣಗಳಿಂದಲೇ ತಿಳಿಯುತ್ತದೆ. ಆದರೆ ರೋಗಿಯ ನಿದ್ದೆಯ ಪರೀಕ್ಷೆ ನಡೆಸಿದರೆ ನಿಖರವಾದ ಕಾರಣಗಳನ್ನು ಕಂಡುಹಿಡಿಯಬಹುದು.
ರೋಗಿಯ ನಿದ್ದೆಯ ಪರೀಕ್ಷೆಯನ್ನು ನಡೆಸದಿದ್ದರೆ ರೋಗದ ಗಂಭೀರತೆಯು ತಿಳಿಯುವುದಿಲ್ಲ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಮಾನಸಿಕವಾಗಿ ಡಿಪ್ರೇಶನ್‌ಗೆ ಒಳಗಾಗುತ್ತಾರೆ. ಯಾಕೆಂದರೆ ನಿದ್ರಾಹೀನತೆಯು ಅವರನ್ನು ಮನೋರೋಗಿಯನ್ನಾಗಿ ಮಾಡುತ್ತದೆ. ಇಂತಹ ಸ್ಥಿತಿಯಲ್ಲಿರುವವರಿಗೆ ಮಾನಸಿಕ ಉಪಚಾರದ ಅವಶ್ಯಕತೆ ಇದೆ.ನಿದ್ದೆಗೆ ಸಂಬಂಧಿಸಿದ ಇನ್ನೊಂದು ರೋಗವೆಂದರೆ ಅತಿಯಾದ ನಿದ್ದೆ. ಈ ರೋಗದ ಕಾರಣಗಳು ಇನ್ನೂ ತಿಳಿದಿಲ್ಲ. ಆದರೆ ಅನುವಂಶಿಕತೆಯೇ ಇದಕ್ಕೆ ಕಾರಣವೆಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಈ ರೋಗವು 20ರ ಹರೆಯದ ನಂತರವೇ ಪ್ರಾರಂಭವಾಗುತ್ತದೆ.
ಅತಿಯಾದ ನಿದ್ದೆಯೇ ಈ ರೋಗದ ಲಕ್ಷಣವಾಗಿದೆ. ಹೆಚ್ಚು ನಿದ್ದೆ ಬರುತ್ತದೆಯೆಂದರೆ ರೋಗಿಯು ತನ್ನನ್ನು ತಾನೇ ನಿದ್ದೆಯಿಂದ ನಿಯಂತ್ರಿಸಲು ಅಸಮರ್ಥನಾಗುತ್ತಾನೆ. ಕೆಲಸವನ್ನು ಮಾಡುತ್ತಿರುವಾಗಲೇ ಅಚಾನಕಾವಾಗಿ ನಿದ್ದೆಯ ವಶವಾಗುತ್ತಾನೆ. ಈ ರೋಗದ ಇನ್ನೊಂದು ಲಕ್ಷಣವೆಂದರೆ ಶರೀರ ಹಾಗೂ ಕಾಲುಗಳ ಶಕ್ತಿಯು ಕೂಡಾ ಇಲ್ಲದಂತಹ ಅನುಭವವುಂಟಾಗುತ್ತದೆ. ಆದರೆ ಈ ಸ್ಥಿತಿಯು ಕೂಡಲೇ ಇಲ್ಲವಾಗುತ್ತದೆ. ಕೂಡಲೇ ವೊದಲಿನಂತಾಗು ತ್ತಾನೆ. ಅಲ್ಲದೇ ಇಂತಹವರಿಗೆ ತಾವು ಬೀಳುತ್ತೇವೆ ಎಂದು ಯಾವಾಗಲೂ ಅನಿಸುತ್ತಿರುತ್ತದೆ.
ಇಂತಹ ರೋಗಿಗಳು ಮಲಗಿದ ಕೂಡಲೇ ನಿದ್ದೆಯ ವಶವಾಗುತ್ತಾರೆ. ಹಾಗೂ ಸತತವಾಗಿ ಕನಸು ಕಾಣುತ್ತಿರುತ್ತಾರೆ. ಇದರಿಂದಾಗಿ ರಾತ್ರಿಯಿಡೀ ತಾವು ಮಲಗಲೇ ಇಲ್ಲ ಎಂದು ಅವರಿಗೆ ಭಾಸವಾಗುತ್ತಿರುತ್ತದೆ. ನಿದ್ದೆಗೆ ಸಂಬಂಧಿಸಿದ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಗೊರಕೆ. ಅರ್ಧದಷ್ಟು ಜಗತ್ತಿನ ಜನರು ನಿದ್ದೆಯಲ್ಲಿ ಚೆನ್ನಾಗಿ ಗೊರಕೆ ಹೊಡೆಯುತ್ತಿರುತ್ತಾರೆ ಎಂದು ಸಂಶೋಧನೆಯಿಂದ ತಿಳಿದಿದೆ. ಚಿಕ್ಕಮಕ್ಕಳು ಕೂಡಾ ಈ ಎರಡೂ ರೋಗಗಳಿಗೆ ತುತ್ತಾಗುತ್ತಾರೆ. ಚಿಕ್ಕಮಕ್ಕಳಲ್ಲಿ ಜೋರಾದ ಗೊರಕೆಯು ಪ್ರಾಣಘಾತಕ ರೋಗದ ಲಕ್ಷಣಗಳಲ್ಲಿ ಒಂದು.
ಅತಿಯಾದ ರಕ್ತದೊತ್ತಡ, ಹೃದಯಾಘಾತ, ಅಂಝೈನಾ, ಶ್ವಾಸಕೋಶದ ತೊಂದರೆ, ಸ್ಥೂಲತೆ, ದಾಂಪತ್ಯ ಜೀವನದ ಸಮಸ್ಯೆ, ಅಪಘಾತಗಳ ನೆನಪು, ಏಕಾಗ್ರತೆಯಿಲ್ಲದಿರುವಿಕೆ, ನಿದ್ರಾಹೀನತೆ, ಬೆಳಗಿನ ಜಾವದಲ್ಲಿ ತಲೆನೋವು ಉಂಟಾಗುವಿಕೆ, ಬಳಲಿಕೆ, ನಪುಂಸಕತೆ ಇಂತಹ ಕಾರಣಗಳಿಂದ ಗೊರಕೆಯಂತಹ ರೋಗವು ತಲೆದೋರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಯ ಮೂಲಕ ಗೊರಕೆಯಿಂದ ಮುಕ್ತಿಹೊಂದಬಹುದು. ಗೊರಕೆಯ ಚಿಕಿತ್ಸೆಗಾಗಿ ಸಿ.ಪಿ.ಎ.ಪಿ. ಎಂಬ ಅತ್ಯಾಧುನಿಕ ಚಿಕಿತ್ಸಾ ಪದ್ಧತಿ ಜಾರಿಯಲ್ಲಿದೆ. ಇದು ಭಾರತದಲ್ಲಿ ಅನೇಕ ಚಿಕಿತ್ಸಾ ಕೇಂದ್ರಗಳಲ್ಲಿ ಉಪಲಬ್ಧವಾಗಿದೆ

No comments:

Post a Comment