Monday, April 29, 2013

ನಕಲಿ ಪಾಸ್‌ಪೋರ್ಟ್ ಜಾಲದಲ್ಲಿ ದಿಲ್ಲಿ ಪೊಲೀಸ್ ಅಧಿಕಾರಿಗಳು ;ತನಿಖೆ ತ್ವರಿತಕ್ಕೆ ಕೋರ್ಟ್ ಆದೇಶಹೊಸದಿಲ್ಲಿ: ನಕಲಿ ಪಾಸ್‌ಪೋರ್ಟ್ ಹಾಗೂ ವೀಸಾ ಜಾಲ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಿಚಾರಣಾಧೀನ ಕೈದಿಯೊಬ್ಬ ಹೊರಿಸಿರುವ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಥಳೀಯ ನ್ಯಾಯಾಲಯವು ದಿಲ್ಲಿ ಉಪ ಪೊಲೀಸ್ ಆಯುಕ್ತ (ವಿಶೇಷ ದಳ)ರಿಗೆ ರವಿವಾರ ಆದೇಶ ನೀಡಿದೆ.ದಿಲ್ಲಿ,ಹರ್ಯಾಣ ಹಾಗೂ ಪಂಜಾಬ್‌ಗಳಲ್ಲಿ ನಕಲಿ ಪಾಸ್‌ಪೋರ್ಟ್ ಹಾಗೂ ವೀಸಾ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಬಂಧಿತನಾದ ಹರ್ಷದ್ ಆಲಂ ಎಂಬಾತ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಹೊರಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಹೆಚ್ಚು ಸಮಯವಕಾಶವನ್ನು ಕೋರಿದ ಹಿನ್ನೆಲೆಯಲ್ಲಿ ದಿಲ್ಲಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಈ ಆದೇಶ ಜಾರಿಗೊಳಿಸಿದರು.
ದಿಲ್ಲಿ ಪೊಲೀಸ್ ಪಡೆಯ ವಿಶೇಷ ದಳದ ಹೆಚ್ಚುವರಿ ಡಿಸಿಪಿ ಹಾಗೂ ಇನ್ನೋರ್ವ ಇನ್ಸ್‌ಪೆಕ್ಟರ್ ಅವರು ತನ್ನ ಸಹಚರ ಉಮೇಶ್ ಗಾಂಭೀರ್ ಎಂಬಾತನ ಜೊತೆ ಕೈಜೋಡಿಸಿ, ಪ್ರಕರಣದ ಇನ್ನೋರ್ವ ಸಹ ಆರೋಪಿ ಹನಿ ಶರ್ಮಾ ತಪ್ಪಿಸಿಕೊಳ್ಳುವುದಕ್ಕೆ ನೆರವಾಗಿದ್ದರೆಂದು ಹರ್ಷದ್ ಆಪಾದಿಸಿದ್ದ.
ಈ ಪ್ರಕರಣವನ್ನು ಸ್ವತಃ ವಿಶೇಷದಳದ ಜಂಟಿ ಪೊಲೀಸ್ ಆಯುಕ್ತರು ಅಥವಾ ಡಿಸಿಇ ದರ್ಜೆಗಿಂತ ಕೆಳಗಿನ ಮಟ್ಟದ್ದಲ್ಲದ ಜವಾಬ್ದಾರಿಯುತ ಅಧಿಕಾರಿಯಿಂದ ತನಿಖೆ ನಡೆಸುವಂತೆ ನ್ಯಾಯಾಲಯವು ಆದೇಶಿಸಿದೆ.ನಕಲಿ ಪಾಸ್‌ಪೋರ್ಟ್ ಹಾಗೂ ವೀಸಾ ಜಾಲದ ಆರೋಪಿಗಳಾದ ಹನಿ ಹಾಗೂ ಆಕೆಯ ಪತಿ ವಿಪಿನ್ ಶರ್ಮಾ, ಸಹೋದರರಾದ ಹರ್ಷದ್ ಹಾಗೂ ಅಮಾನ್ ಆಲಂ ಮತ್ತು ಸಹಚರರಾದ ಸಚಿನ್ ಶರ್ಮಾ, ಗಾಂಭೀರ್ ಹಾಗೂ ಭೂಪೇಂದರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಫೋರ್ಜರಿ ಹಾಗೂ ಕ್ರಿಮಿನಲ್ ಸಂಚಿನ ಆರೋಪವನ್ನು ಹೊರಿಸಲಾಗಿದೆ.

No comments:

Post a Comment