Tuesday, April 23, 2013

ಹಿಜಾಬ್ ಧರಿಸದಂತೆ ಬಾಲಕಿಗೆ ಶಾಲಾಡಳಿತದ ತಾಕೀತು;ಕೋರ್ಟ್ ಮೆಟ್ಟಿಲೇರಿದ ಪಾಲಕರು*ಶಾಲೆಯಿಂದ ಉಚ್ಚಾಟಿಸುವ ಬೆದರಿಕೆ
ಬೊಕಾಖಾಟ್:ನಾಲ್ಕುವರ್ಷ ವಯಸ್ಸಿನ ಮುಸ್ಲಿಂ ಬಾಲಕಿಯೊಬ್ಬಳಿಗೆ ಶಾಲಾ ತರಗತಿಯಲ್ಲಿ ಹಿಜಾಬ್ ಧರಿಸದಂತೆಯೂ, ಇಲ್ಲದಿದ್ದಲ್ಲಿ ಶಾಲೆಯಿಂದ ಉಚ್ಛಾಟಿಸು ವುದಾಗಿ ಬೆದರಿಕೆ ಹಾಕಿದ ಘಟನೆ ಅಸ್ಸಾಂನ ಬೊಕಾಖಾಟ್ ಪಟ್ಟಣದಲ್ಲಿ ವರದಿಯಾಗಿದೆ. ಹಿಜಾಬ್ ಧರಿಸಿದ್ದಕ್ಕಾಗಿ ಬಾಲಕಿ ಫಾತಿಮಾ ಬೀಬಿ ಶಾಲೆಯಿಂದ ಉಚ್ಛಾಟನೆಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದು,ಆಕೆಯ ಹೆತ್ತವರು ನ್ಯಾಯಕ್ಕಾಗಿ ಕೋರ್ಟ್‌ನ ಮೊರೆ ಹೊಕ್ಕಿದ್ದಾರೆ.ಹಿಜಾಬ್ ಇಸ್ಲಾಂ ಸಂಪ್ರದಾಯದ ಒಂದು ಭಾಗವಾಗಿದೆ. ಫಾತಿಮಾ ಬೀಬಿ ಶಾಲೆಯ ಸಂಪೂರ್ಣ ಸಮವಸ್ತ್ರವನ್ನು ಹಾಗೂ ಶಿರವಸ್ತ್ರವನ್ನು ಧರಿಸುತ್ತಾಳೆ ಎಂದು ಆಕೆಯ ತಾಯಿ ಆಲೀ ಅಹ್ಮದ್ ಹೇಳುತ್ತಾರೆ.
ಫಾತಿಮಾ ಬೀಬಿ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಆದೇಶಿಸಿ ಶಾಲಾಡಳಿತವು ಆಕೆಯ ಹೆತ್ತವರಿಗೆ ಹದಿನೈದು ದಿನಗಳ ನೋಟಿಸ್ ಜಾರಿಗೊಳಿಸಿದೆ. “ಒಂದೋ ಶಾಲೆಯ ನಿಯಮಗಳನ್ನು ಪಾಲಿಸಬೇಕು, ಇಲ್ಲವೇ ನಿಮ್ಮ ಮಗುವನ್ನು ಶಾಲೆಗೆ ಕಳುಹಿಸಕೂಡದು” ಎಂದು ನೋಟಿಸ್‌ನಲ್ಲಿ ತಾಕೀತು ಮಾಡಲಾಗಿತ್ತು. ಶಾಲಾಡಳಿತದ ಕ್ರಮವನ್ನು ಪ್ರಶ್ನಿಸಿ ಫಾತಿಮಾ ಬೀಬಿಯ ಪಾಲಕರು ಗುವಾಹಟಿಯ ಹೈಕೋರ್ಟ್‌ನ ಮೆಟ್ಟಲೇರಿದ್ದಾರೆ.
“ನಾವು ಅನಿವಾರ್ಯವಾಗಿ ನ್ಯಾಯಾಲಯದ ವೊರೆಹೋಗಬೇಕಾಗಿದೆ.ಏಕೆಂದರೆ ನಮ್ಮ ಮಗಳನ್ನು ನಾವು ಸುಶಿಕ್ಷಿತಳನ್ನಾಗಿ ಮಾಡಬೇಕಾಗಿದೆ ಹಾಗೂ ಆಕೆಯು ಜೀವನದಲ್ಲಿ ಮುಂದೆ ಬರುವಂತೆ ಮಾಡಬೇಕಾಗಿದೆ” ಎಂದು ಆಲೀ ಅಹ್ಮದ್ ಹೇಳುತ್ತಾರೆ. ಈ ಪ್ರಕರಣದಿಂದಾಗಿ ದೇಶಾದ್ಯಂತ ವಿವಿಧ ಶಾಲೆಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನೆದುರಿಸುತ್ತಿರುವ ಮಕ್ಕಳಿಗೆ ನ್ಯಾಯ ದೊರಕುವ ಸಾಧ್ಯತೆಯಿದೆ.
ಇದೊಂದು ಸಂವಿಧಾನವು ದೇಶದ ಜನತೆಗೆ ಖಾತರಿಪಡಿಸಿದ ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಫಾತಿಮಾ ಬೀಬಿಯ ಪಾಲಕರ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಜಯಂತ ಕುಮಾರ್ ಗೋಸ್ವಾಮಿ ಹೇಳುತ್ತಾರೆ. ಆದಾಗ್ಯೂ ಶಾಲಾ ಪ್ರಾಂಶುಪಾಲ ಫಾದರ್ ಜೋಸ್ ವರ್ಗಿಸ್ ಕ್ರಿಸ್ಟೋ ಜ್ಯೋತಿ, ಯಾವುದೇ ವಿದ್ಯಾರ್ಥಿನಿಗೂ ಹಿಜಾಬ್ ಧರಿಸಲು ಅವಕಾಶ ನೀಡದಿರುವ ಶಾಲಾಡಳಿತದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಏತನ್ಮಧ್ಯೆ 4ವರ್ಷದ ಬಾಲಕಿಗೆ ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು  ನಿಷೇಧಿಸುವ ಶಾಲಾಡಳಿತದ ನಿರ್ಧಾರವನ್ನು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳ ಗುಂಪುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧ್ಯತೆಯಿದೆಯೆಂದು ಮಾನವಹಕ್ಕುಗಳ ಸಂಘಟನೆಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. 
ಒಂದು ಗುಂಪು ಇದೊಂದು ಧಾರ್ಮಿಕ ಹಕ್ಕುಗಳ ಕುರಿತಾದ ವಿಚಾರವೆಂದು ಪ್ರತಿಪಾದಿಸಿದರೆ, ಇನ್ನೊಂದು ಗುಂಪು ಎಲ್ಲಾ ಸಮುದಾಯಗಳ ಸಮಾನತೆಯ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಒಡಕು ಸೃಷ್ಟಿಸಬಹುದೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

No comments:

Post a Comment