Wednesday, April 3, 2013

ಸೌದಿಯ ನಿತಾಕತ್: ಸರಕಾರದ ವೌನಕ್ಕೆ ಜನರ ಆಕ್ರೋಶ;ಜನಪ್ರತಿನಿಧಿಗಳ ಸಹಾಯದ ನಿರೀಕೆ್ಯಲ್ಲಿ ಸ್ಥಳೀಯರು ಏಪ್ರಿಲ್ -03-2013

ಮಂಗಳೂರು,: ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಅವಕಾಶ ಒದಗಿಸಲು ಸೌದಿ ಅರೇಬಿಯದ ಆಡಳಿತ ಜಾರಿಗೆ ತಂದಿರುವ ನಿತಾಕತ್ ಕಾನೂನಿನಿಂದ ಲಕ್ಷಾಂತರ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಬಹಳಷ್ಟು ಮಂದಿ ಅಲ್ಲಿಯ ಕಾನೂನಿನ ಸಂದಿಗ್ದತೆಯಲ್ಲಿ ಸಿಲುಕಿ ಜೈಲು ಶಿಕ್ಷೆಯ ಹಾದಿಯಲ್ಲಿದ್ದಾರೆ. ಸೌದಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರು ಅದರಲ್ಲೂ ಮುಖ್ಯವಾಗಿ ಕರಾವಳಿ ಕರ್ನಾಟಕ ಮೂಲದವರು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಕೋರುತ್ತಿದ್ದಾರೆ.
ದೇಶದಲ್ಲಿ ಉದ್ಯೋಗಾವಕಾಶ ದೊರೆಯದೆ ದೂರದ ದೇಶದಲ್ಲಿ ದುಡಿದು ಬದುಕು ಕಟ್ಟಿಕೊಳ್ಳಲು ಹೋದವರು ಅಲ್ಲಿಯ ಕಾನೂನಿನ ಸುಳಿಯಲ್ಲಿ ಸಿಲುಕಿ ತಮ್ಮದೆಲ್ಲವನ್ನೂ ಕಳೆದುಕೊಂಡು ಪರದಾಡುವಂತಾಗಿದೆ. ಇಂತಹ ಸ್ಥಿತಿಯಿಂದ ಅಲ್ಲಿರುವವರನ್ನು ಪಾರು ಮಾಡಲು ಇಲ್ಲಿಯ ಸರಕಾರ ಮತ್ತು ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ ಎಂದು ಅಲ್ಲಿ ಸಂತ್ರಸ್ತರಾಗಿರುವವರು ನಂಬಿದ್ದಾರೆ. ಕೇಂದ್ರ ಸರಕಾರ ಮತ್ತು ಅಂತಾರಾಷ್ಟ್ರೀಯವಾಗಿ ಸೌದಿಯ ಆಡಳಿತಗಾರರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಕರಾವಳಿ ಕರ್ನಾಟಕದ ಜನಪ್ರತಿನಿಧಿಗಳು ಮಾಡಿದರೆ ಸೌದಿಯಲ್ಲಿಯೇ ಮರು ಉದ್ಯೋಗ ಪಡೆಯುವ ಸಾಧ್ಯತೆ ಇದೆ. ನಮ್ಮ ಜನಪ್ರತಿನಿಧಿಗಳಿಂದ ಒತ್ತಡ ಹೆಚ್ಚದೆ ಇದ್ದಲ್ಲಿ ಸೌದಿಯಲ್ಲಿರುವ 2.5 ಲಕ್ಷದಷ್ಟು ಮಂದಿ ಬರಿಗೈಯಲ್ಲಿ ಭಾರತಕ್ಕೆ ಮರಳುವುದಷ್ಟೇ ಅಲ್ಲ. ಅಲ್ಲಿಯ ಶಿಕ್ಷೆಗೆ ಗುರಿಯಾಗಿ ಮತ್ತೆ ವಿದೇಶಕ್ಕೆ ಹೋಗಲಾಗದ ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಡಿಸುತ್ತಿರುವ ಅಲ್ಲಿರುವ ಸಂತ್ರಸ್ತರು. ಜನಪ್ರತಿನಿಧಿಗಳು ಬೇಗನೆ ತಮ್ಮ ರಕ್ಷಣೆಗೆ ಬಂದಾರು ಎಂದು ಕಾದಿದ್ದಾರೆ.
ಚುನಾವಣೆ ಕಾವು:
ಸೌದಿಯಲ್ಲಿ ಕನ್ನಡಿಗರೂ ಸೇರಿದಂತೆ ಲಕ್ಷಾಂತರ ಮಂದಿ ಸಂಕಷ್ಟದಲ್ಲಿರುವಾ ಗಲೇ ಕರ್ನಾಟಕದಲ್ಲಿ ಚುನಾವಣೆಯ ಕಾವು ಆರಂಭವಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಸ್ಪಂದಿಸಬೇಕಾದ ರಾಜಕೀಯ ಪಕ್ಷಗಳ ನಾಯಕರು ಮತ್ತು ಜನಪ್ರತಿನಿಧಿಗಳು ವಿಧಾನ ಸಭೆ ಚುನಾವಣೆಗೆ ಟಿಕೆಟ್ ಹಂಚುವ ಮತ್ತು ಟಿಕೆಟ್ ಪಡೆಯುವ ಕೆಲಸದಲ್ಲಿಯೇ ವ್ಯಸ್ತರಾಗಿದ್ದಾರೆ. ಸೌದಿಯ ಸಮಸ್ಯೆಯತ್ತ ಗಮನ ಹರಿಸಲು ಸಿದ್ಧರಿರುವ ರಾಜಕಾರಣಿಗಳು ಸದ್ಯಕ್ಕೆ ಕರ್ನಾಟಕದಲ್ಲಿ ಕಾಣುತ್ತಿಲ್ಲ.
ಕರ್ನಾಟಕದ ಐದು ಲಕ್ಷದಷ್ಟು ನಾಗರಿಕರು ಸೌದಿಆಡಳಿತದ ನಿತಾಕತ್ ಕಾನೂನಿನ ಸಂಕಷ್ಟದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳ ಹಾಗೂ ರಾಜಕೀಯ ನಾಯಕರ ಹೆಜ್ಜೆಯ ಬಗ್ಗೆ ತಿಳಿಯೋಣ ಎಂದರೆ ಸೌದಿಯಲ್ಲಿ ಸಮಸ್ಯೆ ಆಗಿದೆಯೇ ಎಂದು ಕೇಳುವ ರಾಜಕಾರಣಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದಾರೆ. ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಕರಾವಳಿ ಕರ್ನಾಟಕದ ಜನಪ್ರತಿನಿಧಿಗಳು ನಮ್ಮನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಸೌದಿಯಲ್ಲಿರುವ ಸಂತ್ರಸ್ತರು ಆಶಾವಾದಿಗಳಾಗಿ ಕಾಯುತ್ತಿದ್ದಾರೆ. ಆದರೆ ಇಲ್ಲಿಯ ರಾಜಕಾರಣಿಗಳು ಚುನಾವಣೆಯ ಟಿಕೆಟ್ ಸಮಸ್ಯೆಯಿಂದ ಆಚೆ ಯೋಚಿಸುವಂತೆ ಕಾಣುತ್ತಿಲ್ಲ.
ಸೌದಿಯಲ್ಲಿ ಆಝಾದ್ ವಿಸಾದಲ್ಲಿ ಕೆಲಸ ಮಾಡಿಕೊಂಡಿದ್ದವರು ಜೈಲು ಶಿಕ್ಷೆಯ ಭಯದಲ್ಲಿದ್ದಾರೆ. ಇಂತಹವರು ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗದೆ ಭೂಗತರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ವಿದೇಶದಲ್ಲಿ ಅದರಲ್ಲೂ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಗಲ್ಫ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡು ಎಷ್ಟು ಸಮಯ ಇರಲು ಸಾಧ್ಯ. ಜೈಲು ಶಿಕ್ಷೆಯ ಸಂಕಷ್ಟವಿಲ್ಲದೆ ತವರಿಗೆ ಹಿಂದಿರುಗುವ ಅವಕಾಶ ವನ್ನಾದರೂ ಕಲ್ಪಿಸುವಲ್ಲಿ ನಮ್ಮ ಜನಪ್ರತಿನಿಧಿಗಳು ಶ್ರಮಿಸಲಿ ಎಂದು ಸೌದಿಯಲ್ಲಿರುವ ನಿತಾಕತ್ ಕಾನೂನಿನ ಸಂತ್ರಸ್ತರು ಕೋರುತ್ತಿದ್ದಾರೆ.
***************************************************************
ಆ್ಯಗ್ರಿಮೆಂಟ್ ವಿಸಾದಲ್ಲಿರುವವರಿಗೆ ಸಮಸ್ಯೆ ಇಲ್ಲ. ಆಝಾದ್ ವಿಸಾದಲ್ಲಿ ಹೋದವರು ಪ್ರಾಯೋಜನಕರ ಸಹಕಾರ ಇಲ್ಲದೆ ಸಂಕಟ ಪಡುವಂತಾಗಿದೆ. ಇಂತಹವರು ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗದೆ ರೂಮ್‌ನಲ್ಲಿ ಅಡಗಿ ಕುಳಿತುಕೊಳ್ಳುವಂತಾಗಿದೆ. ಸೌದಿಗೆ ಆಝಾದ್ ವಿಸಾದಲ್ಲಿ ಹೋಗಲು ಸಿದ್ದರಾದವರು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆಝಾದ್ ವಿಸಾಕ್ಕೆ ಸ್ಟಾಂಪಿಂಗ್ ಮಾಡಿದವರು ಸಾವಿರಾರು ಜನರಿದ್ದಾರೆ. ಅವರು ಮೂರು ತಿಂಗಳಲ್ಲಿ ಸೌದಿಗೆ ಹೋಗದೆ ಇದ್ದರೆ ವಿಸಾ ರದ್ದಾಗುತ್ತದೆ. ಹೋದರೆ ಕೆಲಸ ದೊರಕಿಸಿಕೊಳ್ಳವ ಸಾಧ್ಯತೆಗಳು ಕಾಣುತ್ತಿಲ್ಲ. ಸಮಸ್ಯೆ ಒಂದು ತಿಂಗಳಲ್ಲಿ ಪರಿಹಾರ ವಾಗುವ ನಿರೀಕ್ಷೆ ಇದೆ. ಇಂತಹದ್ದೆ ನಿರೀಕ್ಷೆಯಲ್ಲಿ ಅಲ್ಲಿರುವವರೂ ಇದ್ದಾರೆ. - ಅಬ್ದುಲ್ ಕರೀಂ, ಎಂ.ಎ.ಎಂಟರ್‌ಪ್ರೈಸಸ್ ಸಂಸ್ಥೆಯ ಪ್ರವರ್ತಕ
**************************************************************
 ಎರಡು ತಿಂಗಳ ಅವಕಾಶಕ್ಕೆ ಕೋರಿಕೆ ಸಲ್ಲಿಸಲಾಗಿದೆ

ಸೌದಿಯಲ್ಲಿ ಕರ್ನಾಟಕ ಕರಾವಳಿಯ ಬಹಳಷ್ಟು ಮಂದಿ ಇದ್ದಾರೆ. ಈ ವಿಷಯವನ್ನು ನಾನು ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಡೆಪ್ಯೂಟಿ ಚೀಫ್ ಜಾರ್ಜ್‌ರವರಲ್ಲಿ ತಿಳಿಸಿದ್ದೇನೆ. ನಾಳೆಯೇ ಸೌದಿಗೆ ತೆರಳಿ ಅಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಸೌದಿಯಲ್ಲಿ ದುಡಿಯುತ್ತಿರುವ ಬಹುತೇಕರು ಅವಿದ್ಯಾವಂತರು. ಅವರಿಗೆ ಕಾನೂನಿನ ತಿಳುವಳಿಕೆ ಅಷ್ಟಾಗಿ ಇರುವುದಲ್ಲ. ರೈಡ್ ಮಾಡಿ ಬಂಧಿಸುವುದಕ್ಕಿಂತ ಕಾನೂನು ಬದ್ದವಾಗಿ ಸ್ವದೇಶಕ್ಕೆ ಮರುಳಲು ಎರಡು ತಿಂಗಳ ಅವಕಾಶ ಒದಗಿಸುವ ಬಗ್ಗೆ ಸೌದಿ ಸರಕಾರದೊಂದಿಗೆ ಮಾತನಾಡುವಂತೆ ರಾಯಭಾರ ಕಚೇರಿಯ ಜಾರ್ಜ್‌ರಿಗೆ ಕೋರಿಕೆ ಸಲ್ಲಿಸಿದ್ದೇನೆ. ಇದು ಮಾತ್ರ ಅಲ್ಲದೆ ಸಣ್ಣ ತಪ್ಪಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ. ಅಲ್ಲಿ ವಿಧಿಸುವ ದಂಡ ಪಾವತಿಸುವುದು. ಇಲ್ಲಿರುವ ಕುಟುಂಬಸ್ಥರಿಂದಲೂ ಸಾಧ್ಯವಾಗುವುದಿಲ್ಲ. ಆದುದರಿಂದ ದಂಡ ಮನ್ನಾ ಮಾಡುವ ಬಗ್ಗೆಯೂ ಸೌದಿ ಆಡಳಿತಗಾರರೊಂದಿಗೆ ಮಾತನಾಡುವಂತೆ ಜಾರ್ಜ್‌ರವರಲ್ಲಿ ಕೋರಿಕೊಂಡಿದ್ದೇನೆ. ಮಾತನಾಡಿ ಸಮಸ್ಯೆಯ ಗಂಭೀರತೆ ತಗ್ಗಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ.
- ಯು.ಟಿ. ಖಾದರ್, ಶಾಸಕರು, ಮಂಗಳೂರು ವಿಧಾನಸಭಾ ಕ್ಷೇತ್ರ


No comments:

Post a Comment